ಕೇವಲ 5 ಪೆಸೊ ನಾಣ್ಯಗಳನ್ನು ಕೂಡಿಟ್ಟೇ ಶಾಲಾ ಮಕ್ಕಳಿಗೆ ನೆರವಾದ ಯುವಕ : ಆಟಿಸಂ ಪೀಡಿತನ ಮನ ಮುಟ್ಟುವ ಕತೆ
ನಿಸ್ವಾರ್ಥ ಸೇವೆ ಹಾಗೂ ಮಾನವೀಯತೆ ಇಂದಿಗೂ ಜೀವಂತವಾಗಿದೆ ಎಂಬುದಕ್ಕೆ ಈ ಹೃದಯಸ್ಪರ್ಶಿ ಘಟನೆಯೇ ಸಾಕ್ಷಿ. ಕೇವಲ ಸಣ್ಣಪುಟ್ಟ ಪ್ರಯತ್ನಗಳು ಸಹ ಸಮಾಜದಲ್ಲಿ ದೊಡ್ಡ ಬದಲಾವಣೆಯನ್ನು ತರಬಲ್ಲವು ಎಂಬುದನ್ನು 32 ವರ್ಷದ ಕ್ರಿಸ್ ಫ್ರಾನ್ಸಿಸ್ಕೊ ಎಂಬ ಆಟಿಸಂ ಪೀಡಿತ ಯುವಕ ಸಾಬೀತುಪಡಿಸಿದ್ದಾರೆ. ಇದೀಗ ಕ್ರಿಸ್ ಫ್ರಾನ್ಸಿಸ್ಕೊ ಅವರ ಸಮಾಜ ಸೇವೆಯ ಬಗೆಗಿನ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಮಕ್ಕಳಿಗಾಗಿ ಮಿಡಿದ ಇವರ ಕತೆ ಜಗತ್ತಿನಾದ್ಯಂತ ಲಕ್ಷಾಂತರ ಜನರ ಕಣ್ಣಂಚು ಒದ್ದೆಯಾಗುವಂತೆ ಮಾಡಿದೆ.
ಮೌನವಾಗಿ ಸಾಗಿದ ನಿಸ್ವಾರ್ಥದ ಹಾದಿ:
ವರದಿಯ ಪ್ರಕಾರ, ಫಿಲಿಪೈನ್ಸ್‌ನ ಅಕ್ಲಾನ್ ಪ್ರಾಂತ್ಯದ ಬಲೆಟೆ (Balete) ನಿವಾಸಿಯಾದ ಕ್ರಿಸ್ ಫ್ರಾನ್ಸಿಸ್ಕೊ, ಕಳೆದ ಎರಡು ವರ್ಷಗಳಿಂದ ವಿಶಿಷ್ಟವಾದ ಅಭ್ಯಾಸವೊಂದನ್ನು ರೂಢಿಸಿಕೊಂಡಿದ್ದರು. ಅವರು ಪ್ರತಿದಿನ ಸ್ಥಳೀಯರ ಬಳಿ ತೆರಳಿ ಕೇವಲ 5 ಪೆಸೊ (₱5 - ಫಿಲಿಪೈನ್ಸ್ ನಾಣ್ಯ) ನೀಡುವಂತೆ ಕೇಳುತ್ತಿದ್ದರು. ನಿತ್ಯವೂ ಬಂದು ಹಣ ಕೇಳುತ್ತಿದ್ದಾಗ ಕೆಲವರಿಗೆ ಮುಜುಗರ ಉಂಟಾಗಿದ್ದೂ ಇದೆ. ಆದರೆ ಅವರು ಪ್ರತಿಯೊಬ್ಬರಿಂದ ಕೇಳಿ ಪಡೆಯುತ್ತಿದ್ದದ್ದು 5 ಪೆಸೊ ನಾಣ್ಯ ಮಾತ್ರ. ಇನ್ನೂ ವಿಶೇಷವೆಂದರೆ, ಯಾರಾದರೂ ದೊಡ್ಡ ಮೊತ್ತದ ನೋಟುಗಳನ್ನು ನೀಡಲು ಮುಂದಾದರೂ, ಅದನ್ನು ನಯವಾಗಿ ತಿರಸ್ಕರಿಸಿ ಬಿಡುತ್ತಿದ್ದರು. ನನಗೆ ಕೇವಲ 5 ಪೆಸೊ ನಾಣ್ಯವಷ್ಟೇ ಬೇಕು ಎನ್ನುತ್ತಿದ್ದರು. ಮೊದ ಮೊದಲು ಅವರ ಈ ನಡವಳಿಕೆ ಜನರಿಗೆ ವಿಚಿತ್ರ ಎನ್ನಿಸುತ್ತಿತ್ತು. ಯಾಕೆಂದರೆ ಇವರು ಈ ಹಣವನ್ನು ಯಾತಕ್ಕಾಗಿ ಒಟ್ಟು ಮಾಡುತ್ತಿದ್ದಾರೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ.

ಗುರಿ ತಲುಪಿದ ಕ್ರಿಸ್:
ಹನಿ ಹನಿ ಕೂಡಿದರೆ ಹಳ್ಳ ಎನ್ನುವಂತೆ ಸಣ್ಣ ಮೊತ್ತದ ಒಂದೊಂದು ನಾಣ್ಯವನ್ನು ಜೋಡಿಸಿ ಕ್ರಿಸ್ ದೊಡ್ಡ ಸಾಧನೆ ಬರೆದಿದ್ದಾರೆ. ಇಲ್ಲಿ ಯಾವುದೇ ಸಂಘ-ಸಂಸ್ಥೆಗಳಿಂದ ತೆಗೆದುಕೊಂಡ ದೇಣಿಗೆ ಇಲ್ಲ. ಬದಲಿಗೆ ಕ್ರಿಸ್ ತಾವು ಸಂಗ್ರಹಿಸಿದ ಈ ಹಣದ ಸಹಾಯದಿಂದಲೇ ದೊಡ್ಡ ಗುರಿಯೊಂದನ್ನು ತಲುಪಿದ್ದಾರೆ. ತನ್ನ ಈ ಗುರಿ ತಲುಪಲು ಅವರು ತೆಗೆದುಕೊಂಡಿದ್ದು ಬರೋಬ್ಬರಿ ಎರಡು ವರ್ಷ. ಇಪ್ಪತ್ತನಾಲ್ಕು ತಿಂಗಳ ಸುದೀರ್ಘ ತಾಳ್ಮೆಯ ಬಳಿಕ, ಹೊಚ್ಚಹೊಸ ಶಾಲಾ ಪರಿಕರಗಳು ತುಂಬಿದ್ದ ಬೃಹತ್ ಚೀಲಗಳನ್ನು ಹೊತ್ತುಕೊಂಡು ಅವರು ಸ್ಥಳೀಯ ಶಾಲೆಗಳಿಗೆ ಆಗಮಿಸಿದ್ದಾರೆ. ಆಗಲೇ ಎಲ್ಲರಿಗೂ ಇವರು ಸಂಗ್ರಹಿಸುತ್ತಿದ್ದ ಹಣದ ಹಿಂದಿನ ಅಸಲಿ ಉದ್ದೇಶ ತಿಳಿದದ್ದು.
ಮಕ್ಕಳ ಭವಿಷ್ಯಕ್ಕೆ ಬಣ್ಣ ತುಂಬಿದ ಯುವಕ:
ತಮ್ಮ ಬಳಿ ಸಂಗ್ರಹವಾಗಿದ್ದ ನಾಣ್ಯಗಳನ್ನು ಬಳಸಿ ಕ್ರಿಸ್, ನೂರಾರು ಕ್ರೇಯಾನ್ ಬಾಕ್ಸ್‌ಗಳನ್ನು ಖರೀದಿಸಿದ್ದರು. ಕ್ಯಾಲಿಜೊ ಪ್ರಾಥಮಿಕ ಶಾಲೆಯ (Calizo Elementary School) ಎಳೆಯ ಮಕ್ಕಳಿಗೆ 80 ಕ್ರೇಯಾನ್ ಬಾಕ್ಸ್‌ಗಳನ್ನು ನೀಡಿದರೆ, ಕ್ಯಾಲಿಜೊ ರಾಷ್ಟ್ರೀಯ ಪ್ರೌಢಶಾಲೆಯ (Calizo National High School) ವಿದ್ಯಾರ್ಥಿಗಳಿಗೆ 160 ಕ್ರೇಯಾನ್ ಬಾಕ್ಸ್‌ಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಜೊತೆಗೆ, ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ಕಲಿಕೆಗೆ ಅನುಕೂಲವಾಗುವಂತೆ ಪಿರಿಯಾಡಿಕ್ ಟೇಬಲ್ ಚಾರ್ಟ್‌ಗಳನ್ನು ನೀಡಿದ್ದಾರೆ.
ಶಾಲಾ ಶಿಕ್ಷಕರಿಂದ ಕೃತಜ್ಞತೆ:
ಕ್ರಿಸ್ ಅವರ ಈ ಕಾರ್ಯಕ್ಕೆ ಶಾಲಾ ಶಿಕ್ಷಕರು ಮತ್ತು ಆಡಳಿತ ಮಂಡಳಿ ತೀವ್ರ ಕೃತಜ್ಞತೆ ಸಲ್ಲಿಸಿದೆ. ಭೌತಿಕ ತರಗತಿಗಳು ಮರುಪ್ರಾರಂಭವಾದ ಸಂದರ್ಭದಲ್ಲಿ, ಪೆನ್ಸಿಲ್-ಪುಸ್ತಕದಂತಹ ಮೂಲಭೂತ ಶಾಲಾ ಪರಿಕರಗಳನ್ನು ಖರೀದಿಸಲು ಪರದಾಡುತ್ತಿದ್ದ ಬಡ ಕುಟುಂಬಗಳ ಮಕ್ಕಳಿಗೆ ಈ ಉಡುಗೊರೆಗಳು ಬಹಳಷ್ಟು ನೆರವಾಗಿವೆ. ಕೇವಲ ಒಂದು ಸಣ್ಣ ನಾಣ್ಯವನ್ನು ಒಳ್ಳೆಯ ಉದ್ದೇಶದಿಂದ ಉಳಿತಾಯ ಮಾಡಿದರೆ, ಅದು ಇಡೀ ಸಮುದಾಯದ ಮೇಲೆಯೇ ಎಂತಹ ದೊಡ್ಡ ಸಕಾರಾತ್ಮಕ ಪರಿಣಾಮ ಬೀರಬಹುದು ಎಂಬುದನ್ನು ಕ್ರಿಸ್ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications