ರಾಜಕಾಲುವೆ-ಕೆರೆಗಳ ಗಡಿ ಗುರುತಿಸಲು ಸರ್ವೇ; ಬಫರ್ ರಸ್ತೆ ಅಭಿವೃದ್ಧಿಗೆ ಪಾಲಿಕೆ ಮಾಸ್ಟರ್ ಪ್ಲಾನ್
ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ಬಂದ ಬಳಿಕ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯಲ್ಲಿ ಒಂದಷ್ಟು ಬದಲಾವಣೆಗಳು ಆಗುತ್ತಿವೆ. ತ್ಯಾಜ್ಯ ಸುರಿಯುವ ಬ್ಲಾಕ್ ಸ್ಪಾಟ್ ಮತ್ತು ಪಾದಾಚಾರಿ ಮಾರ್ಗದಲ್ಲಿನ ಒತ್ತುವರಿ ತೆರವು, ಪಾದಾಚಾರಿ ಅಭಿವೃದ್ಧಿಗಳು ನಡೆಯುತ್ತಿವೆ. ಇದೀಗ ಬಫರ್ ರಸ್ತೆ ಮತ್ತು ರಾಜಕಾಲುವೆ ಅಭಿವೃದ್ಧಿಗೆ ಸಮಗ್ರ ಯೋಜನೆ ರೂಪಿಸುವಂತೆ ಹಾಗೂ ರಾಜಕಾಲುವೆ ಮತ್ತು ಕೆರೆಗಳ ಗಡಿ ಗುರುತಿಸಲು ಸರ್ವೇ ನಡೆಸುವಂತೆ ಬೆಂಗಳೂರು ಪೂರ್ವ ನಗರ ಪಾಲಿಕೆಯ ಆಯುಕ್ತ ಡಿ.ಎಸ್. ರಮೇಶ್ ಅವರು ನಿರ್ದೇಶಿಸಿದ್ದಾರೆ.
ಗುರುವಾರ ಬೆಳ್ಳಂದೂರು ವೇಸ್ಟ್ ವಿಯರ್/ಔಟ್‌ಲೆಟ್‌ನಿಂದ ಹಳೇ ಏರ್‌ಪೋರ್ಟ್ ರಸ್ತೆ ಸಮೀಪದ ವರ್ಜೀನಿಯಾ ಮಾಲ್‌ವರೆಗೆ ಪ್ರಸ್ತಾಪಿತ ರಾಜಕಾಲುವೆಯ ಬಫರ್ ವಲಯ ಸಂರಕ್ಷಣೆ, ಸರ್ವಿಸ್ ರಸ್ತೆ ನಿರ್ಮಾಣ ಹಾಗೂ ಪ್ರವಾಹ ನಿಯಂತ್ರಣ ಯೋಜನೆಗೆ ಸಂಬಂಧಿಸಿದಂತೆ ಸ್ಥಳ ಪರಿಶೀಲನೆ ನಡೆಸಿದರು. ಯೋಜನೆಯ ತಾಂತ್ರಿಕ ಅಂಶಗಳು, ಭೂಸ್ವಾಧೀನ ಪ್ರಕ್ರಿಯೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಳಿಂದ ಮಾಹಿತಿ ಪಡೆದರು.

ಆಯುಕ್ತರು ಹೊರ ವರ್ತುಲ ರಸ್ತೆ, ಬೆಳ್ಳಂದೂರು ರೈಲು ನಿಲ್ದಾಣ, 100 ಅಡಿ ರಸ್ತೆ ಮುನ್ನೇಕೊಳಲು ಎಸ್.ಟಿ.ಪಿ, ವರ್ತೂರು ಕೆರೆ ಬಫರ್ ವಲಯ, ವರ್ತೂರು ಕೋಡಿ ಜಂಕ್ಷನ್ ವರೆಗೆ ಪರಿಶೀಲಿಸಿದರು. ಈ ಪ್ರಮುಖ ಪ್ರದೇಶಗಳಲ್ಲಿನ ರಾಜಕಾಲುವೆಯ ಮೂಲ ಗಡಿ, ಬಫರ್ ವಲಯ, ಭೂಸ್ವಾಧೀನಕ್ಕೆ ಒಳಪಡುವ ಪ್ರದೇಶಗಳು, ಸರ್ವಿಸ್ ರಸ್ತೆ ನಿರ್ಮಾಣದ ಸಾಧ್ಯತೆ ಹಾಗೂ ಪ್ರವಾಹ ನಿಯಂತ್ರಣಕ್ಕೆ ಸಂಬಂಧಿಸಿದ ತಾಂತ್ರಿಕ ಅಂಶಗಳ ಕುರಿತು ಕೂಲಂಕುಶವಾಗಿ ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು. ಆ ವರದಿ ನೋಡಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಗಳು ಇವೆ.
ರಾಜಕಾಲುವೆ- ಕೆರೆಗಳ ಗಡಿ ಗುರುತಿಸಲು ಜಂಟಿ ಸರ್ವೆ
ಪಾಲಿಕೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಯೋಜನೆಗಳ ಅಡಿಯಲ್ಲಿ ರಾಜಕಾಲುವೆ ಮತ್ತು ಕೆರೆಗಳ ಮೂಲ ಗಡಿಗಳನ್ನು ಕಂದಾಯ ದಾಖಲೆಗಳಿಗೆ ಅನುಗುಣವಾಗಿ ಗುರುತಿಸಬೇಕು. ಭೂಸ್ವಾಧೀನಕ್ಕೆ ಒಳಪಡುವ ವಿಸ್ತೀರ್ಣವನ್ನು ನಿಖರವಾಗಿ ಗುರುತಿಸಿ ಗಡಿ ಕಲ್ಲುಗಳನ್ನು ಅಳವಡಿಸುವ ಉದ್ದೇಶದಿಂದ ಸಂಬಂಧಿತ ಇಲಾಖೆಗಳು ಹಾಗೂ ಏಜೆನ್ಸಿಗಳ ಸಹಯೋಗದಲ್ಲಿ ಜಂಟಿ ಸರ್ವೆ ಕೈಗೊಳ್ಳಬೇಕು. ಸರ್ವೆ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ವಿಳಂಬವಿಲ್ಲದೆ ಮುಂದುವರಿಸಬೇಕು ಎಂದು ಹೇಳಿದರು.
ಬಫರ್ ರಸ್ತೆ, ರಾಜಕಾಲುವೆ ಅಭಿವೃದ್ಧಿಗೆ ಹೊಸ ಯೋಜನೆ
ಇನ್ನೂ ಬಫರ್ ರಸ್ತೆಯನ್ನು ಹೊರ ವರ್ತುಲ ರಸ್ತೆಯೊಂದಿಗೆ ಸಂಪರ್ಕ ಕಲ್ಪಿಸಿದರೆ ವಾಹನ ಸವಾರರಿಗೆ ಅನುಕೂಲವಾಗುತ್ತದೆ. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣ, ಎಲಿವೇಟೆಡ್ ಬ್ರಿಡ್ಜ್ ನಿರ್ಮಾಣ, ರಾಜಕಾಲುವೆಗಳ ಮೂಲ ಅಗಲವನ್ನು ಸಂರಕ್ಷಿಸುವುದು, ರಿಟೈನಿಂಗ್ ವಾಲ್ ನಿರ್ಮಾಣ ಹಾಗೂ ನಗರ ಪ್ರವಾಹ ನಿಯಂತ್ರಣಕ್ಕೆ ಅಗತ್ಯವಿರುವ ಎಲ್ಲ ತಾಂತ್ರಿಕ ಅಂಶಗಳನ್ನು ಸಮಗ್ರವಾಗಿ ಪರಿಗಣಿಸಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು ಎಂದು ತಾಕೀತು ಮಾಡಿದರು.
ಭೂಸ್ವಾಧೀನ ಪ್ರಕ್ರಿಯೆಗೆ ಸಮನ್ವಯ ಅಗತ್ಯ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB), ಗೇಲ್ ಇಂಡಿಯಾ, ಕಂದಾಯ ಇಲಾಖೆ, ಭೂಮಾಪನ ಇಲಾಖೆ ಹಾಗೂ ಇತರೆ ಸಂಬಂಧಿತ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಜಂಟಿ ಸ್ಥಳ ಪರಿಶೀಲನೆ ನಡೆಸುವ ಮೂಲಕ ಯಾವುದೇ ತಾಂತ್ರಿಕ ಅಥವಾ ಆಡಳಿತಾತ್ಮಕ ಅಡೆತಡೆಗಳಿಲ್ಲದೆ ಯೋಜನೆಯನ್ನು ನಿಗದಿತ ಅವಧಿಯಲ್ಲಿ ಅನುಷ್ಠಾನಗೊಳಿಸುವ ಸಲುವಾಗಿ ಸಮನ್ವಯದೊಂದಿಗೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸುವ ಅಗತ್ಯತೆ ತಿಳಿಸಿದರು.
ಮುಂದಿನ ದಿನಗಳಲ್ಲಿ ಈ ಭಾಗಗಳಲ್ಲಿ ಹೊಸ ಯೋಜನೆ ರೂಪುಗೊಂಡು ಜಾರಿಗೆ ಕ್ರಮ ವಹಿಸಲಾಗುತ್ತದೆ. ಜೊತೆಗೆ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಜೊತೆಗೆ ರಾಜಕಾಲುವೆ, ಕೆರೆಗಳ ಗಡಿ ಗುರುತಿಸಿ ಒತ್ತುವರಿಯಾಗಿದ್ದರೆ ತೆರವಿಗೆ ಕ್ರಮ ಜರುಗಿಸುವ ಸಾಧ್ಯತೆ ಇದೆ.













Click it and Unblock the Notifications