Bengaluru-Mysuru Expressway: ಹೆದ್ದಾರಿಯಲ್ಲಿ KSRTC ಸಿಬ್ಬಂದಿ ಮೇಲೆ ಹಲ್ಲೆ; ಇಬ್ಬರ ಬಂಧನ, ವಿಡಿಯೋ ವೈರಲ್
ಮಂಡ್ಯ: ಬೆಂಗಳೂರಲ್ಲಿ ಮಾತ್ರವಲ್ಲದೇ ಇತ್ತೀಚಿನ ದಿನಗಳಲ್ಲಿ ಇತರ ಜಿಲ್ಲೆಗಳು, ಹೊರ ವಲಯ ಮತ್ತು ಎಕ್ಸ್‌ಪ್ರೆಸ್ ವೇಗಳಲ್ಲಿ ಸಂಚಾರ ಮಾಡುವುದು ಕಷ್ಟಕರವಾಗಿದೆ. ಖಾಸಗಿ ವಾಹನಗಳಾಗಲಿ, ಸರ್ಕಾರಿ ಬಸ್‌ಗಳೇ ಆಗಲಿ ಚಾಲಕರು, ಪ್ರಯಾಣಿಕರು ತೊಂದರೆ ಅನುಭವಿಸುವ ಘಟನೆ ನಾವೆಲ್ಲ ಕೇಳಿದ್ದೇವೆ. ಇದೀಗ ಅಂಥದ್ದೇ ಘಟನೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ನಲ್ಲಿ (Bengaluru-Mysuru Expressway) ನಡೆದಿದೆ. KSRTC ಬಸ್ ಚಾಲಕ ಮತ್ತು ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಮದ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕುಟುಂಬವೊಂದರ ಮೇಲೆ ಹಲ್ಲೆ ನಡೆದಿತ್ತು. ಈ ವೇಳೆ ಮೂವರ ಬಂಧನವಾದ ಸುದ್ದಿ ಭಾರೀ ವೈರಲ್ ಆಗಿತ್ತು. ಇದೀಗ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಫ್ಲೈಬಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಆರೋಪಿ ವರುಣ್ (24) ಮತ್ತು 17 ವರ್ಷದ ಅಪ್ರಾಪ್ತ ಬಾಲಕನನ್ನು ಮಂಡ್ಯ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಲ್ಲೆ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಮಂಡ್ಯದ ಇಂಡುವಾಲು ಗ್ರಾಮದ ಬಳಿಯ ಸರ್ವೀಸ್ ರಸ್ತೆಯ ಅಂಡರ್ ಪಾಸ್ ಬಳಿ ಅಂದು ಬೆಳಗಿನ ಜಾವ 5 ಗಂಟೆ ಘಟನೆ ನಡೆದಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ (KSRTC) ಮುಂದೆ ಬಂದ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಬಸ್ ಚಾಲಕ ಮತ್ತು ನಿರ್ವಾಹಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಅವರ ಮೇಲೆ ಹಲ್ಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಬಸ್ ಚಾಲಕ, ಕಂಡಕ್ಟರ್ ಗೆ ಗಾಯ
ವಿಡಿಯೋ ನೋಡಿದ ಮಂಡ್ಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಹಲ್ಲೆ ಮಾದವರನ್ನು ಬಂಧಿಸಿದ್ದಾರೆ. ಒನ್ ವೇ ಮಾರ್ಗದಲ್ಲಿ ಬಸ್ ಸಂಚಾರ ಮಾಡಿದ್ದನ್ನು ಈ ಬೈಕ್ ಸವಾರರು ಪ್ರಶ್ನಿಸಿದ್ದಾರೆ. ಅಜಾಗರೂಕತೆಯಿಂದ ಚಾಲನೆ ಮಾಡಿದ್ದಾರೆಂದು ಆರೋಪಿಗಳು ದೂರಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದಿದೆ. ಬಂಧಿತ ವ್ಯಕ್ತಿಗಳು ಸಾರಿಗೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಲ್ಲಿ ಚಾಲಕ ವಿನೋದ್ ಮತ್ತು ಕಂಡಕ್ಟರ್ ಈರಣ್ಣ ಗಾಯಗೊಂಡಿದ್ದಾರೆ.
ಮಂಡ್ಯ ಗ್ರಾಮೀಣ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 115(2), 126(2), 132, 190 ಮತ್ತು 352 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಘಟನೆಗೆ ಸಂಬಂಧಿಸಿಂತೆ ನೆಟ್ಟಿಗರು ಕೆಲವು ಪ್ರಶ್ನೆ ಮುಂದಿಟ್ಟಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
ವಿಡಿಯೋ ನೋಡಿದ ಸಾಮಾಜಿಕ ಬಳಕೆದಾರರು, ಅಜಾಗರೂಕ ಚಾಲನೆ ಮಾಡಿದ ಸಾರಿಗೆ ಬಸ್ ಚಾಲಕನದ್ದು ತಪ್ಪಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು 'ಬೆಂಗಳೂರು-ಮೈಸೂರು ಹೆದ್ದಾರಿ ದಿನದಿಂದ ದಿನಕ್ಕೆ ಸುರಕ್ಷಿತವೇ?' ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. 'ಈ ಹೆದ್ದಾರಿಯಲ್ಲಿ ಪ್ರತಿದಿನ ಒಂದಿಲ್ಲೊಂದು ಇಂಥಹ ಘಟನೆಗಳು ನಡೆಯುತ್ತಿವೆ. ಕಾನೂನಿನ ಮೇಲೆ ಭಯ ಇದ್ದಂತಿಲ್ಲ. ಅಪರಾಧ ಘಟನೆಗಳಿಗೆ ಕಡಿವಾಣ ಹಾಕುವ ಪೊಲೀಸರು ಏನು ಮಾಡುತ್ತಿದ್ದಾರೆ?' ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.













Click it and Unblock the Notifications