ಕೇವಲ 4 ವರ್ಷಗಳಲ್ಲಿ ನನ್ನ ಬದುಕನ್ನೇ ಬದಲಿಸಿತು ಬೆಂಗಳೂರು: ಐಟಿ ಹಬ್ಗೆ ಟೆಕ್ಕಿಯ ದೊಡ್ಡ ಸಲಾಂ
ಬೆಂಗಳೂರು ಎಂದರೆ ಕೇವಲ ಟ್ರಾಫಿಕ್, ಗುಂಡಿಬಿದ್ದ ರಸ್ತೆಗಳು ಹಾಗೂ ಮೂಲಸೌಕರ್ಯಗಳ ಕೊರತೆ ಎಂದು ಟೀಕಿಸುವವರೇ ಹೆಚ್ಚು. ಆದರೆ, ಈ ಎಲ್ಲಾ ಅಂಶಗಳನ್ನಾ ಬದಿಗಿಟ್ಟು ನೋಡಿದರೆ, ಐಟಿ ಉದ್ಯೋಗಿಗಳ ಪಾಲಿಗೆ ಬೆಂಗಳೂರು ಅಕ್ಷರಶಃ ಒಂದು ಸ್ವರ್ಗ. ಇಲ್ಲಿನ ಸ್ಟಾರ್ಟ್-ಅಪ್ಗಳು, ಎಮ್ಎನ್ಸಿ ಕಂಪನಿಗಳು ಹಾಗೂ ಉದ್ಯೋಗಾವಕಾಶಗಳು ಲಕ್ಷಾಂತರ ಯುವಜನರ ಬದುಕನ್ನು ಕಟ್ಟಿಕೊಟ್ಟಿವೆ.
ಇದಕ್ಕೆ ತಾಜಾ ಉದಾಹರಣೆ ಎಂದರೆ ಸಾಫ್ಟ್ವೇರ್ ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿರುವ ಭುವನೇಶ್ ಆರ್ಯ ಎಂಬ ಟೆಕ್ಕಿಯ ಯಶೋಗಾಥೆ. ಇವರು 'ಎಕ್ಸ್ ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಇದೀಗ ವೈರಲ್ ಆಗಿದ್ದು, ಕೇವಲ 4 ವರ್ಷಗಳಲ್ಲಿ ಬೆಂಗಳೂರು ತಮ್ಮ ವೃತ್ತಿಜೀವನವನ್ನು ಹೇಗೆ ಉತ್ತುಂಗಕ್ಕೇರಿಸಿತು ಎಂಬುದನ್ನು ಅತ್ಯಂತ ಸುಂದರವಾಗಿ ವಿವರಿಸಿದ್ದಾರೆ.

15 ವರ್ಷಗಳ ವೃತ್ತಿಜೀವನದಲ್ಲಿ ಅತಿ ದೊಡ್ಡ ಬದಲಾವಣೆ
ಭುವನೇಶ್ ಆರ್ಯ ಅವರು ತಮ್ಮ 15 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಪುಣೆ, ಮುಂಬೈ, ಹೈದರಾಬಾದ್ ಮತ್ತು ದೆಹಲಿ ಎನ್ಸಿಆರ್ನಂತಹ ಪ್ರಮುಖ ನಗರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ, ಆ ಯಾವ ನಗರಗಳೂ ನೀಡದಂತಹ ವೃತ್ತಿಪರ ಯಶಸ್ಸನ್ನು ಬೆಂಗಳೂರು ಐಟಿ ಹಬ್ ಕೇವಲ ನಾಲ್ಕೇ ವರ್ಷಗಳಲ್ಲಿ ನೀಡಿದೆ ಎಂದು ಅವರು ಬರೆದುಕೊಂಡಿದ್ದಾರೆ.
"ಪ್ರತಿಯೊಂದು ನಗರಕ್ಕೂ ಅದರದ್ದೇ ಆದ ವಿಶೇಷತೆಗಳಿವೆ, ಆದರೆ ನನ್ನ ವೃತ್ತಿಜೀವನದ ಮೇಲೆ ಬೆಂಗಳೂರು ಬೀರಿದ ಒಳ್ಳೆಯ ಪ್ರಭಾವಕ್ಕೆ ಬೇರೆ ಯಾವುದೂ ಸಾಟಿಯಿಲ್ಲ. ನಾನು ಇಲ್ಲಿಗೆ ಬಂದು 4 ವರ್ಷಗಳಾಗಿವೆ, ನನ್ನ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಈ ನಗರ ನನಗೆ ನೀಡಿದೆ," ಎಂದು ಭುವನೇಶ್ ಅತ್ಯಂತ ಭಾವುಕರಾಗಿ ಸ್ಮರಿಸಿದ್ದಾರೆ.
ತಾವು ಬೇರೆ ನಗರಗಳೊಂದಿಗೆ ಬೆಂಗಳೂರನ್ನು ಹೋಲಿಸುತ್ತಿಲ್ಲ, ಬದಲಾಗಿ ಈ ನಗರದ ಬಗ್ಗೆ ತಮಗಿರುವ 'ಆಳವಾದ ಕೃತಜ್ಞತೆ'ಯನ್ನು ಮಾತ್ರ ವ್ಯಕ್ತಪಡಿಸುತ್ತಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಕಳೆದ 4 ವರ್ಷಗಳಲ್ಲಿ ಅವರು ಕಂಡ ವೃತ್ತಿಜೀವನದ ಬೆಳವಣಿಗೆ ನಿಜಕ್ಕೂ ಅಚ್ಚರಿದಾಯಕ. ಉತ್ತಮ ಉದ್ಯೋಗಾವಕಾಶಗಳು, ಆಕರ್ಷಕ ವೇತನದ ಏರಿಕೆ, ಉದ್ಯಮದ ನಾಯಕರೊಂದಿಗೆ ನೇರ ಸಂಪರ್ಕ, ಹಾಗೂ ಅನೇಕ ತಾಂತ್ರಿಕ ಕಾರ್ಯಕ್ರಮಗಳು ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸುವ ಅವಕಾಶಗಳು ಅವರಿಗೆ ಇಲ್ಲಿ ಸುಲಭವಾಗಿ ಒಲಿದುಬಂದಿವೆ.
ಟ್ರಾಫಿಕ್ ಮತ್ತು ಮೂಲಸೌಕರ್ಯಗಳ ಸಮಸ್ಯೆಗಳ ಬಗ್ಗೆಯೂ ಮುಕ್ತವಾಗಿ ಉಲ್ಲೇಖಿಸಿರುವ ಅವರು, "ಈ ಸಣ್ಣಪುಟ್ಟ ಸಮಸ್ಯೆಗಳ ಆಚೆ ನಿಂತು ನೋಡಿದಾಗ, ಬೆಂಗಳೂರು ಎಂಬುದು ಅಂತ್ಯವಿಲ್ಲದ ಅವಕಾಶಗಳ ಒಂದು ದೊಡ್ಡ ಸಾಗರ. ಬೇರೆಲ್ಲಾ ನಗರಗಳಿಗಿಂತ ಇಲ್ಲಿ ಸಿಗುವ ವೃತ್ತಿಪರ ನೈಟ್ವರ್ಕಿಂಗ್ ನಿಜಕ್ಕೂ ಅದ್ಭುತವಾಗಿದೆ" ಎಂದು ಶ್ಲಾಘಿಸಿದ್ದಾರೆ.
ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂಬ ಹೆಗ್ಗಳಿಕೆಗೆ ತಕ್ಕ ನಗರ
ಒಬ್ಬ ವ್ಯಕ್ತಿಯ ವೃತ್ತಿಪರ ಬೆಳವಣಿಗೆಯು ಆತ ವಾಸಿಸುವ ಮತ್ತು ಕೆಲಸ ಮಾಡುವ ಸ್ಥಳದ ಮೇಲೆ ಎಷ್ಟು ಅವಲಂಬಿತವಾಗಿದೆ ಎಂಬುದನ್ನು ವಿವರಿಸಲು ಭುವನೇಶ್ ಅವರು ನೀರಿನ ಬಾಟಲಿಯ ಅದ್ಭುತ ಉದಾಹರಣೆ ನೀಡಿದ್ದಾರೆ.
It’s been four years since I moved to Bengaluru, and I can honestly say this city has given me more than I ever imagined.
— Bhuvnesh Arya (@Bhuvneshdot) July 8, 2026
Before this, I worked in Pune, Mumbai, Hyderabad, and Delhi NCR. While each place had its own charm, none came close to the impact Bengaluru has had on my…
"ಒಂದು ನೀರಿನ ಬಾಟಲಿಗೆ ರೈಲ್ವೆ ನಿಲ್ದಾಣದಲ್ಲಿ 10 ರೂಪಾಯಿ, ವಿಮಾನ ನಿಲ್ದಾಣದಲ್ಲಿ 100 ರೂಪಾಯಿ ಹಾಗೂ ಪಂಚತಾರಾ ಹೋಟೆಲ್ನಲ್ಲಿ 500 ರೂಪಾಯಿ ಬೆಲೆ ಇರುತ್ತದೆ. ಅದೇ ರೀತಿ, ನನ್ನ ವೃತ್ತಿಜೀವನದ ಮೌಲ್ಯವನ್ನು ಅತ್ಯುನ್ನತ ಮಟ್ಟಕ್ಕೆ ಏರಿಸಿದ ಸ್ಥಳವೆಂದರೆ ಅದು ಬೆಂಗಳೂರು," ಎಂದಿದ್ದಾರೆ.
ಈ ಹಿಂದೆಯೇ ಬೆಂಗಳೂರಿಗೆ ಬರಲು ಅವಕಾಶವಿದ್ದರೂ ವೈಯಕ್ತಿಕ ಕಾರಣಗಳಿಂದ ಬರಲಾಗಲಿಲ್ಲ ಎಂದು ವಿಷಾದಿಸಿರುವ ಅವರು, "ಈ ನಗರವು ನಿಜಕ್ಕೂ ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎಂದು ಕರೆಸಿಕೊಳ್ಳಲು ನೂರಕ್ಕೆ ನೂರು ಅರ್ಹವಾಗಿದೆ. ಇದರ ನಿರಂತರ ಬೆಳವಣಿಗೆಯ ಭಾಗವಾಗಿರುವುದಕ್ಕೆ ನನಗೆ ತುಂಬಾ ಹೆಮ್ಮೆಯಿದೆ," ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.












Click it and Unblock the Notifications