ಕರ್ನಾಟಕದ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರದ ಮೆಚ್ಚುಗೆ
ಕರ್ನಾಟಕದಲ್ಲಿ ಗ್ರಾಮೀಣಾಭಿೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಹೊಣೆ ಹೊತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರ ಮೆಚ್ಚುಗೆ ಸೂಚಿಸಿದೆ. ಮೂಲಸೌಕರ್ಯ ಅಭಿವೃದ್ಧಿ, ನೀರಾವರಿ ಯೋಜನೆ, ಉದ್ಯೋಗ ಸೃಷ್ಟಿ ಹಾಗೂ ಡಿಜಿಟಲ್ ಆಡಳಿತ ಸೇರಿ ಹಲವು ಕಾರ್ಯಕ್ರಮಗಳ ಮೂಲಕ ಹಳ್ಳಿಗರ ಜೀವನ ಸ್ಥಿತಿ ಸುಧಾರಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ.
ಇತ್ತೀಚೆಗೆ ಕೇಂದ್ರ ಗ್ರಾಮೀಣಾಭಿೃದ್ಧಿ ಸಚಿವಾಲಯದ ಉಪ ಮಹಾನಿರ್ದೇಶಕರಾದ ಅಲ್ತಾಫ್ ಹುಸೇನ್ ನೇತೃತ್ವದ ಉನ್ನತ ಮಟ್ಟದ ತಂಡವು ರಾಜ್ಯಕ್ಕೆ ಭೇಟಿ ನೀಡಿತ್ತು. ಈ ವೇಳೆ ಆರ್‌ಡಿಪಿಆರ್ (RDPR) ಇಲಾಖೆ ಆಯುಕ್ತರಾದ ದಿವ್ಯ ಪ್ರಭು ಅವರೊಂದಿಗೆ ಮಹತ್ವದ ಪರಿಶೀಲನಾ ಸಭೆ ನಡೆಸಲಾಯಿತು. ಯೋಜನೆಗಳ ಪರಿಣಾಮಕಾರಿ ಜಾರಿಗಾಗಿ ರಾಜ್ಯ ಸರ್ಕಾರಕ್ಕೆ ಕೇಂದ್ರದಿಂದ ನಿರಂತರ ಸಹಕಾರ ಮುಂದುವರಿಯಲಿದೆ ಎಂದು ಕೇಂದ್ರದ ತಂಡ ಭರವಸೆ ನೀಡಿದ್ದು, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಉನ್ನತ ಮಟ್ಟದ ಅಧಿಕಾರಿಗಳ ತಂಡ ಭರ್ಜರಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಕರ್ನಾಟಕದ ಗ್ರಾಮೀಣಾಭಿೃದ್ಧಿ ಯೋಜನೆಗಳು ಯಾವುವು?
* ಪಿಎಂ ಆವಾಸ್ ಯೋಜನೆ - ಗ್ರಾಮೀಣ (PM Awas Yojana - Gramin): ದೇಶದ ಗ್ರಾಮೀಣ ಭಾಗದ ಬಡ ಮತ್ತು ವಸತಿ ರಹಿತ ಕುಟುಂಬಗಳಿಗೆ ಸುಸಜ್ಜಿತವಾದ ಪಕ್ಕಾ ಮನೆಗಳನ್ನು ನಿರ್ಮಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಕರ್ನಾಟಕದಲ್ಲಿ ಈ ಯೋಜನೆಯು ಗ್ರಾಮೀಣಾಭಿೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಅತ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಕೇಂದ್ರದ ಉನ್ನತ ಮಟ್ಟದ ಅಧಿಕಾರಿಗಳ ತಂಡ ಕೂಡ ರಾಜ್ಯದಲ್ಲಿ ಇದರ ಪ್ರಗತಿಯನ್ನು ಪರಿಶೀಲಿಸಿ ಮುಕ್ತಕಂಠದಿಂದ ಶ್ಲಾಘಿಸಿದೆ.
* ಪಿಎಂ ಗ್ರಾಮ ಸಡಕ್ ಯೋಜನೆ (PM Gram Sadak Yojana): ಹಳ್ಳಿ ಹಳ್ಳಿಗಳಿಗೂ ಅತ್ಯುತ್ತಮ ರಸ್ತೆ ಸಂಪರ್ಕ ಕಲ್ಪಿಸುವ ಈ ಯೋಜನೆಯ ವೇಗಕ್ಕೆ ಕೇಂದ್ರದ ತಂಡ ಮೆಚ್ಚುಗೆ ಸೂಚಿಸಿದೆ.
* ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM): ಗ್ರಾಮೀಣ ಭಾಗದ ಮಹಿಳೆಯರ ಮತ್ತು ಸ್ವಸಹಾಯ ಸಂಘಗಳ ಆರ್ಥಿಕ ಸಬಲೀಕರಣಕ್ಕೆ ಪೂರಕವಾಗಿರುವ ಈ ಯೋಜನೆಯ ಅನುಷ್ಠಾನದ ಕುರಿತು ಸಭೆಯಲ್ಲಿ ಪ್ರಗತಿ ಪರಿಶೀಲಿಸಲಾಯಿತು.
* ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮ (NSAP): ಹಳ್ಳಿಗಳ ವೃದ್ಧರು, ವಿಧವೆಯರು ಮತ್ತು ವಿಕಲಚೇತನರಿಗೆ ತಲುಪುವ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದ ಬಗ್ಗೆ ಅಧಿಕಾರಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ.
* ಜಲಾಮೃತ: ಬರ ಪೀಡಿದ ಪ್ರದೇಶಗಳಲ್ಲಿ ಜಲ ಸಂರಕ್ಷಣೆಗಾಗಿ ತೆಗೆದುಕೊಂಡ ಯೋಜನೆ ಇದು. ಸಾಂಪ್ರದಾಯಿಕ ಜಲಮೂಲಗಳನ್ನು ವೈಜ್ಞಾನಿಕವಾಗಿ ಪುನರ್ಜೀವನಗೊಳಿಸುವುದು ಈ ಯೋಜನೆಯ ಉದ್ದೇಶ. ಗಿಡಗಳ ನೆಟ್ಟು, ಅರಣ್ಯೀಕರಣ, ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು ಸೇರಿ ಜಲಾಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ತೆಗೆದುಕೊಂಡ ಕಾರ್ಯಕ್ರಮವಿದು.
* ಸುವರ್ಣ ಗ್ರಾಮೋದ್ಯೋಗ: ಹಳ್ಳಿಗಳಲ್ಲಿ ಸಮುದಾಯಗಳ ಮೂಲಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡು, ಉದ್ಯೋಗ ಸೃಷ್ಟಿಸುವುದು ಈ ಯೋಜನೆಯ ಮೂಲ ಉದ್ದೇಶ. ರಸ್ತೆಗಳು, ಅಂಗನವಾಡಿ ಕಟ್ಟಡಗಳು, ಸಮುದಾಯ ಭವನಗಳು ಹಾಗೂ ಘನ ತ್ಯಾಜ್ಯ ನಿರ್ವಹಣೆ ಸೇರಿ ಗ್ರಾಮಗಳಲ್ಲಿರುವ ಯುವಕರಿಗೆ ವೃತ್ತಿಪರ ತರಬೇತಿ ನೀಡಿ, ಸ್ವಉದ್ಯೋಗ ಆರಂಭಿಸಲು ಉತ್ತೇಜಿಸುವುದು ಈ ಕಾರ್ಯಕ್ರಮದ ಉದ್ದೇಶ.

* ಸಂಜೀವಿನಿ-NRLM: ಧೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಮೂಲಕ ಗ್ರಾಮೀಣ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಈ ಯೋಜನೆಯ ಉದ್ದೇಶ. ಸ್ವಸಹಾಯ ಸಂಘಗಳ ಮೂಲಕ ಸಣ್ಣ ಮೊತ್ತದ ಸಾಲ ಸೌಲಭ್ಯ ಒದಗಿಸಿ, ಕೌಶಲ್ಯ ತರಬೇತಿ ನೀಡಿ, ಆರ್ಥಿಕವಾಗಿ ಮಹಿಳೆಯರನ್ನು ಸಬಲರನ್ನಾಗಿಸುವುದು ಈ ಕಾರ್ಯಕ್ರಮದ ಗುರಿ. ಇದರಿಂದ ಹೊಸ ಹೊಸ ಉದ್ಯೋಗಗಳನ್ನು ಸೃಷ್ಟಿಸುವುದು ಕರ್ನಾಟಕದ ಸರ್ಕಾರದ ಉದ್ದೇಶ.
* MGNREGS ಕರ್ನಾಟಕ: ಹಳ್ಳಿಗರಿಗೆ ವರ್ಷದಲ್ಲಿ ನೂರು ದಿನಗಳಾದರೂ ಉದ್ಯೋಗದ ಭರವಸೆ ನೀಡವ ಉದ್ದೇಶದಿಂದ ಇರೋ ಈ ಯೋಜನೆಯಿಂದ ಗ್ರಾಮೀಣ ಕರ್ನಾಟಕದಲ್ಲಿ ಜಲ ಸಂರಕ್ಷಣೆ ಹಾಗೂ ರಸ್ತೆ ಅಭಿೃದ್ಧಿ ಆಗುತ್ತಿದೆ.
* ಇ-ಸ್ವತ್ತು ಅಭಿಯಾನ: ಗ್ರಾಮಸ್ಥರಿಗೆ ತಮ್ಮ ಜಮೀನಿನ ದಾಖಲಾತಿಯಾದ ಇ-ಖಾತಾವನ್ನು ಡಿಜಿಟಲೈಸ್ ಮಾಡಿ ಈ ಯೋಜನೆಯಡಿಯಲ್ಲಿ ವಿತರಿಸಲಾಗುವುದು. ಗ್ರಾಮೀಣ ಪ್ರದೇಶದ ಜನರಿಗೆ ಆನ್‌ಲೈನ್‌ನಲ್ಲಿಯೇ ಹಕ್ಕು ಪತ್ರಗಳು ಸಿಗುವಂತೆ ಮಾಡುವುದು ಈ ಯೋಜನೆಯ ಉದ್ದೇಶ.
ರಾಜ್ಯದಲ್ಲಿ ಈ ಎಲ್ಲ ಪ್ರಮುಖ ಯೋಜನೆಗಳ ಅನುಷ್ಠಾನವು ಯಾವುದೇ ದೊಡ್ಡ ಅಡಚಣೆಗಳಿಲ್ಲದೆ ನಿಗದಿತ ವೇಳಾಪಟ್ಟಿಯಂತೆ ಸಾಗುತ್ತಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಯೋಜನೆಗಳನ್ನು ಇನ್ನು ಸರಳವಾಗಿ ಮತ್ತು ಪರಿಣಾಮಕಾರಿಯಾಗಿ ಜನರ ಮನೆಬಾಗಿಲಿಗೆ ತಲುಪಿಸಲು ಕೆಲವು ಪ್ರಮುಖ ಆಡಳಿತಾತ್ಮಕ ಹಾಗೂ ಪ್ರಕ್ರಿಯಾತ್ಮಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ಗ್ರಾಮೀಣಾಭಿೃದ್ಧಿ ಇಲಾಖೆಯ ಕೆಲಸಕ್ಕೆ ಮತ್ತೊಮ್ಮೆ ದೊಡ್ಡ ಮನ್ನಣೆ ಸಿಕ್ಕಂತಾಗಿದೆ.













Click it and Unblock the Notifications