Rural Development And Panchayat Raj: ಆಯ್ಕೆಯಾದ 2022 ಅಭ್ಯರ್ಥಿಗಳ ಕೈ ಸೇರಲಿದೆ ನೇಮಕಾತಿ ಪತ್ರ
ಬೆಂಗಳೂರು, ಮಾರ್ಚ್ 01: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಖಾಲಿ ಇರುವ 2022 ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ವಿವಿಧ ಹಂತಗಳಲ್ಲಿದ್ದು, ಶೀಘ್ರದಲ್ಲಿಯೇ ಹುದ್ದೆಗಳ ನೇಮಕಾತಿ ಪತ್ರಗಳನ್ನು ಅಭ್ಯರ್ಥಿಗಳು ಪಡೆಯಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ 136 ಕಿರಿಯ ಎಂಜನಿಯರ್, 288 ಸಹಾಯಕ ಎಂಜನಿಯರ್ ಮತ್ತು 24 ಸಹಾಯಕ ಕಾರ್ಯಪಾಲಕ ಎಂಜನಿಯರ್ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಜನವರಿ 31ರಂದು ಅಂತಿಮಪಟ್ಟಿಯ ಅಧಿಸೂಚನೆಯನ್ನು ಹೊರಡಿಸಿದೆ. ಈ ಪೈಕಿ 24 ಸಹಾಯಕ ಕಾರ್ಯಪಾಲಕ ಎಂಜನಿಯರ್ಗಳ ನೇಮಕಾತಿ ಆದೇಶವನ್ನು ಕರ್ನಾಟಕ ಲೋಕಸೇವಾ ಆಯೋಗವು ತಡೆ ಹಿಡಿದಿದ್ದು, ಉಳಿದ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಾದ ವಿವಿಧ 91 ಹುದ್ದೆಗಳನ್ನುನೇರ ನೇಮಕಾತಿ ಕೋಟಾದಡಿ ಆನ್ಲೈನ್ ಮೂಲಕ ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ತಿಳಿಸಲಾಗಿದೆ. ಈ ಹುದ್ದೆಗಳಳ್ಲಿ 20 ಕಿರಿಯ ಎಂಜನಿಯರ್, 18 ಪ್ರಥಮ ದರ್ಜೆ ಸಹಾಯಕರು. 3 ಪ್ರಥಮ ದರ್ಜೆ ಲೆಕ್ಕ ಸಹಾಯಕರು, 42 ದ್ವಿತೀಯ ದರ್ಜೆ ಸಹಾಯಕರು ಹಾಗೂ 8 ದ್ವಿತೀಯ ದರ್ಜೆ ಲೆಕ್ಕ ಸಹಾಯರು ಸೇರಿದ್ದು, ಈ ಸಂಬಂಧದಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಪಂಚಾಯತ್ ರಾಜ್ ಎಂಜನಿಯರಿಂಗ್ ಇಲಾಖೆಯಲ್ಲಿ ಐವರು ಸಹಾಯಕ ಕಾರ್ಯಪಾಲಕ ಎಂಜನಿಯರ್ಗಳ ನೇರ ನೇಮಕಾತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳೆದ 24ರಂದು ಸೂಚಿಸಲಾಗಿದೆ, ಇದೇ ಇಲಾಖೆಯಲ್ಲಿನ 2 ಪ್ರಥಮ ದರ್ಜೆ ಲೆಕ್ಕ ಸಹಾಯಕ, 49 ದ್ವಿತೀಯ ದರ್ಜೆ ಸಹಾಯಕ ಮತ್ತು 6 ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ತುಂಬಲು ಲೋಕ ಸೇವಾ ಆಯೋಗಕ್ಕೆ ಸೂಚಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅಗತ್ಯವಾದ 40 (ಇವುಗಳಲ್ಲಿ 8 ಹುದ್ದೆಗಳು ಕಲ್ಯಾಣ ಕರ್ನಾಟಕ) ಗ್ರೂಪ್ ಎ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಾದ ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿಗಳನ್ನು ಭರ್ತಿ ಮಾಡಲು ಲೋಕಸೇವಾ ಆಯೋಗವು ಕಳೆದ 26ರಂದು ಅಧಿಸೂಚನೆ ಹೊರಡಿಸಿದೆ ಎಂದೂ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗ್ರಾಮ ಪಂಚಾಯತಿಗಳಲ್ಲಿ ಖಾಲಿ ಇರುವ 256 ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಇವುಗಳಲ್ಲಿ 106 ಹೈ.ಕ), 220 ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-1) (ಇವುಗಳಲ್ಲಿ 85 ಹೈ.ಕ), 343 ಗ್ರಾಮ ಪಂಚಾಯತಿ ಕಾರ್ಯದರ್ಶಿ (ಗ್ರೇಡ್-2) (ಇವುಗಳಲ್ಲಿ 52 ಹೈ.ಕ) ಮತ್ತು 105 ದ್ವಿತೀಯ ದರ್ಜೆ ಲೆಕ್ಕ ಸಹಾಯಕ (ಇವುಗಳಲ್ಲಿ 50 ಹೈ.ಕ) ಹುದ್ದೆಗಳನ್ನು ನೇರವಾಗಿ ತುಂಬಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಲಾಗಿದ್ದು ಭರ್ತಿ ಮಾಡಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಶೀಘ್ರದಲ್ಲೇ ಸೂಚಿಸಲಾಗುವುದು ಎಂದೂ ಸಚಿವರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತಿ ಹಾಗೂ ತಾಲ್ಲೂಕು ಪಂಚಾಯತಿಗಳಲ್ಲಿ ಖಾಲಿ ಇರುವ 100 ಪ್ರಥಮ ದರ್ಜೆ ಸಹಾಯಕರು, 200 ದ್ವಿತೀಯ ದರ್ಜೆ ಸಹಾಯಕರು ಮತ್ತು ಕಲ್ಯಾಣ ಕರ್ನಾಟಕ ವೃಂದದ 48 ಪ್ರಥಮ ದರ್ಜೆ ಸಹಾಯಕರು ಹಾಗೂ 109 ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ತುಂಬಿಕೊಳ್ಳಲು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆಗಳನ್ನು ಸಲ್ಲಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
"ತಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿನ 2022 ಹುದ್ದೆಗಳನ್ನು ತುಂಬಿಸಲು ಬದ್ಧತೆಯನ್ನು ತೋರುವ ಮೂಲಕ ಯುವಜನರಲ್ಲಿ ಹೊಸ ಆಶಯಗಳನ್ನು ಮೂಡಿಸುವದರೊಂದಿಗೆ ಗ್ರಾಮೀಣ ಜನರ ಕೆಲಸ ಕಾರ್ಯಗಳು ವಿಳಂಬರಹಿತವಾಗಿ ನಡೆಯಲು ಅನುವು ಮಾಡಿಕೊಡುವ ಸಂಕಲ್ಪ ಮಾಡಿದೆ" ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.












Click it and Unblock the Notifications