₹2,000: ಗ್ಯಾರಂಟಿಗೆ ಸದಾ ಆಕ್ಷೇಪಿಸೋ ಬಿಜೆಪಿ, ಇದೀಗ ಕೇಂದ್ರ ಸಮಿತಿಯಿಂದಲೇ ಗೃಹಲಕ್ಷ್ಮಿಗೆ ಶಹಬ್ಬಾಸ್
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿ ನಾಯಕರು ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇದು ಸರಕಾರದ ಖಜಾನೆ ಖಾಲಿ ಮಾಡುತ್ತಿದೆ. ಯಾವುದೇ ಇತರೆ ಅಭಿವೃದ್ಧಿಯಾಗುತ್ತಿಲ್ಲ ಎಂದು ಹೇಳುತ್ತಲೇ ಬಂದಿದ್ದಾರೆ. ಆದರೆ, ಅದನ್ನು ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಘೋಷಿಸಿದ್ದು ಸುಳ್ಳಲ್ಲ. ಇದೀಗ ಇವೆಲ್ಲವಕ್ಕೂ ಉತ್ತರ ಎಂಬಂತೆ ಕೇಂದ್ರ ಸರಕಾರದ ಸಮಿತಿಯೇ ಈ ಯೋಜನೆಗೆ ಭೇಷ್ ಎಂದು ಹೇಳುತ್ತಿದ್ದು, ಮಹಿಳೆಯರ ಬ್ಯಾಂಕ್ ಖಾತೆಗೆ ಹಾಕುತ್ತಿರುವ 2 ಸಾವಿರ ರೂ. ಅವರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಹಕರಿಸುತ್ತಿದೆ, ಎಂದು ಕರ್ನಾಟಕದ ಗೃಹಲಕ್ಷ್ಮೀ ಯೋಜನೆಗೆ ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿಯೇ ಶಹಬ್ಬಾಸ್ ಎಂದಿದೆ.
ಕರ್ನಾಟಕ ಸರ್ಕಾರವು ಮಹಿಳೆಯರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ತಲಾ 2000 ರೂ. ಜಮೆ ಮಾಡುತ್ತಿದೆ. ಮಹಾರಾಷ್ಟ್ರ, ಒಡಿಶಾದಲ್ಲಿಯೂ ಇಂಥದ್ದೇ ಯೋಜನೆ ಜಾರಿಯಲ್ಲಿದೆ. ಇಂಥ ಯೋಜನೆಗಳು ಮಹಿಳೆಯ ಆರ್ಥಿಕ ಸ್ವಾವಲಂಬನೆಗೆ ಸಹಕಾರಿ ಎಂಬ ಅಭಿಪ್ರಾಯವನ್ನು ಕೇಂದ್ರ ಸಮಿತಿ ಹೇಳಇದೆ.
ಕರ್ನಾಟಕ ಸರ್ಕಾರದ ಗೃಹಲಕ್ಷ್ಮೀ ಮಾದರಿಯಲ್ಲಿ ದೇಶದ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಗ್ಯಾರಂಟಿ ಯೋಜನೆ ಜಾರಿಯಾಗಿದೆ. ಇದರಿಂದ ಫಲಾನುಭವಿಗಳ ಕುಟುಂಬದಲ್ಲಿ ಹಣ ಉಳಿತಾಯ ಹಾಗೂ ಬಳಕೆ ಎರಡೂ ಹೆಚ್ಚಾಗಿದೆ. ಆದರೆ ವೆಚ್ಚ ಮತ್ತು ಹಣದುಬ್ಬರ ಹೆಚ್ಚಿದಂತೆ ಈ ಯೋಜನೆಯನ್ನು ಪರಿಷ್ಕರಣೆ ಮಾಡಬೇಕು ಎಂದೂ ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿ ಪ್ರಸ್ತಾಪಿಸಿದೆ. ಕರ್ನಾಟಕದಲ್ಲಿ ಯೋಜನೆ ಜಾರಿಗೆ 28600 ಕೋಟಿ ರೂ. ಹಾಗೂ ಪಶ್ಚಿಮ ಬಂಗಾಳದಲ್ಲಿ 36 ಸಾವಿರ ಕೋಟಿ ರುಪಾಯಿ ಅನುದಾನವನ್ನು ಇಂತಹ ಯೋಜನೆಗಳಿಗಾಗಿ ನಿಗದಿ ಮಾಡಲಾಗಿದೆ ಎಂದು ಸಮಿತಿ ವಿವರಿಸಿದೆ.

ಗೃಹಲಕ್ಷ್ಮೀ ಯೋಜನೆಯು ಅತ್ಯುತ್ತಮ ಯೋಜನೆಯಾಗಿದೆ ಎಂದು ಪ್ರಧಾನಿಗಳ ಆರ್ಥಿಕ ಸಲಹಾ ಸಮಿತಿ ಕಾರ್ಯಪತ್ರದಲ್ಲಿ ತಿಳಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಕರ್ನಾಟಕವೂ ಸೇರಿದಂತೆ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಯೋಜನೆ ಜಾರಿಯಾಗಿದ್ದು, 12 ಕೋಟಿ ಮಹಿಳೆಯರಿಗೆ 1.7 ಲಕ್ಷ ಕೋಟಿ ರೂಪಾಯಿ ಹಣ ವಿನಿಯೋಗಿಸಲಾ ಗುತ್ತಿದೆ ಎಂದು ವರದಿ ಉಲ್ಲೇಖಿಸಿದೆ.
ಪ್ರಧಾನಿಗಳ ಆರ್ಥಿಕ ಸಲಹಾ ವರದಿ ಹೇಳಿದ್ದೇನು?
ಕರ್ನಾಟಕದ ಗ್ಯಾರಂಟಿ ಯೋಜನೆಗಳ ಬಗ್ಗೆ ಕೇಂದ್ರ ಸರಕಾರ ಹಾಗೂ ಬಿಜೆಪಿ ಸದಾ ಆಕ್ಷೇಪ ವ್ಯಕ್ತಪಡಿಸುತ್ತಲೇ ಇರುತ್ತದೆ. ಆದರೆ, ಇದೀಗ ಪ್ರಧಾನಿ ಆರ್ಥಿಕ ಸಲಹಾ ಮಂಡಳಿ ಸಲ್ಲಿಸಿರುವ ವರದಿಯಲ್ಲಿ ಈ ಕೆಳಗಿನ ಅಂಶಗಳನ್ನು ಹೈಲೈಟ್ ಮಾಡಿವೆ.
1. ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂ. ನೀಡುವ ಈ ಯೋಜನೆಯಿಂದ ಲಾನುಭವಿಗಳ ಕುಟುಂಬದ ಉಳಿತಾಯ ಮತ್ತು ಬಳಕೆ ಎರಡರಲ್ಲೂ ಏರಿಕೆ ಕಂಡಿದೆ.
2. ಕುಟುಂಬದ ವೆಚ್ಚ, ಹಣದುಬ್ಬರಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ಮಹಿಳೆಯರಿಗೆ ನೀಡುವ ಹಣದ ಮೊತ್ತವನ್ನು ಪರಿಷ್ಕರಿಸಲು ಸಲಹೆ ನೀಡಿದೆ.
3. ಮಹಾರಾಷ್ಟ್ರ, ಒಡಿಶಾದಲ್ಲಿ ಯೋಜನೆ ಬಳಿಕ ಕುಟುಂಬದ ವೆಚ್ಚದಲ್ಲಿ ಕ್ರಮವಾಗಿ ಶೇ.46, ಶೇ.28 ಏರಿಕೆ ಆಗಿದೆ.
4. ಯೋಜನೆಯನ್ನು ಕುಟುಂಬಗಳ ಸಾಮರ್ಥ್ಯ ವೃದ್ಧಿ, ಡಿಜಿಟಲ್ ಸಾಕ್ಷರತೆ, ಸ್ವಸಹಾಯ ಸಂಘಗಳ ಜೊತೆ ಜೋಡಿಸಬೇಕು.
5. ಕುಟುಂಬಗಳಲ್ಲಿ ಧನಾತ್ಮಕ ಬದಲಾವಣೆಗೆ, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ, ಬಾಹ್ಯಪಾವತಿ ಅವಲಂಬನೆ ಕಡಿಮೆ ಮಾಡಿದೆ.
ತಿಂಗಳಿಗೆ ಬರುವ 2 ಸಾವಿರ ಹಣದಿಂದ ಅನೇಕ ಮಹಿಳೆಯರ ಜೀವನ ಮಟ್ಟವೂ ಸುಧಾರಿಸಿದೆ. ಅಲ್ಲದೇ ಅದೇ ಹಣವನ್ನು ಉಳಿಸಿ ತಮ್ಮೂರಿಗೆ ಬಾವಿ ತೋಡಿಸಿದ ಉದಾಹರಣೆಯೂ ಕರ್ನಾಟಕದಲ್ಲಿದೆ. ಅಲ್ಲದೇ ಮನೆಗೆ ಅಗತ್ಯ ಇರೋ ಫ್ರಿಡ್ಜ್ ಸೇರಿ ಹಲವು ವಸ್ತುಗಳನ್ನು ಖರೀದಿಸಿರುವುದಾಗಿಯೂ ಅನೇಕ ಹೆಣ್ಣು ಮಕ್ಕಳು ಹೇಳಿ ಕೊಂಡಿದ್ದರು. ದಿನಗೂಲಿ ಮಾಡಿ ಬದುಕುತ್ತಿದ್ದ ಅನೇಕ ವೃದ್ಧೆಯರಿಗೆ ಜೀವನ ಸಾಗಿಸಲೂ ಈ ಆದಾಯ ಸಹಕರಿಸುತ್ತಿದೆ.












Click it and Unblock the Notifications