IMD Weather Forecast: ಜುಲೈ 14ರವರೆಗೆ ದೇಶವ್ಯಾಪಿ ಮುಂಗಾರು ಆರ್ಭಟ, ಕರಾವಳಿ ರಾಜ್ಯಗಳಿಗೆ ಭಾರೀ ಮಳೆ
ನವದೆಹಲಿ: ಮುಂಗಾರು ಮಳೆ ದೇಶಾದ್ಯಂತ ವಿಸ್ತರಿಸುತ್ತಿದ್ದು, ಸದ್ಯ ಅರಬ್ಬಿ ಸಮುದ್ರ, ಗುಜರಾತ್‌ನ ವಿವಿಧ ಭಾಗಗಳು, ರಾಜಸ್ಥಾನ ಮತ್ತು ಹರಿಯಾಣ ರಾಜ್ಯದಲ್ಲಿ ವ್ಯಾಪಿಸಿದೆ. ಮುಂದಿನ ಎರಡೇ ದಿನಗಳಲ್ಲಿ ಸಂಪೂರ್ಣವಾಗಿ ಇಡೀ ದೇಶ ಆವರಿಸಲಿದೆ. ಜಮ್ಮು-ಕಾಶ್ಮೀರ, ಪಂಜಾಬ್, ಗಡಿ ರಾಜ್ಯಗಳ ಭಾಗಗಳು ಸೇರಿದಂತೆ, ವಾಯುವ್ಯ, ಪಶ್ಚಿಮ ಭಾಗದ ರಾಜ್ಯಗಳಲ್ಲಿ ಮುಂಗಾರು ವಿಸ್ತರಿಸಲಿದ್ದು, ಅಲ್ಲೆಲ್ಲ ರಣ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಒಂದು ವಾರದಿಂದ ಸಮುದ್ರಮಟ್ಟದಲ್ಲಿ ನಿರಂತರವಾಗಿ ಬದಲಾವಣೆಗಳು ಆಗುತ್ತಿವೆ. ಮೇಲ್ಮೈ ಸುಳಿಗಾಳಿ, ಟ್ರಫ್, ವಾಯು ಚಂಡಮಾರುತ ಪರಿಚಲನೆ ನಿರ್ಮಾಣವಾಗಿದೆ. ಇದು ಉತ್ತರ ಭಾರತದ ಅನೇಕ ಭಾಗಗಳಿಗೆ ಮುಂಗಾರು ವಿಸ್ತರಿಸಲು ಪೂರಕ ವಾತಾವರಣ ನಿರ್ಮಿಸಿದೆ. ದಕ್ಷಿಣ ಭಾರತದಲ್ಲಿ ಚುರುಕಾಗಿದ್ದ ಮಳೆ ಜುಲೈ ಎರಡನೇ ವಾರದ ಹೊತ್ತಿಗೆ ದೇಶವ್ಯಾಪಿ ಅಬ್ಬರಿಸುತ್ತಿದೆ. ದೆಹಲಿ, ಮುಂಬೈ, ಹರಿಯಾಣ ಭಾಗದಲ್ಲಿ ಪ್ರವಾಹ ಭೀತಿ ಉಂಟು ಮಾಡಿದೆ.

ಅನೇಕ ರಾಜ್ಯಗಳಲ್ಲಿ ಧಾರಕಾರ ಮಳೆ
ಜುಲೈ 14 ರವರೆಗೆ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶದ ಹಲವೆಡೆ ಭಾರೀ ಮಳೆ ಸಂಭವವಿದೆ. ಇನ್ನೂ ಮಧ್ಯಪ್ರದೇಶ, ಛತ್ತೀಸ್‌ಗಢ್ ಹಾಗೂ ಮಹಾರಾಷ್ಟ್ರದ ವಿದರ್ಭ ಭಾಗಗಳಲ್ಲಿಯೂ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಆಗಲಿದೆ. ಇಲ್ಲಿ ಪ್ರತಿ ಗಂಟೆಗೆ 40 ರಿಂದ 60 ಕಿಲೋಮೀಟರ್ ವೇಗದಲ್ಲಿ ಬಲವಾದ ಬಿರುಗಾಳಿ ಬೀಸಲಿದೆ. ಈ ರಾಜ್ಯಗಳಿಗೆ ಹವಾಮಾನ ಇಲಾಖೆ 'ಯೆಲ್ಲೋ ಅಲರ್ಟ್' ನೀಡಿದೆ.
ದೇಶದ ಈಶಾನ್ಯ ಮತ್ತು ಪೂರ್ವ ಭಾಗದ ರಾಜ್ಯಗಳಲ್ಲಿ ಅತ್ಯಧಿಕ ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗಲಿದ್ದು, ಪ್ರವಾಹ ಸೃಷ್ಟಿಸುವ ಸಾಧ್ಯತೆ ಇದೆ. ಅಸ್ಸಾಂ, ನಾಗಾಲ್ಯಾಂಡ್, ಮೇಘಾಲಯ, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ ಭಾಗಗಳು ಹಾಗೂ ಸುತ್ತಮುತ್ತಲಿನ ಗುಡ್ಡಗಾಡು ಪ್ರದೇಶಗಳಲ್ಲಿ ಮುಂದಿನ 3 -5ದಿನ ವ್ಯಾಪಕ ಮಳೆ ಆಗಲಿದೆ. ಇಲ್ಲಿ ನಿರಂತರ ಮಳೆ ಆದಾಗ ಭೂಕುಸಿತ ಇನ್ನಿತರ ಪ್ರಕೃತಿ ವಿಕೋಪಗಳು ಸಾಮಾನ್ಯವಾಗಿ ಸಂಭವಿಸುತ್ತಿವೆ. ಹೀಗಾಗಿ ಇಲ್ಲಿನ ನಿವಾಸಿಗಳಿಗೆ ಎಚ್ಚರಿಕೆ ವಹಿಸುವಂತೆ ರಾಜ್ಯ ಸರ್ಕಾರ ಸೂಚನೆ ನಿಡಿದೆ. ಕೆಲವು ದಿನಗಳಿಂದ ಮಳೆ ಕಾಣುತ್ತಿರುವ ಕಾಶ್ಮೀರ, ಹಿಮಾಚಲ ಪ್ರದೇಶದಂತಹ ಕಣಿವೆ ಪ್ರದೇಶಗಳಲ್ಲೂ ನಿಗಾ ವಹಿಸಲಾಗಿದೆ.
ದಕ್ಷಿಣ ಭಾರತದ ಕರಾವಳಿ ರಾಜ್ಯಗಳು ಒಳಗೊಂಡಂತೆ ಕರಾವಳಿ ಗೋವಾ ಮತ್ತು ಕೊಂಕಣ ಪ್ರದೇಶಗಳಲ್ಲಿ ಮುಂದಿನ ಒಂದು ವಾರ ಸತತವಾಗಿ ಭಾರೀ ಮಳೆ ಆಗಲಿದೆ. ನಿರಂತರ ಮತ್ತು ಸತತ ಮಳೆಯಾಗಲಿದೆ. ಕರ್ನಾಟಕದ ಒಳನಾಡು ಜಿಲ್ಲೆಗಳು, ಕರಾವಳಿ ಭಾಗದಲ್ಲಿ ಅತ್ಯಧಿಕ ಮಳೆ ಆಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಭಾರತದಲ್ಲೂ ವ್ಯಾಪಕ ಮಳೆ
ಜುಲೈ 13ರವರೆಗೆ ಕರ್ನಾಟಕದೊಂದಿಗೆ ಕೇರಳ, ತಮಿಳುನಾಡು, ಒಡಿಶಾ, ಲಕ್ಷದ್ವೀಪ ಸೇರಿದಂತೆ ಈ ಭಾಗದ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ, ಅತ್ಯಧಿಕ ಮಳೆ ಬೀಳಲಿದೆ. ಕರ್ನಾಟಕ ಸೇರಿದಂತೆ ಕರಾವಳಿ ಭಾಗದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದೇ ಅಗತ್ಯ ಎಚ್ಚರಿಕೆ ವಹಿಸುವಂತೆ ಮುನ್ಸೂಚನೆ ಕೊಡಲಾಗಿದೆ.
ಮುಂಗಾರು ಮಳೆ ದೇಶಾದ್ಯಂತ ಸಕ್ರಿಯವಾಗಿರುವ ಕಾರಣ ಬಿತ್ತನೆಗೆ ಸಜ್ಜಾಗಿದ್ದ ಉತ್ತರ ಭಾರತದ ವಿವಿಧ ರಾಜ್ಯಗಳ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೃಷಿ ಚಟುವಟಿಕೆಗಳು ಗರಿಗೆದರಿವೆ. ತಡವಾಗಿ ವಿಸ್ತರಣೆ ಆದರೂ ಮುಂಗಾರು ಕೃಷಿಕರಲ್ಲಿ ಹೊಸ ಭರವಸೆ ಮೂಡಿಸಿದೆ. ಆಯಾ ರಾಜ್ಯ ಸರ್ಕಾರಗಳು ಪ್ರವಾಹ, ಪ್ರಕೃತಿ ವಿಕೋಪಗಳಂತಹ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಬೇಕು. ದಕ್ಷಿಣ ಭಾರತದ ವಿವಿಧ ಭಾಗಗಳಲ್ಲಿ ಮುಂಗಾರು ಪ್ರಭಾವ ಮುಂದಿನ ಮೂರು ದಿನಗಳಲ್ಲಿ ತಗ್ಗುವ ಲಕ್ಷಣಗಳಿವೆ. ಕರ್ನಾಟಕ, ಒಡಿಶಾ, ತಮಿಳುನಾಡಿನಲ್ಲಿ ಮತ್ತು ಆಂಧ್ರ ದಲ್ಲಿ ಮಳೆ ಕುಗ್ಗುವ ಸಾಧ್ಯತೆ ಇದೆ.













Click it and Unblock the Notifications