ಒಟಿಟಿಯಲ್ಲಿ ಸೌಂಡ್ ಮಾಡ್ತಿದೆ ಇಬ್ಬರು ಹುಡುಗಿಯರ ಈ ರೊಮ್ಯಾಂಟಿಕ್ ಕಥೆ; ನೋಡಲು ಮುಗಿಬಿದ್ದ ಸಿನಿರಸಿಕರು
ಒಟಿಟಿ (OTT) ಜಗತ್ತಿನಲ್ಲಿ ಪ್ರತಿ ವಾರ ನೂರಾರು ಸಿನಿಮಾಗಳು, ವೆಬ್ ಸಿರೀಸ್‌ಗಳು ರಿಲೀಸ್ ಆಗುತ್ತಿದ್ದರೂ, ವಿಭಿನ್ನ ಕಥಾಹಂದರ ಹಾಗೂ ಭಿನ್ನವಾದ ಭಾವನೆಗಳನ್ನು ಹೊಂದಿರುವ ಚಿತ್ರಗಳು ಮಾತ್ರ ಪ್ರೇಕ್ಷಕರ ಗಮನ ಸೆಳೆಯುತ್ತವೆ. ವಿಶೇಷವಾಗಿ ಹಾಲಿವುಡ್‌ನಿಂದ ಬರುವ ಕ್ರೈಂ, ಸೈಕಲಾಜಿಕಲ್ ಥ್ರಿಲ್ಲಿಂಗ್ ಹಾಗೂ ರೊಮ್ಯಾಂಟಿಕ್ ಡ್ರಾಮಾಗಳಿಗೆ ಭಾರತೀಯ ಸಿನಿಪ್ರಿಯರಲ್ಲಿ ಒಂದು ಕ್ರೇಜ್ ಇದೆ. ಸದ್ಯ ರೆಗ್ಯುಲರ್ ಪ್ರೇಮಕಥೆಗಳಿಗಿಂತ ಭಿನ್ನವಾಗಿ, LGBTQ+ ಕಮ್ಯೂನಿಟಿಯ ಭಾವನೆಗಳನ್ನು ಒಳಗೊಂಡ ವಿಭಿನ್ನ ಕಥೆಯೊಂದು ಒಟಿಟಿ ಅಂಗಳಕ್ಕೆ ಲಗ್ಗೆ ಇಟ್ಟು ಸೌಂಡ್ ಮಾಡ್ತಿದೆ.
ಅಮೆರಿಕನ್ ಕಮಿಂಗ್ ಆಫ್ ಏಜ್ ರೊಮಾಂಟಿಕ್ ಡ್ರಾಮಾ ಶೈಲಿಯ 'ಗರ್ಲ್ಸ್ ಲೈಕ್ ಗರ್ಲ್ಸ್' (Girls Like Girls) ಸಿನಿಮಾ ಈಗ ಸಿನಿರಸಿಕರ ಗಮನ ಸೆಳೆಯುತ್ತಿದೆ. ಇದೇ ಹೆಸರಿನಲ್ಲಿ ಪ್ರಸಿದ್ಧ ಗಾಯಕಿ ಹ್ಯಾಲಿ ಕಿಯೋಕೊ (Hayley Kiyoko) ನಿರ್ಮಿಸಿದ್ದ ಮ್ಯೂಸಿಕ್ ವಿಡಿಯೋ ಮತ್ತು ನಾವೆಲ್ ಆಧಾರದ ಮೇಲೆ ಈ ಸಿನಿಮಾವನ್ನು ಸಿದ್ಧಪಡಿಸಲಾಗಿದೆ. ಖ್ಯಾತ ಗಾಯಕಿ, ನಟಿ ಹಾಗೂ ನಿರ್ದೇಶಕಿ ಹ್ಯಾಲಿ ಕಿಯೋಕೊ ಅವರೇ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

ಯಾವ ಒಟಿಟಿಯಲ್ಲಿ ಲಭ್ಯ?
ಇತ್ತೀಚೆಗಷ್ಟೇ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ಯುವ ಜನತೆಯ ಮೆಚ್ಚುಗೆ ಗಳಿಸಿದ್ದ ಈ ಸಿನಿಮಾ, ಜುಲೈ 7ರಿಂದಲೇ ಪ್ರಮುಖ ಒಟಿಟಿ ವೇದಿಕೆಯಾದ ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ (Amazon Prime Video) ಸ್ಟ್ರೀಮಿಂಗ್ ಆರಂಭಿಸಿದೆ. ಆದರೆ ಪ್ರೈಮ್ ಸಬ್‌ಸ್ಕ್ರಿಪ್ಷನ್ ಇದ್ದ ತಕ್ಷಣ ಇದನ್ನು ಉಚಿತವಾಗಿ ನೋಡಲು ಸಾಧ್ಯವಿಲ್ಲ. ಇದು 'Rent' (Pay-Per-View) ಮಾದರಿಯಲ್ಲಿ ಸದ್ಯ ವೀಕ್ಷಣೆಗೆ ಲಭ್ಯವಿದೆ.
ಚಿತ್ರದ ಕಥೆ ಏನು?
ಈ ಸಿನಿಮಾದ ಕಥೆ ಸಾಗುವುದು ಕೋಲೆ ಮತ್ತು ಸೋನಿಯಾ ಎಂಬ ಇಬ್ಬರು ಟೀನೇಜ್ ಹುಡುಗಿಯರ ಸುತ್ತ. ಸಾಮಾನ್ಯ ಸ್ನೇಹಿತರ ಮೂಲಕ ಪರಿಚಯವಾಗುವ ಇವರಿಬ್ಬರು, ದಿನ ಕಳೆದಂತೆ ಆಪ್ತ ಗೆಳತಿಯರಾಗುತ್ತಾರೆ. ಸೋನಿಯಾಗೆ ಈಗಾಗಲೇ 'ಟ್ರೆಂಟನ್' ಎಂಬ ಬಾಯ್‌ಫ್ರೆಂಡ್ ಇದ್ದರೂ, ಆಕೆ ಕೋಲೆ ಜೊತೆ ಕಳೆಯುವ ಸಮಯವೇ ಹೆಚ್ಚಾಗಿರುತ್ತದೆ. ಹಾಗಾಗಿ ಇಬ್ಬರ ನಡುವೆ ಒಂದು ವಿಶೇಷವಾದ ಬಾಂಧವ್ಯ ಬೆಳೆಯುತ್ತದೆ.
ಒಂದು ದಿನ ಕೋಲೆ ತನ್ನ ಬದುಕಿನ ಅತ್ಯಂತ ಕಹಿ ಘಟನೆಯಾದ ತಾಯಿಯ ಮರಣದ ಬಗ್ಗೆ ಸೋನಿಯಾ ಜೊತೆ ಹಂಚಿಕೊಳ್ಳುತ್ತಾ ಭಾವುಕಳಾಗುತ್ತಾಳೆ. ಆ ಎಮೋಷನಲ್ ಕ್ಷಣದಲ್ಲಿ ಇಬ್ಬರೂ ಇನ್ನಷ್ಟು ಹತ್ತಿರವಾಗುತ್ತಾರೆ. ಅಲ್ಲಿ ನಡೆಯುವ ಒಂದು 'ಕಿಸ್' (ಮುತ್ತು) ಇಬ್ಬರ ಜೀವನವನ್ನೇ ಬದಲಾಯಿಸಿಬಿಡುತ್ತದೆ. ಆ ಘಟನೆಯ ನಂತರ ಸೋನಿಯಾ ತೀವ್ರ ಗೊಂದಲಕ್ಕೊಳಗಾಗಿ, ಕೋಲೆಯಿಂದ ದೂರವಿರಲು ನಿರ್ಧರಿಸುತ್ತಾಳೆ.
ಟ್ವಿಸ್ಟ್ ಏನು?
ಸೋನಿಯಾ ದೂರವಾದ ನಂತರ ಕೋಲೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಾಳೆ. ಇದೇ ಸಮಯದಲ್ಲಿ ಸೋನಿಯಾ ಬಾಯ್‌ಫ್ರೆಂಡ್ ಟ್ರೆಂಟನ್ ಕಥೆಗೆ ಎಂಟ್ರಿ ಕೊಡುತ್ತಾನೆ. ಕೋಲೆಯ ವೈಯಕ್ತಿಕ ರಹಸ್ಯವೊಂದನ್ನು ಆತ ಸಮಾಜದ ಮುಂದೆ ಬಹಿರಂಗಪಡಿಸುತ್ತಾನೆ. ಇದರಿಂದ ಕೋಲೆ ಬದುಕು ಅಸ್ತವ್ಯಸ್ತವಾಗುತ್ತದೆ. ತನಗಿದ್ದ ಆ ಸೀಕ್ರೆಟ್ ಅನ್ನು ಸೋನಿಯಾನೇ ತನ್ನ ಬಾಯ್‌ಫ್ರೆಂಡ್‌ಗೆ ಹೇಳಿದ್ದಾಳೆ ಎಂದು ಕೋಲೆ ಸಂಶಯ ಪಡುತ್ತಾಳೆ. ಅಷ್ಟಕ್ಕೂ ಕೋಲೆ ಅಡಗಿಸಿಟ್ಟಿದ್ದ ಆ ರಹಸ್ಯವೇನು? ಟ್ರೆಂಟನ್‌ಗೆ ಆ ವಿಷಯ ಗೊತ್ತಾಗಿದ್ದು ಹೇಗೆ? ಸೋನಿಯಾ ನಿಜವಾಗಿಯೂ ಕೋಲೆಗೆ ದ್ರೋಹ ಮಾಡಿದ್ಲಾ? ಪ್ರೀತಿಗಿಂತ ಸಮಾಜದ ಒತ್ತಡವೇ ಗೆದ್ದಿತಾ? ಕೊನೆಗೆ ಇವರಿಬ್ಬರೂ ಒಂದಾಗುತ್ತಾರಾ? ಅನ್ನೋ ಪ್ರಶ್ನೆಗಳಿಗೆ ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಉತ್ತರವಿದೆ.
ಚಿತ್ರದ ಪ್ಲಸ್ ಪಾಯಿಂಟ್ಸ್
ಇದೊಂದು ಮಾಮೂಲಿ ಲವ್ ಸ್ಟೋರಿ ಅಲ್ಲ. ಟೀನೇಜ್ ವಯಸ್ಸಿನಲ್ಲಿ ಎದುರಾಗುವ ಭಾವನಾತ್ಮಕ ಗೊಂದಲಗಳು, ತಮ್ಮದೇ ಆದ ಅಸ್ತಿತ್ವದ ಹುಡುಕಾಟ, ಸ್ವಯಂ ಅಂಗೀಕಾರ ಮತ್ತು ಕೌಟುಂಬಿಕ ಒತ್ತಡಗಳನ್ನು ಸಿನಿಮಾದಲ್ಲಿ ಅತ್ಯಂತ ನೈಜವಾಗಿ ತೋರಿಸಲಾಗಿದೆ. ಕೋಲೆ ಮತ್ತು ಸೋನಿಯಾ ಪಾತ್ರಗಳಲ್ಲಿ ನಟಿಸಿರುವ ಮಾಯಾ ಡಿ ಕೋಸ್ಟಾ ಹಾಗೂ ಮೈರಾ ಮಾಲೋಯ್ ಅದ್ಭುತವಾಗಿ ನಟಿಸಿದ್ದಾರೆ. ಇಬ್ಬರ ನಡುವಿನ ಕೆಮಿಸ್ಟ್ರಿ ಸ್ಕ್ರೀನ್ ಮೇಲೆ ಸಖತ್ ವರ್ಕ್ ಆಗಿದೆ.
ನಿರ್ದೇಶಕಿ ಹ್ಯಾಲಿ ಕಿಯೋಕೊ ಕಥೆಯನ್ನು ನಿಧಾನವಾಗಿ ಮತ್ತು ಅಚ್ಚುಕಟ್ಟಾಗಿ ಕಲ್ಪಿಸಿದ್ದಾರೆ. ಸಿನಿಮಾದ ಹಿನ್ನೆಲೆ ಸಂಗೀತ ಹಾಗೂ ವಿಶ್ಶುವಲ್ಸ್ ಕಥೆಯ ಮೂಡ್‌ಗೆ ಪೂರಕವಾಗಿವೆ. ಯಾರಿಗೆಲ್ಲ ಮಾಮೂಲಿ ಪ್ರೇಮಕಥೆಗಳಿಗಿಂತ ಭಿನ್ನವಾದ ಹಾಲಿವುಡ್ ಎಮೋಷನಲ್ ಡ್ರಾಮಾ ಹಾಗೂ LGBTQ+ ಹಿನ್ನೆಲೆಯ ಸಿನಿಮಾಗಳನ್ನು ನೋಡಲು ಇಷ್ಟವೋ, ಅಂತವರಿಗೆ 'ಗರ್ಲ್ಸ್ ಲೈಕ್ ಗರ್ಲ್ಸ್' ಸಿನಿಮಾ ಈ ವೀಕೆಂಡ್‌ನಲ್ಲಿ ನೋಡಲು ಒಂದು ಒಳ್ಳೆ ಆಯ್ಕೆ.













Click it and Unblock the Notifications