ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ಸೇವಿಸಿದರೆ ಮಧುಮೇಹಿಗಳಿಗೆ ಒಳ್ಳೇದಾ:
ಬಾದಾಮಿ ಪೋಷಕಾಂಶಗಳ ಆಗರ. ಆರೋಗ್ಯಕರ ಕೊಬ್ಬು, ಪ್ರೋಟೀನ್, ನಾರಿನಂಶ ಮತ್ತು ಅಗತ್ಯ ಜೀವಸತ್ವಗಳು ಇದರಲ್ಲಿ ಸಮೃದ್ಧವಾಗಿವೆ. ಜೀವನಶೈಲಿ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸುತ್ತಿರುವ ಅನೇಕರಿಗೆ, ದಿನನಿತ್ಯದ ಆಹಾರದಲ್ಲಿ ಬಾದಾಮಿಯನ್ನು ಸೇರಿಸಿಕೊಳ್ಳುವಂತೆ ಆಗಾಗ್ಗೆ ಸಲಹೆ ನೀಡಲಾಗುತ್ತದೆ.
ಮಧುಮೇಹ ಇರುವವರಿಗೆ, ಆಹಾರದಲ್ಲಿನ ಸಣ್ಣಪುಟ್ಟ ಆಯ್ಕೆಗಳೂ ರಕ್ತದಲ್ಲಿ ಸಕ್ಕರೆ ನಿಯಂತ್ರಣದ ಮೇಲೆ ದೊಡ್ಡ ಪರಿಣಾಮ ಬೀರಬಲ್ಲವು. ಹಾಗಾಗಿ ಒಂದು ಆಹಾರ ನಿಜಕ್ಕೂ ಪ್ರಯೋಜನಕಾರಿಯೇ ಅಥವಾ ಅಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯ.

ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೇಲಿ ನೆನೆಸಿದ ಬಾದಾಮಿ ತಿನ್ನುವುದು ಅನೇಕ ಮನೆಗಳಲ್ಲಿ ತಲೆತಲಾಂತರದಿಂದ ಬಂದ ಒಂದು ರೂಢಿ. ನೆನೆಸುವುದರಿಂದ ಹೆಚ್ಚು ಪೋಷಕಾಂಶಗಳು ಬಿಡುಗಡೆಯಾಗುತ್ತವೆ, ಜೀರ್ಣಕ್ರಿಯೆ ಸುಲಭವಾಗುತ್ತದೆ, ಮತ್ತು ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಲೂ ಸಹಾಯ ಮಾಡಬಹುದು, ಎನ್ನುತ್ತಾರೆ ತಜ್ಞರು.
ಮಧುಮೇಹಿಗಳಿಗೆ ಸಹಕಾರಿಯೇ?
ಈ ಸಂಪ್ರದಾಯ ಮಧುಮೇಹಿಗಳಿಗೆ ನಿಜಕ್ಕೂ ಪ್ರಯೋಜನಕಾರಿಯೇ, ಅಥವಾ ಇದೊಂದು ಆಹಾರ ಸಂಬಂಧಿತ ತಪ್ಪುಕಲ್ಪನೆಯೇ?
'ಪೂರ್ವ-ಮಧುಮೇಹ ಅಥವಾ ಟೈಪ್ 2 ಮಧುಮೇಹ ಇರುವವರಲ್ಲಿ ದಿನನಿತ್ಯ ಬಾದಾಮಿ ಸೇವನೆ - ನೆನೆಸಿದ್ದಾಗಲಿ ಅಥವಾ ಕಚ್ಚಾ ಆಗಲಿ - ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ, ಬೇರೆ ಸಮಯದಲ್ಲಿ ಸೇವಿಸುವುದಕ್ಕಿಂತಲೂ ಹೆಚ್ಚೇನೂ ಪರಿಣಾಮಿಕಾರಿಯಲ್ಲ. ಸುಮಾರು ಹೊತ್ತು ಖಾಲಿ ಹೊಟ್ಟೆಯಲ್ಲಿದ್ದ ದೇಹ ಗ್ಲೂಕೋಸ್ ಅಥವಾ ದೀರ್ಘಾವಧಿ ಗ್ಲೈಸೆಮಿಕ್ ಸೂಚಕಗಳಲ್ಲಿ (ಉದಾಹರಣೆಗೆ HbA1c) ಗಮನಾರ್ಹ ಇಳಿಕೆಯನ್ನು ಉಂಟುಮಾಡುವುದಿಲ್ಲ,' ಎನ್ನುತ್ತಾರೆ ತಜ್ಞರು.
ಆದರೂ, ಬಾದಾಮಿಯನ್ನು ಕಾರ್ಬೋಹೈಡ್ರೇಟ್-ಸಮೃದ್ಧ ಆಹಾರದ ಜೊತೆಗೆ ಅಥವಾ ಮೊದಲು ಸೇವಿಸಿದಾಗ, ಊಟದ ನಂತರದ ಗ್ಲೂಕೋಸ್ ಏರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಲ್ಲದು. ಬೆಳಗಿನ ಉಪಾಹಾರದಲ್ಲಿ ಬಾದಾಮಿ ಸೇವಿಸಿದಾಗ ಒಂದು 'ಎರಡನೇ-ಊಟದ ಪರಿಣಾಮ' (second-meal effect) ಕಂಡು ಬರುತ್ತದೆ - ಇದು ಗ್ಲೂಕೋಸ್ ಸಹಿಷ್ಣುತೆ ದುರ್ಬಲವಾಗಿರುವ ವಯಸ್ಕರಲ್ಲಿ ಮುಂದಿನ ಊಟದ ನಂತರ ರಕ್ತದ ಗ್ಲೂಕೋಸ್ ಪ್ರಮಾಣವನ್ನು ಕಡಿಮೆಗೊಳಿಸಿ, ಹೊಟ್ಟೆ ತುಂಬಿದ ಭಾವನೆಯನ್ನುಂಟು ಮಾಡುತ್ತದೆ. ಆದರೆ ದೀರ್ಘಕಾಲದ ಮಧುಮೇಹ ಇರುವವರಲ್ಲಿ ಊಟದ ನಂತರದ ರಕ್ತದ ಗ್ಲೂಕೋಸ್ ಮಟ್ಟದ ಇಳಿಕೆ ಅಷ್ಟೇನೂ ದೊಡ್ಡ ಪ್ರಮಾಣದಲ್ಲಿ ಇರುವುದಿಲ್ಲ.
ಬಾದಾಮಿಯಲ್ಲಿ ಮೆಗ್ನೀಷಿಯಂ, ನಾರಿನಂಶ ಮತ್ತು ಆರೋಗ್ಯಕರ ಕೊಬ್ಬು ಸಮೃದ್ಧವಾಗಿದೆ. ಈ ಪೋಷಕಾಂಶಗಳು ರಕ್ತದ ಸಕ್ಕರೆ ನಿರ್ವಹಣೆ ಮತ್ತು ಇನ್ಸುಲಿನ್ ಸೂಕ್ಷ್ಮತೆಗೆ ಹೇಗೆ ಸಹಾಯ ಮಾಡುತ್ತವೆ?
ಬಾದಾಮಿಯಲ್ಲಿರುವ ಮೆಗ್ನೀಷಿಯಂ, ಆಹಾರದ ನಾರಿನಂಶ ಮತ್ತು ಅಪರ್ಯಾಪ್ತ ಕೊಬ್ಬುಗಳು ಇನ್ಸುಲಿನ್ ಸೂಕ್ಷ್ಮತೆ ಮತ್ತು ಗ್ಲೈಸೆಮಿಕ್ ನಿಯಂತ್ರಣವನ್ನು ಸುಧಾರಿಸುತ್ತವೆ ಎಂಬುದನ್ನು ವೈಜ್ಞಾನಿಕವಾಗಿ ಗುರುತಿಸಲಾಗಿದೆ. 'ಮೆಗ್ನೀಷಿಯಂ ಗ್ಲೂಕೋಸ್ ಹೀರುತ್ತದೆ. ಮತ್ತು ಇದರ ಕೊರತೆ ಮಧುಮೇಹವನ್ನು ಹೆಚ್ಚಿಸಬಹುದು. ಆಹಾರದ ನಾರಿನಂಶ ಕಾರ್ಬೋಹೈಡ್ರೇಟ್‌ಗಳ ಹೀರಿಕೆಯನ್ನು ನಿಧಾನಗೊಳಿಸಿ, ಗ್ಲೈಸೆಮಿಕ್ ಏರಿಳಿತಗಳನ್ನು ಸಮತೋಲನಗೊಳಿಸುತ್ತದೆ. ಬಾದಾಮಿಯಲ್ಲಿ ಕಂಡುಬರುವ ಸಸ್ಯಜನ್ಯ ಕೊಬ್ಬು ಹೊಟ್ಟೆ ತುಂಬಿದ ಭಾವನೆಯನ್ನು ಹೆಚ್ಚಿಸುತ್ತವೆ ಮತ್ತು ಮಧುಮೇಹಿಗಳಲ್ಲಿ ಸುಧಾರಿತ ಇನ್ಸುಲಿನ್ ಸೂಕ್ಷ್ಮತೆ ಹಾಗೂ ಹೃದಯರಕ್ತ ನಾಳದ ಆರೋಗ್ಯದೊಂದಿಗೆ ಸಂಬಂಧ ಹೊಂದಿವೆ,' ಎನ್ನುತ್ತಾರೆ ತಜ್ಞರು.
ಹಾಗಾದ್ರೆ ಬಾದಾಮಿ ತಿನ್ನಲು ಇತಿಮಿತಿ ಹೇಗಿರಬೇಕು
ಬಾದಾಮಿಯಲ್ಲಿ ಶಕ್ತಿ (ಕ್ಯಾಲರಿ) ಸಾಂಧ್ರತೆ ಹೆಚ್ಚಿರುವುದರಿಂದ, ದಿನಕ್ಕೆ ಸುಮಾರು 30-40 ಗ್ರಾಂ (5-10 ನೆನೆಸಿದ ಬಾದಾಮಿ) ಸೇವಿಸಿದರೆ ಒಳಿತು. ಇನ್ನೂ ಹೆಚ್ಚಿನ ತಿಂದರೆ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮವೇ ಹೆಚ್ಚು. ಇತರೆ ಆಹಾರ ಪದ್ಧತಿಗಳಲ್ಲಿ ಇದರ ಮಟ್ಟವನ್ನು ಸರಿದೂಗಿಸದಿದ್ದರೆ ತೂಕ ಹೆಚ್ಚಳಕ್ಕೂ ಕಾರಣವಾಗಬಹುದು.
ಬಾದಾಮಿ ಸಾಮಾನ್ಯ ಮಧುಮೇಹ ಔಷಧಿಗಳೊಂದಿಗೆ ಪ್ರತಿಕ್ರಿಯಿಸುತ್ತದೆ ಎಂದು ತೋರಿಸಲಾಗಿಲ್ಲ, ಆದರೆ ಇದನ್ನು ಆಹಾರದಲ್ಲಿ ಸೇರಿಸುವಾಗ ಒಟ್ಟಾರೆ ಶಕ್ತಿಯ ಅಗತ್ಯಗಳು ಮತ್ತು ಪಥ್ಯವನ್ನಾಧರಿಸಿ ಸಮತೋಲನ ಕಾಪಾಡಿಕೊಳ್ಳಬೇಕು. ಬೀಜ/ನಟ್ ಅಲರ್ಜಿ ಇರುವವರು ಬಾದಾಮಿಯನ್ನು ಸೇವಿಸಲೇಬಾರದು. ಪ್ರತಿದಿನ ಬಾದಾಮಿ ಸೇವನೆ ಸುರಕ್ಷಿತ. ತೂಕದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ, ಮತ್ತು ಮಧುಮೇಹದಲ್ಲಿ ಆಹಾರದ ಗುಣಮಟ್ಟವನ್ನು ಸುಧಾರಿಸಬಲ್ಲದು. ಆದರೆ ಇದನ್ನು ಒಂದು ಸಮಗ್ರ ಆಹಾರ ತಂತ್ರದ ಭಾಗವಾಗಿ ಪರಿಗಣಿಸಬೇಕೇ ಹೊರತು, ಇದೊಂದೇ ಸಕಲ ಸಮಸ್ಯೆಗೂ ಪರಿಹಾರವಾಗುವುದಿಲ್ಲ.
ವಿಶೇಷ ಸೂಚನೆ: ಈ ಲೇಖನವು ಸಾರ್ವಜನಿಕ ಮಾಹಿತಿ ಮತ್ತು/ಅಥವಾ ತಜ್ಞರ ಅಭಿಪ್ರಾಯಗಳನ್ನು ಆಧರಿಸಿದೆ. ಯಾವುದೇ ಆಹಾರ ಪದ್ಧತಿಯನ್ನು ಆರಂಭಿಸುವ ಮೊದಲು ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.














Click it and Unblock the Notifications