Karnataka Rain Alert: ತೀವ್ರಗೊಂಡ ಮುಂಗಾರು! ರಾಜ್ಯದ 6 ಜಿಲ್ಲೆಗಳಿಗೆ 'ರೆಡ್ ಅಲರ್ಟ್', ಹವಾಮಾನ ವರದಿ
ಬೆಂಗಳೂರು: ಕರ್ನಾಟಕ ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ನಿರಂತರವಾಗಿ ಭಾರೀ ಮಳೆ ಸುರಿಯುತ್ತಿದೆ. ಇಂದಿನಿಂದ ಮುಂದಿನ ಮೂರು ದಿನ ಮಳೆ ಆರ್ಭಟ ಮತ್ತಷ್ಟು ತೀವ್ರಗೊಳ್ಳಲಿದೆ. ಕರಾವಳಿ ಭಾಗದಲ್ಲಂತೂ 200 ಮಿಲಿ ಮೀಟರ್‍ಗೂ ಅಧಿಕ ಮಳೆ ಆಗುವ ನಿರೀಕ್ಷೆ ಹಿನ್ನೆಲೆ ಹವಾಮಾನ ಇಲಾಖೆ 'ರೆಡ್ ಅಲರ್ಟ್' ಘೋಷಣೆ ಮಾಡಿದೆ. ವಿವಿಧ ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಹವಾಮಾನ ಇಲಾಖೆಯ ಬುಧವಾರದ ಮುನ್ಸೂಚನೆ ಪ್ರಕಾರ, ಜುಲೈ 11ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಜುಲೈ 10ರವರೆಗೆ ಒಳನಾಡು ಜಿಲ್ಲೆಗಳಲ್ಲಿ ಜೋರು ಮಳೆ ಆಗಲಿದೆ. ನಂತರ ಮಳೆ ಆರ್ಭಟ ತಗ್ಗಲಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಇಂದು ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಶಾಲೆಗಳಿಗೆ ರಜೆ ಘೋಷಿಸಿ ಡಿಸಿ ಆದೇಶಿಸಿದ್ದಾರೆ.

6 ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
ಇಂದು ಜುಲೈ 8 ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ತೀವ್ರತೆ ಹೆಚ್ಚಾಗಲಿದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಬೆಳಗಾವಿ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕನಿಷ್ಠ 200 ಮಿಲಿ ಮೀಟರ್‍ವರೆಗೆ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಒಂದು ದಿನ ಈ ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಘೋಷಿಸಲಾಗಿದೆ. ನಾಳೆ ಗುರುವಾರ ಇದೇ ಜಿಲ್ಲೆಗಳಿಗೆ 'ಆರೆಂಜ್ ಅಲರ್ಟ್' ನೀಡಲಾಗಿದೆ. ಈ ಭಾಗದಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 50 ಕಿಮೀ ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.
ಮುಂದಿನ 48 ಗಂಟೆಗಳ ಕಾಲ ಹಾಸನ, ಕೊಡಗು ಜಿಲ್ಲೆಗಳಲ್ಲಿ 115-200 ಮಿಲಿ ಮೀಟರ್‍ವರೆಗೆ ಬಿರುಗಾಳಿ ಸಹಿತ ಅತ್ಯಧಿಕ ಮಳೆ ಸಾಧ್ಯತೆ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ನೀಡಲಾಗಿದೆ. ಇನ್ನೂ ಒಳನಾಡಿನ ಧಾರವಾಡ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಈ ವಾರಾಂತ್ಯದವರೆಗೆ ಮಳೆ ತೀವ್ರಗೊಳ್ಳಲಿದೆ. ಕರಾವಳಿಗೆ ಜುಲೈ 9ರಿಂದ 11ರವರೆಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಮಳೆಗೆ ನದಿಗಳ ಒಳಹರಿವು ಏರಿಕೆ, ಪ್ರವಾಹ ಭೀತಿ
ಪಶ್ಚಿಮ ಘಟ್ಟಗಳ ಸಾಲಿನಲ್ಲಿ, ಒಳನಾಡು ಭಾಗದಲ್ಲಿ ನಿರಂತರವಾಗಿ ಮಳೆ ಆಗುತ್ತಿರುವ ಹಿನ್ನೆಲೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ತುಂಗಾ, ವಾಣಿ ವಿಲಾಸ ಸಾಗರ ಸೇರಿದಂತೆ ವಿವಿಧ ನದಿಗಳ ಒಳಹರಿವು ಹೆಚ್ಚಾಗಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆ ಆಗುತ್ತಿರುವ ಕೃಷ್ಣಾ ನದಿ, ಘಟಪ್ರಭಾ ಒಳಹರಿವು ಏರಿಕೆ ಆಗಿದೆ. ಈವರೆಗೆ ಬಿರು ಬೇಸಿಗೆಗೆ ತುತ್ತಾಗಿದ್ದ ಜಿಲ್ಲೆಗಳಲ್ಲಿ ಈ ವರುಣಾರ್ಭಟದಿಂದ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. ಇನ್ನೊಂದೆಡೆ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧ ಜಿಲ್ಲೆಗಳ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಮಲೆನಾಡಿನ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಭೀತಿ ಸಹ ಇದೆ.
ಬೆಂಗಳೂರು ಕೂಲ್ ವೆದರ್ ಮುಂದುವರಿಕೆ..
ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಒಂದು ವಾರ ಕಾಲ ಇದೇ ರೀತಿ ತಂಪು ಗಾಳಿ ಬಿಸಲಿದೆ. ಮಬ್ಬು ಕವಿದ ವಾತವರಣವೇ ಮುಂದುವರಿಯಲಿದ್ದು, ಒಂದೆರಡು ಕಡೆಗಳಲ್ಲಿ ಸೋನೆ ಮಳೆ ಆಗಬಹುದು. ಉಳಿದಂತೆ ನಗರದ ತಾಪಮಾನ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಟ 29-30 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ತಿಳಿಸಿದೆ.













Click it and Unblock the Notifications