ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲೇ ಇತ್ತು ಉತ್ತರ! ಕೇರಳ ವಿಶ್ವವಿದ್ಯಾಲಯದ ಎಡವಟ್ಟು
ಪರೀಕ್ಷೆ ಎಂದರೆ ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ಆತಂಕ. ಪ್ರಶ್ನೆಪತ್ರಿಕೆ ಹೇಗಿರುತ್ತದೆಯೋ, ಓದಿದ ಪ್ರಶ್ನೆಗಳು ಬರುತ್ತವೆಯೋ ಇಲ್ಲವೋ ಎಂಬ ಟೆನ್ಷನ್‌ನಲ್ಲಿಯೇ ಪರೀಕ್ಷಾ ಕೊಠಡಿಯೊಳಗೆ ಕಾಲಿಡುತ್ತಾರೆ. ಆದರೆ, ಪರೀಕ್ಷಾ ಹಾಲ್‌ನಲ್ಲಿ ಕೈಗೆ ಸಿಕ್ಕ ಪ್ರಶ್ನೆಪತ್ರಿಕೆಯಲ್ಲಿ ಪ್ರಶ್ನೆಯ ಜೊತೆಯಲ್ಲೇ ಅದರ ಉತ್ತರವೂ ಮುದ್ರಣಗೊಂಡಿದ್ದರೆ ಹೇಗಿರಬಹುದು?
ಹೌದು, ಇಂತಹದೊಂದು ಅಚ್ಚರಿ ಹಾಗೂ ಎಡವಟ್ಟೊಂದು ಕೇರಳ ವಿಶ್ವವಿದ್ಯಾಲಯದಲ್ಲಿ ನಡೆದಿದೆ. ವಿದ್ಯಾರ್ಥಿಗಳಿಗೆ ಇದು ಬಂಪರ್ ಆಫರ್‌ನಂತೆ ಕಂಡರೂ, ವಿಶ್ವವಿದ್ಯಾಲಯದ ಪರೀಕ್ಷಾ ವ್ಯವಸ್ಥೆಯ ನಿರ್ಲಕ್ಷ್ಯವನ್ನು ಇದು ಎತ್ತಿತೋರಿಸುತ್ತಿದೆ.

ಬಿಎಸ್‌ಸಿ ಸ್ಟ್ಯಾಟಿಸ್ಟಿಕ್ಸ್ ಪರೀಕ್ಷೆಯಲ್ಲಿ ನಡೆದಿದ್ದೇನು?
ಸೋಮವಾರ ಕೇರಳ ವಿಶ್ವವಿದ್ಯಾಲಯವು ಎರಡನೇ ಸೆಮಿಸ್ಟರ್‌ನ ಬಿಎಸ್‌ಸಿ ಸ್ಟ್ಯಾಟಿಸ್ಟಿಕ್ಸ್ ಪರೀಕ್ಷೆಯನ್ನು ಆಯೋಜಿಸಿತ್ತು. ಪರೀಕ್ಷೆ ಆರಂಭವಾಗಿ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆ ಓದಲು ಶುರುಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಪ್ರಶ್ನೆಪತ್ರಿಕೆಯ 5ನೇ ಪ್ರಶ್ನೆಯ ಪಕ್ಕದಲ್ಲೇ ಆ ಪ್ರಶ್ನೆಗೆ ಇರಬೇಕಾದ ಸರಿಯಾದ ಉತ್ತರವನ್ನು ಮುದ್ರಿಸಲಾಗಿತ್ತು. ಇದೊಂದು ಒಂದು ಅಂಕದ ಪ್ರಶ್ನೆಯಾಗಿದ್ದು, 'ದೈಹಿಕ ವ್ಯಾಯಾಮ ಮತ್ತು ದೇಹದ ದ್ರವ್ಯರಾಶಿ ನಡುವಿನ ಸಂಬಂಧವೇನು?' ಎಂದು ಕೇಳಲಾಗಿತ್ತು. ಇದರ ಪಕ್ಕದಲ್ಲೇ ಬ್ರಾಕೆಟ್‌ನಲ್ಲಿ 'ನಕಾರಾತ್ಮಕ ಸಂಬಂಧ' (negatively correlated) ಎಂಬ ಸರಿಯಾದ ಉತ್ತರವಿತ್ತು. ಮೊದಲ ಆರು ಪ್ರಶ್ನೆಗಳು ತಲಾ ಒಂದು ಅಂಕವನ್ನು ಹೊಂದಿದ್ದವು. ಈ ವಿಷಯ ಹೊರಬೀಳುತ್ತಿದ್ದಂತೆಯೇ, ವಿವಿ ಪರೀಕ್ಷಾ ಮಂಡಳಿಯ ಕಾರ್ಯವೈಖರಿ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾಗಿವೆ.
ತಾಂತ್ರಿಕ ದೋಷ ಎಂದು ಸಮರ್ಥಿಸಿಕೊಂಡ ಅಧಿಕಾರಿಗಳು
ನಾಲ್ಕು ವರ್ಷಗಳ ಪದವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯನ್ನು ಕಂಪ್ಯೂಟರ್ ಸಾಫ್ಟ್‌ವೇರ್ ಮೂಲಕ ಸಿದ್ಧಪಡಿಸುವಾಗ ತಾಂತ್ರಿಕ ದೋಷದಿಂದಾಗಿ ಪ್ರಶ್ನೆಯ ಪಕ್ಕದಲ್ಲೇ ಉತ್ತರವೂ ಅಚ್ಚಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪರೀಕ್ಷಾ ನಿಯಂತ್ರಕ ಪ್ರೊ.ಗೋಪಕುಮಾರ್, "ಇದು ಮನುಷ್ಯರಿಂದಾದ ತಪ್ಪಲ್ಲ, ಸಾಫ್ಟ್‌ವೇರ್‌ನಿಂದಾದ ಸಣ್ಣ ತಾಂತ್ರಿಕ ದೋಷ. ಅಲ್ಲದೆ ಅಲ್ಲಿ ಅಚ್ಚಾಗಿದ್ದು ಕೇವಲ ಉತ್ತರದ ಒಂದು ಭಾಗವೇ ಹೊರತು ಪೂರ್ಣ ಉತ್ತರ ಅಲ್ಲ" ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ ವಿದ್ಯಾರ್ಥಿಗಳು ಮಾತ್ರ, ಪ್ರಶ್ನೆಯ ಪಕ್ಕದಲ್ಲಿದ್ದದ್ದು ನೂರಕ್ಕೆ ನೂರು ಪಕ್ಕಾ ಸರಿಯಾದ ಉತ್ತರವೇ ಆಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಬೋರ್ಡ್ ಆಫ್ ಸ್ಟಡೀಸ್‌ಗೆ ವಿವರಣೆ ಕೇಳಿ ನೋಟಿಸ್
ತಂತ್ರಾಂಶದ ಮೂಲಕ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದರೂ, ಅದನ್ನು ಪರಿಶೀಲಿಸುವ ಜವಾಬ್ದಾರಿ ಬೋರ್ಡ್ ಆಫ್ ಸ್ಟಡೀಸ್ ಮೇಲಿರುತ್ತದೆ. ಪ್ರಶ್ನೆಪತ್ರಿಕೆಯನ್ನು ಅಂತಿಮಗೊಳಿಸುವ ಮುನ್ನ ಸಮಿತಿಯ ಸದಸ್ಯರು ಅದನ್ನು ಕೂಲಂಕಷವಾಗಿ ಪರಿಶೀಲಿಸಬೇಕಿರುತ್ತದೆ. ಇಷ್ಟು ದೊಡ್ಡ ತಪ್ಪು ಕಣ್ಣಿಗೆ ಕಾಣಲಿಲ್ಲವೇ ಎಂದು ಶಿಕ್ಷಣ ತಜ್ಞರು ಪ್ರಶ್ನಿಸಿದ್ದಾರೆ. ಈ ಘಟನೆ ಬೆನ್ನಲ್ಲೇ ವಿಶ್ವವಿದ್ಯಾಲಯವು ಬೋರ್ಡ್ ಆಫ್ ಸ್ಟಡೀಸ್ ಅಧ್ಯಕ್ಷರಿಂದ ಅಧಿಕೃತವಾಗಿ ಸ್ಪಷ್ಟನೆ ಕೇಳಿದೆ.
ಇತ್ತೀಚೆಗಷ್ಟೇ ವಿವಿ ಸಿಂಡಿಕೇಟ್‌ಗೆ ನಾಮನಿರ್ದೇಶನಗೊಂಡಿರುವ ಸೇವ್ ಯೂನಿವರ್ಸಿಟಿ ಕ್ಯಾಂಪೇನ್ ಕಮಿಟಿ ಅಧ್ಯಕ್ಷ ಆರ್.ಎಸ್. ಶಶಿಕುಮಾರ್ ಅವರು ಈ ಘಟನೆಯನ್ನು ಅತ್ಯಂತ ಗಂಭೀರ ಲೋಪ ಎಂದು ಕರೆದಿದ್ದು, ವಿವಿ ಇದರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ವಿವಾದದ ಬಗ್ಗೆ ಚರ್ಚಿಸಲು ಮಂಗಳವಾರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆ ಕೂಡ ನಿಗದಿಯಾಗಿತ್ತು. ಇಂತಹ ನಿರ್ಲಕ್ಷ್ಯಗಳು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಘನತೆಗೆ ಧಕ್ಕೆ ತರುವುದಲ್ಲದೆ, ಪರೀಕ್ಷಾ ವ್ಯವಸ್ಥೆಯ ಪಾವಿತ್ರ್ಯತೆಯನ್ನೇ ಪ್ರಶ್ನಿಸುವಂತೆ ಮಾಡುತ್ತವೆ. ಮುಂದಿನ ದಿನಗಳಲ್ಲಿ ಇಂತಹ 'ತಾಂತ್ರಿಕ ದೋಷ'ಗಳು ಮರುಕಳಿಸದಂತೆ ಎಚ್ಚರವಹಿಸಬೇಕಾದ ತುರ್ತು ಅಗತ್ಯವಿದೆ.












Click it and Unblock the Notifications