Kapil Dev: ವಿರಾಟ್ ಕೊಹ್ಲಿಯ ಆತುರದ ನಿರ್ಧಾರ ಕ್ರಿಕೆಟ್ ಲೋಕಕ್ಕೆ ನಷ್ಟ: ಕಪಿಲ್ ದೇವ್
Kapil Dev: ಟೀಮ್ ಇಂಡಿಯಾ ಮಾಜಿ ನಾಯಕ ಮತ್ತು ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ ಅವರು ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ನಿರ್ಧಾರದ ಕುರಿತು ಭಾರತಕ್ಕೆ ಮೊದಲ ವಿಶ್ವಕಪ್ ತಂದುಕೊಟ್ಟ ನಾಯಕ ಕಪಿಲ್ ದೇವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಕೊಹ್ಲಿ ಇನ್ನೂ ಕೆಲವು ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಬಹುದಿತ್ತು. ಅವರು ತಮ್ಮ ಆತುರದ ನಿರ್ಧಾರದಿಂದಾಗಿ ಮುಂಚಿತವಾಗಿಯೇ ನಿವೃತ್ತಿ ಪಡೆದಿದ್ದಾರೆ ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ಅವರು ಕೊಹ್ಲಿಯ ಆಕ್ರಮಣಕಾರಿ ಆಟದ ಶೈಲಿಯನ್ನ ಟೆನಿಸ್ ಲೋಕದ ದಿಗ್ಗಜ ಜಾನ್ ಮೆಕೆನ್ರೋಗೆ ಹೋಲಿಸಿದ್ದಾರೆ.

ಕೊಹ್ಲಿ ಆತುರದ ನಿರ್ಧಾರಕ್ಕೆ ಕಪಿಲ್ ದೇವ್ ಬೇಸರ
ಸ್ಪೋರ್ಟ್ಸ್ ತಕ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಕಪಿಲ್ ದೇವ್ ಅವರು, 'ಇದು ಕೇವಲ 10,000 ರನ್ ಗಳಿಸುವ ಸಾಧನೆಯ ಬಗ್ಗೆ ಅಲ್ಲ. ವಿರಾಟ್ ಕೊಹ್ಲಿ ಕನಿಷ್ಠ ಆರು ತಿಂಗಳ ಕಾಲ ತಮ್ಮ ಅಸಮಾಧಾನವನ್ನು ಬದಿಗಿಟ್ಟು ಯೋಚಿಸಬೇಕಿತ್ತು. ತಮಗೆ ತಾವೇ ಮತ್ತೊಂದು ಅವಕಾಶ ನೀಡಿ ಭಾರತ ತಂಡದ ಪರ ಆಡಬೇಕಿತ್ತು. ಏಕೆಂದರೆ ಒಮ್ಮೆ ನೀವು ಭಾರತ ತಂಡದಿಂದ ಹೊರನಡೆದರೆ, ಆ ಸುವರ್ಣ ಅವಕಾಶ ಮತ್ತೆ ಸಿಗುವುದಿಲ್ಲ. ಆಮೇಲೆ ನಾವು ಕೇವಲ ಅದರ ಬಗ್ಗೆ ಚರ್ಚಿಸಬಹುದಷ್ಟೇ,' ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್‌ಗಳ ಮೈಲಿಗಲ್ಲು ತಲುಪಲು ಕೇವಲ 770 ರನ್‌ಗಳಷ್ಟೇ ಬಾಕಿ ಇರುವಾಗ ನಿವೃತ್ತಿ ಘೋಷಿಸಿದ್ದರು. ಸದ್ಯ 37 ವರ್ಷದ ಕೊಹ್ಲಿ ಇಂದಿಗೂ ಅತ್ಯುತ್ತಮ ಫಿಟ್ನೆಸ್ ಹೊಂದಿದ್ದು, ಸುಲಭವಾಗಿ ರೆಡ್-ಬಾಲ್ ಕ್ರಿಕೆಟ್ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ಕಪಿಲ್ ದೇವ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುವ ಆಟಗಾರರಿಗೆ ಕಪಿಲ್ ದೇವ್ ಕಿವಿಮಾತು
ಕ್ರಿಕೆಟ್ ಮಂಡಳಿ, ಆಯ್ಕೆಗಾರರು ಅಥವಾ ಮ್ಯಾನೇಜ್‌ಮೆಂಟ್ ಜೊತೆ ಭಿನ್ನಾಭಿಪ್ರಾಯಗಳಿದ್ದಾಗ ಆಟಗಾರರು ಕೋಪದಲ್ಲಿ ತಮ್ಮ ವೃತ್ತಿಜೀವನದ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಕಪಿಲ್ ಕಿವಿಮಾತು ಹೇಳಿದ್ದಾರೆ. ಭಾರತೀಯ ಕ್ರಿಕೆಟ್‌ನ ಹಳೆಯ ಉದಾಹರಣೆಗಳನ್ನು ನೀಡಿದ ಅವರು, 'ಒಂದು ವೇಳೆ ಆಯ್ಕೆದಾರರು ಅಥವಾ ನಾಯಕ ನಿಮ್ಮನ್ನು ತಂಡಕ್ಕೆ ಆಯ್ಕೆ ಮಾಡದಿದ್ದರೆ ಬೇಸರಗೊಳ್ಳಬೇಡಿ. ಸ್ವಲ್ಪ ಸಮಯ ತೆಗೆದುಕೊಳ್ಳಿ. ದೇಶೀಯ ಕ್ರಿಕೆಟ್‌ಗೆ ಮರಳಿ ಮೊಹಿಂದರ್ ಅಮರನಾಥ್ ಅಥವಾ ಅಂಶುಮನ್ ಗಾಯಕ್ವಾಡ್ ಅವರಂತೆ ಭರ್ಜರಿ ರನ್ ಕಲೆಹಾಕಿ ಮತ್ತೆ ತಂಡಕ್ಕೆ ಕಮ್‌ಬ್ಯಾಕ್ ಮಾಡಬೇಕಿತ್ತು,' ಎಂದು ಹೇಳಿದ್ದಾರೆ.
ಜಾನ್ ಮೆಕೆನ್ರೋಗೆ ಕೊಹ್ಲಿ ಹೋಲಿಕೆ
ಮೈದಾನದಲ್ಲಿ ವಿರಾಟ್ ಕೊಹ್ಲಿ ತೋರುವ ಆಕ್ರಮಣಕಾರಿ ಆಟ ಮತ್ತು ಆ್ಯಟಿಟ್ಯೂಡ್ ಕುರಿತು ಮಾತನಾಡಿದ ಕಪಿಲ್ ದೇವ್, 'ವಿರಾಟ್ ಕೊಹ್ಲಿ ಮೈದಾನದಲ್ಲಿ ವರ್ತಿಸುವ ರೀತಿ ನನಗೆ ಟೆನಿಸ್ ದಂತಕಥೆ ಜಾನ್ ಮೆಕೆನ್ರೋ ಅವರನ್ನು ನೆನಪಿಸುತ್ತದೆ. ಮೆಕೆನ್ರೋ ಅವರು ಅಂಪೈರ್ ಅಥವಾ ರೆಫರಿ ಜೊತೆ ಜಗಳ ಆಡದ ಹೊರತು ಅವರ ಅತ್ಯುತ್ತಮ ಪ್ರದರ್ಶನ ಹೊರಬರುತ್ತಿರಲಿಲ್ಲ. ಕೊಹ್ಲಿ ಕೂಡ ಅದೇ ಸ್ವಭಾವದವರು. ಸವಾಲುಗಳು ಎದುರಾದಾಗಲೇ ಅವರು ಹೆಚ್ಚು ಮಿಂಚುತ್ತಾರೆ,' ಎಂದು ವಿಶ್ಲೇಷಿಸಿದ್ದಾರೆ.
'ರಾಹುಲ್ ದ್ರಾವಿಡ್, ಸುನಿಲ್ ಗವಾಸ್ಕರ್ ಅಥವಾ ಸಚಿನ್ ತೆಂಡೂಲ್ಕರ್ ಅವರಂತಹ ಆಟಗಾರರು ಮೈದಾನದಲ್ಲಿ ಶಾಂತವಾಗಿದ್ದು ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡುತ್ತಿದ್ದರು. ನಾನು ಕೂಡ ಶಾಂತ ಸ್ವಭಾವದವನಾಗಿದ್ದೆ. ಆದರೆ, ವಿರಾಟ್ ಕೊಹ್ಲಿ ಅವರಿಗೆ ಈ ಆಕ್ರಮಣಶೀಲತೆಯೇ ರನ್ ಗಳಿಸಲು ಶಕ್ತಿ ನೀಡುತ್ತದೆ ಎನ್ನುವುದಾದರೆ ಅದರಲ್ಲಿ ಯಾವುದೇ ತಪ್ಪಿಲ್ಲ,' ಎಂದು ಕಪಿಲ್ ದೇವ್ ಸ್ಪಷ್ಟಪಡಿಸಿದ್ದಾರೆ. 'ಕೊಹ್ಲಿ ಅವರಂತಹ ಶ್ರೇಷ್ಠ ಆಟಗಾರ ಇಷ್ಟು ಬೇಗ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದು ಇಡೀ ಕ್ರಿಕೆಟ್ ಲೋಕಕ್ಕೆ ನಷ್ಟ,' ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.












Click it and Unblock the Notifications