ಮೊಬೈಲ್ ಬೆಳಕಲ್ಲೇ ಬಸ್ ಚಾಲನೆ; ಡ್ರೈವರ್ ಸೇರಿ ಮೂವರು ಸಸ್ಪೆಂಡ್, ಡಕೋಟಾ ಬಸ್ ಕೊಟ್ಟಿದ್ದು ಸರ್ಕಾರದ ತಪ್ಪು ಎಂದ ಜನ
ಕಲಬುರಗಿ, ಜುಲೈ 07: ಮೊಬೈಲ್ ಟಾರ್ಚ್ ಬೆಳಕಿನ ಸಹಾಯದಿಂದ ಹೆಡ್‌ಲೈಟ್ ಇಲ್ಲದ ಸರ್ಕಾರಿ ಬಸ್ ಓಡಿಸಿ ಪ್ರಯಾಣಿಕರ ಜೀವವನ್ನು ಅಪಾಯಕ್ಕೆ ತಳ್ಳಿದ್ದ ಘಟನೆಯನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಬಸ್ ಚಾಲಕ ಹಾಗೂ ಇಬ್ಬರು ತಾಂತ್ರಿಕ ಸಿಬ್ಬಂದಿಯನ್ನು ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ಈ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಿದ್ದಾರೆ. ಬಸ್‌ನಲ್ಲಿ ತಾಂತ್ರಿಕ ದೋಷ ಹಾಗೂ ಹೆಡ್‌ಲೈಟ್ ಸಮಸ್ಯೆ ಇದ್ದರೂ ಬಸ್ ಚಾಲನೆ ಮಾಡಿ ಪ್ರಯಾಣಿಕರ ಸುರಕ್ಷತೆಯನ್ನು ನಿರ್ಲಕ್ಷಿಸಿದ ಆರೋಪದ ಮೇಲೆ ಚಾಲಕ ಆಕಾಶ್, ಬಸ್‌ನ ಹೆಡ್‌ಲೈಟ್ ದುರಸ್ತಿ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸದ ತಾಂತ್ರಿಕ ಸಿಬ್ಬಂದಿ ಶಿವಾನಂದ, ದುರಸ್ತಿ ಕಾರ್ಯವನ್ನು ಸರಿಯಾಗಿ ಮರುಪರಿಶೀಲಿಸದ ತಾಂತ್ರಿಕ ಮೇಲ್ವಿಚಾರಕ ಬಸವರಾಜ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.

ಜುಲೈ 4ರ ರಾತ್ರಿ ನಡೆದಿದ್ದೇನು?
ಕಳೆದ ಜುಲೈ 4ರಂದು ರಾತ್ರಿ ಕಲಬುರಗಿಯಿಂದ ಚಿಂಚೋಳಿಗೆ ಹೊರಟಿದ್ದ ಕೆಕೆಆರ್‌ಟಿಸಿ ಬಸ್‌ನ ಹೆಡ್‌ಲೈಟ್‌ಗಳು ಮಾರ್ಗದ ಮಧ್ಯೆ ಸಂಪೂರ್ಣ ಕೈಕೊಟ್ಟಿದ್ದವು. ಈ ವೇಳೆ ಬಸ್ ನಿಲ್ಲಿಸದ ಚಾಲಕ ಮತ್ತು ನಿರ್ವಾಹಕ, ಮೊಬೈಲ್ ಟಾರ್ಚ್‌ಗಳ ಬೆಳಕನ್ನು ಆಸರೆಯಾಗಿಟ್ಟುಕೊಂಡು ಚಿಂಚೋಳಿವರೆಗೆ ಅಪಾಯಕಾರಿಯಾಗಿ ಪ್ರಯಾಣ ಮುಂದುವರಿಸಿದ್ದರು. ಪ್ರಯಾಣಿಕರು ಸಹ ಅನಿವಾರ್ಯವಾಗಿ ತಮ್ಮ ಮೊಬೈಲ್ ಟಾರ್ಚ್ ಆನ್ ಮಾಡಿ ದಾರಿ ತೋರಿಸಬೇಕಾಗಿ ಬಂದಿತ್ತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಸಾರಿಗೆ ಸಂಸ್ಥೆ ಹೇಳದ್ದೇನು?
'ಪ್ರಯಾಣಿಕರ ಜೀವದ ರಕ್ಷಣೆ ನಮಗೆ ಅತ್ಯಂತ ಮುಖ್ಯ. ಸುರಕ್ಷತಾ ನಿಯಮಗಳ ಪಾಲನೆಯಲ್ಲಿ ಇಂತಹ ಯಾವುದೇ ರೀತಿಯ ಬೇಜವಾಬ್ದಾರಿತನ ಅಥವಾ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ,' ಎಂದು ಸಾರಿಗೆ ನಿಗಮ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಈ ದಿಢೀರ್ ಅಮಾನತು ಕ್ರಮದ ಮೂಲಕ ಸಾರಿಗೆ ಸಂಸ್ಥೆಯು ತನ್ನ ಇತರ ಸಿಬ್ಬಂದಿಗೂ ಕರ್ತವ್ಯ ಪ್ರಜ್ಞೆ ಮೆರೆಯುವಂತೆ ಕಠಿಣ ಸಂದೇಶ ರವಾನಿಸಿದೆ.
ಘಟನೆ ಹಿನ್ನೆಲೆ
ಕರ್ನಾಟಕದ ಸಾರಿಗೆ ಸಂಸ್ಥೆಯ ಬಸ್‌ಗಳ ದುಸ್ಥಿತಿಗೆ ಕೈಗನ್ನಡಿ ಹಿಡಿಯುವಂತಹ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿತ್ತು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ವೊಂದರ ಹೆಡ್‌ಲೈಟ್‌ಗಳು ಕೆಟ್ಟುಹೋಗಿದ್ದ ಕಾರಣ ನಿರ್ವಾಹಕನು ತನ್ನ ಮೊಬೈಲ್ ಫೋನ್‌ನ ಟಾರ್ಚ್ ಆನ್ ಮಾಡಿ ಚಾಲಕನಿಗೆ ರಸ್ತೆ ತೋರಿಸುತ್ತಾ ಬಸ್ ಚಲಾಯಿಸಲು ನೆರವಾಗಿರುವ ವಿಚಿತ್ರ ಮತ್ತು ಅಪಾಯಕಾರಿ ಘಟನೆ ಕಲಬುರಗಿಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿಗಳ ಪ್ರಕಾರ ಕಲಬುರಗಿ ನಗರದಿಂದ ಚಿಂಚೋಳಿಗೆ ಪ್ರತಿದಿನ ರಾತ್ರಿ ಹೊರಡುವ ಕೊನೆಯ ಕೆಕೆಆರ್‌ಟಿಸಿ ಬಸ್‌ನಲ್ಲಿ ಈ ಘಟನೆ ಸಂಭವಿಸಿದೆ. ಈ ಬಸ್ ಪ್ರತಿದಿನ ರಾತ್ರಿ 7:30ಕ್ಕೆ ಕಲಬುರಗಿ ಬಸ್ ನಿಲ್ದಾಣದಿಂದ ಹೊರಟು ಸುಮಾರು 84 ಕಿಲೋ ಮೀಟರ್ ದೂರದಲ್ಲಿರುವ ಚಿಂಚೋಳಿಯನ್ನು ತಲುಪುತ್ತದೆ.
ಆದರೆ, ಕಳೆದ ಕೆಲವು ತಿಂಗಳುಗಳಿಂದ ಈ ಮಾರ್ಗದಲ್ಲಿ ಚಲಿಸುವ ಬಸ್‌ನಲ್ಲಿ ನಿರಂತರವಾಗಿ ತಾಂತ್ರಿಕ ದೋಷಗಳು ಕಾಣಿಸಿಕೊಳ್ಳುತ್ತಿವೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ. ಘಟನೆ ನಡೆದ ರಾತ್ರಿ ಬಸ್‌ನ ಲೈಟಿಂಗ್ ಸಿಸ್ಟಮ್ ಸಂಪೂರ್ಣ ಕೈಕೊಟ್ಟಿತ್ತು. ಹೆಡ್‌ಲೈಟ್‌ಗಳು ಕೆಲಸ ಮಾಡದ ಕಾರಣ ದಟ್ಟ ಕತ್ತಲಿನಲ್ಲಿ ದಾರಿ ಕಾಣದೆ ಚಾಲಕ ತಡಕಾಡಬೇಕಾಯಿತು. ಈ ವೇಳೆ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬಸ್ ನಿರ್ವಾಹಕನು ಮುಂಭಾಗದ ಗ್ಲಾಸ್‌ನ ಹತ್ತಿರ ನಿಂತು ತನ್ನ ಮೊಬೈಲ್‌ನ ಟಾರ್ಚ್ ಬೆಳಕನ್ನು ರಸ್ತೆಯ ಮೇಲೆ ಬಿಟ್ಟು ಚಾಲಕನಿಗೆ ದಾರಿ ತೋರಿಸಿದ್ದಾನೆ.
ಅಪಾಯಕಾರಿ ಪ್ರಯಾಣಕ್ಕೆ ಪ್ರಯಾಣಿಕರ ಆಕ್ರೋಶ
ಘಟನೆಯ ದಿನದಂದು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಾರ್ವಜನಿಕರು ತೀವ್ರ ಆತಂಕ ವ್ಯಕ್ತಪಡಿಸಿದ್ದರು. ಕತ್ತಲಿನಲ್ಲಿ ಇಷ್ಟು ದೂರ ಮೊಬೈಲ್ ಟಾರ್ಚ್ ನಂಬಿ ಪ್ರಯಾಣಿಸುವುದು ಅತ್ಯಂತ ಅಪಾಯಕಾರಿಯಾಗಿದ್ದು, ಯಾವುದೇ ಕ್ಷಣದಲ್ಲಾದರೂ ದೊಡ್ಡ ಅನಾಹುತ ಸಂಭವಿಸಬಹುದಿತ್ತು ಎಂದು ಪ್ರಯಾಣಿಕರು ದೂರಿದ್ದರು. ಅಲ್ಲದೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.












Click it and Unblock the Notifications