ಈ ನಗರದಲ್ಲಿ ಬಾಡಿಗೆ ಮನೆ ಬೇಕಿದ್ರೆ ಅಡ್ವಾನ್ಸ್ ಮಾತ್ರ ಅಲ್ಲ, ನಿಮ್ಮ ರಾಶಿ-ಸಂಖ್ಯಾಶಾಸ್ತ್ರ ಕೂಡ ಮ್ಯಾಚ್ ಆಗ್ಬೇಕಂತೆ
ಬೆಂಗಳೂರಿನಂತಹ ನಗರಗಳಲ್ಲಿ ಸಾಮಾನ್ಯ ಜನರಿಗೆ ಒಂದು ಪುಟ್ಟ ಬಾಡಿಗೆ ಮನೆ ಸಿಗಬೇಕಾದರೂ ಸಾಕಾಗಿ ಹೋಗುತ್ತದೆ. ಬ್ಯಾಚುಲರ್ ಆಗಿರಬಾರದು, ನಾನ್-ವೆಜ್ ತಿನ್ನಬಾರದು, ಐಟಿ ಕಂಪನಿಯಲ್ಲೇ ಕೆಲಸ ಮಾಡಬೇಕು ಎಂಬಿತ್ಯಾದಿ ಹತ್ತಾರು ಕಂಡೀಷನ್‌ಗಳನ್ನು ನೀವು ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಮಹಿಳೆ, ಒಂದು ಹೆಜ್ಜೆ ಮುಂದೆ ಹೋಗಿ ಭವಿಷ್ಯ ಹೇಳುವ ಜ್ಯೋತಿಷಿಯಂತೆ ಬದಲಾಗಿದ್ದಾರೆ. ತಮ್ಮ ಮನೆಗೆ ಬಾಡಿಗೆಗೆ ಬಂದ ಹುಡುಗಿಯ ಜನ್ಮದಿನಾಂಕದ ಸಂಖ್ಯಾಶಾಸ್ತ್ರ ಅಥವಾ ನ್ಯೂಮರಾಲಜಿ ನಂಬರ್ ಮ್ಯಾಚ್ ಆಗಿಲ್ಲ ಅನ್ನೋ ಒಂದೇ ಒಂದು ವಿಲಕ್ಷಣ ಕಾರಣಕ್ಕೆ ಮನೆ ಕೊಡಲ್ಲ ಎಂದು ಗೇಟ್ ಪಾಸ್ ನೀಡಿದ್ದಾರೆ.
"ಫೋನ್ ನಂಬರ್ ಕೇಳಿದ್ರು ಅನ್ಕೊಂಡ್ರೆ.. ಕಥೆನೇ ಬೇರೆ ಇತ್ತು"
ಈ ಅಚ್ಚರಿಯ ಮತ್ತು ಸಖತ್ ಕಾಮಿಡಿ ಕಥೆಯನ್ನು ಖ್ಯಾತ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್ ಮತ್ತು ಕಲಾಕಾರ್ ವಾಗ್ಮಿತಾ ಸಿಂಗ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಇದು ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡ್ತಿದೆ. ವಾಗ್ಮಿತಾ ಸಿಂಗ್ ವಿಡಿಯೋದಲ್ಲಿ ವಿವರಿಸಿರುವ ಪ್ರಕಾರ, ಅವರ ಸ್ನೇಹಿತೆಯೊಬ್ಬರು ಮುಂಬೈನಲ್ಲಿ ಬಾಡಿಗೆ ಫ್ಲಾಟ್ ಒಂದನ್ನು ನೋಡಲು ಹೋಗಿದ್ದರು. ಆಗ ಈ ವಿಚಿತ್ರ ಅನುಭವ ಆಗಿದ್ದಾನೆ ವಿವರಿಸಿದ್ದಾರೆ.

ಆ ಮನೆಯ ಮಾಲೀಕರಾಗಿದ್ದ ಮಹಿಳೆ ನೋಡಲು ಸಖತ್ ಮಾಡರ್ನ್, ಹೈಲಿ ಎಜುಕೇಟೆಡ್ ಹಾಗೂ ಸುಸಂಸ್ಕೃತ ಮಹಿಳೆಯಂತೆ ಕಾಣುತ್ತಿದ್ದರು. ಆದರೆ ಮಾತುಕತೆ ಶುರುವಾದ ತಕ್ಷಣ ಆ ಆಂಟಿ, "ನಿಮ್ಮ ನಂಬರ್ ಯಾವುದು?" ಎಂದು ಕೇಳಿದ್ದಾರೆ. ಪಾಪ, ವಾಗ್ಮಿತಾ ಸ್ನೇಹಿತೆ ಆಕೆಗೆ ಕನೆಕ್ಟ್ ಮಾಡಿಕೊಳ್ಳಲು ಮೊಬೈಲ್ ನಂಬರ್ ಕೇಳ್ತಿದ್ದಾರೆ ಅಂದುಕೊಂಡು ನಂಬರ್ ಹೇಳಲು ಮುಂದಾಗಿದ್ದಾರೆ. ಆದರೆ ಆಂಟಿ ತಕ್ಷಣ ತಡೆದು, "ನಾನು ಕೇಳ್ತಿರೋದು ನಿಮ್ಮ ಮೊಬೈಲ್ ನಂಬರ್ ಅಲ್ಲಮ್ಮ, ನಿಮ್ಮ ಡೇಟ್ ಆಫ್ ಬರ್ತ್ ಪ್ರಕಾರ ಬರೋ ನ್ಯೂಮರಾಲಜಿ ನಂಬರ್" ಅಂದಾಗ ಹುಡುಗಿ ಶಾಕ್ ಆಗಿದ್ದಾಳೆ.
ಅಲ್ಲಿಗೆ ಮಹಿಳೆಯ ಜ್ಯೋತಿಷ್ಯದ ಆಟ ಮುಗಿಯಲಿಲ್ಲ. ಬಂದ ಹುಡುಗಿಯ ನ್ಯೂಮರಾಲಜಿ ನಂಬರ್ 7 ಆಗಿತ್ತಂತೆ. ಇತ್ತ ಆಂಟಿಯ ಮನೆಯ ನಂಬರ್ 4ಕ್ಕೆ ಕನೆಕ್ಟ್ ಆಗಿತ್ತಂತೆ. ತಕ್ಷಣವೇ ಮೈಂಡ್ ಗೇಮ್ ಓಡಿಸಿದ ಮನೆ ಮಾಲೀಕರು, "ನೋಡಿ, ನನ್ನ ಮನೆಗೂ ನಿಮ್ಮ ನಂಬರ್‌ಗೂ ಸೆಟ್ ಆಗಲ್ಲ. 4 ಮತ್ತು 7ರ ಕಾಂಬಿನೇಷನ್ ಜೋಡಿ ತುಂಬಾ ಬ್ಯಾಡ್ ಮ್ಯಾಚ್. ಇದು ಮನೆಯ ವಾಸ್ತು ಅಥವಾ ನೆಮ್ಮದಿಗೆ ಭಂಗ ತರಬಹುದು. ಹಾಗಾಗಿ ನಿಮಗೆ ಮನೆ ಬಾಡಿಗೆ ಕೊಡಲು ಸಾಧ್ಯವಿಲ್ಲ" ಎಂದು ಖಡಕ್ ಆಗಿ ಹೇಳಿ ಮನೆ ಬಾಗಿಲು ಮುಚ್ಚಿದ್ದಾರೆ.
ಈ ವಿಚಿತ್ರ ಅನುಭವದಿಂದ ಶಾಕ್ ಆದ ಇನ್‌ಫ್ಲುಯೆನ್ಸರ್ ವಾಗ್ಮಿತಾ ಸಿಂಗ್, ವಿಡಿಯೋದಲ್ಲಿ "ಈ ಹೊಸ ಕಾಯಿಲೆಗೆ ನಾನು ಏನೆಂದು ಹೆಸರಿಡಲಿ?" ಎಂದು ಹಿಂದಿ ಹಾಡನ್ನು ವ್ಯಂಗ್ಯವಾಗಿ ಹಾಡುವ ಮೂಲಕ ಮುಂಬೈ ಮನೆ ಮಾಲೀಕರ ಹುಚ್ಚಾಟವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮುಂಬೈನ ಬಾಡಿಗೆ ಮನೆಗಳ ರಾದ್ಧಾಂತದ ಬಗ್ಗೆ ನೆಟ್ಟಿಗರು ಬಿದ್ದು ಬಿದ್ದು ನಗುತ್ತಾ ವಿಚಿತ್ರ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಒಬ್ಬ ಬಳಕೆದಾರರು ಕಾಲೆಳೆಯುತ್ತಾ, "ಅಯ್ಯೋ ಇದು ರಾಹು ಮತ್ತು ಕೇತು ತರಹದ ಪಕ್ಕಾ ಕಾಂಬಿನೇಷನ್ ಆಗಿತ್ತು. ಆಂಟಿ ಒಬ್ಬ ಪರ್ಫೆಕ್ಟ್ ಬಾಡಿಗೆದಾರರನ್ನು ಮಿಸ್ ಮಾಡಿಕೊಂಡರು" ಎಂದಿದ್ದಾರೆ. ಸಂಖ್ಯಾಶಾಸ್ತ್ರದ ಜ್ಞಾನವುಳ್ಳ ಮತ್ತೊಬ್ಬ ಮಹಿಳೆ, "4 ಮತ್ತು 7 ಜೋಡಿ ನಿಜಕ್ಕೂ ಅತ್ಯಂತ ಶಕ್ತಿಶಾಲಿ ಮತ್ತು ಬೆಸ್ಟ್ ಜೋಡಿಗಳಲ್ಲಿ ಒಂದು, ಆಂಟಿಗೆ ಗಿರಾಕಿ ಅಷ್ಟೇ ಬೇಕಿತ್ತು" ಎಂದು ಬರೆದಿದ್ದಾರೆ. ಇನ್ನೊಬ್ಬ ಮುಂಬೈ ನಿವಾಸಿ ಬೇಸರದಿಂದ, "ಈ ಮುಂಬೈ ನಗರದಲ್ಲಿ ಜಾತಕ ನೋಡಿ ಮನೆ ಕೊಡುವ ಮಾಲೀಕರೇ ತುಂಬಿ ಹೋಗಿದ್ದಾರೆ, ಇಲ್ಲಿ ಮನೆ ಹುಡುಕೋದು ದೇವಲೋಕ ಹುಡುಕಿದಂತೆ" ಎಂದು ವ್ಯಂಗ್ಯವಾಡಿದ್ದಾರೆ. ಅಡ್ವಾನ್ಸ್ ಕೊಡಲು ರೆಡಿ ಇದ್ದರೂ, ಜನ್ಮದಿನಾಂಕದ ನಂಬರ್ ಮ್ಯಾಚ್ ಆಗಿಲ್ಲ ಅಂತ ಮನೆ ಸಿಗದೇ ಇರೋ ಮುಂಬೈನ ಈ ಸ್ಟೋರಿ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.













Click it and Unblock the Notifications