ಪಾದಚಾರಿ ನಡಿಗೆಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ: ಬೆಂಗಳೂರು ಆಡಳಿತ ಎಚ್ಚರಿಕೆ
ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ಮಾಡುತ್ತಿರುವವರ ವ್ಯಾಪಾರಿಗಳ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಕಠಿಣ ಕ್ರಮ ಕೈಗೊಳ್ಳುತ್ತಿದೆ. ಇದೀಗ ಇದರ ಮುಂದುವರಿದ ಭಾಗವಾಗಿ ಪಾದಚಾರಿ ನಡಿಗೆಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಎಚ್ಚರಿಕೆ ನೀಡಿದೆ. ಸಾರ್ವಜನಿಕರ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರ ನಿರ್ದೇಶನ ಹಾಗೂ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರ ಮಾರ್ಗದರ್ಶನದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಅತ್ಯಂತ ಯಶಸ್ವಿಯಾಗಿ ಮುಂದುವರಿದಿದೆ. ಜುಲೈ 7ರ ಮಂಗಳವಾರ ಒಂದೇ ದಿನ ಸುಮಾರು 11.2 ಕಿ.ಮೀ. ನಷ್ಟು ಪಾದಚಾರಿ ಮಾರ್ಗದ ಒತ್ತುವರಿಯನ್ನು ಯಶಸ್ವಿಯಾಗಿ ತೆರವುಗೊಳಿಸಲಾಗಿದೆ ಎಂದು ಹೇಳಲಾಗಿದೆ.
ಪಾಲಿಕೆ ವ್ಯಾಪ್ತಿಯ ವಿವಿಧ ಮುಖ್ಯ ಹಾಗೂ ಉಪ ರಸ್ತೆಗಳಲ್ಲಿನ ಅನಧಿಕೃತ ಒತ್ತುವರಿಗಳನ್ನು ಸಂಚಾರ ಹಾಗೂ ಕಾನೂನು ಸುವ್ಯವಸ್ಥೆಯ ಪೊಲೀಸ್ ವಿಭಾಗದ ಅಧಿಕಾರಿಗಳು ಸೇರಿದಂತೆ ಇತರೆ ಇಲಾಖೆಗಳ ಸಮನ್ವಯತೆಯೊಂದಿಗೆ ಮಂಗಳವಾರ ಜಂಟಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ. ಪಾದಚಾರಿ ಮಾರ್ಗಗಳನ್ನು ಅತಿಕ್ರಮಿಸಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಕೊಡುವವರ ವಿರುದ್ಧ ಪಾಲಿಕೆಯ ಈ ಕಠಿಣ ಕ್ರಮ ಮುಂಬರುವ ದಿನಗಳಲ್ಲೂ ಮುಂದುವರಿಯಲಿದೆ ಎಂದು ಆಯುಕ್ತರಾದ ಡಿ.ಎಸ್. ರಮೇಶ್ ಎಚ್ಚರಿಸಿದ್ದಾರೆ.

ವಿಭಾಗವಾರು ಒತ್ತುವರಿ ತೆರವು ವಿವರಗಳು
ಮಾರತಹಳ್ಳಿ ವಿಭಾಗ: ಗೇರ್ ಸ್ಕೂಲ್ ರಸ್ತೆಯ ನ್ಯೂ ಹೊರೈಜನ್ ಜಂಕ್ಷನ್‌ನಿಂದ ದೇವರಬೀಸನಹಳ್ಳಿ ವರೆಗೆ ಸುಮಾರು 1.8 ಕಿ.ಮೀ. ಪಾದಚಾರಿ ಮಾರ್ಗವನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ.
ವೈಟ್‌ಫೀಲ್ಡ್ ವಿಭಾಗ: ಮಯೂರ ಬೇಕರಿಯಿಂದ ಇಮ್ಮಡಿಹಳ್ಳಿ ಜಂಕ್ಷನ್ ವರೆಗೆ ಸುಮಾರು 0.8 ಕಿ.ಮೀ. ಪಾದಚಾರಿ ಮಾರ್ಗವನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ.
ಕಾಡುಗೋಡಿ ವಿಭಾಗ: ಶಾಂತಿನಿಕೇತನದಿಂದ ಹೂಡಿ ಸರ್ಕಲ್ ವರೆಗೆ ಸುಮಾರು 2.5 ಕಿ.ಮೀ. ಪಾದಚಾರಿ ಮಾರ್ಗದ ಒತ್ತುವರಿಯನ್ನು ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ.
ದೊಡ್ಡನೆಕ್ಕುಂದಿ ವಿಭಾಗ: ಇಪಿಐಪಿ (EPIP) ಪ್ರದೇಶದಲ್ಲಿ ಸುಮಾರು 1.8 ಕಿ.ಮೀ. ಪಾದಚಾರಿ ಮಾರ್ಗವನ್ನು ಒತ್ತುವರಿಯನ್ನು ತೆರವುಗೊಳಿಸಲಾಗಿದೆ.
ರಾಮಮೂರ್ತಿನಗರ ವಿಭಾಗ: ರಮಣ ವಿದ್ಯಾನಿಕೇತನದಿಂದ ರಾಘವೇಂದ್ರ ಸರ್ಕಲ್ ಟಿಸಿ ಪಾಳ್ಯ ರಸ್ತೆ ವರೆಗೆ ಸುಮಾರು 1.1 ಕಿ.ಮೀ. ಪಾದಚಾರಿ ಮಾರ್ಗವನ್ನು ಅಡೆತಡೆಗಳಿಂದ ಮುಕ್ತಗೊಳಿಸಲಾಗಿದೆ.
ಹೆಚ್‌ಎಎಲ್ ವಿಭಾಗ: ಮಹದೇವಪುರ ಅಂಡರ್ ಬ್ರಿಡ್ಜ್ ಬಳಿ ಸುಮಾರು 0.5 ಕಿ.ಮೀ. ಪಾದಚಾರಿ ಮಾರ್ಗವನ್ನು ತೆರವುಗೊಳಿಸಲಾಗಿದೆ.
ಕೆ.ಆರ್.ಪುರ ವಿಭಾಗ: ಮೇಡಹಳ್ಳಿಯಿಂದ ಕುರುಡು ಸೊಣ್ಣೇನಹಳ್ಳಿ ವರೆಗೆ ಸುಮಾರು 1.5 ಕಿ.ಮೀ. ಪಾದಚಾರಿ ಮಾರ್ಗದಲ್ಲಿನ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ.
ಹೊರಮಾವು ವಿಭಾಗ: ಹೊರಮಾವು ಬ್ರಿಡ್ಜ್‌ನಿಂದ ರಾಮಮೂರ್ತಿನಗರ ಬ್ರಿಡ್ಜ್ ವರೆಗೆ ಸುಮಾರು 1.2 ಕಿ.ಮೀ. ಪಾದಚಾರಿ ಮಾರ್ಗವನ್ನು ಅಡೆತಡೆಗಳಿಂದ ಮುಕ್ತಗೊಳಿಸಲಾಗಿದೆ.
Bengaluru: ಇಂದಿನ ಕಾರ್ಯಾಚರಣೆಯ ಒಟ್ಟು ವಿವರ:
- ಒಟ್ಟು ತೆರವುಗೊಳಿಸಿದ ಮಾರ್ಗ: 11.2 ಕಿ.ಮೀ.
- ಪೆಟ್ಟಿ ಅಂಗಡಿಗಳು (ಶಾಪ್): 108
- ತಳ್ಳುವ ಗಾಡಿಗಳು: 45
- ಮೇಲ್ಛಾವಣಿ (ಶೀಟ್ಸ್/ಕೆನೋಪಿ): 107
- ಮೆಟ್ಟಿಲುಗಳು, ರ್ಯಾಂಪ್, ತಡೆಗೋಡೆಗಳು: 66
- ಜಾಹೀರಾತು, ಬ್ಯಾನರ್, ಫ್ಲೆಕ್ಸ್: 99
- ತಾತ್ಕಾಲಿಕ ಶೆಡ್‌ಗಳು: 15
- ಕಟ್ಟಡ ತ್ಯಾಜ್ಯ (ಮಣ್ಣು, ತ್ಯಾಜ್ಯ): 67 ಟನ್












Click it and Unblock the Notifications