ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಗಳ ಸೃಷ್ಟಿಗೆ ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ: ಸಿಎಂ ಡಿಕೆಶಿ
ಕಲಬುರಗಿ, ಜುಲೈ 07: ರಾಜ್ಯದ ನಿರುದ್ಯೋಗಿ ಯುವಕರಿಗೆ ಖಾಸಗಿ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಸುಲಭವಾಗಿ ಒದಗಿಸಲು ಮತ್ತು ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಯುವ ಸೇತು ಯೋಜನೆಯನ್ನು ಜಾರಿಗೆ ತಂದಿದೆ. ಕಲಬುರಗಿಯಲ್ಲಿ ನಡೆದ ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಕುರಿತು ಅತ್ಯಂತ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಕೃಷಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿಂದ ರೈತರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, 72,000 ಖಾಲಿ ಹುದ್ದೆಗಳ ನೇಮಕಾತಿಗೆ ಹಸಿರು ನಿಶಾನೆ ನೀಡಿದೆ. ಗೃಹ, ಕೃಷಿ, ಕಂದಾಯ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಮುಂಬರುವ 6 ತಿಂಗಳ ಗಡುವಿನೊಳಗೆ ಭರ್ತಿ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

ಯುವ ಸೇತು ಕಾರ್ಯಕ್ರಮದ ಉದ್ದೇಶ ಏನು?
'ಖಾಸಗಿ ವಲಯದಲ್ಲಿ ಉದ್ಯೋಗ ನೇಮಕಾತಿ ವಿನಿಮಯ ವ್ಯವಸ್ಥೆಯನ್ನು ರೂಪಿಸಲು ಯುವ ಸೇತು ಯೋಜನೆ ರೂಪಿಸಲಾಗಿದೆ. ಯಾವುದೇ ಕಂಪನಿಗಳಲ್ಲಿ ನೇಮಕಾತಿ ಮಾಡಿಕೊಳ್ಳಬೇಕಾದರೆ ಈ ಉದ್ಯೋಗ ಸೇತು ಮೂಲಕ ಕೌಶಲ್ಯಾಧಾರಿತ ಯುವಕರನ್ನು ಆಯ್ಕೆ ಮಾಡಿಕೊಳ್ಳಬಹುದು. ಸರ್ಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಅವರಿಗೆ ಅಗತ್ಯ ತರಬೇತಿ ನೀಡಲಾಗುವುದು. ಸ್ಥಳೀಯರಿಗೆ ಇಂತಿಷ್ಟು ಪ್ರಮಾಣದಲ್ಲಿ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಲಾಗುವುದು. ಇದರ ಹೊರತಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಇದರ ಪ್ರಮಾಣವನ್ನು ಕಂಪನಿಗಳ ಆಡಳಿತ ಮಂಡಳಿ ಸದಸ್ಯರ ಜೊತೆ ಚರ್ಚಿಸಿ ತೀರ್ಮಾನ ಮಾಡಲಾಗುವುದು,' ಎಂದು ತಿಳಿಸಿದರು.
ಉದ್ಯೋಗ ಸೃಷ್ಟಿ ಬಗ್ಗೆ ಮಹತ್ವದ ಮಾಹಿತಿ
'ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಉದ್ಯಮ ಸೃಷ್ಟಿಸಲು ಉತ್ತೇಜನ ನೀಡಿ ಉದ್ಯೋಗ ಸೃಷ್ಟಿಸುವುದು ನಮ್ಮ ಗುರಿ. ಉದ್ಯೋಗಕ್ಕಾಗಿ ಗ್ರಾಮೀಣ ಭಾಗದ ಜನರು ನಗರಗಳತ್ತ ವಲಸೆ ಹೋಗುವುದನ್ನು ತಪ್ಪಿಸಿ ಅವರು ಇರುವ ಜಾಗದಲ್ಲೇ ಉದ್ಯೋಗ ಸೃಷ್ಟಿಸಬೇಕು ಎಂಬ ಉದ್ದೇಶದಿಂದ ಅನೇಕ ಕ್ರಮಗಳನ್ನು ಕೈಗೊಂಡಿದ್ದೇವೆ,' ಎಂದು ಹೇಳಿದರು.
'ಕಲಬುರಗಿ ನಗರ ಸೇರಿದಂತೆ ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಉದ್ಯಮದವರನ್ನು ಆಕರ್ಷಿಸಲು 0.6ರಷ್ಟು ಪ್ರಿಮಿಯಂ ಎಫ್ಎಆರ್ ಹಾಗೂ 2 ಪಟ್ಟು ಎಫ್ಎಆರ್ ನೀಡಲು ತೀರ್ಮಾನಿಸಿದೆ. ಇದರಿಂದ ಕಡಿಮೆ ದರದಲ್ಲಿ ಉದ್ಯಮದವರಿಗೆ ಜಾಗ ಸಿಗುವಂತಾಗುತ್ತದೆ. ಇದಕ್ಕೆ ಅಗತ್ಯ ತಿದ್ದುಪಡಿಯನ್ನು ನಗರಾಭಿವೃದ್ಧಿ ಸಚಿವಾಲಯದಿಂದ ತರಲಾಗುವುದು,' ಎಂದು ತಿಳಿಸಿದರು.
ಗುಣಮಟ್ಟದ ಶಿಕ್ಷಣಕ್ಕಾಗಿ ಸಿಎಸ್ಆರ್ ಶಾಲೆಗಳ ನಿರ್ಮಾಣ
'ಶಿಕ್ಷಣಕ್ಕಾಗಿ ಗ್ರಾಮೀಣ ಭಾಗದ ಮಕ್ಕಳು ನಗರಗಳತ್ತ ವಲಸೆ ಹೋಗುವುದನ್ನು ತಪ್ಪಿಸಲು ಸಿಎಸ್ಆರ್ ಶಾಲೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರಂಭಿಸಲು ತೀರ್ಮಾನಿಸಿದ್ದೇವೆ. ಕಂಪನಿಗಳು 10-15 ಕೋಟಿ ಬಂಡವಾಳ ಹಾಕಿ ನಮಗೆ ಶಾಲೆ ಕಟ್ಟಡ ಹಾಗೂ ಮೂಲಸೌಕರ್ಯ ಒದಗಿಸಿದರೆ ಸಾಕು. ಈ ರೀತಿ 2 ಸಾವಿರ ಶಾಲೆಗಳನ್ನು ನಿರ್ಮಿಸಲಾಗುವುದು. ಈ ಕಂಪನಿಗಳು ನಮಗೆ ಹಣ ನೀಡುವುದು ಬೇಡ. ಅವರೇ ಶಾಲೆ ನಿರ್ಮಿಸಿಕೊಡಬೇಕು. ಶಿಕ್ಷಕರ ನೇಮಕ ಪ್ರಕ್ರಿಯೆಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು,' ಎಂದು ಮಾಹಿತಿ ನೀಡಿದರು.
'ಎಸ್ಐಆರ್ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪವಿಲ್ಲ'
'ರಾಜ್ಯದಲ್ಲಿ ಎಸ್ಐಆರ್ ನಡೆಯುತ್ತಿದ್ದು, ನಮ್ಮ ಸರ್ಕಾರ ಪಾರದರ್ಶಕವಾಗಿ ಮತದಾರರ ಹಕ್ಕು ಉಳಿಸಲು ತೀರ್ಮಾನಿಸಿದೆ. ಈ ವಿಚಾರದಲ್ಲಿ ರಾಜಕಾರಣ ಮಾಡುವ ಅಗತ್ಯ ನಮಗಿಲ್ಲ. ಅದರಲ್ಲಿ ಆಸಕ್ತಿಯೂ ಇಲ್ಲ. ಬೇರೆಯವರು ಏನಾದರೂ ಟೀಕೆ ಮಾಡಿಕೊಳ್ಳಲಿ. ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಮತದಾನದ ಹಕ್ಕು ಉಳಿಸುವುದು ನಮ್ಮ ಸರ್ಕಾರದ ಬದ್ಧತೆ. ಆ ಮೂಲಕ ಸರ್ಕಾರದ ಯೋಜನೆಗಳು ಜನರಿಗೆ ತಲುಪುವಂತೆ ಮಾಡಬೇಕು. ಎಸ್ಐಆರ್ ವಿಚಾರವಾಗಿ ನಮ್ಮ ಆಕ್ಷೇಪಗಳನ್ನು ನಾವು ನ್ಯಾಯಾಲಯದಲ್ಲಿ ಮಂಡಿಸುತ್ತಿದ್ದೇವೆ,' ಎಂದು ಹೇಳಿದರು.
'ವಿರೋಧ ಪಕ್ಷದವರು ನಮ್ಮ ಸರ್ಕಾರದ ಎಸ್ಐಆರ್‌ಗೆ ಸಹಕಾರ ನೀಡುವುದಿಲ್ಲ ಎಂದು ಭಾವಿಸಿದ್ದರು. ನಮಗೆ ಭಿನ್ನಾಭಿಪ್ರಾಯವಿದೆ ಎಂಬ ಕಾರಣಕ್ಕೆ ಜನರ ಮತದಾನದ ಹಕ್ಕು ಕಳೆದುಕೊಳ್ಳಲು ಅವಕಾಶ ನೀಡಲು ಸಾಧ್ಯವಿಲ್ಲ. ಹೀಗಾಗಿ ನಮ್ಮ ಸರ್ಕಾರ ದೇಶದ ಬೇರೆ ಯಾವುದೇ ರಾಜ್ಯದಲ್ಲಿ ನೀಡದ ಸಹಕಾರವನ್ನು ನೀಡುತ್ತಿದೆ. ಕಾನೂನು ಹೊರತಾಗಿ ಪ್ರಕ್ರಿಯೆ ನಡೆಸಲು ನಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ. ಬಿಎಲ್ಓಗಳು ಪ್ರತಿ ಮನೆಗೆ ಮೂರು ಬಾರಿ ಸಂಪರ್ಕ ಮಾಡಬೇಕು. ಈ ಅರ್ಜಿ ತುಂಬುವ ಪ್ರಕ್ರಿಯೆಯಲ್ಲಿ ಜನರಿಗೆ ನೆರವು ನೀಡಲು ಬಿಎಲ್ಎ2ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ಪ್ರಕ್ರಿಯೆಯನ್ನು ಬಿಎಲ್ಓಗಳು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು,' ಎಂದು ತಿಳಿಸಿದರು.












Click it and Unblock the Notifications