India Rain Alert: ದೇಶಾದ್ಯಂತ ಮುಂಗಾರು ಚುರುಕು; ಜುಲೈ 13ರವರೆಗೆ ಈ ಭಾಗಗಳಲ್ಲಿ ರಣ ಮಳೆ ಮುನ್ಸೂಚನೆ
IMD Weather Forecast: ದೇಶಾದ್ಯಂತ ವ್ಯಾಪಿಸುತ್ತಿರುವ ಮುಂಗಾರು ಮಳೆಯು ದಕ್ಷಿಣ ಭಾರತ ರಾಜ್ಯಗಳಿಗಿಂತ ಉತ್ತರ ಹಾಗೂ ಮಧ್ಯ ಭಾರತದ ರಾಜ್ಯಗಳಲ್ಲಿ ಜೋರಾಗಿ ಸುರಿಯುತ್ತಿದೆ. ಕರಾವಳಿ ರಾಜ್ಯಗಳಿಗೂ ಮುಂದಿನ ಕೆಲವು ದಿನಗಳ ಕಾಲ ಧಾರಾಕಾರ ಮಳೆ ಆಗಲಿದೆ. ದೇಶದ ಅನೇಕ ಭಾಗಗಳಲ್ಲಿ ಭಾಗಗಳಲ್ಲಿ ಜುಲೈ 7 ರಿಂದ 13ರವರೆಗೆ ಸಾಧಾರಣದಿಂದ ಭಾರೀ ಮತ್ತು ಅತೀ ಭಾರೀ ಮಳೆಯ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಮುಂಗಾರು ತಡವಾಗಿ ವಿಸ್ತರಣೆ ಆದರೂ ಸಹಿತ ವಾಯುವ್ಯ ಹಾಗೂ ಮಧ್ಯ ಭಾರತದ ರಾಜ್ಯಗಳಲ್ಲಿ ಭಾರೀ ಮಳೆ ಸುರಿಸುತ್ತಿದೆ. ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಜುಲೈ 13 ರವರೆಗೆ ಬಿರುಗಾಳಿ ಮಳೆ ಆಗಲಿದೆ. ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಹಾಗೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಂದಿನ ಎರಡು ದಿನ (ಜುಲೈ 9 ರವರೆಗೆ) ವ್ಯಾಪಕ ಮಳೆ ನಿರೀಕ್ಷೆ ಇದೆ. ಈವರೆಗೆ ಬಿಸಿಲಿಗೆ ಕಂಗೆಟ್ಟಿದ್ದ ಈ ಭಾಗಗಳಲ್ಲಿ ನಿರಂತರ ಮಳೆಯು ಕೃಷಿ ಚುವಟಿಕೆಗಳ ಆರಂಭಕ್ಕೆ ಪೂರಕ ವಾತಾವರಣ ನಿರ್ಮಿಸಿದೆ. ಮಳೆಯಿಂದಾಗಿ ಕೆಲವೆಡೆ ಪ್ರವಾಹ ಆತಂಕ ಹೆಚ್ಚಾಗಿದೆ.

ಜುಲೈ 13ರವರೆಗೆ ಈ ಭಾಗಗಳಲ್ಲಿ ರಣಮಳೆ
ಜಮ್ಮು-ಕಾಶ್ಮೀರ ಮತ್ತು ರಾಜಸ್ಥಾನದಲ್ಲಿ ಮುಂದಿನ ಐದು ದಿನ (ಜುಲೈ 12 ರವರೆಗೆ) ಗುಡುಗು ಮಿಂಚು ಸಹಿತ ಮಳೆ ಆಗಲಿದ್ದು, ಇಲ್ಲಿ ಪ್ರತಿ ಗಂಟೆಗೆ 40 ರಿಂದ 60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಅದೇ ರೀತಿ ಮಧ್ಯಪ್ರದೇಶ, ವಿದರ್ಭ ಮತ್ತು ಛತ್ತೀಸ್‌ಗಢದಲ್ಲಿ ಜುಲೈ 7 ರಿಂದಲೇ ಬಿರುಸಿನ ಮಳೆ ಸುರಿಯುತ್ತಿದ್ದು, ಇದು ಇನ್ನೂ ಐದು ದಿನಗಳ ಕಾಲ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ಅದೇ ರೀತಿ ದೇಶದ ಪಶ್ಚಿಮ ಭಾಗದ ರಾಜ್ಯಗಳಾದ ಸಿಕ್ಕಿಂ, ಬಿಹಾರ, ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್ ರಾಜ್ಯಗಳ ಹಲವೆಡೆ ಬಿರುಗಾಳಿ ಮಳೆ ಆಗಲಿದೆ. ಅರುಣಾಚಲ ಪ್ರದೇಶ ಅಸ್ಸಾಂ ಮತ್ತು ಮೇಘಾಲಯದಲ್ಲಿ ಕೆಲವು ದಿನಗಳಿಂದ ಬರುತ್ತಿರುವ ಮಳೆ ಇನ್ನಷ್ಟು ತೀವ್ರಗೊಳ್ಳುವ ಮುನ್ಸೂಚನೆ ಇದೆ. ಈ ಭಾಗಗಳಿಗೆ ಜುಲೈ 13 ರವರೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಜುಲೈ 9 ಮತ್ತು 10 ರಂದು ಎರಡು ದಿನ ಸಿಕ್ಕಿಂ ಹಾಗೂ ಬಿಹಾರದಲ್ಲಿ ಅತ್ಯಧಿಕ ಭಾರಿ ಮಳೆ ಆಗುವ ಹಿನ್ನೆಲೆಯಲ್ಲಿ ರೆಡ್ ಅಲರ್ಟ್ ಘೊಷಿಸಲಾಗಿದೆ.
ಕರಾವಳಿ ವ್ಯಾಪ್ತಿಗೆ ಬರುವ ಕೊಂಕಣ, ಗೋವಾ ಮತ್ತು ಗುಜರಾತ್ ರಾಜ್ಯಗಳಲ್ಲಿ ಜುಲೈ 13ರವರೆಗೆ ನಿರಂತರವಾಗಿ ಮಳೆ ಆಗಲಿದೆ. ಮಹಾರಾಷ್ಟ್ರದಲ್ಲಿ ಜುಲೈ 8ರವರೆಗೆ ಹಾಗೂ ದಕ್ಷಿಣ ಭಾರತದ ಕರಾವಳಿ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಜುಲೈ 11 ರವರೆಗೆ ಚುರುಕಿನ ಮಳೆ ಸುರಿಯಲಿದೆ. ಇದೇ ಜಿಲ್ಲೆಗಳ ಕೆಲವೆಡೆ ಅಬ್ಬರದ ಮಳೆ ದಾಖಲಾಗಲಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ.
ಕರ್ನಾಟಕ ಸೇರಿ ವಿವಿಧ ರಾಜ್ಯಗಳಲ್ಲಿ ಮುಂಗಾರು ಚುರುಕು
ಕರ್ನಾಟಕ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ 2 ದಿನ ವ್ಯಾಪಕ ಮಳೆ ಆಲಗಿದೆ. ಆಂಧ್ರ ಪ್ರದೇಶ ಕರಾವಳಿ ಪ್ರದೇಶಗಳು, ತೆಲಂಗಾಣದಲ್ಲಿ ಜೋರು ಮಳೆ ನಿರೀಕ್ಷೆ ಇದೆ. ಇಲ್ಲಿ ಗಂಟೆಗೆ 50 ರಿಂದ 70 ಕಿಲೋ ಮಿಟರ್ ವೇಗದಲ್ಲಿ ಬಿರುಗಾಳಿ ಬೀಸಲಿದೆ. ಬಂಗಾಳಕೊಲ್ಲಿ, ಅರಬ್ಬಿ ಸಮ್ಮುದ್ರ ಭಾಗದಲ್ಲಿ ಉಂಟಾಗಿರುವ ಟ್ರಫ್, ಸುಳಿಗಾಳಿ ಹಾಗೂ ವಾಯು ಚಂಡಮಾರುತ ಪ್ರಸರಣ ಪರಿಣಾಮವಾಗಿ ವಿವಿಧ ರಾಜ್ಯಗಳಲ್ಲಿ ಮುಂಗಾರು ಮಳೆ ತೀವ್ರಗೊಂಡಿದೆ. ದಕ್ಷಿಣ ರಾಜ್ಯಗಳಿಗಿಂತ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚು ಮಳೆ ನಿರೀಕ್ಷಿಸಬಹುದು ಎಂದು ಐಎಂಡಿ ವರದಿ ತಿಳಿಸಿದೆ.













Click it and Unblock the Notifications