ಹೆಬ್ಬಾಳ-ಏರ್‌ಪೋರ್ಟ್ ನಡುವೆ ಸಿಗ್ನಲ್ ಮುಕ್ತ ಸಂಚಾರ; ಮುಂದಿನ ವಾರದಿಂದಲೇ ಸಾದಹಳ್ಳಿ ಅಂಡರ್‌ಪಾಸ್ ಕಾಮಗಾರಿ ಆರಂಭ
ಬೆಂಗಳೂರು: ಸಿಲಿಕಾನ್ ಸಿಟಿಯ ಹೆಬ್ಬಾಳದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಸಂಚರಿಸುವ ವಾಹನ ಸವಾರರಿಗೆ ಶೀಘ್ರದಲ್ಲೇ ಸಂಪೂರ್ಣ 'ಸಿಗ್ನಲ್ ರಹಿತ' ಪ್ರಯಾಣದ ಅನುಭವ ಸಿಗಲಿದೆ. ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಸಾದಹಳ್ಳಿ ಜಂಕ್ಷನ್ ಅಂಡರ್‌ಪಾಸ್ ಯೋಜನೆಗೆ ಅಂತಿಮವಾಗಿ ಚಾಲನೆ ಸಿಗುತ್ತಿದ್ದು, ಮುಂದಿನ ವಾರದಿಂದಲೇ ಕಾಮಗಾರಿಗಳು ಆರಂಭವಾಗಲಿವೆ.
ಬೆಂಗಳೂರು ಸಂಚಾರ ಪೊಲೀಸರು ಜುಲೈ 1ರಂದೇ ಈ 700 ಮೀಟರ್ ಉದ್ದದ ಅಂಡರ್‌ಪಾಸ್ ನಿರ್ಮಾಣಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಹಸಿರು ನಿಶಾನೆ ತೋರಿಸಿದ್ದಾರೆ. ಸಂಚಾರ ದಟ್ಟಣೆ ತಪ್ಪಿಸಲು ರಾತ್ರಿ 11 ಗಂಟೆಯಿಂದ ಮುಂಜಾನೆ 5 ಗಂಟೆಯವರೆಗೆ ಮಾತ್ರ ಕೆಲಸ ಮಾಡಲು ಅನುಮತಿ ನೀಡಲಾಗಿದ್ದು, ಮುಂದಿನ 15 ತಿಂಗಳ ಕಾಲ ಈ ಕಾಮಗಾರಿ ನಡೆಯಲಿದೆ.

ಸಿಗ್ನಲ್ ಇಲ್ಲದೆ ಏರ್‌ಪೋರ್ಟ್‌ಗೆ ಸುಲಭ ಪ್ರಯಾಣ
ಪ್ರಸ್ತುತ ಹೆಬ್ಬಾಳದಿಂದ ಸಾದಹಳ್ಳಿವರೆಗಿನ 22 ಕಿಲೋಮೀಟರ್ ಉದ್ದದ ಏರ್‌ಪೋರ್ಟ್ ರಸ್ತೆಯಲ್ಲಿ ಸರಣಿ ಫ್ಲೈಓವರ್‌ಗಳ ಕಾರಣದಿಂದಾಗಿ ಯಾವುದೇ ಸಿಗ್ನಲ್ ಇಲ್ಲ. ಆದರೆ, ಸಾದಹಳ್ಳಿ ಜಂಕ್ಷನ್‌ನಲ್ಲಿ ಮಾತ್ರ ಸದ್ಯಕ್ಕೆ ಟ್ರಾಫಿಕ್ ಸಿಗ್ನಲ್ ಇದ್ದು, ಇದು ಏರ್‌ಪೋರ್ಟ್ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈಗ 35 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ 6 ಪಥದ ಅಂಡರ್‌ಪಾಸ್ ಈ ಟ್ರಾಫಿಕ್ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಿಸಲಿದೆ.
ಏರೋ ಇಂಡಿಯಾ-2027 ಡೆಡ್‌ಲೈನ್
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ನೀಡಿರುವ ಮಾಹಿತಿ ಪ್ರಕಾರ, ಮುಂದಿನ ವಾರದಿಂದ ರಸ್ತೆ ಬ್ಯಾರಿಕೇಡ್ ಅಳವಡಿಕೆ, ಟ್ರಾಫಿಕ್ ಡೈವರ್ಷನ್ ಮತ್ತು ಸರ್ವಿಸ್ ರಸ್ತೆಗಳ ಅಗಲೀಕರಣ ಕೆಲಸಗಳು ಆರಂಭವಾಗಲಿವೆ. ಹೆದ್ದಾರಿಯ ಎರಡೂ ಬದಿಗಳಲ್ಲಿರುವ ಈಗಿನ 2 ಲೇನ್‌ಗಳ ಸರ್ವಿಸ್ ರಸ್ತೆಗೆ ಹೆಚ್ಚುವರಿಯಾಗಿ ಮತ್ತೊಂದು 2 ಲೇನ್‌ಗಳನ್ನು ಸೇರಿಸಿ, ಒಟ್ಟು 4 ಲೇನ್‌ಗಳಿಗೆ ಅಗಲೀಕರಣ ಮಾಡಲಾಗುವುದು. ಇದರಿಂದ ಕಾಮಗಾರಿ ನಡೆಯುವಾಗ ಮುಖ್ಯ ರಸ್ತೆಯ ಟ್ರಾಫಿಕ್‌ಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದೆ.
ಸದ್ಯ ಜುಲೈ ಮತ್ತು ಆಗಸ್ಟ್‌ನಲ್ಲಿ ಮಳೆಗಾಲ ಇರುವುದರಿಂದ ಸೆಪ್ಟೆಂಬರ್‌ನಿಂದ ಅಂಡರ್‌ಪಾಸ್‌ನ ಅಗೆಯುವ ಕೆಲಸ ಆರಂಭವಾಗಲಿದೆ. ಫೆಬ್ರವರಿ 2027 ರಲ್ಲಿ ನಡೆಯಲಿರುವ 'ಏರೋ ಇಂಡಿಯಾ' (Aero India Show) ಪ್ರದರ್ಶನಕ್ಕೂ ಮುನ್ನವೇ ಇದನ್ನು ಪೂರ್ಣಗೊಳಿಸುವ ಗುರಿ ಇದೆ ಎಂದು ತಿಳಿಸಿದೆ.
ದಶಕದ ಕನಸಿನ ಯೋಜನೆ
ಸಾದಹಳ್ಳಿ ಗ್ರೇಡ್ ಸಪರೇಟರ್ ಯೋಜನೆಯನ್ನು ಸುಮಾರು 10 ವರ್ಷಗಳ ಹಿಂದೆಯೇ ಪ್ರಸ್ತಾಪಿಸಲಾಗಿತ್ತು. ಆರಂಭದಲ್ಲಿ ಇಲ್ಲಿ ಫ್ಲೈಓವರ್ ನಿರ್ಮಿಸಲು ಯೋಜಿಸಲಾಗಿತ್ತಾದರೂ, ಭೂಸ್ವಾಧೀನ ಪ್ರಕ್ರಿಯೆಯನ್ನು ಕಡಿಮೆ ಮಾಡಲು ಮತ್ತು ಸುಗಮ ಸಂಚಾರಕ್ಕಾಗಿ ನಂತರದ ದಿನಗಳಲ್ಲಿ ಇದನ್ನು ಅಂಡರ್‌ಪಾಸ್ ಆಗಿ ಮರುವಿನ್ಯಾಸಗೊಳಿಸಲಾಯಿತು. ಸದ್ಯ ಸಾದಹಳ್ಳಿ ಸುತ್ತಮುತ್ತ ರಿಯಲ್ ಎಸ್ಟೇಟ್ ಉದ್ಯಮ ಭರದಿಂದ ಬೆಳೆಯುತ್ತಿರುವುದರಿಂದ ಇಲ್ಲಿ ವಾಹನಗಳ ದಟ್ಟಣೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಅತಿ ಹೆಚ್ಚು ಆದಾಯ ತರುವ ಟೋಲ್ ಪ್ಲಾಜಾ
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ರಾಜ್ಯಸಭೆಗೆ ನೀಡಿರುವ ಮಾಹಿತಿಯ ಪ್ರಕಾರ, ದೇವನಹಳ್ಳಿ (ಸಾದಹಳ್ಳಿ) ಟೋಲ್ ಪ್ಲಾಜಾವು ಕರ್ನಾಟಕದಲ್ಲೇ ಅತಿ ಹೆಚ್ಚು ಆದಾಯ ಗಳಿಸುವ ಟೋಲ್ ಆಗಿದೆ. ಈ ಟೋಲ್ ಪ್ಲಾಜಾದಲ್ಲಿ 2023-24ರ ಒಂದೇ ವರ್ಷದಲ್ಲಿ 308 ಕೋಟಿ ರೂ.ಸಂಗ್ರಹವಾಗಿದ್ದು, ಕಳೆದ 10 ವರ್ಷಗಳಲ್ಲಿ ಬರೋಬ್ಬರಿ 1,577 ಕೋಟಿ ರೂ. ಟೋಲ್ ಹಣ ವಸೂಲಾಗಿದೆ. ಸದ್ಯ ಕಾರು, ಜೀಪ್‌ಗಳ ಏಕಮುಖ ಪ್ರಯಾಣಕ್ಕೆ 120 ರೂ. ಹಾಗೂ ರೌಂಡ್ ಟ್ರಿಪ್‌ಗೆ 185 ರೂ. ಟೋಲ್ ದರ ನಿಗದಿಪಡಿಸಲಾಗಿದೆ. ಈ ಯೋಜನೆ ಪೂರ್ಣಗೊಂಡರೆ, ಬೆಂಗಳೂರು ನಗರದಿಂದ ಏರ್‌ಪೋರ್ಟ್‌ಗೆ ಹೋಗುವವರ ಸಮಯ ಮತ್ತು ಇಂಧನ ಎರಡೂ ಉಳಿತಾಯವಾಗಲಿದೆ.













Click it and Unblock the Notifications