Bengaluru Second Airpor: ಎರಡನೇ ವಿಮಾನ ನಿಲ್ದಾಣ: ಪ್ರಾಪರ್ಟಿ ವಿಚಾರದಲ್ಲಿ ದೇವನಹಳ್ಳಿಯಂತೆ ಆಗದಿರಲಿ, ಏನಿದು ಚರ್ಚೆ
Bengaluru Second Airpor: ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ವಿಚಾರವು ಮತ್ತೆ ಚರ್ಚೆಯ ಆಗುತ್ತಿದೆ. ಬೆಂಗಳೂರಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು, ಇದಕ್ಕೆ ಪರ್ಯಾಯವಾಗಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎನ್ನುವ ಚರ್ಚೆಯು ಜೋರಾಗಿದೆ. ಈಗಾಗಲೇ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರವು ಕೆಲವೊಂದು ಸಿದ್ಧತೆಗಳನ್ನು ಸಹ ಮಾಡಿಕೊಂಡಿದೆ. ಆದರೆ ಬೆಂಗಳೂರಿನ ಉದ್ದೇಶಿತ ಹಾಗೂ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹಲವು ಅಡೆತಡೆಗಳು ಎದುರಾಗಿದ್ದು, ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆಯು ಮುಂದಕ್ಕೆ ಹೋಗುತ್ತಿದೆ. ಈ ನಡುವೆ ದೇವನಹಳ್ಳಿಯಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದ ಮೇಲೆ ಈ ಭಾಗದ ಹಲವು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ. ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ.
ಸುದರ್ಶನ್ ರೆಡ್ಡಿ ಡಿ.ಎನ್ ಎನ್ನುವವರು ಸೋಶಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. "ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಿದ್ದು 2000 ಇಸವಿಯಲ್ಲಿ. ಆ ಯೋಜನೆಗೆ ಸ್ವಾಧೀನ ಪಡಿಸಿಕೊಂಡ 3,779 ಎಕರೆಯ ಪೈಕಿ 1, 990 ಎಕರೆ ರೈತರದಾಗಿತ್ತು, ಉಳಿದದ್ದು ಸರ್ಕಾರಿ ಜಮೀನು. ಆಗ ರೈತರಿಗೆ ಪರಿಹಾರ ರೂಪವಾಗಿ ಸಿಕ್ಕಿದ್ದು ಎಕರೆಗೆ 15 ಲಕ್ಷ ರೂಪಾಯಿ ಮಾತ್ರ.

ಈಗ ಅದರ ಆಸುಪಾಸಿನ ಜಮೀನು ಏಕರೆಗೆ 10 ಕೋಟಿಯವರೆಗೂ ಬೆಲೆ ಬಾಳುತ್ತದೆ. 15 ಲಕ್ಷ ಪರಿಹಾರ ಪಡೆದ ರೈತ 25 ವರ್ಷಗಳಲ್ಲಿ ಅದನ್ನು 10 ಕೋಟಿ ಮಾಡಲು ಸಾಧ್ಯವೇ? ವಿಮಾನ ನಿಲ್ದಾಣಕ್ಕೆ ಜಮೀನು ಕೊಟ್ಟ ಎಷ್ಟೋ ಮಂದಿ ರೈತರ ಮಕ್ಕಳು ಈಗ ತಮ್ಮದೇ ಜಾಗದಲ್ಲಿ 20 ಸಾವಿರ ಸಂಬಳಕ್ಕೆ ದುಡಿಯುತ್ತಿದ್ದಾರೆ." ಎಂದು ಸುದರ್ಶನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಎರಡನೇ ವಿಮಾನ ನಿಲ್ದಾಣ ನಿರ್ಮಾಣ ನಡುವೆ: ಈ ವಿಷಯ ಚರ್ಚೆ
ಇನ್ನು ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಕ್ರಿಯೆ ಚುರುಕು ಪಡೆದುಕೊಂಡಿರುವಾಗಲೇ ಈ ವಿಷಯವು ಸಹ ಚರ್ಚೆಯ ಮುನ್ನೆಲೆಗೆ ಬಂದಿದೆ. ಈಗಾಗಲೇ ಬಿಡದಿ ಟೌನ್‌ಶಿಪ್ ನಿರ್ಮಾಣಕ್ಕೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ 4,000 ಸಾವಿರದಿಂದ 5,000 ಸಾವಿರ ಎಕರೆ ಭೂಮಿ ಅವಶ್ಯಕತೆ ಇದೆ. ಬೆಂಗಳೂರು ದಕ್ಷಿಣದಲ್ಲೇ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಡಿ.ಕೆ ಶಿವಕುಮಾರ್ ಅವರು ಒಲವು ತೋರಿಸಿದ್ದಾರೆ. ಹೀಗಾಗಿ, ಈ ವಿಚಾರವು ಇದೀಗ ಕಾವು ಪಡೆದುಕೊಂಡಿದೆ.
ನೆಟ್ಟಿಗರು ಹೇಳಿದ್ದೇನು ?
ಈ ವಿಚಾರಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಚರ್ಚೆ ಆಗುತ್ತಿದೆ. ಎಂ ಜಿ ಚಂದ್ರಶೇಖರಯ್ಯ ಎನ್ನುವವರು, ಬೆಂಗಳೂರು ಸುತ್ತಮುತ್ತಲಿನ ಮುನ್ನೂರು ಕಿಮೀ ವ್ಯಾಪ್ತಿಯ ಕೃಷಿ ಭೂಮಿ ಹಣವುಳ್ಳ ಭೂಮಾಫಿಯಾದ ಕೈಗೆ ಹೋಗಿದೆ. ಒಂದು ಕಾಲದ ರಾಗಿ ಕಣಜ, ಬೆಂಗಳೂರು ಬ್ಲ್ಯೂ ದ್ರಾಕ್ಷಿ, ತರಕಾರಿ ಬೆಳೆಗಳ ಮಡಿಲಿರುವ ಕೃಷಿ ಭೂಮಿ ಈಗ ಹೆಚ್ಚು ಕಡಿಮೆ ಕೈಗಾರಿಕಾ ವಸಾಹತು, ವಾಸದ ಬಡಾವಣೆಗಳಾಗಿ ಪರಿವರ್ತನೆ ಹೊಂದಿದೆ. ಇರುವ ಅಲ್ಪಸ್ವಲ್ಪ ಭೂಮಿಯ ಮೇಲೆ ಗ್ರೇಟರ್ ಬೆಂಗಳೂರು ರೂವಾರಿಯ ಕಣ್ಣು. ಒಟ್ಟಾರೆ ರೈತರಿಗೆ ಉಳಿಗಾಲವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂಪತ್ ಕುಮಾರ್ ಮುರಳಿ ಎನ್ನುವವರು, ಬೆಂಗಳೂರು ವಿಮಾನ ನಿಲ್ದಾಣಕ್ಕೆ ಈ ಭಾರೀ ಪ್ರಮಾಣದ ಭೂಮಿ ಅಗತ್ಯವಿತ್ತು. ಅದಕ್ಕಾಗಿ ರೈತರಿಂದ ಪಡೆದಿದ್ದಾರೆ. ಅಂದಿನ ಕಾಲಕ್ಕೆ ತಕ್ಕ ಬೆಲೆಯನ್ನೇ ಕೊಟ್ಟಿದೆ ಸರ್ಕಾರ. ಆ ಹಣ ಪಡೆದ ರೈತರು ಮೂರು ಕೊಂಚ ದೂರದಲ್ಲಿ ಎರಡು ಅಥವಾ ಪಟ್ಟು ಭೂಮಿ ಕೊಳ್ಳಬಹುದಿತ್ತು. ಆದರೆ ಅನೇಕರು ಅದನ್ನು ಖರ್ಚು ಮಾಡಿಕೊಂಡಿದ್ದರು. ಈಗ ಹಪಹಪಿಸಿದರೆ ಪ್ರಯೋಜನವಿಲ್ಲ. ಬಿಡದಿಯ ವಿಚಾರಕ್ಕೆ ಬಂದರೆ, ಸರ್ಕಾರಕ್ಕೆ ಇದರ ಅಗತ್ಯ ಇಲ್ಲ ಎಂಬುದು ನನ್ನ ಅಭಿಪ್ರಾಯ. ಇದರಲ್ಲಿ ಜನರ ಹಿತಾಸಕ್ತಿ ಏನೇನೂ ಇಲ್ಲ. ಕೇವಲ ರಿಯಲ್ ಎಸ್ಟೇಟ್ ವ್ಯವಹಾರವನ್ನು ಸರ್ಕಾರ ಮಾಡುತ್ತಿದೆ. ಅದರಲ್ಲೂ ಬೆಳೆ ಬೆಳೆಯುವ ಭೂಮಿಯನ್ನು ಪಡೆದು ಟೌನ್‌ಶಿಪ್ ನಿರ್ಮಾಣ ಮಾಡುವುದು ಅರ್ಥಹೀನ. ಹಲವು ಉದ್ದೇಶಗಳಿಗೆ ಇಂತಹ ಕಾರ್ಯ ಮಾಡಿದರೆ ನಾಳೆ ಆಹಾರ ಪದಾರ್ಥಗಳನ್ನು ಬೆಳೆಯುವ ಸ್ಥಳವಿಲ್ಲದೆ ಕಷ್ಟವಾಗಲಿದೆ. ಇದು ಸರ್ಕಾರಗಳಿಗೆ ಮನವರಿಕೆ ಆಗಬೇಕು ಎಂದಿದ್ದಾರೆ.














Click it and Unblock the Notifications