ಯಶವಂತಪುರ, ಕಂಟೋನ್ಮೆಂಟ್ ಬೆನ್ನಲ್ಲೇ KSR ರೈಲು ನಿಲ್ದಾಣ 1,370 ಕೋಟಿ ರೂ, ವೆಚ್ಚದಲ್ಲಿ ವಿಶ್ವದರ್ಜೆಗೆ..
ಬೆಂಗಳೂರು: ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಜನ ಸಂಖ್ಯೆ ಹೆಚ್ಚುತ್ತಿದೆ. ರೈಲು ಸಂಚಾರ ಅವಲಂಬಿಸಿದ ದೈನಂದಿನ ಪ್ರಯಾಣಿಕರ ಓಡಾಟದಲ್ಲಿ ಏರಿಕೆ ಆಗಿದೆ. ಅದಕ್ಕೆ ತಕ್ಕಂತೆ ಭಾರತೀಯ ರೈಲ್ವೆ ಇಲಾಖೆ ರೈಲು ನಿಲ್ದಾಣಗಳನ್ನು ವಿಶ್ವದರ್ಜೆಗೆ ಅಭಿವೃದ್ಧಿಗೊಳಿಸುವ ಯೋಜನೆ ಹಾಕಿಕೊಂಡಿದೆ. ಯಶವಂತಪುರ, ಕಂಟೋನ್ಮೆಂಟ್ ರೈಲು ನಿಲ್ದಾಣಗಳ ಬೆನ್ನಲ್ಲೆ ನಗರದ KSR ರೈಲು ನಿಲ್ದಾಣವನ್ನೂ ಬಹುಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲು ಪ್ಲ್ಯಾನ್ ಹಾಕಿಕೊಳ್ಳಲಾಗಿದೆ.
ಪ್ರತಿನಿತ್ಯ ಲಕ್ಷಾಂತರ ಮಂದಿ ಭೇಟಿ ನೀಡುವ ಮೆಜೆಸ್ಟಿಕ್ ನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ರೈಲು ನಿಲ್ದಾಣಕ್ಕೆ ಹೊಸ ರೂಪ ನೀಡಲು ನಿರ್ಧರಿಸಲಾಗಿದೆ. ನಿಲ್ದಾಣವನ್ನು ವಿಶ್ವದರ್ಜೆಯ ನಿಲ್ದಾಣವಾಗಿ ಮಾಡಲು ವಿಸೃತ ಯೋಜನಾ ವರದಿ (DPR) ಸಿದ್ದಪಡಿಸಲಾಗಿದೆ. ಒಟ್ಟು 1370 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ.

ಮಲ್ಲೇಶ್ವರಂನಲ್ಲಿನ 5.5 ಕೋಟಿ ವೆಚ್ಚದಲ್ಲಿ ನೂತನ ಪಾದಾಚಾರಿ ಮಾರ್ಗ ಲೋಕಾರ್ಪಣೆ ಮಾಡಿ ಸೋಮವಾರ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದಲೇ ಸಂರ್ಪೂರ್ಣ ವೆಚ್ಚದಲ್ಲಿ ಅಥವಾ ಪಿಪಿಪಿ ಮಾದರಿಯಲ್ಲಿ ಕೆಎಸ್ ಆರ್ ರೈಲು ನಿಲ್ದಾಣವನ್ನು ಪುನರ್ ಅಭಿವೃದ್ಧಿಗೊಳಿಸಲಾಗುವುದು. ಅತ್ಯಾಧುನಿಕ, ಅತ್ಯಗತ್ಯ ಸೌಲಭ್ಯಗಳನ್ನು ನೀಡಲಾಗುವುದು ಎಂದು ತಿಳಿಸಿದರು.
ಈ ಹಿಂದೆ ಯಶವಂತಪುರ ನಿಲ್ದಾಣವನ್ನು ಸುಮಾರು 377 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆ ಯೋಜನೆ ಆರಂಭಿಸಲಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಭವಿಷ್ಯದಲ್ಲಿ ಈ ನಿಲ್ದಾಣವು 1 ಲಕ್ಷ ಪ್ರಯಾಣಿಕರ ನಿರ್ವಹಣಾ ಸಾಮರ್ಥ್ಯ ಹೊಂದಲಿದೆ. ಇಲ್ಲಿ ಕೂಡ ಪ್ರಯಾಣಿಕರಿಗೆ ವಿಶ್ವ ದರ್ಜೆಯ ಸೌಲಭ್ಯಗಳು ಲಭ್ಯವಾಗುವಂತೆ ಮಾಡಲಾಗುತ್ತಿದೆ. ಅದರೊಂದಿಗೆ ಕಂಟೋನ್ಮೆಂಟ್ ರೈಲು ನಿಲ್ದಾಣವು ಅಭಿವೃದ್ಧಿಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಕೆಎಸ್‌ಆರ್ ರೈಲು ನಿಲ್ದಾಣಕ್ಕೆ ಕಾಯಕಲ್ಪ ಭಾಗ್ಯ ಸಿಕ್ಕಿದೆ.
KSR ಅಭಿವೃದ್ಧಿ ಡಿಪಿಆರ್ ನಲ್ಲಿ ಏನೇನಿರಲಿದೆ?
ಸಿದ್ಧವಾದ KSR ನಿಲ್ದಾಣದ ಅಭಿವೃದ್ಧಿ ಯೋಜನೆಯ ಡಿಪಿಆರ್ ನಲ್ಲಿ ಅನೇಕ ಅಂಶಗಳಿವೆ ಎನ್ನಲಾಗಿದೆ. ವಿಶಾಲ ಒಳಾಂಗಣ, ರೂಫ್ ಪ್ಲಾಜಾ, ವಾಣಿಜ್ಯ ಮಳಿಗೆಗಳು, ಮೆಲ್ಟಿಲೆವೆಲ್ ಕಾರು ಪಾರ್ಕಿಂಗ್, ಸುರಕ್ಷಿತ ಪ್ರವೇಶ-ನಿರ್ಗಮನ ಹಾಗೂ ಎಸ್ಕಿಲೇಟರ್, ಲಿಫ್ಟ್, ಶೌಚಾಲಯ, ವೈಫೈ, ಎಲ್‌ಇಡಿ ಡಿಸ್ಪ್ಲೈ ಬೋರ್ಡ್, ಅಧುನಿಕ ವ್ಯವಸ್ಥೆಯ ಎಸಿ ಸಹಿತ ವಿಶ್ರಾಂತಿ ಕೊಠಡಿ ಹೀಗೆ ಅನೇಕ ವಿಶ್ವದರ್ಜೆಯ ಸೌಲಭ್ಯಗಳನ್ನು ಈ ನಿಲ್ದಾಣ ಒಳಗೊಂಡಿರಲಿದೆ ಎಂದು ಹೇಳಲಾಗುತ್ತಿದೆ.
4 ತಿಂಗಳಲ್ಲಿ ರೈಲು ನಿಲ್ದಾಣ ಪೂರ್ಣ
ಇಲಾಖೆ ವತಿಯಿಂದ 485 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತಿರುವ ಕಂಟೋನ್ಮೆಂಟ್ ರೈಲು ನಿಲ್ದಾಣದ ಕಾಮಗಾರಿಗಳು ಪ್ರಗತಿಯಲ್ಲಿವೆ. ಮುಂದಿನ ನಾಲ್ಕು ತಿಂಗಳಲ್ಲಿ ಈ ರೈಲು ನಿಲ್ದಾಣವನ್ನು ಉದ್ಘಾಟಿಸಲಾಗುವುದು, ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಕರ್ನಾಟಕದಲ್ಲಿವೆ 52,000 ಕೊಟಿ ವೆಚ್ಚದ ಯೋಜನೆಗಳು
ಬೆಂಗಳೂರು ಉಪನಗರ ರೈಲು ಯೋಜನೆ ಕಾಮಗಾರಿಗೆ ಆದ್ಯತೆ ನೀಡಿದ್ದೇವೆ. ಕೆಲಸ ವೇಗಗೊಳಿಸಲು ಸೂಚಿಸಿದ್ದೇವೆ. ಬೆಂಗಳೂರಿನ ಸುತ್ತಮುತ್ತ ಇರುವ ಕೆಜಿಎಫ್, ತುಮಕೂರು, ರಾಮನಗರ ಹಳಿಗಳನ್ನು ಚತುಷ್ಪಥಗೊಳಿಸಲಾಗುವುದು. 146 ರೈಲ್ವೆ ಅಂಡರ್ ಪಾಸ್, ಸೇತುವೆ ನಿರ್ಮಾಣ ಕೆಲಸಗಳು ಪ್ರಗತಿಯಲ್ಲಿವೆ. ಇನ್ನೂ ಯಲಹಂಕದಲ್ಲಿ ಈ ಮೊದಲೇ ಹಳಿದಂತೆ 5700 ಕೋಟಿ ರೂಪಾಯಿ ವೆಚ್ಚದಲ್ಲಿ ಮೆಗಾ ಲಾಜಿಸ್ಟಿಕ್ ಟರ್ಮಿನಲ್ ನಿರ್ಮಾಣ ಯೋಜನೆ ರೂಪಿಸಿದ್ದೇವೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಬರೋಬ್ಬರಿ 52,000 ಕೋಟಿ ರೂಪಾಯಿ ವೆಚ್ಚದ ರೈಲ್ವೆ ಯೋಜನೆಗಳು ಜಾರಿಯಲ್ಲಿವೆ ಎಂದು ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ.













Click it and Unblock the Notifications