140ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿದ್ದ ಬ್ರಿಡ್ಜ್‌ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಗಿರೀಶ್ ಭಾರದ್ವಾಜ್ ಇನ್ನಿಲ್ಲ

ದೇಶಾದ್ಯಂತ ನೂರಾರು ತೂಗುಸೇತುವೆಗಳನ್ನು ನಿರ್ಮಿಸಿ, ಗ್ರಾಮೀಣ ಭಾಗದ ಜನರ ಪಾಲಿಗೆ ಭಗೀರಥನಂತಿದ್ದ "ತೂಗುಸೇತುವೆಗಳ ಸರದಾರ", ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (76) ಅವರು ಮಂಗಳವಾರ ಮುಂಜಾನೆ ನಿಧನರಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆ.ವಿ.ಜಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಕೆಲವೇ ದಿನಗಳ ಹಿಂದೆಯಷ್ಟೇ ಡಾ.ಗಿರೀಶ್ ಭಾರದ್ವಾಜ್ ಅವರು ಉತ್ತರಾಖಂಡ ರಾಜ್ಯದ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಮರಳಿದ್ದರು. ಆ ಬಳಿಕ ಅವರಿಗೆ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ, ಸುಳ್ಯದ ಕೆ.ವಿ.ಜಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಮಂಗಳವಾರ ಮುಂಜಾನೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಹಲೋಕ ತ್ಯಜಿಸಿದ್ದಾರೆ.

Girish Bharadwaj

ಸೇತುವೆಗಳ ಮೂಲಕ ಜನರ ಹೃದಯ ಜೋಡಿಸಿದ್ದ ಮಹಾನ್ ಚೇತನ

ಇಂಜಿನಿಯರಿಂಗ್ ಪದವಿ ಮುಗಿಸಿದ ಬಳಿಕ 'ಆಯಶ್ಯಿಲ್ಪ ಇಂಜಿನಿಯರಿಂಗ್ ವರ್ಕ್ಸ್' ಆರಂಭಿಸಿದ್ದ ಗಿರೀಶ್ ಭಾರದ್ವಾಜ್ ಅವರು, ನಂತರದ ದಿನಗಳಲ್ಲಿ ತೂಗುಸೇತುವೆಗಳ ನಿರ್ಮಾಣದ ಕಡೆಗೆ ತಮ್ಮ ಗಮನ ಹರಿಸಿದರು. ಅತ್ಯಂತ ಕಡಿಮೆ ವೆಚ್ಚದಲ್ಲಿ, ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಸುಲಭವಾಗಿ ನಿರ್ಮಿಸಬಹುದಾದ ತೂಗುಸೇತುವೆಗಳ ಮಾದರಿಯನ್ನು ಅವರು ದೇಶಕ್ಕೆ ಪರಿಚಯಿಸಿದರು.

ಸಂಪರ್ಕ ಕ್ರಾಂತಿಯನ್ನೇ ಸೃಷ್ಟಿಸಿದ್ದ ಇವರು ಭಾರತದಾದ್ಯಂತ ಹಾಗೂ ವಿದೇಶಗಳೂ ಸೇರಿದಂತೆ ಬರೋಬ್ಬರಿ 140ಕ್ಕೂ ಹೆಚ್ಚು ತೂಗುಸೇತುವೆಗಳನ್ನು ಯಶಸ್ವಿಯಾಗಿ ನಿರ್ಮಿಸಿದ್ದರು. ಆ ಮೂಲಕ ರಸ್ತೆ, ಸೇತುವೆಗಳಿಲ್ಲದೆ ದ್ವೀಪದಂತಾಗಿದ್ದ ನೂರಾರು ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಿ, ಜನರ ಹೃದಯಗಳನ್ನು ಜೋಡಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

2017ರಲ್ಲಿ ಒಲಿದಿದ್ದ 'ಪದ್ಮಶ್ರೀ' ಗೌರವ

ಗ್ರಾಮೀಣ ಭಾರತದ ಅಭಿವೃದ್ಧಿಗೆ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅವರು ನೀಡಿದ ಅಭೂತಪೂರ್ವ ಕೊಡುಗೆಯನ್ನು ಪರಿಗಣಿಸಿ, ಕೇಂದ್ರ ಸರ್ಕಾರವು 2017ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ 'ಪದ್ಮಶ್ರೀ' ನೀಡಿ ಗೌರವಿಸಿತ್ತು. ಇದರೊಂದಿಗೆ ದೇಶ-ವಿದೇಶಗಳ ಹತ್ತಾರು ಗೌರವಗಳು, ಡಾಕ್ಟರೇಟ್ ಪದವಿಗಳು ಇವರ ಮುಡಿಗೇರಿದ್ದವು. ಮೃತರು ಪುತ್ರರಾದ ಸುದರ್ಶನ್, ಪತಂಜಲಿ, ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ನಿಧನಕ್ಕೆ ನಾಡಿನ ಗಣ್ಯರು, ಗ್ರಾಮೀಣ ಭಾಗದ ಜನತೆ ತೀವ್ರ ಸಂತಾಪ ಸೂಚಿಸಿದ್ದಾರೆ.

1989ರಲ್ಲಿ ಪಯಸ್ವಿನಿ ನದಿಗೆ ಕಟ್ಟಿದ ಮೊದಲ ಸೇತುವೆ

ಡಾ. ಗಿರೀಶ್ ಭಾರದ್ವಾಜ್ ಅವರು ತಮ್ಮ ಬದುಕಿನ ಮೊದಲ ತೂಗುಸೇತುವೆಯನ್ನು 1989ರಲ್ಲಿ ನಿರ್ಮಿಸಿದರು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರಿನಲ್ಲಿ ಹರಿಯುವ 'ಪಯಸ್ವಿನಿ' ನದಿಗೆ ಅಡ್ಡಲಾಗಿ ಇವರು ಕಟ್ಟಿದ ಆ ಮೊದಲ ಸೇತುವೆ, ಮುಂದೆ ಭಾರತದಾದ್ಯಂತ ಇವರು ಸೃಷ್ಟಿಸಲಿರುವ ಸಂಪರ್ಕ ಕ್ರಾಂತಿಗೆ ಭದ್ರವಾದ ಮುನ್ನುಡಿ ಬರೆದಿತ್ತು. ಕೇವಲ ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲೂ ಗಿರೀಶ್ ಭಾರದ್ವಾಜ್ ಅವರು ತಮ್ಮ ತಾಂತ್ರಿಕ ಚಾತುರ್ಯದ ಮೂಲಕ ಮನೆಮಾತಾಗಿದ್ದರು. ಕೇರಳ ರಾಜ್ಯದಲ್ಲಿ ಇವರು ಸುಮಾರು 30ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿ ಅಲ್ಲಿನ ಗ್ರಾಮೀಣ ಭಾಗದ ಜನರ ಸಾರಿಗೆ ಸಮಸ್ಯೆಗೆ ಮುಕ್ತಿ ನೀಡಿದ್ದಾರೆ. ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ತಲಾ ಎರಡು ಪ್ರಮುಖ ತೂಗುಸೇತುವೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇವರ ಉಳಿದ ಬಹುತೇಕ ಎಲ್ಲ ತೂಗುಸೇತುವೆಗಳ ಜನಪರ ಕೆಲಸಗಳು ಕರ್ನಾಟಕದ ವಿವಿಧ ಭಾಗಗಳಲ್ಲಿ ಹರಡಿಕೊಂಡಿದ್ದು, ಇಂದಿಗೂ ಲಕ್ಷಾಂತರ ಜನರ ದೈನಂದಿನ ಬದುಕಿಗೆ ಕೊಂಡಿಯಾಗಿವೆ.

ಸಿಎಂ ಡಿಕೆ ಶಿವಕುಮಾರ್‌ ಸಂತಾಪ

ಗಿರೀಶ್‌ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಂತಾಪ ಸೂಚಿಸಿದ್ದಾರೆ. 'ತೂಗುಸೇತುವೆಗಳ ಸರದಾರ', ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ಅವರ ನಿಧನದ ಸುದ್ದಿ ತೀವ್ರ ಆಘಾತ ಉಂಟುಮಾಡಿದೆ. ಗ್ರಾಮೀಣ ಭಾರತದ ಸಂಪರ್ಕ ಕ್ರಾಂತಿಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಅವರ ಅಗಲಿಕೆ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ. ದೇಶದಾದ್ಯಂತ 140ಕ್ಕೂ ಹೆಚ್ಚು ತೂಗು ಸೇತುವೆಗಳನ್ನು ನಿರ್ಮಿಸಿದ್ದ ಭಾರದ್ವಾಜ್ ಅವರು, ಮೂಲಸೌಕರ್ಯ ವಂಚಿತ ಗ್ರಾಮೀಣ ಭಾಗಗಳ ಜನರಿಗೆ ಸುಲಭ ಸಂಪರ್ಕ ಕಲ್ಪಿಸುವ ಮೂಲಕ ಜನರ ಬದುಕಿಗೆ ಆಸರೆಯಾಗಿದ್ದರು. ಇವರ ಈ ತಾಂತ್ರಿಕ ಚಾತುರ್ಯ ಹಾಗೂ ಜನಪರ ಸೇವೆಯನ್ನು ಗುರುತಿಸಿಯೇ ಸಾರ್ವಜನಿಕರು ಇವರನ್ನು ಪ್ರೀತಿಯಿಂದ 'ಸುಳ್ಯದ ವಿಶ್ವೇಶ್ವರಯ್ಯ' ಎಂದು ಗೌರವಿಸುತ್ತಿದ್ದರು. ಅಸಾಧಾರಣ ತಾಂತ್ರಿಕ ನೈಪುಣ್ಯತೆಯ ಮೂಲಕ ಜನಸಾಮಾನ್ಯರ ಸೇವೆ ಮಾಡಿದ ಡಾ. ಗಿರೀಶ್ ಭಾರದ್ವಾಜ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರು ಹಾಗೂ ಹಿತೈಷಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+