Adani Foundation: ಸ್ವಾವಲಂಬಿ ಬದುಕಿಗೆ ಅದಾನಿ ಫೌಂಡೇಶನ್-ಆಂಧ್ರ ಸರ್ಕಾರದಿಂದ ಮಹತ್ವದ ಯೋಜನೆಗೆ ಚಾಲನೆ
ಮಹತ್ವದ ಉದ್ದೇಶದೊಂದಿಗೆ ಅದಾನಿ ಫೌಂಡೇಶನ್ ಜೊತೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ನೇತೃತ್ವದ ರಾಜ್ಯ ಸರ್ಕಾರ ಕೈಜೋಡಿಸಿದೆ. ಸ್ವಕ್ಷೇತ್ರವಾದ ಕುಪ್ಪಂನಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಸಾರ್ವಜನಿಕ-ಖಾಸಗಿ-ಜನರ ಸಹಭಾಗಿತ್ವ (P4) ಪ್ರಮುಖ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಚಾಲನೆ ನೀಡಿದ್ದಾರೆ. ಬಡವರ ಬದುಕು ಹಸನಾಗಿಸುವ ಕಾರ್ಯಕ್ರಮ ಇದಾಗಿದೆ.
ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ಕುಟುಂಬಗಳ ಸುಧಾರಣೆ ಮಾಡುವ ಮತ್ತು ಸ್ವಾವಲಂಬಿ ಬದುಕು ಕಟ್ಟಿಕೊಡುವ ಉದ್ದೇಶದಿಂದ ಈ ಮಹತ್ವದ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಚಿತ್ತೂರು ಜಿಲ್ಲೆಯ ಕುಪ್ಪಂ ಮಂಡಲದ 'ಬಂಗಾರು ಕುಟುಂಬಗಳ' ಸರ್ವತೋಮುಖ ಅಭಿವೃದ್ಧಿಗಾಗಿ ಅದಾನಿ ಫೌಂಡೇಶನ್ ಇಲ್ಲಿ 'ಮಾರ್ಗದರ್ಶಿ' ಪಾಲುದಾರನಾಗಿದೆ.

ಈ ಹೊಸ ಯೋಜನೆಯು "ಟ್ರಾನ್ಸ್‌ಫಾರ್ಮಿಂಗ್ ಲೈವ್ಸ್ ಟುಗೆದರ್: ಎ ಪಿ4 ಮಾಡೆಲ್ ಫಾರ್ ಹೋಲಿಸ್ಟಿಕ್ ಪ್ರೋಗ್ರೆಸ್ ಆಫ್ ಬಂಗಾರು ಕುಟುಂಬಸ್ ಇನ್ ಕುಪ್ಪಂ ಮಂಡಲ್" ಹೆಸರಿನಲ್ಲಿ ಅನುಷ್ಠಾನಕ್ಕೆ ತರಲಾಗುತ್ತದೆ. ಕುಪ್ಪಂ ಮಂಡಲದ ಎಲ್ಲಾ 29 ಗ್ರಾಮ ಪಂಚಾಯತಿಗಳು ಹಾಗೂ ನಗರ ಪ್ರದೇಶಗಳಲ್ಲಿ ಜಾರಿಗೆ ಬರಲಿದ್ದು, ರಾಜ್ಯದ (ಆಂಧ್ರಪ್ರದೇಶ) ಮಹಿಳಾ ಅಭಿವೃದ್ಧಿ ಸೊಸೈಟಿ (ಎಪಿಎಂಎಎಸ್) ಸಹಕಾರದಲ್ಲಿ ಈ ಉದ್ದೇಶಿತ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಸ್ವಾವಲಂಬಿ ಬದುಕಿಗೆ ಹೊಸ ಭರವಸೆ
ಕಾರ್ಯಕ್ರಮಕ್ಕೆ ಉದ್ಘಾಟಿಸಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರಗಳು, ಪೋರ್ಟಬಲ್ ವೆಲ್ಡಿಂಗ್ ಕಿಟ್‌ಗಳು ಮತ್ತು ಎಂಬ್ರಾಯ್ಡರಿ ಯಂತ್ರಗಳು ಸೇರಿದಂತೆ ವಿವಿಧ ಜೀವನೋಪಾಯದ ಸಲಕರಣೆಗಳನ್ನು ವಿತರಿಸಿದರು. ಸ್ಥಳೀಯ ಮಾರುಕಟ್ಟೆಗಳಿಗೆ ಬೇಡಿಕೆಗೆ ಅನುಗುಣವಾಗಿ ಕಿರಾಣಿ ಅಂಗಡಿಗಳು, ಪಶುಸಂಗೋಪನೆ ಮತ್ತು ಇತರ ಸಣ್ಣ ಉದ್ಯಮಗಳ ಆರಂಭಕ್ಕೆ ಅರ್ಹ ಕುಟುಂಬಗಳಿಗೆ ಆರ್ಥಿಕ ಸಹಾಯ ಮಾಡಲಾಗುತ್ತಿದೆ. ಜೊತೆಗೆ 'ಬಂಗಾರು ಮಿತ್ರ' ಎಂಬ ತರಬೇತಿ ಪಡೆದ ಸಮುದಾಯ ಪ್ರೇರಕರು ವ್ಯವಹಾರ ಯೋಜನೆ, ಹಣಕಾಸು ಸಾಕ್ಷರತೆ ಮೂಡಿಸಲು ಹಾಗೂ ಸರ್ಕಾರಿ ಯೋಜನೆಗಳನ್ನು ತಲುಪಿಸಲು ಮಾರ್ಗದರ್ಶನ ನೀಡಲಾಗುತ್ತಿದೆ.
ಇದೇ ವೇಳೆ ಮುಖ್ಯಮಂತ್ರಿ ನಾಯ್ಡು ಅವರು ಮಾತನಾಡಿ, ನಮ್ಮ ರಾಜ್ಯ ಸರ್ಕಾರದ 'ಶೂನ್ಯ ಬಡತನ' ಗುರಿಯನ್ನು ತಲುಪಲು ಈ P4 (ಸಾರ್ವಜನಿಕ-ಖಾಸಗಿ-ಜನರ ಸಹಭಾಗಿತ್ವ) ಮಾದರಿಯಡಿ ಅಭಿವೃದ್ಧಿ ಕ್ರಮ ಕೈಗೊಂಡಿದೆ. ಅದಕ್ಕಾಗಿ ಸರ್ಕಾರವು ಅದಾನಿ ಫೌಂಡೇಶನ್ ಜೊತೆಗೆ ಕೈಜೋಡಿಸಿದೆ. ಸಾಮಾಜಿಕ ಇಂತಹ ಕಾರ್ಯಕ್ರಮಗಳಲ್ಲಿ ಅವರ ಕೊಡುಗೆ ಅಪಾರ ಎಂದು ಅದಾನಿ ಪೌಂಡೇಶನ್ ಅನ್ನು ಶ್ಲಾಘಿಸಿದರು.
ಅದಾನಿ ಫೌಂಡೇಶನ್ ಅಧ್ಯಕ್ಷೆ ಡಾ. ಪ್ರೀತಿ ಅದಾನಿ ಅವರು, ಪ್ರತಿ ಕುಟುಂಬಗಳಿಂದ ನಿಜವಾದ ಪ್ರಗತಿಯು ಶುರುವಾಗುತ್ತದೆ. ಸೂಕ್ತ ಅವಕಾಶಗಳು ಮತ್ತು ಪ್ರೋತ್ಸಾಹ ಸಿಕ್ಕಾಗ ಜನರೇ ಸುಸ್ಥಿರ ಜೀವನೋಪಾಯ ಕಟ್ಟಿಕೊಳ್ಳಬಲ್ಲರು. ಆಂಧ್ರಪ್ರದೇಶ ರಾಜ್ಯ ಸರ್ಕಾರದೊಂದಿಗಿನ ನಮ್ಮ ಪಾಲುದಾರಿಕೆಯು ಬಂಗಾರು ಕುಟುಂಬಗಳು ಸ್ವಾವಲಂಬಿಗಳಾಗಲು ಸಹಾಯವಾಗುತ್ತದೆ. ಇದು ನಮ್ಮ ಫೌಂಡೇಶನ್‌ನ ಬದ್ಧತೆಯ ಪ್ರತೀಕವಾಗಿದೆ ಎಂದು ಹೇಳಿದರು.
7,200 ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮ
ಗ್ರಾಮಗಳಲ್ಲಿ ಉದ್ಯಮಶೀಲತೆ ಮತ್ತು ಸಮುದಾಯ ಮಾರ್ಗದರ್ಶನದ ಮೂಲಕ ಬಡತನ ನಿರ್ಮೂಲನೆಗೆ ಒಂದು ಸುಸ್ಥಿರ ಮಾದರಿ ರೂಪಿಸಲು ಸದರಿ ಯೋಜನೆ ಸಹಕಾರಿಯಾಗುತ್ತದೆ. ಸದ್ಯ ರಾಜ್ಯದಲ್ಲಿ ಅದಾನಿ ಫೌಂಡೇಶನ್ ಸುಮಾರು 150 ಹಳ್ಳಿಗಳಲ್ಲಿ ಶಿಕ್ಷಣ, ಆರೋಗ್ಯ, ಮತ್ತು ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ದೇಶಾದ್ಯಂತ ಒಟ್ಟು ಸುಮಾರು 22 ರಾಜ್ಯಗಳ 7,200ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅನೇಕ ಸುಸ್ಥಿರ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿವೆ. ಲಕ್ಷಾಂತರ ಬಡವರ ಬದುಕು ಸುಧಾರಣೆ ಆಗಿದೆ ಎಂದು ಅವರು ವಿವರಿಸಿದರು.












Click it and Unblock the Notifications