ಬಾಹ್ಯಾಕಾಶದಲ್ಲಿ ಆಲ್ದೂರು ಹುಡುಗನ ಕಮಾಲ್: ಚಿಕ್ಕಮಗಳೂರಿನ Pixxel CEO ಅವೈಸ್ ಅಹ್ಮದ್ ಯಶೋಗಾಥೆ
ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಮತ್ತು ಇಂಟರ್‌ನೆಟ್ ಇಲ್ಲದೆ ಒಂದು ದಿನವೂ ಕಳೆಯಲು ಸಾಧ್ಯವಿಲ್ಲ. ಆದರೆ, ಎಂಟನೇ ತರಗತಿಯವರೆಗೂ ಇಂಟರ್‌ನೆಟ್ ಮುಖವನ್ನೇ ನೋಡದ, ಚಿಕ್ಕಮಗಳೂರಿನ ಸಣ್ಣ ಹಳ್ಳಿಯೊಂದರ ಹುಡುಗನೊಬ್ಬ ಇಂದು ನಾಸಾ ಮತ್ತು ಗೂಗಲ್‌ನಂತಹ ಜಾಗತಿಕ ದೈತ್ಯ ಸಂಸ್ಥೆಗಳನ್ನೇ ಬೆರಗುಗೊಳಿಸುವಂತಹ ಬಾಹ್ಯಾಕಾಶ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾನೆ ಎಂದರೆ ನಂಬಲೇಬೇಕು.
ಹೌದು, ಇದು ಚಿಕ್ಕಮಗಳೂರು ಜಿಲ್ಲೆಯ ಅಲ್ದೂರು ಎಂಬ ಪುಟ್ಟ ಹಳ್ಳಿಯಿಂದ ಬೆಳೆದು, ಇಂದು 'ಪಿಕ್ಸೆಲ್' ಎಂಬ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಪೇಸ್-ಟೆಕ್ ಕಂಪನಿಯ ಸಿಇಒ ಆಗಿರುವ ಅವೈಸ್ ಅಹ್ಮದ್ ಅವರ ಬೆರಗುಗೊಳಿಸುವ ಯಶೋಗಾಥೆ.

ಈತನ ಈ ಅದ್ಭುತ ಸಾಧನೆಗೆ ಇದೀಗ ಮಾಜಿ ಸಚಿವ, ಹಿರಿಯ ನಾಯಕ ಸಿ.ಟಿ. ರವಿ ಅವರು ಕೂಡ ಫಿದಾ ಆಗಿದ್ದು, ತಮ್ಮದೇ ಹುಟ್ಟೂರಿನ ಯುವಕನ ಅಸಾಧಾರಣ ಸಾಧನೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.
ಎನ್ಸೈಕ್ಲೋಪೀಡಿಯಾ ಓದುವಾಗ ಮೊಳಕೆಯೊಡೆದ ಬಾಹ್ಯಾಕಾಶದ ಕನಸು
ಕಾಫಿನಾಡು ಚಿಕ್ಕಮಗಳೂರಿನ ಸಮೀಪವಿರುವ ಅಲ್ದೂರು ಹೋಬಳಿಯಲ್ಲಿ ಜನಿಸಿದ ಅವೈಸ್ ಅಹ್ಮದ್, ಬಾಲ್ಯದಲ್ಲಿ ತಂದೆ ತರುತ್ತಿದ್ದ ಪುಸ್ತಕಗಳನ್ನೇ ಜಗತ್ತು ಎಂದು ಭಾವಿಸಿದ್ದರು. ತಂತ್ರಜ್ಞಾನದ ಅರಿವಿಲ್ಲದ ಆ ದಿನಗಳಲ್ಲಿ, ಸ್ಥಳೀಯ ಲೈಬ್ರರಿ ಮತ್ತು ಪುಸ್ತಕದ ಅಂಗಡಿಗಳಿಂದ ಅವರ ತಂದೆ ತರುತ್ತಿದ್ದ ವಿಜ್ಞಾನದ ಎನ್ಸೈಕ್ಲೋಪೀಡಿಯಾಗಳು ಅವೈಸ್ ಅವರಲ್ಲಿ ಗ್ರಹಗಳು ಮತ್ತು ಸೌರವ್ಯೂಹದ ಬಗೆಗಿನ ಕುತೂಹಲವನ್ನು ಹುಟ್ಟುಹಾಕಿದ್ದವು.
ಬಿಟ್ಸ್ ಪಿಲಾನಿ ಮತ್ತು 'ಪಿಕ್ಸೆಲ್' ಸ್ಪೇಸ್-ಟೆಕ್ ಸ್ಟಾರ್ಟ್‌ಅಪ್
ಬಾಲ್ಯದ ಆಸಕ್ತಿಯನ್ನು ಬೆನ್ನತ್ತಿ ಹೋದ ಅವೈಸ್, ಪ್ರತಿಷ್ಠಿತ ಬಿಟ್ಸ್ ಪಿಲಾನಿ ಸಂಸ್ಥೆಯಲ್ಲಿ ಗಣಿತಶಾಸ್ತ್ರವನ್ನು ಅಧ್ಯಯನ ಮಾಡಲು ಸೇರಿದರು. ಅಲ್ಲಿ ಕೇವಲ ತರಗತಿಯ ಪಾಠಗಳಿಗೆ ಸೀಮಿತವಾಗದೆ, ಇಸ್ರೋ ಜೊತೆಗಿನ ವಿದ್ಯಾರ್ಥಿ ಉಪಗ್ರಹ ಯೋಜನೆ 'ಟೀಮ್ ಅನಂತ್' ಸೇರಿಕೊಂಡರು.
ಕ್ಯಾಲಿಫೋರ್ನಿಯಾದಲ್ಲಿ ನಡೆದ ಸ್ಪೇಸ್‌ಎಕ್ಸ್ ಹೈಪರ್‌ಲೂಪ್ ಪಾಡ್ ಸ್ಪರ್ಧೆಯಲ್ಲಿ ಫೈನಲ್ ತಲುಪಿದ ಹೈಪರ್‌ಲೂಪ್ ಇಂಡಿಯಾದ ಎಂಜಿನಿಯರಿಂಗ್ ವಿಭಾಗವನ್ನು ಯಶಸ್ವಿಯಾಗಿ ಮುನ್ನಡೆಸಿದರು.
2018ರಲ್ಲಿ, ತಮ್ಮ ಸಹಪಾಠಿ ಕ್ಷಿತಿಜ್ ಖಂಡೇಲ್ವಾಲ್ ಜೊತೆಗೂಡಿ ಐಬಿಎಂ ವಾಟ್ಸನ್ ಎಐ ಸ್ಪರ್ಧೆಯಲ್ಲಿ ಪಾಲ್ಗೊಂಡಾಗ ಕೃಷಿ ಭೂಮಿಯ ಆರೋಗ್ಯವನ್ನು ಪತ್ತೆಹಚ್ಚುವ ಎಐ ಮಾಡೆಲ್ ರೂಪಿಸಲು ಮುಂದಾದರು. ಆದರೆ, ಆಗ ಲಭ್ಯವಿದ್ದ ಉಪಗ್ರಹ ಚಿತ್ರಗಳು ಸ್ಪಷ್ಟವಾಗಿರಲಿಲ್ಲ.
ಸಾಮಾನ್ಯ ಉಪಗ್ರಹಗಳು ಬೆಳೆಗಳ ಮೇಲಿನ ಒತ್ತಡ, ಮೀಥೇನ್ ಸೋರಿಕೆ ಮುಂತಾದ ಸೂಕ್ಷ್ಮ ಬದಲಾವಣೆಗಳನ್ನು ಸೆರೆಹಿಡಿಯಲು ಸಂಪೂರ್ಣ ವಿಫಲವಾಗಿದ್ದವು. ಈ ಸಮಸ್ಯೆಯನ್ನೇ ದೊಡ್ಡ ಅವಕಾಶವಾಗಿ ಬಳಸಿಕೊಂಡ ಈ ಯುವಕರು, 2019ರ ಫೆಬ್ರವರಿಯಲ್ಲಿ ತಮ್ಮ ತಂದೆಯ ಬಳಿ ಕೇವಲ 10,000 ರೂಪಾಯಿ ಸಾಲ ಪಡೆದು, ಭೂಮಿಯ ಆರೋಗ್ಯವನ್ನು ಅಳೆಯುವ ಉದ್ದೇಶದಿಂದ 'ಪಿಕ್ಸೆಲ್' ಸಂಸ್ಥೆಯನ್ನು ಹುಟ್ಟುಹಾಕಿದರು.
ನಾಸಾ ಬೆಂಬಲಿತ ಪಿಕ್ಸೆಲ್ ಸಿಇಒ ಅವೈಸ್ ಅಹ್ಮದ್ ಜಾಗತಿಕ ಸಾಧನೆ
ಇಂದು ಅವೈಸ್ ಅಹ್ಮದ್ ಸ್ಥಾಪಿಸಿದ 'ಪಿಕ್ಸೆಲ್' ಜಾಗತಿಕ ಮಟ್ಟದಲ್ಲಿ ಹೈಪರ್‌ಸ್ಪೆಕ್ಟ್ರಲ್ ಇಮೇಜಿಂಗ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿದೆ. ಮಾನವನ ಕಣ್ಣಿಗೆ ಕಾಣಿಸದ ರಾಸಾಯನಿಕ ಬದಲಾವಣೆಗಳನ್ನು ಪತ್ತೆಹಚ್ಚುವ ಅತ್ಯಾಧುನಿಕ ಉಪಗ್ರಹಗಳನ್ನು ಇದು ನಿರ್ಮಿಸುತ್ತಿದೆ. 2025ರಲ್ಲಿ ಪಿಕ್ಸೆಲ್ ತನ್ನ ಆರು ಅತ್ಯಾಧುನಿಕ ಉಪಗ್ರಹಗಳ 'ಫೈರ್‌ಫ್ಲೈ' ಸಮೂಹವನ್ನು ಯಶಸ್ವಿಯಾಗಿ ಬಾಹ್ಯಾಕಾಶಕ್ಕೆ ಉಡಾವಣೆ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದೆ.
ಇದರ ಅದ್ಭುತ ತಂತ್ರಜ್ಞಾನವನ್ನು ಗುರುತಿಸಿದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ' , ಪಿಕ್ಸೆಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ನಾಸಾ ಜೊತೆ ಒಪ್ಪಂದ ಮಾಡಿಕೊಂಡ ಭಾರತದ ಮೊದಲ ಸ್ಪೇಸ್ ಸ್ಟಾರ್ಟ್ಅಪ್ ಎಂಬ ಹೆಗ್ಗಳಿಕೆಗೆ ಪಿಕ್ಸೆಲ್ ಪಾತ್ರವಾಗಿದೆ. ಇದರ ಜೊತೆಗೆ ಯುಎಸ್ ನ್ಯಾಷನಲ್ ರೆಕನೈಸನ್ಸ್ ಆಫೀಸ್ ಜೊತೆಯೂ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ.
ಈ ಬೆಳವಣಿಗೆಯನ್ನು ಗುರುತಿಸಿ ಗೂಗಲ್, ಲೈಟ್‌ಸ್ಪೀಡ್ ವೆಂಚರ್ ಪಾರ್ಟ್‌ನರ್ಸ್‌ನಂತಹ ಜಾಗತಿಕ ಹೂಡಿಕೆದಾರರು ಬರೋಬ್ಬರಿ 95 ಮಿಲಿಯನ್ ಡಾಲರ್ (ಸುಮಾರು 900 ಕೋಟಿ ರೂಪಾಯಿ) ಬಂಡವಾಳವನ್ನು ಹೂಡಿದ್ದಾರೆ.
ಫೋರ್ಬ್ಸ್ 30 ಅಂಡರ್ 30 ಹಾಗೂ ಎಂಐಟಿ ಇನ್ನೋವೇಟರ್ಸ್ ಅಂಡರ್ 35 ಪಟ್ಟಿಯಲ್ಲೂ ಸ್ಥಾನ ಪಡೆದಿರುವ 26 ವರ್ಷದ ಪಿಕ್ಸೆಲ್ ಸಿಇಒ ಅವೈಸ್ ಅಹ್ಮದ್, ಪ್ರಸ್ತುತ ಬೆಂಗಳೂರು ಮತ್ತು ಲಾಸ್ ಏಂಜಲೀಸ್ ನಡುವೆ ತಮ್ಮ ವೃತ್ತಿಜೀವನವನ್ನು ಮುನ್ನಡೆಸುತ್ತಿದ್ದಾರೆ. ನಕ್ಷತ್ರಗಳನ್ನು ನೋಡುತ್ತಾ ಬೆಳೆದ ಕಾಫಿನಾಡಿನ ಹಳ್ಳಿಯೊಂದರ ಈ ಯುವಕ, ಮನುಷ್ಯನ ಕನಸುಗಳಿಗೆ ಯಾವುದೇ ಎಲ್ಲೆಗಳಿಲ್ಲ ಹಾಗೂ ಸಾಧನೆಗೆ ಬಡತನ ಅಡ್ಡಿಯಾಗುವುದಿಲ್ಲ ಎಂಬುದನ್ನು ಇಡೀ ಜಗತ್ತಿಗೆ ನಿರೂಪಿಸಿದ್ದಾರೆ.
ಸಿ.ಟಿ. ರವಿ ಶ್ಲಾಘನೆ: ಯುವ ಭಾರತಕ್ಕೆ ಸ್ಫೂರ್ತಿ
ತಮ್ಮದೇ ಊರಿನ ಯುವಕನ ಈ ಅದ್ಭುತ ಸಾಧನೆಯನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಸಿ.ಟಿ. ರವಿ ಅವರು, "ನನ್ನ ಹುಟ್ಟೂರಾದ ಅಲ್ದೂರಿನ ಯುವ ಉದ್ಯಮಿ ಅವೈಸ್ ಅಹ್ಮದ್ ಅವರ ಅಸಾಧಾರಣ ಸಾಧನೆಗೆ ಹೃತ್ಪೂರ್ವಕ ಅಭಿನಂದನೆಗಳು. ಇವರು ನಮ್ಮ ಊರು, ಕರ್ನಾಟಕ ಹಾಗೂ ಇಡೀ ದೇಶವೇ ಹೆಮ್ಮೆಪಡುವಂತಹ ಸಾಧನೆ ಮಾಡಿದ್ದಾರೆ. ಚಿಕ್ಕಮಗಳೂರಿನ ಪುಟ್ಟ ಹಳ್ಳಿಯಿಂದ ಬೆಳೆದು, 'ಪಿಕ್ಸೆಲ್' ಸ್ಥಾಪಿಸಿ, ಇದೀಗ ನಾಸಾದಿಂದ ಪ್ರತಿಷ್ಠಿತ ಒಪ್ಪಂದ ಪಡೆದಿದ್ದಾರೆ," ಎಂದು ಬರೆದುಕೊಂಡಿದ್ದಾರೆ.
Heartfelt congratulations to Awais Ahmed, a young entrepreneur from my native village, Aldur, for bringing immense pride to our hometown, Karnataka, and the nation through his extraordinary achievement.
— Dr. Ravi C. T 🇮🇳 ಡಾ. ರವಿ ಸಿ. ಟಿ (@CTRavi_BJP) July 6, 2026
From a small village in Chikkamagaluru to founding Pixxel, India’s first… pic.twitter.com/5VrtKCDjE8
"ಪ್ರಧಾನಿ ನರೇಂದ್ರ ಮೋದಿಯವರು ಹೇಳುವಂತೆ, ಭಾರತದ ಯುವಕರು ದೊಡ್ಡ ಕನಸು ಕಂಡರೆ ಅಸಾಧಾರಣವಾದುದನ್ನು ಸಾಧಿಸಬಹುದು ಎಂಬುದಕ್ಕೆ ಅವೈಸ್ ಅತ್ಯುತ್ತಮ ಉದಾಹರಣೆ. ಅವರ ಈ ಯಶೋಗಾಥೆ ಅಸಂಖ್ಯಾತ ಯುವ ಭಾರತೀಯರಿಗೆ ದೊಡ್ಡ ಕನಸು ಕಾಣಲು ಹಾಗೂ ಅಸಾಧ್ಯವಾದದ್ದನ್ನು ಸಾಧಿಸಲು ಸ್ಫೂರ್ತಿಯಾಗಲಿ" ಎಂದು ಹಾರೈಸಿದ್ದಾರೆ.












Click it and Unblock the Notifications