ಮಧ್ಯಪ್ರದೇಶದಲ್ಲಿ ಬೃಹತ್ ಖಾಸಗಿ ಕ್ಷಿಪಣಿ ಘಟಕ ಸ್ಥಾಪಿಸಲಿರುವ ಅದಾನಿ ಡಿಫೆನ್ಸ್: 2,500 ಕೋಟಿ ಹೂಡಿಕೆ, 5,000 ಉದ್ಯೋಗ ಸೃಷ್ಟಿ
ಅದಾನಿ ಡಿಫೆನ್ಸ್ ಅಂಡ್ ಏರೋಸ್ಪೇಸ್ ಸಂಸ್ಥೆಯು ಭಾನುವಾರ ಮಧ್ಯಪ್ರದೇಶದ ಶಿವಪುರಿಯಲ್ಲಿ ದಕ್ಷಿಣ ಏಷ್ಯಾದ ಅತಿ ದೊಡ್ಡ ಖಾಸಗಿ ವಲಯದ ಸಂಯೋಜಿತ ಕ್ಷಿಪಣಿ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿದೆ. 2,500 ಕೋಟಿ ರೂಪಾಯಿ ವೆಚ್ಚದ ಈ ಬೃಹತ್ ಯೋಜನೆ ಇಲಾಖೆಯು ಸುಮಾರು 5,000 ನೇರ ಮತ್ತು ಪರೋಕ್ಷ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಇದರೊಂದಿಗೆ ಭಾರತದ ಸ್ವದೇಶಿ ರಕ್ಷಣಾ ಉತ್ಪಾದನಾ ಸಾಮರ್ಥ್ಯವನ್ನು ಇದು ಮತ್ತಷ್ಟು ಬಲಪಡಿಸಲಿದೆ.
ಭೂಮಿ ಪೂಜೆ ಸಮಾರಂಭದಲ್ಲಿ ಮಾತನಾಡಿದ ಜೀತ್ ಅದಾನಿ ಅವರು, ಈ ಮುಂಬರುವ ಘಟಕವು ದಕ್ಷಿಣ ಏಷ್ಯಾದಲ್ಲೇ ಮೊದಲ ಖಾಸಗಿ ವಲಯದ ಅದಾನಿ ಡಿಫೆನ್ಸ್ ಕ್ಷಿಪಣಿ ಘಟಕ ಆಗಿರಲಿದ್ದು, ಕಚ್ಚಾ ವಸ್ತುಗಳಿಂದ ಹಿಡಿದು ಸಿದ್ಧ ರೂಪದ ಕ್ಷಿಪಣಿ ವ್ಯವಸ್ಥೆಗಳವರೆಗಿನ ಸಂಪೂರ್ಣ ಉತ್ಪಾದನಾ ಸರಪಳಿಯನ್ನು ಒಂದೇ ಸೂರಿನಡಿ ತರಲಿದೆ ಎಂದು ಹೇಳಿದರು. ಈ ಯೋಜನೆಯು ಮಧ್ಯಮ ಮತ್ತು ದೂರಗಾಮಿ ಕ್ಷಿಪಣಿ ವ್ಯವಸ್ಥೆಗಳನ್ನು ತಯಾರಿಸಲಿದ್ದು, ರಕ್ಷಣಾ ಸಾಧನಗಳಿಗಾಗಿ ಭಾರತವು ಇತರ ದೇಶಗಳ ಮೇಲಿನ ಅವಲಂಬನೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.

ಈ ಯೋಜನೆಯು ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದು 50 ಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಸಂಯೋಜಿಸುವ ಮೂಲಕ ವಿಶೇಷ ರಕ್ಷಣಾ ಪೂರೈಕೆ ಸರಪಳಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
ಮಧ್ಯಪ್ರದೇಶದಲ್ಲಿ ಅದಾನಿ ಸಮೂಹದ ಬೃಹತ್ ಹೂಡಿಕೆ
ಮಧ್ಯಪ್ರದೇಶದಲ್ಲಿ ಅದಾನಿ ಸಮೂಹದ ಬೆಳೆಯುತ್ತಿರುವ ಉಪಸ್ಥಿತಿಯನ್ನು ಎತ್ತಿ ತೋರಿಸಿದ ಜೀತ್ ಅದಾನಿ, ಕಳೆದ ವರ್ಷ ಭೋಪಾಲ್‌ನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಶೃಂಗಸಭೆಯಲ್ಲಿ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಅವರು ರಾಜ್ಯದಲ್ಲಿ 1.10 ಲಕ್ಷ ರೂ. ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದರು ಎಂದು ನೆನಪಿಸಿಕೊಂಡರು. ಈ ಹೂಡಿಕೆಗಳು ಹೈಡ್ರೋ ಪಂಪ್ಡ್ ಸ್ಟೋರೇಜ್, ಸಿಮೆಂಟ್, ಗಣಿಗಾರಿಕೆ, ಸ್ಮಾರ್ಟ್ ಮೀಟರ್‌ಗಳು ಮತ್ತು ಉಷ್ಣ ಇಂಧನ ವಲಯಗಳಲ್ಲಿ ಹರಡಿಕೊಂಡಿದ್ದು, 2030 ರ ವೇಳೆಗೆ 1.2 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ.
ಕಂಪನಿಯು ಈಗಾಗಲೇ ಕಟ್ನಿ ಜಿಲ್ಲೆಯ ಅಮೇಥಾ ಮತ್ತು ಕೈಮೋರ್ ಸಿಮೆಂಟ್ ಪ್ಲಾಂಟ್‌ಗಳಲ್ಲಿ 4,000 ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಮಾಡಿದೆ. ಅದಾನಿ ಪವರ್ ಪ್ರಸ್ತುತ ಮಧ್ಯಪ್ರದೇಶಕ್ಕೆ 1,200 ಮೆಗಾವ್ಯಾಟ್ ವಿದ್ಯುತ್ ಪೂರೈಸುತ್ತಿದ್ದು, ಹೆಚ್ಚುವರಿ 5,600 ಮೆಗಾವ್ಯಾಟ್ ಸಾಮರ್ಥ್ಯದ ಘಟಕಗಳು ಅಭಿವೃದ್ಧಿ ಹಂತದಲ್ಲಿವೆ. ಕಂಪನಿಯು ಲಹೋರಿ, ಧಾರ್, ರತ್ಲಾಮ್ ಮತ್ತು ಉಜ್ಜಯಿನಿಗಳಲ್ಲಿ ಪವನ ಶಕ್ತಿ ಯೋಜನೆಗಳನ್ನು ಪ್ರಾರಂಭಿಸಿದೆ. ಇತ್ತೀಚೆಗೆ ಗುಣಾದಲ್ಲಿ ಪ್ರಾರಂಭಿಸಲಾದ 1,060 ಕೋಟಿ ರೂಪಾಯಿಯ ಸಿಮೆಂಟ್ ಯೋಜನೆಯು ಆ ಜಿಲ್ಲೆಯ ಇತಿಹಾಸದಲ್ಲೇ ಅತಿ ದೊಡ್ಡ ಕೈಗಾರಿಕಾ ಹೂಡಿಕೆಯಾಗಿದೆ.
ಭಾರತದ ರಕ್ಷಣಾ ಸ್ವಾವಲಂಬನೆಗೆ ದೊಡ್ಡ ಉತ್ತೇಜನ
ಸ್ವದೇಶಿ ರಕ್ಷಣಾ ಉತ್ಪಾದನೆಯ ಮಹತ್ವವನ್ನು ಒತ್ತಿ ಹೇಳಿದ ಜೀತ್ ಅದಾನಿ, ಈ ಉಪಕ್ರಮವು ಪ್ರಧಾನಿ ನರೇಂದ್ರ ಮೋದಿ ಅವರ 'ಆತ್ಮನಿರ್ಭರ ಭಾರತ'ದ ದೃಷ್ಟಿಕೋನಕ್ಕೆ ಅನುಗುಣವಾಗಿದೆ ಎಂದರು. ದೇಶೀಯ ರಕ್ಷಣಾ ಉತ್ಪಾದನೆಯನ್ನು ಬಲಪಡಿಸಲು ಮತ್ತು ಆಮದು ಅವಲಂಬನೆಯನ್ನು ಕಡಿಮೆ ಮಾಡಲು ಅದಾನಿ ಡಿಫೆನ್ಸ್ ಸಂಸ್ಥೆಯು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮತ್ತು ಭಾರತೀಯ ಸಶಸ್ತ್ರ ಪಡೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಗ್ವಾಲಿಯರ್‌ನಲ್ಲಿರುವ ಕಂಪನಿಯ ರಕ್ಷಣಾ ಉತ್ಪಾದನಾ ಘಟಕವು ಈಗಾಗಲೇ ಲೈಟ್ ಮೆಷಿನ್ ಗನ್‌ಗಳು, ಅಸಾಲ್ಟ್ ರೈಫಲ್‌ಗಳು ಮತ್ತು ಕಾರ್ಬೈನ್‌ಗಳನ್ನು ಉತ್ಪಾದಿಸುತ್ತಿದೆ. ಕಂಪನಿಯು ನಿಗದಿತ ಸಮಯಕ್ಕಿಂತ 11 ತಿಂಗಳು ಮುಂಚಿತವಾಗಿಯೇ ಭಾರತೀಯ ಸಶಸ್ತ್ರ ಪಡೆಗಳಿಗೆ 2,000 ಲೈಟ್ ಮೆಷಿನ್ ಗನ್‌ಗಳನ್ನು ತಲುಪಿಸಿದೆ. ಶಿವಪುರಿಯ ಕ್ಷಿಪಣಿ ಘಟಕವು ಗ್ವಾಲಿಯರ್ ರಕ್ಷಣಾ ಸಂಕೀರ್ಣಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲಿದ್ದು, ಈ ಎರಡೂ ಘಟಕಗಳು ಮಧ್ಯಪ್ರದೇಶದಲ್ಲಿ ರಕ್ಷಣಾ ನಾವೀನ್ಯತೆಯ ಅವಳಿ ಕೇಂದ್ರಗಳಾಗಿ ಹೊರಹೊಮ್ಮಲಿವೆ. ಶಂಕುಸ್ಥಾಪನೆ ಸಮಾರಂಭದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ರಾಜ್ಯ ಇಂಧನ ಸಚಿವ ಪ್ರದ್ಯುಮ್ನ ಸಿಂಗ್ ತೋಮರ್ ಉಪಸ್ಥಿತರಿದ್ದರು.












Click it and Unblock the Notifications