Heavy Rain: ಕರ್ನಾಟಕದಿಂದ ಪುಣೆ-ಮುಂಬೈ ಹೆದ್ದಾರಿಯಲ್ಲಿ ಸಂಚರಿಸುವವರೇ ಗಮನಿಸಿ; ಈ ಮಾಹಿತಿ ಗೊತ್ತಿರಲಿ
Pune-Mumbai Expressway: ದೇಶದ ಬಹುತೇಕ ಭಾಗಗಲ್ಲಿ ಮುಂಗಾರು ಚುರುಕು ಪಡೆದಿದೆ. ಕೆಲವೆಡೆ ಭಾರಿ ಮಳೆಯಿಂದಾಗಿ ಅವಾಂತರಗಳೇ ಸೃಷ್ಟಿಯಾಗಿವೆ. ಇದೀಗ ಮಹಾರಾಷ್ಟ್ರದಲ್ಲೂ ಕೂಡ ವರುಣನ ಆರ್ಭಟ ಮುಂದುವರೆದಿದ್ದು, ಈ ಹಿನ್ನೆಲೆ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹಾಗಾದ್ರೆ ಕರ್ನಾಟಕದಿಂದ ಈ ಮಾರ್ಗದಲ್ಲಿ ಸಂಚರಿಸುವವರು ಗಮನಿಸಲೇಬೇಕಾದ ಮಹತ್ವದ ಮಾಹಿತಿ ಇಲ್ಲಿದೆ ನೋಡಿ.
ಮಹಾರಾಷ್ಟ್ರದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಪ್ರವಾಹ ಹಾಗೂ ಭೂಕುಸಿತದ ಹಿನ್ನೆಲೆಯಲ್ಲಿ ಮುಂಬೈ-ಪುಣೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್ ಆಗಿವೆ. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ದಾಖಲೆ ಪ್ರಮಾಣದ ಭಾರೀ ಮಳೆಯಿಂದಾಗಿ ಮುಂಬೈ ಮತ್ತು ಪುಣೆ ನಡುವಿನ ರಸ್ತೆ ಸಂಪರ್ಕ ಸಂಪೂರ್ಣವಾಗಿ ಬಂದ್ ಆಗಿದೆ.

ವಾಹನ ಸಂಚಾರ ತಾತ್ಕಾಲಿಕ ಸ್ಥಗಿತ
ಪ್ರವಾಹ, ಭೂಕುಸಿತ ಮತ್ತು ಹೆದ್ದಾರಿಗಳಿಗೆ ಆಗಿರುವ ಹಾನಿಯಿಂದಾಗಿ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇ ಹಾಗೂ ಹಳೆಯ ಪುಣೆ-ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಆದೇಶದವರೆಗೆ ಎರಡೂ ನಗರಗಳ ನಡುವೆ ಯಾವುದೇ ಪ್ರಯಾಣ ಕೈಗೊಳ್ಳದಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಪರ್ಯಾಯ ರಸ್ತೆಗಳೂ ಕೂಡ ಜಲಾವೃತ
ಮಾವಲ್ ಮತ್ತು ತಮ್ಹಿಣಿ ಘಾಟ್ ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ಪುಣೆ ಹಾಗೂ ಮುಂಬೈ ನಡುವಿನ ಪರ್ಯಾಯ ರಸ್ತೆಗಳೂ ಕೂಡ ಜಲಾವೃತಗೊಂಡಿವೆ. ಎಕ್ಸ್‌ಪ್ರೆಸ್‌ವೇಯ ಕನೆಕ್ಟಿಂಗ್ ಲಿಂಕ್ ಹಾಗೂ ಇತ್ತೀಚೆಗಷ್ಟೇ ಆರಂಭವಾಗಿದ್ದ ರಸ್ತೆಯ ಮೇಲೆ ಭಾರಿ ಗಾತ್ರದ ಕಾಂಕ್ರೀಟ್ ಕಂಬವೊಂದು ಉರುಳಿ ಬಿದ್ದ ಹಿನ್ನೆಲೆ ಈ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಮತ್ತೊಂದೆಡೆ ಹಳೆಯ ರಾಷ್ಟ್ರೀಯ ಹೆದ್ದಾರಿಯ ಹಲವು ಕಡೆಗಳಲ್ಲಿ ಪ್ರವಾಹದ ನೀರು ರಸ್ತೆಯ ಮೇಲೆ ನದಿಯಂತೆ ಹರಿಯುತ್ತಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.
ಕೇವಲ ಎರಡು ತಿಂಗಳ ಹಿಂದೆಯಷ್ಟೇ ಸಾರ್ವಜನಿಕ ಬಳಕೆಗೆ ಮುಕ್ತವಾಗಿದ್ದ 13 ಕಿಲೋ ಮೀಟರ್ ಉದ್ದದ ಮಿಸ್ಸಿಂಗ್ ಲಿಂಕ್ ಯೋಜನೆಯ ಸುರಂಗ-2ರ ನಿರ್ಗಮನ ದ್ವಾರದ ಬಳಿ ಸೋಮವಾರ ಮುಂಜಾನೆ ಭಾರಿ ಪ್ರಮಾಣದ ಭೂಕುಸಿತ ಸಂಭವಿಸಿದೆ. ಸಹ್ಯಾದ್ರಿ ಪರ್ವತ ಶ್ರೇಣಿಯನ್ನು ದಾಟುವ ಈ ಬೈಪಾಸ್ ಮಾರ್ಗವು ಮುಂಬೈ-ಪುಣೆ ನಡುವಿನ ಪ್ರಯಾಣದ ಸಮಯವನ್ನು 30 ನಿಮಿಷಗಳಷ್ಟು ಕಡಿಮೆಗೊಳಿಸುತ್ತಿತ್ತು.
ಬೆಳಗ್ಗೆ 4 ಗಂಟೆಯಿಂದಲೇ ವಾಹನ ಸಂಚಾರ ಬಂದ್
ಆದರೆ ಈಗ ಇಲ್ಲಿ ಮಣ್ಣು ಕುಸಿದಿರುವ ಕಾರಣ ಬೆಳಗ್ಗೆ 4 ಗಂಟೆಯಿಂದಲೇ ಸಂಚಾರವನ್ನು ನಿರ್ಬಂಧಿಸಲಾಗಿದೆ. ವಾಹನಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ತಿಳಿಸಿದೆ. ಖಂಡಾಲಾ ಘಾಟ್ ವ್ಯಾಪ್ತಿಯಲ್ಲೂ ರಸ್ತೆಗಳ ಮೇಲೆ ನೀರು ನಿಂತಿರುವುದು ಮತ್ತು ಭೂಕುಸಿತಗಳು ವರದಿಯಾಗಿವೆ.
ಪೊಲೀಸರಿಂದ ಮಹತ್ವದ ಸಂದೇಶ
ಪ್ರಮುಖ ಹೆದ್ದಾರಿಗಳು ಬಂದ್ ಆದ ಕಾರಣ ಲೋಣಾವಳಾ ನಗರದ ಮಾರ್ಗವಾಗಿ ವಾಹನಗಳನ್ನು ತಿರುಗಿಸಲಾಗಿದೆ. ಆದರೂ ಅಲ್ಲಿ ಬೆಳಗ್ಗೆಯಿಂದಲೇ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ. ಸಾಂಗ್ಲಿಯಿಂದ ಮುಂಬೈಗೆ ಹೊರಟಿದ್ದ ಸವಾರರೊಬ್ಬರು ತಾವು ಮುಂಜಾನೆ 4 ಗಂಟೆಯಿಂದಲೂ ಲೋಣಾವಳಾ ಎಕ್ಸ್‌ಪ್ರೆಸ್‌ವೇಯಲ್ಲಿ ಸಿಲುಕಿಕೊಂಡಿರುವುದಾಗಿ ಅಳಲು ತೋಡಿಕೊಂಡಿದ್ದಾರೆ. ಪರಿಸ್ಥಿತಿಯನ್ನು ಹೆದ್ದಾರಿ ಸಂಚಾರ ಪೊಲೀಸರು ನಿರಂತರವಾಗಿ ಪರಿಶೀಲಿಸುತ್ತಿದ್ದು, ಅತ್ಯಗತ್ಯ ಇದ್ದರೆ ಮಾತ್ರ ಹೊರಬರಲು ಸೂಚಿಸಿದ್ದಾರೆ.
ಧಾರಾಕಾರ ಮಳೆಯ ಮುನ್ಸೂಚನೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಪುಣೆ ಜಿಲ್ಲಾಡಳಿತವು ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಸೋಮವಾರ ರಜೆ ಘೋಷಣೆ ಮಾಡಿದೆ. ಮತ್ತೊಂದೆಡೆ ಲೋಹಗಡ್ ಕೋಟೆಯ ಸಮೀಪ ಇರುವ ಪಾಟಣ ಗ್ರಾಮದಲ್ಲಿ ಭೀಕರ ಭೂಕುಸಿತ ಉಂಟಾಗಿದ್ದು, ಮಣ್ಣಿನ ಅಡಿಯಲ್ಲಿ ಒಂದು ಇಡೀ ಕುಟುಂಬವೇ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾವಿಸಿರುವ ರಕ್ಷಣಾ ಸಿಬ್ಬಂದಿ ಮತ್ತು ಪೊಲೀಸರು ತಕ್ಷಣವೇ ಕಾರ್ಯಾಚರಣೆ ಆರಂಭಿಸಿದ್ದು, ಜನರನ್ನು ರಕ್ಷಿಸಲು ಹರಸಾಹಸಪಟ್ಟರು ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಇಲ್ಲಿ ಎಕ್ಸ್‌ಪ್ರೆಸ್ ವೇ ಹಾಗೂ ಹೆದ್ದಾರಿ ಬಂದ್‌ನಿಂದಾಗಿ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications