ಪರ್ಪ್ಲೆಕ್ಸಿಟಿ CEO ಅರವಿಂದ್ ಶ್ರೀನಿವಾಸ್ ಪ್ರಕಾರ ಅಮೆರಿಕವೇ ಎಲ್ಲದ್ರಲ್ಲೂ ನಂಬರ್ 1 ಯಾಕೆ ಗೊತ್ತಾ?

ಅಮೆರಿಕವನ್ನು ವಿಶ್ವದ ಸೂಪರ್ ಪವರ್ ಎಂದು ಕರೆಯಲಾಗುತ್ತದೆ. ಕೇವಲ ಸೇನೆ ಅಥವಾ ಆರ್ಥಿಕತೆಯಲ್ಲಿ ಮಾತ್ರವಲ್ಲ, ಹೊಸ ಆವಿಷ್ಕಾರಗಳಲ್ಲಿಯೂ ಅಮೆರಿಕ ಸದಾ ಮುಂದು. ವಿಶ್ವದ ಅತಿದೊಡ್ಡ ಟೆಕ್ ಕಂಪನಿಗಳಿಗೆ ಸಡ್ಡು ಹೊಡೆಯುವಂತಹ ಸ್ಟಾರ್ಟ್‌ಅಪ್‌ಗಳು ಅಲ್ಲಿಯೇ ಹುಟ್ಟಿಕೊಳ್ಳುವುದು ಯಾಕೆ? ಈ ಪ್ರಶ್ನೆಗೆ ಭಾರತೀಯ ಮೂಲದ, 'ಪರ್ಪ್ಲೆಕ್ಸಿಟಿ' ಸ್ಟಾರ್ಟ್‌ಅಪ್‌ನ ಸಿಇಒ ಅರವಿಂದ್ ಶ್ರೀನಿವಾಸ್ ಅತ್ಯಂತ ಸ್ಪಷ್ಟವಾದ ಉತ್ತರ ನೀಡಿದ್ದಾರೆ.

ಜನಪ್ರಿಯ 'ದ ಜೋ ರೋಗನ್ ಎಕ್ಸ್‌ಪೀರಿಯೆನ್ಸ್' ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು, ಅಮೆರಿಕದ 'ರಿಸ್ಕ್' ತೆಗೆದುಕೊಳ್ಳುವ ಸಂಸ್ಕೃತಿ ಹಾಗೂ ಅಲ್ಲಿನ ಮುಕ್ತ ವಾತಾವರಣವೇ ಅದರ ಯಶಸ್ಸಿನ ಗುಟ್ಟು ಎಂದು ಬಣ್ಣಿಸಿದ್ದಾರೆ.

Perplexity CEO

ಬಂಡವಾಳ ಮತ್ತು ಸ್ಟಾರ್ಟ್‌ಅಪ್ ಇಕೋಸಿಸ್ಟಮ್ ಮಾತ್ರವಲ್ಲದೆ, ಹೊಸ ಐಡಿಯಾಗಳನ್ನು ಬೆಂಬಲಿಸುವ ಅಲ್ಲಿನ ಜನರ ಗುಣ ಅಮೆರಿಕವನ್ನು ಇತರ ದೇಶಗಳಿಗಿಂತ ಭಿನ್ನವಾಗಿಸಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಪಾಡ್‌ಕಾಸ್ಟ್‌ನಲ್ಲಿ ನಿರೂಪಕ ಜೋ ರೋಗನ್ ಅವರು 'ಅಮೆರಿಕನ್ ಡ್ರೀಮ್' ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ 32 ವರ್ಷದ ಅರವಿಂದ್, "ಅಮೆರಿಕದ ಹೊರಗಿದ್ದಾಗ ನನಗೆ ಅಮೆರಿಕನ್ ಡ್ರೀಮ್ ಎಂದರೆ, ನಿಮ್ಮ ಬಳಿ ಒಂದು ಹೊಸ ಐಡಿಯಾ ಇದ್ದರೆ, ಅದನ್ನು ಕೇಳಲು ಮತ್ತು ಪ್ರೋತ್ಸಾಹಿಸಲು ಅಲ್ಲಿ ಜನರಿದ್ದಾರೆ ಎಂಬುವುದಾಗಿತ್ತು. ಇಲ್ಲಿನ ರಿಸ್ಕ್ ತೆಗೆದುಕೊಳ್ಳುವ ಸಂಸ್ಕೃತಿ ನಿಜಕ್ಕೂ ಅದ್ಭುತವಾಗಿದೆ," ಎಂದು ಹೇಳಿದ್ದಾರೆ.

ಇತರ ದೇಶಗಳಲ್ಲಿ ಹೆಚ್ಚಾಗಿ ಮೇಲಧಿಕಾರಿಗಳು ಅಥವಾ ಅಧಿಕಾರದಲ್ಲಿರುವವರ ಮಾತಿಗೆ ತಲೆಬಾಗಬೇಕಾದ ಅನಿವಾರ್ಯತೆ ಇರುತ್ತದೆ. ಆದರೆ, ಅಮೆರಿಕದಲ್ಲಿ ನಿಮ್ಮ ಆಲೋಚನೆಗಳು ಪ್ರಸ್ತುತ ವ್ಯವಸ್ಥೆಯನ್ನು ಪ್ರಶ್ನಿಸುವಂತಿದ್ದರೂ, ಅದನ್ನು ಕಾರ್ಯಗತಗೊಳಿಸಲು ಬೆಂಬಲ ಸಿಗುತ್ತದೆ. ಇದುವೇ ಹೊಸ ಆವಿಷ್ಕಾರಗಳನ್ನು ಹುಟ್ಟು ಹಾಕುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ದೈತ್ಯ ಕಂಪನಿ ಗೂಗಲ್‌ಗೆ ಪೈಪೋಟಿ ನೀಡುವ ಅವಕಾಶ

ಹೊಸಬರು ಕೂಡ ಜಾಗತಿಕ ಮಟ್ಟದ ದೊಡ್ಡ ಕಂಪನಿಗಳ ಜೊತೆ ಹೇಗೆ ಪೈಪೋಟಿ ನಡೆಸಬಹುದು ಎಂಬುದನ್ನು ಅರವಿಂದ್ ವಿವರಿಸಿದರು. "ನಾನು ಅಮೆರಿಕಕ್ಕೆ ಬಂದಾಗ ಗೂಗಲ್ ಎಲ್ಲರೂ ಇಷ್ಟಪಡುವ ನಂಬರ್ ಒನ್ ಕಂಪನಿಯಾಗಿತ್ತು. ಆದರೆ, ಅದೇ ದೇಶದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಹೊಸ ಐಡಿಯಾದಿಂದ ದೊಡ್ಡ ಕಂಪನಿಗೇ ಸವಾಲು ಹಾಕುವಂತಹ ಸ್ಟಾರ್ಟ್‌ಅಪ್ ಕಟ್ಟಬಹುದು. ಇದು ಅಮೆರಿಕ ನೀಡುವ ಅತಿ ದೊಡ್ಡ ಶಕ್ತಿ," ಎಂದು ಅವರು ಹೇಳಿದರು.

ನವೋದ್ಯಮಗಳ ಪಾಲಿಗೆ ಅಮೆರಿಕವೇ ನಂಬರ್ 1 ಯಾಕೆ?

ತಮ್ಮ ಶೈಕ್ಷಣಿಕ ಹಾಗೂ ವೃತ್ತಿಜೀವನದ ಅನುಭವಗಳನ್ನು ಮೆಲುಕು ಹಾಕಿದ ಅರವಿಂದ್, ಅಲ್ಲಿನ ಜನರ ಪ್ರಾಮಾಣಿಕ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡಿದರು. "ಜನರು ನಿಮ್ಮ ಐಡಿಯಾಗಳ ಬಗ್ಗೆ ಅತ್ಯಂತ ಪ್ರಾಮಾಣಿಕವಾಗಿ ಫೀಡ್‌ಬ್ಯಾಕ್ ನೀಡುತ್ತಾರೆ, ಆದರೆ ಹೊಸತೇನನ್ನಾದರೂ ಮಾಡುವುದನ್ನು ಅವರು ತಡೆಯುವುದಿಲ್ಲ. ಇದು ನಿಜಕ್ಕೂ ಮುಕ್ತವಾದ ಮತ್ತು ಅದ್ಭುತವಾದ ಭಾವನೆ," ಎಂದರು.

ಭಾರತವೂ ಸೇರಿದಂತೆ ಇತರ ದೇಶಗಳಲ್ಲಿ ಇಂತಹ ವಾತಾವರಣವಿಲ್ಲವೇ ಎಂಬ ರೋಗನ್ ಪ್ರಶ್ನೆಗೆ ಉತ್ತರಿಸಿದ ಅವರು, "ಬೇರೆ ಕಡೆ ಈ ವಾತಾವರಣವೇ ಇಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ಆದರೆ, ಅಮೆರಿಕದಲ್ಲಿರುವಷ್ಟು ಪ್ರೋತ್ಸಾಹ ಬೇರೆಡೆ ಸಿಗುವುದಿಲ್ಲ. ಇಲ್ಲಿನ ಪ್ರೋತ್ಸಾಹದಾಯಕ ವ್ಯವಸ್ಥೆ ಮತ್ತು ಎಷ್ಟೇ ಹುಚ್ಚು ಎನಿಸುವ ಐಡಿಯಾಗಳನ್ನು ಗಂಭೀರವಾಗಿ ಪರಿಗಣಿಸುವ ಗುಣವೇ ಅಮೆರಿಕವನ್ನು ಇಂದಿಗೂ ವಿಶ್ವದ ಎತ್ತರದ ಸ್ಥಾನದಲ್ಲಿರಿಸಿದೆ" ಎಂದು ಅವರು ಸ್ಪಷ್ಟಪಡಿಸಿದರು.

ಒಟ್ಟಾರೆಯಾಗಿ, ಅಮೆರಿಕದ ಯಶಸ್ಸು ಅಲ್ಲಿನ ಬಂಡವಾಳದಲ್ಲಿಲ್ಲ, ಬದಲಾಗಿ ಹೊಸತನ್ನು ಒಪ್ಪಿಕೊಳ್ಳುವ ಅಲ್ಲಿನ ಸಂಸ್ಕೃತಿಯಲ್ಲಿದೆ ಎಂಬುದನ್ನು ಅರವಿಂದ್ ತಮ್ಮ ಅನುಭವದ ಮೂಲಕ ತೆರೆದಿಟ್ಟಿದ್ದಾರೆ.

ಪರ್ಪ್ಲೆಕ್ಸಿಟಿ ಸಿಇಒ ಅರವಿಂದ್ ಶ್ರೀನಿವಾಸ್ ಹಿನ್ನೆಲೆ

ಪರ್ಪ್ಲೆಕ್ಸಿಟಿ (Perplexity) ಸಿಇಒ ಅರವಿಂದ್ ಶ್ರೀನಿವಾಸ್ ಭಾರತದಲ್ಲೇ ಬೆಳೆದು, 2017ರಲ್ಲಿ ಐಐಟಿ ಮದ್ರಾಸ್‌ನಿಂದ ಪದವಿ ಪಡೆದರು. ನಂತರ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ (ಬರ್ಕ್ಲಿ) ಸೇರಿದ ಅವರು, 2022ರಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಆಧಾರಿತ ಸರ್ಚ್ ಎಂಜಿನ್ 'ಪರ್ಪ್ಲೆಕ್ಸಿಟಿ' ಆರಂಭಿಸಿದರು. ಕೇವಲ ಕೆಲವೇ ವರ್ಷಗಳಲ್ಲಿ ಈ ಕಂಪನಿ ಭಾರಿ ಮಟ್ಟದಲ್ಲಿ ಬೆಳೆದಿದ್ದು, 2025ರ ಸೆಪ್ಟೆಂಬರ್ ವೇಳೆಗೆ ಇದರ ಮೌಲ್ಯ ಬರೋಬ್ಬರಿ 20 ಬಿಲಿಯನ್ ಡಾಲರ್‌ಗೆ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+