Viral Video: ಮನುಷ್ಯತ್ವ ಸತ್ತುಹೋಯ್ತಾ? ಬೆಂಗಳೂರಲ್ಲಿ ಸೈರನ್ ಹಾಕಿದ್ರೂ ಆ್ಯಂಬುಲೆನ್ಸ್‌ಗೆ ದಾರಿ ಬಿಡದ ವೀಲಿಂಗ್ ಪುಂಡರು
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವೀಲಿಂಗ್ ಪುಂಡರ ಹುಚ್ಚಾಟ ದಿನದಿಂದ ದಿನಕ್ಕೆ ಮಿತಿಮೀರುತ್ತಿದೆ. ಪ್ರಾಣಾಪಾಯದಲ್ಲಿದ್ದ ರೋಗಿಯನ್ನು ಹೊತ್ತು ಸಾಗುತ್ತಿದ್ದ ಆ್ಯಂಬುಲೆನ್ಸ್‌ಗೆ ವೀಲಿಂಗ್ ಪುಂಡರ ಗ್ಯಾಂಗ್ ಅಡ್ಡಿಪಡಿಸಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಜೀವ ಉಳಿಸುವ ತುರ್ತು ವಾಹನದ ಸೈರನ್ ಕಿರುಚುತ್ತಿದ್ದರೂ ಕಿವಿಗೆ ಹಾಕಿಕೊಳ್ಳದ ಕಿರಾತಕರು, ರಸ್ತೆಯಲ್ಲೇ ಅಪಾಯಕಾರಿ ಸ್ಟಂಟ್‌ಗಳನ್ನು ಪ್ರದರ್ಶಿಸಿ ವಿಕೃತಿ ಮೆರೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಮಧ್ಯರಾತ್ರಿ ನಡೆದಿದ್ದೇನು?
ವೈರಲ್ ವಿಡಿಯೋದಲ್ಲಿ ತಿಳಿಸಿದಂತೆ ಜುಲೈ 4ರಂದು ತಡರಾತ್ರಿ 2:30ರ ವೇಳೆಗೆ ನಗರದ ಗೋರಗುಂಟೆಪಾಳ್ಯದಿಂದ ಯಶವಂತಪುರ ನಡುವಿನ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ. ತೀವ್ರ ಅಸ್ವಸ್ಥರಾಗಿದ್ದ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಚಾಲಕ ಸೈರನ್ ಹಾಕಿಕೊಂಡು ವೇಗವಾಗಿ ಹೋಗಲು ಯತ್ನಿಸುತ್ತಿದ್ದ. ಆದರೆ ಅದೇ ವೇಳೆ ರಸ್ತೆಗಿಳಿದಿದ್ದ ಬೈಕ್ ಸವಾರರ ಗುಂಪೊಂದು ಆ್ಯಂಬುಲೆನ್ಸ್‌ಗೆ ದಾರಿ ಬಿಡದೇ ಇಡೀ ರಸ್ತೆಯನ್ನು ಬ್ಲಾಕ್ ಮಾಡಿದೆ. ಅಷ್ಟೇ ಅಲ್ಲದೆ, ಚಲಿಸುತ್ತಿದ್ದ ಆ್ಯಂಬುಲೆನ್ಸ್ ಮುಂದೆಯೇ ವೀಲಿಂಗ್ ಮಾಡಿ ಸಾಹಸ ಪ್ರದರ್ಶಿಸಿದ್ದಾರೆ.

ಸಿಸಿಟಿವಿ ಜಾಲಾಡುತ್ತಿರುವ ಖಾಕಿ ಪಡೆ
ವೈರಲ್ ವಿಡಿಯೋ ಸಂಬಂಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಬೆಂಗಳೂರು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆ ನಡೆದ ಸ್ಥಳ ಹಾಗೂ ಸುತ್ತಮುತ್ತಲಿನ ರಸ್ತೆಗಳ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಪುಂಡ ಬೈಕ್ ಸವಾರರ ಪತ್ತೆಗೆ ಜಾಲ ಬೀಸಿದ್ದಾರೆ. ಸಿಸಿಟಿವಿ ಆಧಾರದ ಮೇಲೆ ಬೈಕ್ ನಂಬರ್‌ಗಳನ್ನು ಪತ್ತೆ ಹಚ್ಚಿ, ಆರೋಪಿಗಳ ವಿರುದ್ಧ ಕಠಿಣ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತುರ್ತು ಸೇವಾ ವಾಹನಗಳಿಗೆ ದಾರಿ ಬಿಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಆದರೆ, ಕೇವಲ ಸೋಶಿಯಲ್ ಮೀಡಿಯಾ ರೀಲ್ಸ್ ಹಾಗೂ ಮಜಾ ಮಾಡಲು ಆ್ಯಂಬುಲೆನ್ಸ್ ತಡೆದು ಜೀವದ ಜೊತೆ ಆಟವಾಡಿದ ಈ ಬೈಕರ್ಸ್ ವಿರುದ್ಧ ನೆಟ್ಟಿಗರು ಕೆಂಡಕಾರುತ್ತಿದ್ದಾರೆ. "ಇಂತಹ ಪುಂಡರ ಲೈಸೆನ್ಸ್ ರದ್ದು ಮಾಡಿ, ಬೈಕ್‌ಗಳನ್ನು ಸೀಜ್ ಮಾಡುವುದಷ್ಟೇ ಅಲ್ಲ, ಇವರನ್ನು ಜೈಲಿಗಟ್ಟಬೇಕು" ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಆಂಬ್ಯುಲೆನ್ಸ್‌ಗೂ ಜಾಗ ಬಿಡದ ವೀಲಿಂಗ್ ಪುಂಡರು! @PriyankKharge ಅವರೇ, ದಿನವೆಲ್ಲಾ ಟ್ವಿಟರ್‌ನಲ್ಲಿ ಜ್ಞಾನ ಹಂಚುವ ನಿಮಗೆ ನಿಮ್ಮದೇ ಸರ್ಕಾರದ ಮೂಗಿನಡಿಯಲ್ಲಿ ಬೆಂಗಳೂರಿನ ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತುಹೋಗಿರೋದು ಕಾಣಿಸುತ್ತಿಲ್ಲವೇ? ಸಿಲಿಕಾನ್ ಸಿಟಿಯಲ್ಲಿ ಸಾರ್ವಜನಿಕರ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದ್ದರೂ ನಿಮ್ಮ ಈ ದಿವ್ಯ… pic.twitter.com/l3g8ux3g33
— BJP Karnataka (@BJP4Karnataka) July 6, 2026
2 ಬೈಕ್ ಸೀಜ್
ಆ್ಯಂಬುಲೆನ್ಸ್‌ಗೆ ಅಡ್ಡಿಪಡಿಸಿ ವೀಲಿಂಗ್ ಮಾಡಿದ್ದ ಪುಂಡ ಬೈಕ್ ಸವಾರರಿಗೆ ಬೆಂಗಳೂರು ಸಂಚಾರ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ಘಟನೆ ನಡೆದು ಕೆಲವೇ ಗಂಟೆಗಳಲ್ಲಿ ಅಲರ್ಟ್ ಆಗಿರುವ ಪೊಲೀಸರು, ಕೃತ್ಯಕ್ಕೆ ಬಳಸಿದ್ದ ಎರಡು ಬೈಕ್‌ಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರು ಈ ಬಗ್ಗೆ ಅಪ್‌ಡೇಟ್ ನೀಡಿದ್ದಾರೆ. "ಪ್ರಕರಣದ ತನಿಖೆ ಪ್ರಗತಿಯಲ್ಲಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಎರಡು ವಾಹನಗಳನ್ನು ಬೈಕ್ ಪತ್ತೆ ಹಚ್ಚಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ತರಾಟೆ
ರೋಗಿಯಿದ್ದ ಆ್ಯಂಬುಲೆನ್ಸ್ ತಡೆದು ಪುಂಡರು ವೀಲಿಂಗ್ ಮಾಡಿದ ಘಟನೆ ಈಗ ರಾಜ್ಯ ರಾಜಕೀಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ಟ್ವಿಟರ್ ಸಮರಕ್ಕೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿರುವ ಬಿಜೆಪಿ, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. "ಆಂಬ್ಯುಲೆನ್ಸ್‌ಗೂ ಜಾಗ ಬಿಡದ ವೀಲಿಂಗ್ ಪುಂಡರು! ಪ್ರಿಯಾಂಕ್ ಖರ್ಗೆ ಅವರೇ, ದಿನವೆಲ್ಲ ಟ್ವಿಟರ್‌ನಲ್ಲಿ ಜ್ಞಾನ ಹಂಚುವ ನಿಮಗೆ ನಿಮ್ಮದೇ ಸರ್ಕಾರದ ಮೂಗಿನಡಿಯಲ್ಲಿ ಬೆಂಗಳೂರಿನ ಕಾನೂನು ಸುವ್ಯವಸ್ಥೆ ಸಂಪೂರ್ಣ ಸತ್ತುಹೋಗಿರೋದು ಕಾಣಿಸುತ್ತಿಲ್ಲವೇ?" ಎಂದು ಬಿಜೆಪಿ ಪ್ರಶ್ನಿಸಿದೆ.
ರಾಜಧಾನಿಯಲ್ಲಿ ಸರಣಿ ವೀಲಿಂಗ್ ಘಟನೆಗಳು ನಡೆಯುತ್ತಿದ್ದರೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ಹೊರಹಾಕಿರುವ ಬಿಜೆಪಿ, "ಸಿಲಿಕಾನ್ ಸಿಟಿಯಲ್ಲಿ ಸಾರ್ವಜನಿಕರ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದ್ದರೂ ನಿಮ್ಮ ಈ ದಿವ್ಯ ಮೌನಕ್ಕೆ ಕಾರಣವೇನು? ಸೋಷಿಯಲ್ ಮೀಡಿಯಾದಲ್ಲಿ ದೊಡ್ಡದಾಗಿ ಮಾತನಾಡೋ ನೀವು, ಈ ಪುಂಡರ ಹುಚ್ಚಾಟಕ್ಕೆ ಬ್ರೇಕ್ ಹಾಕೋದು ಯಾವಾಗ?" ಎಂದು ತರಾಟೆಗೆ ತೆಗೆದುಕೊಂಡಿದೆ.












Click it and Unblock the Notifications