ಬಸ್ ನಿಲ್ದಾಣ ಮಾಡಲು ಹೊರಟಾಗ ಅಡ್ಡಿ ಮಾಡಿದ್ರು, ಅವ್ರು ಒಪ್ಪಿದ್ರೆ ಈಗಲೂ ನಾನು ರೆಡಿ: ಜಗ್ಗೇಶ್
ನಟ ನವರಸನಾಯಕ ಜಗ್ಗೇಶ್ ಅವರ ಹುಟ್ಟೂರಾದ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಪ್ರಮುಖ ಕೇಂದ್ರವಾದ ಮಾಯಸಂದ್ರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಮತ್ತು ಶೌಚಾಲಯವಿಲ್ಲದೆ ಪ್ರತಿದಿನ ಸಾವಿರಾರು ಪ್ರಯಾಣಿಕರು ಪಡುತ್ತಿರುವ ಗೋಳಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಾರ್ವಜನಿಕರ ಈ ಆಕ್ರೋಶದ ವಿಡಿಯೋಗೆ ಜಗ್ಗೇಶ್ ಅವರು ಪ್ರತಿಕ್ರಿಯಿಸಿದ್ದು, ಮಾಯಸಂದ್ರಕ್ಕೆ ಬಸ್ ನಿಲ್ದಾಣ ಬಾರದಿರಲು ಅಲ್ಲಿನ ಸ್ಥಳೀಯ ರಾಜಕೀಯ ಮತ್ತು ಗ್ರಾಮ ಪಂಚಾಯಿತಿಯ ಸ್ವಾರ್ಥವೇ ಕಾರಣ ಎಂಬ ಆಘಾತಕಾರಿ ಸತ್ಯ ಬಹಿರಂಗಪಡಿಸಿದ್ದಾರೆ.
2010ರಲ್ಲೇ ಆರಂಭವಾಗಬೇಕಿತ್ತು ಹೈಟೆಕ್ ಬಸ್ ನಿಲ್ದಾಣ
ಸಾರ್ವಜನಿಕರ ಪ್ರಶ್ನೆಗೆ ಸೋಷಿಯಲ್ ಮೀಡಿಯಾದಲ್ಲಿ ಉತ್ತರ ನೀಡಿರುವ ಜಗ್ಗೇಶ್, ತಾವು ಶಾಸಕರಾಗಿದ್ದ ಅವಧಿಯ ನೆನಪನ್ನು ಹಂಚಿಕೊಂಡಿದ್ದಾರೆ. "ಮಹನೀಯರೇ, ತುರುವೇಕೆರೆ ಮತ್ತು ಸಿ.ಎಸ್.ಪುರ ಬಸ್ ನಿಲ್ದಾಣಗಳನ್ನು 2010ರಲ್ಲಿ ಅಭಿವೃದ್ಧಿಪಡಿಸಿದ ಸಮಯದಲ್ಲಿಯೇ, ಮಾಯಸಂದ್ರ ಬಸ್ ನಿಲ್ದಾಣವನ್ನೂ ಸಹ ಅತ್ಯಂತ ಉತ್ತಮ ದರ್ಜೆಯಲ್ಲಿ ನಿರ್ಮಿಸುವ ಕಾರ್ಯ ಆರಂಭದ ಹಂತ ತಲುಪಿತ್ತು" ಎಂದು ಜಗ್ಗೇಶ್ ಇತಿಹಾಸದ ಪುಟಗಳನ್ನು ತೆರೆದಿದ್ದಾರೆ.

ಪಂಚಾಯಿತಿ 'ವರಮಾನ'ದ ಆಸೆಗೆ ಬಲಿಯಾಯ್ತು ಸಾರ್ವಜನಿಕರ ಹಿತ
ಅಷ್ಟೆಲ್ಲಾ ಸಿದ್ಧತೆಯಾಗಿದ್ದರೂ ಮಾಯಸಂದ್ರಕ್ಕೆ ಬಸ್ ನಿಲ್ದಾಣ ಯಾಕೆ ಸಿಗಲಿಲ್ಲ ಎಂಬ ಅಸಲಿ ಸೀಕ್ರೆಟ್ ಅನ್ನು ಜಗ್ಗೇಶ್ ಬಹಿರಂಗಪಡಿಸಿದ್ದಾರೆ. "ಆ ಬಸ್ ನಿಲ್ದಾಣದ ಜಾಗ ಮಾಯಸಂದ್ರ ಪಂಚಾಯಿತಿಗೆ ಸೇರಿದ್ದಾಗಿದೆ. ಅಲ್ಲಿರುವ ಅಂಗಡಿಗಳ ಬಾಡಿಗೆ ಪಂಚಾಯ್ತಿಗೆ ಹೋಗುತ್ತದೆ. ಒಂದು ವೇಳೆ ಅಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಿದರೆ, ತಮಗೆ ಬರುವ ಬಾಡಿಗೆ ವರಮಾನ ಕಡಿತವಾಗುತ್ತದೆ ಎಂಬ ಸ್ವಾರ್ಥದಿಂದ ಪಂಚಾಯ್ತಿಯವರೇ ಆ ಕಾರ್ಯಕ್ಕೆ ವಿಘ್ನ ಉಂಟು ಮಾಡಿದರು. ಇದರಿಂದ ತೀವ್ರ ಬೇಸರಗೊಂಡು ನೊಂದು ನಾನು ಅಂದು ಆ ಕಾರ್ಯವನ್ನು ಕೈಬಿಡಬೇಕಾಯಿತು" ಎಂದು ಜಗ್ಗೇಶ್ ಹೇಳಿದ್ದಾರೆ.
ಮಹನೀಯರೆ ತುರುವೇಕೆರೆ,cspura
— ನವರಸನಾಯಕ ಜಗ್ಗೇಶ್ (@Jaggesh2) July 6, 2026
ಬಸ್ ನಿಲ್ದಾಣ 2010ರಲ್ಲಿ ಮಾಡಿದ ಸಮಯದಲ್ಲಿ ಮಾಯಸಂದ್ರ ಬಸ್ ನಿಲ್ದಾಣಕ್ಕು ಉತ್ತಮ ದರ್ಜೆಯಲ್ಲಿ ಮಾಡುವ ಕಾರ್ಯ ಆರಂಭದ ಹಂತ ತಲುಪಿತ್ತು ಆದರೆ ಬಸ್ ನಿಲ್ದಾಣ ಮಾಯಸಂದ್ರ ಪಂಚಾಯ್ತಿಗೆ ಸೇರಿದ ಜಾಗ ಹಾಗು ಅಲ್ಲಿನ ಅಂಗಡಿಗಳ ಬಾಡಿಗೆ ಪಂಜಾಯ್ತಿಗೆ ಸೇರುತ್ತದೆ...ಬಸ್ ನಿಲ್ದಾಣ ಮಾಡಿದರೆ ಪಂಚಾಯ್ತಿಗೆ ವರಮಾನ ಕಡಿತ… https://t.co/cSoqN970Qw
ಈಗಲೂ ನಾನು ರೆಡಿ: ಪಂಚಾಯ್ತಿ ಒಪ್ಪಿಸಿ ಬನ್ನಿ ಎಂದ ಜಗ್ಗೇಶ್
ಕೇವಲ ಹಳೆಯ ಇತಿಹಾಸ ಹೇಳಿ ಜಗ್ಗೇಶ್ ಸುಮ್ಮನಾಗಿಲ್ಲ. ಮಾಯಸಂದ್ರದ ಜನರಿಗಾಗಿ ಈಗಲೂ ತಾವು ಕೆಲಸ ಮಾಡಲು ಸಿದ್ಧ ಎನ್ನುವ ಬಿಗ್ ಆಫರ್ ಹಾಗೂ ಸವಾಲನ್ನು ಸ್ಥಳೀಯರ ಮುಂದಿಟ್ಟಿದ್ದಾರೆ. "ಸಾರ್ವಜನಿಕವಾಗಿ ನೀವು ಕೇಳಿದ್ದಕ್ಕೆ ಸತ್ಯ ಅರಿವಾಗಲಿ ಎಂದು ಉತ್ತರಿಸಿದೆ. ಈಗಲೂ ಅಷ್ಟೇ, ನೀವೆಲ್ಲರೂ ಸೇರಿ ಪಂಚಾಯಿತಿಯ ಎಲ್ಲ ಸದಸ್ಯರನ್ನು ಒಪ್ಪಿಸಿ ಬನ್ನಿ, ನಾನು ಮಾಯಸಂದ್ರಕ್ಕೆ ಹೊಸ ಬಸ್ ನಿಲ್ದಾಣವನ್ನು ಮಾಡಿಸಿಕೊಡುತ್ತೇನೆ. ನಿಮ್ಮಂತೆಯೇ ನಮಗೂ ಆ ಒಳ್ಳೆಯ ಕಾರ್ಯ ಆಗಬೇಕು ಎಂಬ ಆಸೆಯಿದೆ" ಎಂದು ಜಗ್ಗೇಶ್ ಬರೆದುಕೊಂಡಿದ್ದಾರೆ.
ಸ್ಥಳೀಯ ರಾಜಕಾರಣದ ವಿರುದ್ಧ ಸಾರ್ವಜನಿಕರ ಆಕ್ರೋಶ
ಜಗ್ಗೇಶ್ ಅವರ ಈ ಪೋಸ್ಟ್ ಬೆನ್ನಲ್ಲೇ ಮಾಯಸಂದ್ರದ ಸಾರ್ವಜನಿಕರು ಮತ್ತು ನೆಟ್ಟಿಗರು ಸ್ಥಳೀಯ ಪಂಚಾಯಿತಿ ಆಡಳಿತದ ವಿರುದ್ಧ ತಿರುಗಿಬಿದ್ದಿದ್ದಾರೆ. ಕೇವಲ ಕೆಲವು ಅಂಗಡಿಗಳ ಬಾಡಿಗೆ ಹಾಗೂ ಸ್ವಾರ್ಥದ ವರಮಾನಕ್ಕಾಗಿ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು, ಮಹಿಳೆಯರು ರಸ್ತೆಯಲ್ಲೇ ನಿಲ್ಲುವಂತೆ ಮಾಡಿ ಶೌಚಾಲಯವೂ ಇಲ್ಲದಂತೆ ಕಾಡುತ್ತಿರುವ ಸ್ಥಳೀಯ ಮುಖಂಡರಿಗೆ ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನಾದರೂ ಮಾಯಸಂದ್ರ ಪಂಚಾಯಿತಿ ಎಚ್ಚೆತ್ತುಕೊಂಡು ಜಗ್ಗೇಶ್ ಅವರ ಸವಾಲನ್ನು ಸ್ವೀಕರಿಸಿ ಜಾಗ ಬಿಟ್ಟುಕೊಡುತ್ತಾ ಎಂಬುದನ್ನು ಕಾದುನೋಡಬೇಕಿದೆ.












Click it and Unblock the Notifications