18 ವರ್ಷದ ಇಂಜಿನಿಯರಿಂಗ್‌ಗೆ ಟಾಟಾ ಬೈ: 40ರ ಹರೆಯದಲ್ಲಿ ವೈದ್ಯಕೀಯ ಲೋಕಕ್ಕೆ ಕಾಲಿಟ್ಟ ಜಾನ್ಹವಿ ರಾವ್ ಅವರ ಸಾಧನೆಯ ಹಾದಿ

ಜೀವನದಲ್ಲಿ ನಾವು ಇಷ್ಟಪಟ್ಟಂತ ಒಂದು ಒಳ್ಳೆಯ ಕೆಲಸ ಸಿಕ್ಕರೆ ಸಾಕಪ್ಪ ಎನ್ನುವವರ ನಡುವೆ, ಇದ್ದ ಒಂದು ಒಳ್ಳೆಯ ಕೆಲಸವನ್ನು ಬಿಟ್ಟು ಹೊಸ ಸಾಹಸಕ್ಕೆ ಕೈಹಾಕುವವರು ತುಂಬಾ ಅಪರೂಪ. ಅದರಲ್ಲೂ 18 ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿದ್ದು, ಆ ಕೆಲಸವನ್ನು ಬಿಡುವುದು ಸುಲಭದ ಮಾತಲ್ಲ. ಆದರೆ, ಜೀವನದ ಎದುರಾಗುವ ಕೆಲವೊಂದು ಅನಿರೀಕ್ಷಿತ ತಿರುವು ಮನುಷ್ಯನ ಜೀವನದ ಗುರಿಯನ್ನೇ ಬದಲಾಯಿಸಬಹುದು ಎಂಬುದಕ್ಕೆ ಜಾನ್ಹವಿ ಅಜಿತ್ ರಾವ್ ಅವರೇ ಒಳ್ಳೆಯ ಉದಾಹರಣೆ.

ದಶಕಗಳ ಕಾಲ ಟೆಕ್ ಉದ್ಯಮದಲ್ಲಿ ಮಿಂಚಿದ್ದ ಇವರು, ತಮ್ಮ 40ನೇ ವಯಸ್ಸಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಆರಂಭಿಸಿ, ಇದೀಗ ಅಮೆರಿಕಾದಲ್ಲಿ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Inspiring Journey

ಟೆಕ್ ಲೋಕದಲ್ಲಿ ಜಾನ್ಹವಿ ಅವರ ಯಶಸ್ವಿ ಹೆಜ್ಜೆಗಳು

ಮೂಲತಃ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಜನಿಸಿದ ಜಾನ್ಹವಿ, ಓದಿನಲ್ಲಿ ಮೊದಲಿನಿಂದಲೂ ಮುಂದಿದ್ದರು. ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ (ಸ್ಯಾನ್ ಡಿಯಾಗೋ) ಎಲೆಕ್ಟ್ರಾನಿಕ್ಸ್‌ನಲ್ಲಿ ಪದವಿ ಪಡೆದ ಅವರು, ಬಳಿಕ ಸಾಂಟಾ ಬಾರ್ಬರಾದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪೂರೈಸಿದರು. ಶಿಕ್ಷಣದ ನಂತರ, ಅಮೆರಿಕಾದ ಪ್ರತಿಷ್ಠಿತ ಟೆಕ್ ಕಂಪನಿಗಳಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದರು.

2002ರಲ್ಲಿ ಇಂಜಿನಿಯರ್ ಆಗಿದ್ದ ತಮ್ಮ ಪತಿಯೊಂದಿಗೆ ಬೆಂಗಳೂರಿಗೆ ಮರಳಿದ ಅವರು, ಭಾರತದ ಹಲವು ಟಾಪ್ ಕಂಪನಿಗಳಲ್ಲಿ ಕೆಲಸ ಮಾಡಿದರು. ಅಷ್ಟೇ ಅಲ್ಲದೆ, ಡಿಫೆನ್ಸ್ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ತಮ್ಮದೇ ಆದ ಸ್ವಂತ ಟೆಕ್ ಕಂಪನಿಯನ್ನೂ ಹುಟ್ಟುಹಾಕಿ ಯಶಸ್ವಿಯಾಗಿ ಮುನ್ನಡೆಸುತ್ತಿದ್ದರು.

ಬದುಕಿಗೆ ಹೊಸ ತಿರುವು ನೀಡಿದ 'ರುಮಟಾಯ್ಡ್ ಆರ್ಥರೈಟಿಸ್'

ವೃತ್ತಿಜೀವನ ಅತ್ಯುನ್ನತ ಹಂತದಲ್ಲಿದ್ದಾಗ, 2003ರಲ್ಲಿ ಜಾನ್ಹವಿ ಅವರ ಬದುಕಿನಲ್ಲಿ ಬಹುದೊಡ್ಡ ಆಘಾತ ಎದುರಾಯಿತು. ಅವರಿಗೆ 'ರುಮಟಾಯ್ಡ್ ಆರ್ಥರೈಟಿಸ್' ಎಂಬ ಆಟೋಇಮ್ಯೂನ್ ಕಾಯಿಲೆ ಇರುವುದು ಪತ್ತೆಯಾಯಿತು. ಈ ಕಾಯಿಲೆಯ ಚಿಕಿತ್ಸೆಗಾಗಿ ಅವರು ಆಸ್ಪತ್ರೆಗೆ ಭೇಟಿ ನೀಡಬೇಕಾಯಿತು. ಈ ಸಮಯದಲ್ಲಿ, ವೈದ್ಯರು ರೋಗಿಗಳೊಂದಿಗೆ ನಡೆದುಕೊಳ್ಳುವ ರೀತಿ, ಅವರ ಆರೈಕೆ ಮತ್ತು ವೃತ್ತಿಪರತೆ ಜಾನ್ಹವಿ ಅವರ ಮೇಲೆ ಅಪಾರ ಪ್ರಭಾವ ಬೀರಿತು. ವೈದ್ಯರ ನಿಸ್ವಾರ್ಥ ಸೇವೆಯನ್ನು ಹತ್ತಿರದಿಂದ ಕಂಡ ಅವರಿಗೆ, ತಾವೂ ಕೂಡ ಇಂಜಿನಿಯರಿಂಗ್ ವೃತ್ತಿಯನ್ನು ತೊರೆದು ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಡಬೇಕೆಂಬ ಆಸೆ ಚಿಗುರೊಡೆಯಿತು.

40ನೇ ವಯಸ್ಸಿನಲ್ಲಿ ಎಂಬಿಬಿಎಸ್ ವ್ಯಾಸಂಗ

ತಮ್ಮ ಕನಸಿಗೆ ಜೀವ ತುಂಬಲು ದಿಟ್ಟ ನಿರ್ಧಾರ ತೆಗೆದುಕೊಂಡ ಜಾನ್ಹವಿ, 2013ರಲ್ಲಿ ತಮ್ಮ 40ನೇ ವಯಸ್ಸಿನಲ್ಲಿ ಬೆಂಗಳೂರಿನ ಪ್ರತಿಷ್ಠಿತ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿಗೆ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿ ಸೇರ್ಪಡೆಗೊಂಡರು. ಇದು ಖಂಡಿತ ಸುಲಭದ ಹಾದಿಯಾಗಿರಲಿಲ್ಲ. ಸುಮಾರು ಎರಡು ದಶಕಗಳ ಕಾಲ ಬೇರೆಯದೇ ವೃತ್ತಿಯಲ್ಲಿದ್ದ ಅವರು, ಮತ್ತೆ ತರಗತಿಗಳಿಗೆ ಹಾಜರಾಗಬೇಕಿತ್ತು.

ತಮ್ಮ ಅರ್ಧ ವಯಸ್ಸಿನ ವಿದ್ಯಾರ್ಥಿಗಳೊಂದಿಗೆ ಕುಳಿತು ಕಲಿಯುವುದು, ರಾತ್ರಿ ಹಗಲೆನ್ನದೆ ದಪ್ಪ ದಪ್ಪದ ವೈದ್ಯಕೀಯ ಪುಸ್ತಕಗಳನ್ನು ಓದುವುದು ಅವರಿಗೆ ಬಹುದೊಡ್ಡ ಸವಾಲಾಗಿತ್ತು. ಆದರೂ ಛಲ ಬಿಡದ ಜಾನ್ಹವಿ, ತಮ್ಮ ಗುರಿಯತ್ತ ಗಮನಹರಿಸಿ ಸತತ ಎಂಟು ವರ್ಷಗಳ ಕಠಿಣ ಪರಿಶ್ರಮದ ನಂತರ ಎಂಬಿಬಿಎಸ್ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು.

ಅಮೆರಿಕಾದಲ್ಲಿ ವೈದ್ಯೆಯಾಗಿ ಹೊಸ ಅಧ್ಯಾಯ ಶುರು

ಇತ್ತೀಚೆಗೆ 'ವಿಕಾಸ್' ಎಂಬುವವರು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಜಾನ್ಹವಿ ಅವರ ಈ ಸಾಧನೆಯ ಕಥೆಯನ್ನು ಹಂಚಿಕೊಂಡಿದ್ದು, ಸದ್ಯ ಇದು ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ. ಅವರ ಪೋಸ್ಟ್ ಪ್ರಕಾರ, ಪ್ರಸ್ತುತ 47 ವರ್ಷದ ಜಾನ್ಹವಿ ಅವರು ಕೇವಲ ತಮ್ಮ ಎಂಡಿ ಪದವಿಯನ್ನು ಪೂರ್ಣಗೊಳಿಸುತ್ತಿರುವುದು ಮಾತ್ರವಲ್ಲದೆ, ಅಮೆರಿಕಾದಲ್ಲಿ 'ಪ್ರೈಮರಿ ಕೇರ್ ಫಿಸಿಷಿಯನ್' ಆಗಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.

ಅವರ ತೆಗೆದುಕೊಂಡ ಈ ನಿರ್ಧಾರಕ್ಕೆ ನೆಟ್ಟಿಗರು ಸಲಾಂ ಹೊಡೆಯುತ್ತಿದ್ದಾರೆ. "ಹೊಸದನ್ನು ಕಲಿಯಲು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ, ನೀವು ಎಲ್ಲಿಂದಲಾದರೂ ಹೊಸ ಜೀವನವನ್ನು ಆರಂಭಿಸಬಹುದು" ಎಂದು ಕಮೆಂಟ್ ಮಾಡುವ ಮೂಲಕ ಈ ಮಾಜಿ ಟೆಕ್ಕಿಯ ಸಾಧನೆಯನ್ನು ಕೊಂಡಾಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+