ವಿಯೆಟ್ನಾಂನ ಡೇಂಜರಸ್ ಜಾಗದಲ್ಲಿ ಬಿಗ್‌ಬಾಸ್ ಶಿಶಿರ್-ಐಶ್ವರ್ಯಾ ಭರ್ಜರಿ ಡ್ಯಾನ್ಸ್: ವಿಡಿಯೋ ವೈರಲ್
ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ಕನ್ನಡಿಗರು ದೇಶ-ವಿದೇಶಗಳ ಪ್ರವಾಸಿ ತಾಣಗಳಲ್ಲಿ ವಿಭಿನ್ನ ಸಾಹಸಗಳನ್ನು ಮಾಡುತ್ತಿದ್ದಾರೆ. ಮತ್ತೊಂದೆಡೆ ವಿದೇಶಗಳಲ್ಲಿ ಭಾರತೀಯ ಪ್ರವಾಸಿಗರ ವರ್ತನೆಗೆ ಖಂಡನೆಯೂ ವ್ಯಕ್ತವಾಗುತ್ತಿದೆ. ಸದ್ಯ ಕನ್ನಡ ಕಿರುತೆರೆಯ ಹಾಗೂ ಬಿಗ್‌ಬಾಸ್ ಖ್ಯಾತಿಯ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯ ಸಿಂಧೋಗಿ ವಿಯೆಟ್ನಾಂ ಪ್ರವಾಸದಲ್ಲಿದ್ದು, ಅಲ್ಲಿನ ಪ್ರಸಿದ್ಧ ಹಾಗೂ ಅಪಾಯಕಾರಿ ಪ್ರವಾಸಿ ತಾಣವೊಂದರಲ್ಲಿ ಮಾಡಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.
ಹನೋಯಿ 'ಟ್ರೇನ್ ಸ್ಟ್ರೀಟ್'ನಲ್ಲಿ ಮಸ್ತ್ ಡ್ಯಾನ್ಸ್
ವಿಯೆಟ್ನಾಂನ ರಾಜಧಾನಿ ಹನೋಯಿಯಲ್ಲಿರುವ 'ಟ್ರೇನ್ ಸ್ಟ್ರೀಟ್' (Hanoi Train Street) ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿದೆ. ಅತ್ಯಂತ ಕಿರಿದಾದ ವಸತಿ ಪ್ರದೇಶದ ರಸ್ತೆಯ ಮಧ್ಯದಲ್ಲೇ ಇಲ್ಲಿ ರೈಲು ಹಾದುಹೋಗುತ್ತದೆ. ಇದೇ ರಸ್ತೆಯಲ್ಲಿ ನಿಂತು ನಟ ಶಿಶಿರ್ ಶಾಸ್ತ್ರಿ ಹಾಗೂ ಐಶ್ವರ್ಯಾ ಸಿಂದೋಗಿ ಬಾಲಿವುಡ್‌ನ ಎವರ್‌ಗ್ರೀನ್ ಹಾಡು 'ಛೈಯ್ಯಾ ಛೈಯ್ಯಾ' ಹಾಡಿಗೆ ರೀಲ್ಸ್ ಮಾಡಿದ್ದಾರೆ. ಚಲಿಸುವ ರೈಲಿನ ಸನಿಹದಲ್ಲೇ ನಿಂತು ಇಬ್ಬರು ಪೋಸ್ ನೀಡಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ.

ವಿಶೇಷವೆಂದರೆ, ಈ ಸ್ಟಾರ್ ಜೋಡಿಯ ವಿಡಿಯೋ ಇಂತಹದ್ದೊಂದು ಸಮಯದಲ್ಲೇ ಹೊರಬಂದಿದ್ದು, ಪ್ರಸ್ತುತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜವಾಬ್ದಾರಿಯುತ ಪ್ರವಾಸದ ಕುರಿತು ದೊಡ್ಡ ಚರ್ಚೆ ಮುನ್ನೆಲೆಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ ಹಲವು ಭಾರತೀಯ ಪ್ರವಾಸಿಗರು ವಿದೇಶಗಳ ನಿಷೇಧಿತ, ಸೂಕ್ಷ್ಮ ಹಾಗೂ ಅಪಾಯಕಾರಿ ಸ್ಥಳಗಳಲ್ಲಿ ರೀಲ್ಸ್ ಮತ್ತು ಫೋಟೋಶೂಟ್‌ಗಳನ್ನು ಮಾಡುವ ಮೂಲಕ ಅಲ್ಲಿನ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಭಾರತೀಯ ಪ್ರವಾಸಿಗರ ಈ ಅತಿರೇಕದ ವರ್ತನೆಯ ವಿರುದ್ಧ ಭಾರಿ ಟೀಕೆಗಳು ಕೇಳಿಬರುತ್ತಿವೆ.
ಹನೋಯಿ ಟ್ರೇನ್ ಸ್ಟ್ರೀಟ್ ನೋಡುದಕ್ಕೆ ಎಷ್ಟು ಆಕರ್ಷಕವಾಗಿದೆಯೋ ಅಷ್ಟೇ ಅಪಾಯಕಾರಿಯಾಗಿದೆ. ಸ್ವಲ್ಪ ಆಯತಪ್ಪಿದರೂ ಪ್ರಾಣಕ್ಕೆ ಸಂಚಕಾರ ತರಬಲ್ಲದು. ಈ ಕಾರಣಕ್ಕಾಗಿಯೇ ಅಲ್ಲಿನ ಸ್ಥಳೀಯ ಆಡಳಿತ ಹಲವು ಬಾರಿ ಇಲ್ಲಿ ಪ್ರವಾಸಿಗರು ಫೋಟೋ ಮತ್ತು ವಿಡಿಯೋ ಮಾಡುವುದಕ್ಕೆ ಕಟ್ಟುನಿಟ್ಟಿನ ನಿಯಮ ಹಾಗೂ ನಿರ್ಬಂಧಗಳನ್ನು ಹೇರಿದೆ.
ಆದರೂ ಸೆಲೆಬ್ರಿಟಿಗಳು ಹಾಗೂ ವ್ಲಾಗರ್‌ಗಳು ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ವಿಡಿಯೋ ಮಾಡುತ್ತಿರುವುದು ಪ್ರವಾಸದ ನೈತಿಕತೆ ಮತ್ತು ಸುರಕ್ಷತೆಯ ನಿಯಮಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಶಿಶಿರ್ ಮತ್ತು ಐಶ್ವರ್ಯಾ ಸಿಂದೋಗಿ ಅವರ ವಿಡಿಯೋ ಅಭಿಮಾನಿಗಳಿಗೆ ಇಷ್ಟವಾಗುತ್ತಿದ್ದರೂ, ಮತ್ತೊಂದೆಡೆ ವಿದೇಶಿ ಪ್ರವಾಸ ಕೈಗೊಳ್ಳುವಾಗ ಅಲ್ಲಿನ ನಿಯಮಗಳನ್ನು ಗೌರವಿಸುವುದು ಮತ್ತು ಸುರಕ್ಷತೆಗೆ ಆದ್ಯತೆ ನೀಡುವುದು ಎಷ್ಟು ಮುಖ್ಯ ಎಂಬ ಪಾಠವನ್ನು ಈ ಘಟನೆ ನೆನಪಿಸುವಂತಿದೆ.
ಏನಿದು ಹನೋಯಿ 'ಟ್ರೇನ್ ಸ್ಟ್ರೀಟ್'?
ವಿಯೆಟ್ನಾಂನ ಹನೋಯಿಯಲ್ಲಿರುವ ಈ ರೈಲ್ವೆ ಹಳಿಗಳನ್ನು 1902ರಲ್ಲಿ ಫ್ರೆಂಚ್ ವಸಾಹತುಶಾಹಿ ಆಡಳಿತದ ಅವಧಿಯಲ್ಲಿ ನಿರ್ಮಿಸಲಾಯಿತು. ಇಲ್ಲಿನ ಮನೆಗಳ ಮುಂಭಾಗದ ಬಾಗಿಲು ಮತ್ತು ಚಲಿಸುವ ರೈಲಿನ ನಡುವೆ ಕೇವಲ ಕೆಲವೇ ಇಂಚುಗಳಷ್ಟು ಜಾಗವಿರುತ್ತದೆ. ರೈಲು ಬರುವಾಗ ಸ್ಥಳೀಯರು ತಮ್ಮ ಮನೆಗಳ ಮುಂದಿರುವ ಬೈಕ್, ಕುರ್ಚಿ ಹಾಗೂ ಸಾಕುಪ್ರಾಣಿಗಳನ್ನು ಒಳಗೆ ಎಳೆದುಕೊಳ್ಳಬೇಕಾಗುತ್ತದೆ. ಪ್ರಾಣಾಪಾಯದ ಕಾರಣಕ್ಕಾಗಿ 2019 ಮತ್ತು 2022ರಲ್ಲಿ ವಿಯೆಟ್ನಾಂ ಸರ್ಕಾರ ಈ ರಸ್ತೆಗೆ ಪ್ರವಾಸಿಗರು ಬರದಂತೆ ಕಟ್ಟುನಿಟ್ಟಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಿ, ಬ್ಯಾರಿಕೇಡ್‌ಗಳನ್ನು ಹಾಕಿತ್ತು. ಮಾಲೀಕರ ಜವಾಬ್ದಾರಿಯ ಮೇಲೆ ಮಾತ್ರ ಪ್ರವಾಸಿಗರಿಗೆ ಒಳಗೆ ಹೋಗಲು ಬಿಡಲಾಗುತ್ತದೆ. ರೈಲು ಬರುವಾಗ ಯಾರೂ ಹಳಿಯ ಮೇಲೆ ನಿಲ್ಲುವಂತಿಲ್ಲ, ಫೋಟೋ ತೆಗೆಯುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿಯಮವಿದೆ.












Click it and Unblock the Notifications