ಯಾವ ಮುಖ ಇಟ್ಕೊಂಡು ಕಲ್ಯಾಣ ಕರ್ನಾಟಕ ಪ್ರವಾಸ ಮಾಡ್ತಿದ್ದೀರಿ? ಬಸವಣ್ಣನ ವಚನ ಉಲ್ಲೇಖಿಸಿ ಸಿಎಂ ಡಿಕೆಶಿಗೆ ಅಶೋಕ್ ಪ್ರಶ್ನೆ

ಬೆಂಗಳೂರು: "ನುಡಿದರೆ ಮುತ್ತಿನ ಹಾರದಂತಿರಬೇಕು..." ಎಂಬ ಜಗಜ್ಯೋತಿ ಬಸವಣ್ಣನವರ ವಚನ ಉಲ್ಲೇಖಿಸುವ ಮೂಲಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಿದ್ದ ಚುನಾವಣಾ ಭರವಸೆಗಳನ್ನು ಸರ್ಕಾರ ಸಂಪೂರ್ಣವಾಗಿ ಮರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಡಿಕೆಶಿ ಅವರಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

ವಚನವನ್ನು ಉಲ್ಲೇಖಿಸಿ ನೇರವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿರುವ ಅಶೋಕ್, "ಸಿಎಂ ಡಿ.ಕೆ.ಶಿವಕುಮಾರ್ ಅವರೇ, ಜಗಜ್ಯೋತಿ ಬಸವಣ್ಣನವರ ಈ ವಚನ ಕೇಳಿದ್ದೀರಾ? 'ನುಡಿಗೆ ತಕ್ಕ ನಡೆ, ನಡೆಗೆ ತಕ್ಕ ನುಡಿ' ಇದ್ದರೆ ಮಾತ್ರ ಆ ಪರಮೇಶ್ವರ ಮೆಚ್ಚುತ್ತಾನೆ ಎಂಬುದು ಈ ವಚನಾಮೃತದ ಸಾರಾಂಶ. ಆದರೆ ನಿಮ್ಮ ಕಾಂಗ್ರೆಸ್ ಸರ್ಕಾರ ಕಲ್ಯಾಣ ಕರ್ನಾಟಕದ ವಿಷಯದಲ್ಲಿ ಮಾಡುತ್ತಿರುವುದೇನು?" ಎಂದು ಪ್ರಶ್ನಿಸಿದ್ದಾರೆ.

R Ashoka

ಕಾಟಾಚಾರದ ಸಂಪುಟ ಸಭೆ, ಪುಕ್ಕಟೆ ಪ್ರಚಾರದ ಪ್ರವಾಸ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಡಿ.ಕೆ.ಶಿವಕುಮಾರ್ ಅವರು ಕೈಗೊಂಡಿರುವ ಪ್ರವಾಸವನ್ನು ಟೀಕಿಸಿರುವ ಆರ್.ಅಶೋಕ್, "ಯಾವ ಮುಖ ಇಟ್ಟುಕೊಂಡು ಕಲ್ಯಾಣ ಕರ್ನಾಟಕದ ಪ್ರವಾಸ ಮಾಡಲು ಹೊರಟಿದ್ದೀರಿ? ಅಲ್ಲಿ ಕಾಟಾಚಾರಕ್ಕೆ ಒಂದು ಸಂಪುಟ ಸಭೆ ಮಾಡಿದ ತಕ್ಷಣ ಅಥವಾ ಪುಕ್ಕಟೆ ಪ್ರಚಾರಕ್ಕಾಗಿ ಎರಡು ದಿನ ಪ್ರವಾಸ ಮಾಡಿಬಿಟ್ಟರೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಆಗಿಬಿಡುತ್ತಾ ಸ್ವಾಮಿ? ಎಂದು ಆಕ್ರೋಶ ಹೊರಹಾಕಿದ್ದಾರೆ. ನಿಮಗೆ ಕಿಂಚಿತ್ತಾದರೂ ಆತ್ಮಸಾಕ್ಷಿ ಇದ್ದರೆ, ಚುನಾವಣೆಗೆ ಮುನ್ನ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಭರವಸೆಗಳ ಪೈಕಿ ಕಳೆದ ಮೂರು ವರ್ಷಗಳಲ್ಲಿ ಎಷ್ಟು ಆಶ್ವಾಸನೆಗಳನ್ನು ಈಡೇರಿಸಿದ್ದೀರಿ ಎಂದು ಉತ್ತರಿಸಿ ಎಂದು ಸವಾಲು ಹಾಕಿದ್ದಾರೆ. ಜೊತೆಗೆ 6 ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.

ವರ್ಷಕ್ಕೆ ₹5,000 ಕೋಟಿ ಅನುದಾನದ ಕಥೆ ಏನಾಯ್ತು?

ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಕಲ್ಯಾಣ ಕರ್ನಾಟಕದ ಪ್ರಗತಿಗಾಗಿ ಪ್ರತಿ ವರ್ಷ 5,000 ಕೋಟಿ ರೂಪಾಯಿ ನೀಡುವುದಾಗಿ ಭರವಸೆ ನೀಡಿತ್ತು. ಹಾಗಿದ್ದರೆ, ಕಳೆದ ಎರಡು ಬಜೆಟ್‌ಗಳಲ್ಲಿ ಕಲ್ಯಾಣ ಕರ್ನಾಟಕಕ್ಕೆ ಒಟ್ಟು ಎಷ್ಟು ಹಣ ಮೀಸಲಿಟ್ಟಿದ್ದೀರಿ? ಅದರಲ್ಲಿ ಬಿಡುಗಡೆಯಾದ ಅನುದಾನ ಎಷ್ಟು? ಮತ್ತು ವಾಸ್ತವವಾಗಿ ಖರ್ಚಾಗಿದ್ದು ಎಷ್ಟು? ಎಂಬ ವಿವರ ಕೊಡಿ.

ಬಳ್ಳಾರಿ ಅಪೇರಲ್ ಪಾರ್ಕ್ ಮತ್ತು ಜೀನ್ಸ್ ರಾಜಧಾನಿ ಘೋಷಣೆ ಏನಾಯ್ತು?

ಬಳ್ಳಾರಿಯಲ್ಲಿ 5,000 ಕೋಟಿ ರೂಪಾಯಿ ಭಾರಿ ಮೊತ್ತದ ಅಪೇರಲ್ ಪಾರ್ಕ್ ಸ್ಥಾಪಿಸುತ್ತೇವೆ ಎಂದಿದ್ದ ಭರವಸೆ ಈಗ ಎಲ್ಲಿದೆ? ರಾಹುಲ್ ಗಾಂಧಿ ಅವರು ತಮ್ಮ ಪ್ರಚಾರದ ಭಾಷಣದಲ್ಲಿ ಬಳ್ಳಾರಿಯನ್ನು 'ಜೀನ್ಸ್ ರಾಜಧಾನಿ' ಮಾಡುತ್ತೇವೆ ಎಂದು ಕೊಟ್ಟಿದ್ದ ಭರವಸೆ ಏನಾಯಿತು?

100 ಪಿಯುಸಿ ಕಾಲೇಜುಗಳು ಹಾಗೂ ಮಹಿಳಾ ಕಾಲೇಜು ಎಲ್ಲಿದೆ

ಕಲ್ಯಾಣ ಕರ್ನಾಟಕ ಭಾಗದ ಒಟ್ಟು 41 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 100 ಪಿಯುಸಿ ಕಾಲೇಜುಗಳನ್ನು ಮತ್ತು ಒಂದು ಸುಸಜ್ಜಿತ ಮಹಿಳಾ ಪದವಿ ಕಾಲೇಜನ್ನು ಸ್ಥಾಪಿಸುವ ಆಶ್ವಾಸನೆ ನೀಡಲಾಗಿತ್ತು. ಇವುಗಳ ಪೈಕಿ ಇವತ್ತಿನವರೆಗೆ ಒಂದೇ ಒಂದು ಕಾಲೇಜನ್ನಾದರೂ ಸ್ಥಾಪನೆ ಮಾಡಿದ್ದೀರಾ?

ಅಂಬೇಡ್ಕರ್ ಇಂಗ್ಲಿಷ್ ಮಾಧ್ಯಮ ಶಾಲೆಗಳ ಸ್ಥಾಪನೆ ಎಲ್ಲಿ?

ಕಲ್ಯಾಣ ಕರ್ನಾಟಕದ ಪ್ರತಿಯೊಂದು ಹೋಬಳಿಯಲ್ಲೂ ಒಂದು ಬಾಬಾ ಸಾಹೇಬ್ ಅಂಬೇಡ್ಕರ್ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಆರಂಭಿಸುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಬರೆದುಕೊಂಡಿದ್ದರಲ್ಲ, ಕನಿಷ್ಠ ಪಕ್ಷ ಇಡೀ ಭಾಗದಲ್ಲಿ ಒಂದೇ ಒಂದು ಶಾಲೆಯನ್ನಾದರೂ ಆರಂಭಿಸಲು ಸಾಧ್ಯವಾಗಿದೆಯೇ?

ಶಾಲಾ ಕೊಠಡಿಗಳ ನಿರ್ಮಾಣ ಮತ್ತು ಶಿಕ್ಷಕರ ನೇಮಕಾತಿ ಯಾವಾಗ?

ಎರಡು ವರ್ಷದ ಒಳಗಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 2,500 ಹೊಸ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುತ್ತೇವೆ ಹಾಗೂ ಖಾಲಿ ಇರುವ ಎಲ್ಲ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಭರವಸೆ ನೀಡಲಾಗಿತ್ತು. ಈ ಭರವಸೆ ಈಡೇರುವುದು ಯಾವಾಗ? ಕಳೆದ 15 ತಿಂಗಳಲ್ಲಿ ಎಷ್ಟು ಶಿಕ್ಷಕರ ನೇಮಕಾತಿ ನಡೆದಿದೆ ಮತ್ತು ಎಷ್ಟು ಹೊಸ ಶಾಲಾ ಕೊಠಡಿಗಳನ್ನು ಕಟ್ಟಿದ್ದೀರಿ?

ಗ್ರಾಮ ಪಂಚಾಯಿತಿಗಳಿಗೆ ತಲಾ ₹1 ಕೋಟಿ ಹಣ ತಲುಪಿದೆಯೇ?

ಕಲ್ಯಾಣ ಕರ್ನಾಟಕ ಭಾಗದ ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ತಲಾ ಒಂದು ಕೋಟಿ ರೂಪಾಯಿ ವಿಶೇಷ ಅನುದಾನ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ಈ ಮಹತ್ವದ ಭರವಸೆ ಇವತ್ತಿನವರೆಗೂ ಈಡೇರಿದೆಯೇ? ಎಂದು ಅಶೋಕ್ ಕೇಳಿದ್ದಾರೆ.

ಅಧಿಕಾರಕ್ಕೆ ಬಂದ ದಿನದಿಂದಲೂ ಕಾಂಗ್ರೆಸ್ ಸರ್ಕಾರ ಕಲ್ಯಾಣ ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ ಎಂದು ಗಂಭೀರ ಆರೋಪ ಮಾಡಿರುವ ಅಶೋಕ್, "ಈಗಲಾದರೂ ಎಚ್ಚೆತ್ತುಕೊಂಡು ಕಲ್ಯಾಣ ಕರ್ನಾಟಕದ ಜನತೆಗೆ ಕೊಟ್ಟ ಮಾತು ಉಳಿಸಿಕೊಳ್ಳಿ. ಇಲ್ಲದಿದ್ದರೆ ಬರುವ ದಿನಗಳಲ್ಲಿ ಕಲ್ಯಾಣ ಕರ್ನಾಟಕದ ಜನತೆ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನಿಶ್ಚಿತ" ಎಂದು ಎಚ್ಚರಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+