ಶೆಲ್‌ ಇಲ್ಲದ ಕೃತಕ ಮೊಟ್ಟೆಯಿಂದ ಯಶಸ್ವಿಯಾಗಿ ಹೊರಬಂದ ಕೋಳಿಮರಿ: ವಿಜ್ಞಾನಿಗಳ ಐತಿಹಾಸಿಕ ಸಾಧನೆ

"ಕೃತಕ ಮೊಟ್ಟೆ" ಎಂಬ ಪದ ಕೇಳಿದ ಕೂಡಳೆ ಯಾವುದೋ ವಿಜ್ಞಾನ-ಆಧಾರಿತ ಸಿನಿಮಾದ ದೃಶ್ಯ ಕಣ್ಣಮುಂದೆ ಬರುವುದು ಸಹಜ. ಆದರೆ, ಇದೀಗ ವಿಜ್ಞಾನಿಗಳು ಇಂತಹದ್ದೇ ಒಂದು ಅದ್ಭುತವನ್ನು ವಾಸ್ತವದಲ್ಲಿ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

'ಕೊಲೊಸಲ್ ಬಯೋಸೈನ್ಸಸ್' (Colossal Biosciences) ಎಂಬ ಜೈವಿಕ ತಂತ್ರಜ್ಞಾನ ಕಂಪನಿಯು ಶೆಲ್‌ ಇಲ್ಲದ ಮೊಟ್ಟೆ ಅಂದರೆ ಕವಚವಿಲ್ಲದ ಕೃತಕ ಮೊಟ್ಟೆಯಿಂದ ಕೋಳಿಮರಿಗಳನ್ನು ಯಶಸ್ವಿಯಾಗಿ ಹೊರತರುವಲ್ಲಿ ದೊಡ್ಡ ಸಾಧನೆ ಮಾಡಿದೆ. ಇದೊಂದು ವಿಲಕ್ಷಣ ವಿಜ್ಞಾನ ಪ್ರಯೋಗದಂತೆ ಕಂಡರೂ, ಅಳಿವಿನಂಚಿನಲ್ಲಿರುವ ಪಕ್ಷಿ ಪ್ರಭೇದಗಳನ್ನು ರಕ್ಷಿಸಲು ಹಾಗೂ ಶತಮಾನಗಳ ಹಿಂದೆಯೇ ನಶಿಸಿಹೋದ ಜೀವಿಗಳ ಅಧ್ಯಯನಕ್ಕೆ ಇದು ಭವಿಷ್ಯದಲ್ಲಿ ನೆರವಾಗಲಿದೆ ಎಂದು ಸಂಶೋಧಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Artificial Shell Less Egg

ಈ ಬೃಹತ್ ಸಾಧನೆಯ ಬೆನ್ನಲ್ಲೇ ಸಹಜವಾಗಿ ಜನರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಮೂಡುವುದು ಸಹಜ.

ಏನಿದು ಕೃತಕ ಮೊಟ್ಟೆ?:

ಹೆಸರು 'ಕೃತಕ ಮೊಟ್ಟೆ' ಎಂದಿದ್ದರೂ, ಇದು ನಮ್ಮ ಅಡುಗೆಮನೆಯಲ್ಲಿರುವ ಸಾಮಾನ್ಯ ಮೊಟ್ಟೆಯಂತೆ ಕಾಣುವುದಿಲ್ಲ. ಪಕ್ಷಿಗಳ ಮೊಟ್ಟೆಗಳು ನಿಸರ್ಗದ ಅತ್ಯಂತ ಬುದ್ಧಿವಂತ ಸೃಷ್ಟಿ. ಮೊಟ್ಟೆಯ ಮೇಲಿರುವ ಕವಚವು ಕೇವಲ ಒಡೆಯದಂತೆ ರಕ್ಷಣೆ ನೀಡಲು ಮಾತ್ರ ಸೀಮಿತವಾಗಿಲ್ಲ, ಬದಲಿಗೆ ಒಳಗೆ ಬೆಳೆಯುತ್ತಿರುವ ಭ್ರೂಣಕ್ಕೆ ಆಮ್ಲಜನಕವನ್ನು ಒದಗಿಸಿ, ಇಂಗಾಲದ ಡೈಆಕ್ಸೈಡ್ ಅನ್ನು ಹೊರಹಾಕಲು ಅನುವು ಮಾಡಿಕೊಡುತ್ತದೆ. ಜೊತೆಗೆ ಒಳಗಿನ ವಾತಾವರಣವನ್ನು ಪರಿಪೂರ್ಣ ಸಮತೋಲನದಲ್ಲಿಡುತ್ತದೆ. ನಮ್ಮ ಊಹೆಗೂ ಮೀರಿದ ಕೆಲಸವನ್ನು ಈ ಕವಚ ಮಾಡುತ್ತಿರುತ್ತದೆ. ಇದನ್ನೇ ಕೃತಕವಾಗಿ ಸೃಷ್ಟಿಸುವುದು ವಿಜ್ಞಾನಿಗಳಿಗೆ ದೊಡ್ಡ ಸವಾಲಾಗಿತ್ತು.

ಕರ್ನಾಟಕದಲ್ಲಿ ಕೋಳಿ ಸಾಕಾಣಿಕೆ ವಿಚಾರದಲ್ಲಿ ರೈತರಿಗೆ ಬಿಗ್ ರಿಲೀಫ್: ಸರ್ಕಾರದಿಂದ ಕನಿಷ್ಠ ದರ ಫಿಕ್ಸ್‌
ಕರ್ನಾಟಕದಲ್ಲಿ ಕೋಳಿ ಸಾಕಾಣಿಕೆ ವಿಚಾರದಲ್ಲಿ ರೈತರಿಗೆ ಬಿಗ್ ರಿಲೀಫ್: ಸರ್ಕಾರದಿಂದ ಕನಿಷ್ಠ ದರ ಫಿಕ್ಸ್‌

ನೈಸರ್ಗಿಕ ಕವಚವನ್ನು ಬಳಸುವ ಬದಲು, ಸಂಶೋಧಕರು ಮೃದುವಾದ ಸಿಲಿಕೋನ್ ಪೊರೆಯ ಆಧಾರದ ರಚನೆಯೊಂದನ್ನು ನಿರ್ಮಿಸಿದರು. ಇದು ನೈಜ ಮೊಟ್ಟೆಯ ಕವಚದಂತೆಯೇ ಕೆಲಸ ಮಾಡುವ ಬದಲಿ ವ್ಯವಸ್ಥೆಯಾಗಿದೆ. ಇದು ಭ್ರೂಣದ ಬೆಳವಣಿಗೆಗೆ ಆಧಾರ ನೀಡುವುದರ ಜೊತೆಗೆ, ಮರಿ ಬದುಕಲು ಅಗತ್ಯವಾದ ಅನಿಲ ವಿನಿಮಯಕ್ಕೂ ಸಹಾಯ ಮಾಡುತ್ತದೆ.

ವಿಶೇಷವೆಂದರೆ, ಈ ಬಾರಿ ಈ ಪ್ರಯೋಗ ಯಶಸ್ವಿಯಾಗಿದೆ. ಕೋಳಿಮರಿಗಳು ತಮ್ಮ ಸಂಪೂರ್ಣ ಬೆಳವಣಿಗೆಯನ್ನು ಮುಗಿಸಿ ಯಶಸ್ವಿಯಾಗಿ ಹೊರಬಂದಿವೆ. ವಿಜ್ಞಾನಿಗಳು ಎದುರು ನೋಡುತ್ತಿದ್ದ ಐತಿಹಾಸಿಕ ಕ್ಷಣವಿದು.

ಈ ಸುದ್ದಿಯನ್ನು ಓದಿ ಡೈನೋಸಾರ್ ಅಥವಾ ಇತಿಹಾಸ ಪೂರ್ವದ ದೈತ್ಯ ಪಕ್ಷಿಗಳು ದಿಢೀರನೆ ಮರಳಿ ಬರುವುದು ಸಾಧ್ಯವೇ ಎನ್ನುವ ಪ್ರಶ್ಬೆ ಏಳಬಹುದು. ಈ ರೀತಿಯ ವಿಚಾರಗಳನ್ನು ಕಲ್ಪಿಸಿಕೊಳ್ಳುವ ಮುನ್ನ ವಾಸ್ತವವನ್ನು ಅರಿಯುವುದು ಮುಖ್ಯ. ಈ ಸಂಶೋಧನೆಯ ಅರ್ಥ ಅಳಿದು ಹೋದ ಪಕ್ಷಿ ಸಂಕುಲಗಳೆಲ್ಲಾ ಇದ್ದಕ್ಕಿದ್ದಂತೆ ಮರಳಿ ಬರುತ್ತವೆ ಎನ್ನುವುದಲ್ಲ.

ದಿಢೀರ್ 400 ರೂಪಾಯಿ ತಲುಪುತ್ತಾ ಕೋಳಿ ಬೆಲೆ? ಚಿಕನ್ ಸಪ್ಲೈ ಬಂದ್ ಮಾಡಲು ಚಿಂತನೆ... Karnataka Poultry Farmers
ದಿಢೀರ್ 400 ರೂಪಾಯಿ ತಲುಪುತ್ತಾ ಕೋಳಿ ಬೆಲೆ? ಚಿಕನ್ ಸಪ್ಲೈ ಬಂದ್ ಮಾಡಲು ಚಿಂತನೆ... Karnataka Poultry Farmers

ಸುಮಾರು 600 ವರ್ಷಗಳ ಹಿಂದೆ ನ್ಯೂಜಿಲೆಂಡ್‌ನಲ್ಲಿ ವಾಸವಿದ್ದ, ಹಾರಲು ಸಾಧ್ಯವಾಗದ 'ಮೋವಾ' (giant moa) ಎಂಬ ದೈತ್ಯ ಪಕ್ಷಿಯ ಮೇಲಿನ 'ಕೊಲೊಸಲ್ ಬಯೋಸೈನ್ಸಸ್' ಕಂಪನಿಯ ಸುದೀರ್ಘ ಸಂಶೋಧನೆಗೆ ಈ ತಂತ್ರಜ್ಞಾನ ತಳುಕು ಹಾಕಿಕೊಂಡಿದೆ. ಈ ಪ್ರಭೇದವನ್ನು ಮರಳಿ ತರುವ ನಿಟ್ಟಿನಲ್ಲಿ ಕಂಪನಿ ಮುಕ್ತವಾಗಿ ಮಾತನಾಡಿದ್ದರೂ, ಪ್ರಸ್ತುತ ಸಾಧನೆ ಆ ಗುರಿಯ ಸಣ್ಣದೊಂದು ಹೆಜ್ಜೆಯಷ್ಟೇ. ಆ ನಿಟ್ಟಿನಲ್ಲಿ ವಿಜ್ಞಾನಿಗಳು ಎದುರಿಸಬೇಕಾದ ಸವಾಲುಗಳು ಇನ್ನೂ ಹೆಚ್ಚಿವೆ. ಇದಕ್ಕೆ ದಶಕಗಳೇ ಬೇಕಾಗಬಹುದು.

ಹಾಗಾದರೆ ಸಂಶೋಧಕರಲ್ಲಿ ಇಷ್ಟೊಂದು ಉತ್ಸಾಹವೇಕೆ?:

ಏಕೆಂದರೆ ಈ ಸಂಶೋಧನೆ ಕೇವಲ ಅಳಿದುಹೋದ ಪಕ್ಷಿಗಳಿಗೆ ಮಾತ್ರ ಸೀಮಿತವಲ್ಲ. ಇಂದು ಅದೆಷ್ಟೋ ಪಕ್ಷಿ ಪ್ರಭೇದಗಳು ಉಳಿವಿಗಾಗಿ ಹೋರಾಡುತ್ತಿವೆ. ಕೆಲವು ಪ್ರಭೇದಗಳ ಸಂಖ್ಯೆ ತೀರಾ ಕಡಿಮೆಯಿದೆ. ಇನ್ನು ಕೆಲವು ಪಕ್ಷಿಗಳ ಮೊಟ್ಟೆಗಳನ್ನು ಸಂರಕ್ಷಿಸುವುದು ಅಥವಾ ಕೃತಕವಾಗಿ ಕಾವು ಕೊಡುವುದು ಅತ್ಯಂತ ಕಷ್ಟದ ಕೆಲಸ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಂದು ಆರೋಗ್ಯವಂತ ಮರಿಯೂ ಮುಖ್ಯವಾಗುತ್ತದೆ.

ನೈಸರ್ಗಿಕ ಕವಚದ ಹೊರತಾಗಿ ಭ್ರೂಣಗಳಿಗೆ ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ವಿಜ್ಞಾನಿಗಳಿಗೆ ಸಾಧ್ಯವಾದರೆ, ಸಾಂಪ್ರದಾಯಿಕ ವಿಧಾನಗಳು ವಿಫಲವಾದಾಗ ಸಂರಕ್ಷಣಾ ಕಾರ್ಯಕ್ರಮಗಳಿಗೆ ಇದೊಂದು ಹೊಸ ಆಶಾಕಿರಣವಾಗಲಿದೆ. ಇದು ಮಾಂತ್ರಿಕ ಪರಿಹಾರವಲ್ಲದಿದ್ದರೂ, ವನ್ಯಜೀವಿ ಸಂರಕ್ಷಕರ ಪಾಲಿಗೆ ಇದೊಂದು ಪ್ರಬಲ ಅಸ್ತ್ರವಾಗಬಲ್ಲದು.

ಸಂಶೋಧನೆಗೆ ಹೊಸ ಆಯಾಮ:

ಸಾಮಾನ್ಯ ಮೊಟ್ಟೆಯೊಳಗೆ ಭ್ರೂಣವು ಬೆಳೆಯುವ ಪ್ರಕ್ರಿಯೆಯನ್ನು ವೀಕ್ಷಿಸುವುದು ಸುಲಭವಲ್ಲ. ಕವಚವು ಬಹುಪಾಲು ಪ್ರಕ್ರಿಯೆಯನ್ನು ಮರೆಮಾಚುತ್ತದೆ. ಆದರೆ ಈ ಕವಚವಿಲ್ಲದ ವ್ಯವಸ್ಥೆಯು ವಿಜ್ಞಾನಿಗಳಿಗೆ ಯಾವುದೇ ಅಡೆತಡೆಯಿಲ್ಲದೆ ಭ್ರೂಣದ ಬೆಳವಣಿಗೆಯನ್ನು ಹತ್ತಿರದಿಂದ ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಮೊಟ್ಟೆಯೊಡೆಯುವ ಮುನ್ನ ಪಕ್ಷಿಗಳು ಹೇಗೆ ಬೆಳೆಯುತ್ತವೆ ಮತ್ತು ಕೆಲವು ಭ್ರೂಣಗಳು ಏಕೆ ಸಾವನ್ನಪ್ಪುತ್ತವೆ ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಇದು ಸಹಾಯ ಮಾಡುತ್ತದೆ.ಈ ಅಧ್ಯಯನಗಳು ವನ್ಯಜೀವಿ ಸಂರಕ್ಷಣೆ ಮತ್ತು ಪಶುವೈದ್ಯಕೀಯ ವಿಜ್ಞಾನ ಎರಡಕ್ಕೂ ನೆರವಾಗಲಿವೆ.

ಸದ್ಯ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪರೀಕ್ಷಿಸಲಾಗಿದೆ. ಆದರೆ ಒಂದು ಯಶಸ್ವಿ ಪ್ರಯೋಗವು ಎಲ್ಲಾ ಪಕ್ಷಿ ಪ್ರಭೇದಗಳಿಗೂ ಹೊಂದಿಕೆಯಾಗುತ್ತದೆ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ಪ್ರಕೃತಿಯನ್ನು ಅರ್ಥಮಾಡಿಕೊಳ್ಳುವುದು ಅಂದುಕೊಂಡಷ್ಟು ಸುಲಭವಲ್ಲ.

ಈ ವ್ಯವಸ್ಥೆಯನ್ನು ವಿವಿಧ ರೀತಿಯ ಪಕ್ಷಿಗಳಿಗೆ ಹೇಗೆ ಅಳವಡಿಸಬಹುದು ಮತ್ತು ಕಾಲಾನಂತರದಲ್ಲಿ ಇದು ನಿರಂತರವಾಗಿ ಆರೋಗ್ಯಕರ ಮರಿಗಳನ್ನು ಉತ್ಪಾದಿಸುವುದಕ್ಕೆ ಅವಕಾಶ ಮಾಡಿಕೊಡುವುದೇ ಎಂಬುದನ್ನು ಸಂಶೋಧಕರು ಈಗ ಪರೀಕ್ಷಿಸಬೇಕಾಗಿದೆ.

ಲಕ್ಷಾಂತರ ವರ್ಷಗಳಿಂದ, ಪಕ್ಷಿಗಳು ಒಂದು ಸರಳ ಕವಚದ ವಿನ್ಯಾಸವನ್ನೇ ಅವಲಂಬಿಸಿವೆ. ಇದೀಗ ವಿಜ್ಞಾನಿಗಳು ಎಚ್ಚರಿಕೆಯಿಂದ ನಿಯಂತ್ರಿತ ವಾತಾವರಣದಲ್ಲಿ ಆ ಕವಚವನ್ನು ಬದಲಾಯಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಇದು ಭವಿಷ್ಯದಲ್ಲಿ ಅಳಿವಿನಂಚಿನಲ್ಲಿರುವ ಪಕ್ಷಿಗಳನ್ನು ಉಳಿಸುತ್ತದೆಯೋ ಅಥವಾ ಜೀವಿಗಳನ್ನು ಮರಳಿ ತರುವ ಯೋಜನೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+