ಜೈಲಲ್ಲೇ ಸ್ವರ್ಗ ಸೃಷ್ಟಿಸಿದ ಮಹಾತಾಯಿ, ಪಾಪಿ ಗಂಡನ ಕ್ರೌರ್ಯಕ್ಕೆ ಸಾಧ್ವಿ ಸೋನಾಬಾಯಿ ನೀಡಿದ ಉತ್ತರವಿದು!
ಮುದಿ ಗಂಡನ ಅನುಮಾನಕ್ಕೆ ಬಲಿಯಾಗಿ ಹದಿನೈದು ವರ್ಷ ಗಾಳಿ ಬೆಳಕು ಆಡದ ಜೈಲಿನಲ್ಲಿದ್ದ ಸೋನಾಬಾಯಿ ಅದನ್ನೇ ಸ್ವರ್ಗ ಮಾಡಿದ ನಂಬಲಸಾಧ್ಯವಾದ ಕಥೆ ಇದು. ಹೆಣ್ಮಗಳ ಛಲದ ಕಥೆ ಎಲ್ಲ ನೊಂದವರಿಗೆ ಸ್ಫೂರ್ತಿ ನೀಡುವಂತಿದೆ.
ಇವಳೊಬ್ಬಳು ಇದ್ದಳು ಅನ್ನೋದು ಬರೋಬ್ಬರಿ 15 ವರ್ಷಗಳ ಕಾಲ ಯಾವೊಬ್ಬನಿಗೂ ಗೊತ್ತೇ ಇರಲಿಲ್ಲ. ಅಷ್ಟಕ್ಕೂ ಅವಳಿದ್ದದ್ದು ಎಲ್ಲಿ ಅಂದರೆ ಕಿಟಕಿಯೂ ಇಲ್ಲದ ಜೀವ ಹಿಡಿದುಕೊಳ್ಳಲ್ಲಷ್ಟೆ ಗಾಳಿ ಇದ್ದ ಕಗ್ಗತ್ತಲ ಕೋಣೆಯಲ್ಲಿ. ಅವಳ ಮುದಿ ಗಂಡನ ಅಮಾನವೀಯ ಕ್ರೌರ್ಯಕ್ಕೆ ಅವಳು ಕೊಟ್ಟ ಕೊಡುಗೆ ಸ್ವರ್ಗ ಸದೃಶ ಕಲಾಸೃಷ್ಟಿ. ಇದು ಸೋನಾ ಬಾಯಿ ಎಂಬ ಮಹಾನ್ ಕಲಾವಿದೆಯ ಕಥೆ.

ಇಂದು ಜಗತ್ತಿನಾದ್ಯಂತ ತನ್ನ ಕಲೆಯ ಕಾರಣಕ್ಕೆ ಹೆಸರುವಾಸಿಯಾಗಿರುವ ಸೋನಾಬಾಯಿಗೆ ಆರಂಭದಲ್ಲಿ ಕಲೆ ಹವ್ಯಾಸ ಆಗಿರಲಿಲ್ಲ. ಕಲೆಯ ಬಗ್ಗೆ ಅವಳಿಗೆ ಅಂಥಾ ವ್ಯಾಮೋಹವೂ ಇರಲಿಲ್ಲ. ಬಹುಶಃ ಎಲ್ಲರಂತೆ ಅವಳದೂ ಸಾಮಾನ್ಯ ಬದುಕಾಗಿದ್ದರೆ ಅವಳೊಬ್ಬ ಸಾಮಾನ್ಯ ಹಳ್ಳಿ ಹೆಣ್ಮಗಳಾಗಿ ಬದುಕಿ ಬಾಳುತ್ತಿದ್ದಳೇನೋ. ಆದರೆ ಅವಳ ಬದುಕಲ್ಲಿ ಬಾಳಿಸಬೇಕಾದ ಗಂಡನೇ ಕ್ರೂರಿಯಾಗಿಬಿಟ್ಟ. ಆದರೆ ಅವಳು ಛಲದಿಂದ ಕಗ್ಗತ್ತಲ ಕೂಪದಲ್ಲಿ ಕಳೆದುಹೋಗಬೇಕಿದ್ದ ತನ್ನ ಬದುಕನ್ನು ಸ್ವರ್ಗಸದೃಶ ಮಾಡಿಬಿಟ್ಟಳು.
ಅನುಮಾನ ಪಿಶಾಚಿ
ಸೋನಾ ಬಾಯಿ ಹುಟ್ಟಿದ್ದು 1930ರಲ್ಲಿ ಛತ್ತೀಸ್‌ಗಡದ ಸರ್‌ಗುಂಜ್ ಜಿಲ್ಲೆಯಲ್ಲಿ ಒಂದು ಹಳ್ಳಿಯಲ್ಲಿ. ಈ ಹೆಣ್ಮಗಳಿಗೆ 12 ವರ್ಷದಲ್ಲೇ ಹೋಲಿರಾಮ್ ರಾಜ್‌ವಾರ್ ಎಂಬ ವಯಸ್ಸಾದ ವ್ಯಕ್ತಿಯೊಂದಿಗೆ ಈಕೆಯ ಮದುವೆಯಾಗುತ್ತದೆ. ಮದುವೆಯಾದ ಕೆಲವೇ ಸಮಯಕ್ಕೆ ಈಕೆಗೆ ಮಕ್ಕಳಾಗುತ್ತಿಲ್ಲ ಎಂದು ಗಂಡ ಮತ್ತು ಆತನ ಮನೆಯವರು ಹಿಂಸೆ ನೀಡಲಾರಂಭಿಸುತ್ತಾರೆ. ಕೊನೆಗೂ ಅವಳಿಗೊಂದು ಮಗುವಾಗುತ್ತದೆ. ಆದರೆ ಆ ಪಾಪಿ ಗಂಡನಿಗೆ ಮೈ ಎಲ್ಲ ಅನುಮಾನದ ವಿಷ. ಅದಕ್ಕಾಗಿ ಮೊದಲಿಗೆ ಅವಳನ್ನು ಎಲ್ಲ ಕೌಟುಂಬಿಕ ಸಂಬಂಧಗಳಿಂದ ದೂರವಿಡುತ್ತಾನೆ. ಅವಳು ಯಾರ ಜೊತೆಗೂ ಮಾತನಾಡುವಂತಿಲ್ಲ ಎಂಬ ಕಠಿಣ ನಿಯಮ ಹೇರುತ್ತಾನೆ. ಕ್ರಮೇಣ ಅವಳನ್ನು ಕಿಟಕಿಗಳೇ ಇಲ್ಲದ ಮನೆಯೊಳಗೆ ಕೂಡಿ ಹಾಕುತ್ತಾನೆ.
ಮೊದ ಮೊದಲಿಗೆ ಬಹಳ ಕಷ್ಟಪಟ್ಟ ಸೋನಾಬಾಯಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಳು. ಆದರೆ ಅಷ್ಟು ಸುಲಭಕ್ಕೆ ಸೋಲನ್ನು ಒಪ್ಪಿಕೊಳ್ಳದ ಅವಳು ಅಲ್ಲೇ ಹೊಸ ಕೆಲಸ ಶುರು ಮಾಡಿದಳು. ಆ ಕೋಣೆಯೊಳಗೇ ಜೇಡಿಮಣ್ಣು ಮತ್ತು ನೈಸರ್ಗಿಕ ಬಣ್ಣಗಳನ್ನು ಬಳಸಿ ಅವರು ಅದ್ಭುತವಾದ ಗೊಂಬೆಗಳನ್ನು ಕೆತ್ತಿದಳು. ಅಷ್ಟೇ ಅಲ್ಲ, ಮನೆಗೆ ಗಾಳಿ-ಬೆಳಕು ಬರಲಿ ಅಂತ ಮಣ್ಣಿನಿಂದಲೇ ಸುಂದರವಾದ ಜಾಲರಿಗಳನ್ನು (ಕಿಟಕಿಗಳನ್ನು) ತಯಾರು ಮಾಡಿದರು. ತಮ್ಮದೇ ಕಲ್ಪನೆಯಿಂದ ತಮ್ಮ ಜೈಲಿನಂತಿದ್ದ ಮನೆಯನ್ನೇ ಒಂದು ಅದ್ಭುತ ಕಲಾ ಲೋಕವನ್ನಾಗಿ ಬದಲಾಯಿಸಿದಳು.
ಜೇಡಿಮಣ್ಣಿನಿಂದ ಅರಳಿದ ಕಲೆ
ಸೋನಾಬಾಯಿ ಕಲೆ ಕೇವಲ ಗೊಂಬೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಮನೆಯೊಳಗಿನ ಉಸಿರುಕಟ್ಟುವ ಬೇಗೆಯನ್ನು ತಡೆದುಕೊಳ್ಳಲು ಅವರು ಒಂದು ಉಪಾಯ ಮಾಡಿದರು. ಮನೆಯಲ್ಲಿದ್ದ ಬಿದಿರಿನ ತುಂಡುಗಳನ್ನು ಸಣ್ಣ ಸಣ್ಣ ಪಟ್ಟಿಗಳಾಗಿ ಸೀಳಿ, ಅವುಗಳನ್ನು ಬಗ್ಗಿಸಿ ಒಟ್ಟಿಗೆ ಸೇರಿಸಿ ಒಂದು ಸುಂದರವಾದ ಜಾಲರಿಯ ರೂಪ ನೀಡಿದರು. ಆ ಬಿದಿರಿನ ಜಾಲರಿಯನ್ನು ಅಂಗಳದ ಕಂಬಗಳ ಮಧ್ಯೆ ಸಿಕ್ಕಿಸಿ, ಅದರ ಮೇಲೆ ಜೇಡಿಮಣ್ಣನ್ನು ಸಂಪೂರ್ಣವಾಗಿ ಬಳಿದು ನಯಗೊಳಿಸಿದರು.
ಈ ಮಣ್ಣಿನ ಜಾಲರಿಗಳು ಬಿಸಿಲಿನ ತಾಪವನ್ನು ಕಡಿಮೆ ಮಾಡಿ, ಮನೆಗೆ ತಂಪಾದ ಗಾಳಿ ಮತ್ತು ಮಂದವಾದ ಬೆಳಕು ಬರುವಂತೆ ಮಾಡಿದವು. ಇದರಿಂದ ಕತ್ತಲಾಗಿದ್ದ ಅವರ ಮನೆಗೆ ಒಂದು ಹೊಸ ಕಳೆ ಬಂತು. ಇಷ್ಟೇ ಅಲ್ಲದೆ, ಈ ಕಲಾಕೃತಿಗಳಿಗೆ ಬಣ್ಣ ಹಚ್ಚಲು ಅವರೇ ಸ್ವತಃ ಮಸಾಲೆ ಪದಾರ್ಥಗಳು, ಸೊಪ್ಪುಗಳು ಮತ್ತು ನೈಸರ್ಗಿಕ ಖನಿಜಗಳನ್ನು ಅರೆದು ಬಣ್ಣಗಳನ್ನು ತಯಾರು ಮಾಡಿಕೊಂಡರು. ಖಾಲಿ ಇದ್ದ ಗೋಡೆಗಳ ಮೇಲೆಲ್ಲಾ ಮಣ್ಣಿನ ಚಿತ್ರಗಳನ್ನು ಬಿಡಿಸಿ, ಕಂಬಗಳ ಮಧ್ಯೆ ಜಾಲರಿಗಳನ್ನು ಇಟ್ಟು ತಮ್ಮ ಜೈಲನ್ನೇ ಒಂದು ಸ್ವರ್ಗವನ್ನಾಗಿ ಮಾಡಿದರು.
ಹದಿನೈದು ವರ್ಷಗಳ ಬಳಿಕ ಆ ಪಾಪಿ ಗಂಡ ಇವರನ್ನು ಬಂಧಮುಕ್ತಗೊಳಿಸಿದ. ಆಗ ಹೊರ ಜಗತ್ತಿಗೆ ಹೀಗೊಬ್ಬಳಿದ್ದಳು ಎಂಬುದು ತಿಳಿಯಿತು. ಹದಿನೈದು ವರ್ಷಗಳ ಕಾಲ ಇವಳು ತಪಸ್ಸಿನಂತೆ ಮಾಡಿದ ಕಲೆ ಹೊರಗಿನವರ ಗಮನ ಸೆಳೆಯಿತು. 1983ರಲ್ಲಿ ಭಾರತ್ ಭವನದ ಸಂಶೋಧಕರು ಇವರ ಮನೆಯನ್ನು ಗುರುತಿಸಿದ ನಂತರ, ಸೋನಾಬಾಯಿ ಅವರ ಹೆಸರು ದೇಶಾದ್ಯಂತ ಮನೆಮಾತಾಯಿತು. ಅವರು ಬೇರೆ ಬೇರೆ ದೇಶಗಳಿಗೂ ಹೋಗಿ ಅಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸುವಂತಾಯ್ತು. ಅನೇಕ ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿಗಳೂ ಬಂದವು. 2007ರಲ್ಲಿ ಈ ಮಹಾನ್ ಕಲಾವಿದೆ ಅಸ್ತಂಗತರಾದರು.
(ಬರಹ: ಭವಾನಿ ಭಟ್)














Click it and Unblock the Notifications