ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪ್ರಯಾಣಕ್ಕೆ ಸೇಫ್‌ ಅಲ್ವಾ? ಹೆದ್ದಾರಿಯಲ್ಲೇ ಕಾರು ಅಡ್ಡಗಟ್ಟಿ ಮನಬಂದಂತೆ ಥಳಿಸಿದ ಪುಂಡರು

ಉದ್ಯಾನನಗರಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರು ನಡುವಿನ ಪ್ರಯಾಣದ ಸಮಯ ಕಡಿಮೆ ಮಾಡಿದ ಹೆಮ್ಮೆಯ ದಶಪಥ ಹೆದ್ದಾರಿ (Expressway) ಮತ್ತೆ ಪ್ರಯಾಣಿಕರಿಗೆ ಆತಂಕ ಮೂಡಿಸಿದೆ. ಇತ್ತೀಚೆಗಷ್ಟೇ ನಡೆದ ಪ್ರಭಾವಿ ವ್ಯಕ್ತಿಯೊಬ್ಬರ ಪುತ್ರ ಹಾಗೂ ಗ್ಯಾಂಗ್‌ನಿಂದ ಟ್ರಕ್ ಮೇಲೆ ಫೈರಿಂಗ್ ನಡೆದಿದ್ದ ಕೇಸ್ ನಡುವೆ ಇದೀಗ ಹೆದ್ದಾರಿಯ ಮಧ್ಯದಲ್ಲೇ ಕುಟುಂಬವೊಂದರ ಮೇಲೆ ಪುಂಡರ ಗುಂಪೊಂದು ನಡೆಸಿರುವ ಭೀಕರ ಹಲ್ಲೆ ಇಡೀ ರಾಜ್ಯವನ್ನೇ ನಡುಗಿಸಿದೆ. ಕೋಟ್ಯಂತರ ರೂಪಾಯಿ ವೆಚ್ಚದ ಈ ಎಕ್ಸ್‌ಪ್ರೆಸ್‌ವೇನಲ್ಲಿ ಸಾರ್ವಜನಿಕರಿಗೆ ಕಾನೂನಿನ ರಕ್ಷಣೆ ಇಲ್ಲವೇ ಎಂಬ ಗಂಭೀರ ಪ್ರಶ್ನೆಯನ್ನು ಮುಂದಿಟ್ಟಿದೆ.

ವೈರಲ್‌ ವಿಡಿಯೋದಲ್ಲಿ ಏನಿದೆ?

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನ ಮದ್ದೂರು ಐದನೇ ಹಂತದ (Maddur Stretch) ವ್ಯಾಪ್ತಿಯಲ್ಲಿ ಚಲಿಸುತ್ತಿದ್ದ ಆಲ್ಟೋ ಕಾರೊಂದನ್ನು ಅಡ್ಡಗಟ್ಟಿದ ಪುಂಡರ ಗುಂಪೊಂದು, ಕುಟುಂಬದವರ ಕಣ್ಣೆದುರೇ ಚಾಲಕನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದೆ. ಹಿಂಬದಿಯಲ್ಲಿದ್ದ ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿರುವ ಈ ಭೀಕರ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Bengaluru Mysuru Expressway

ವೈರಲ್ ಆಗಿರುವ ವಿಡಿಯೋದಲ್ಲಿ, ವೇಗವಾಗಿ ಚಲಿಸುತ್ತಿರುವ ಹೆದ್ದಾರಿಯ ಮಧ್ಯದಲ್ಲೇ ಕಾರೊಂದನ್ನು ಬಲವಂತವಾಗಿ ನಿಲ್ಲಿಸುವುದು ಕಂಡುಬಂದಿದೆ. ಕಾರು ನಿಲ್ಲುತ್ತಿದ್ದಂತೆ ಧಾವಿಸಿ ಬರುವ ಯುವಕರ ಗುಂಪು, ಆಲ್ಟೋ ಕಾರಿನ ಚಾಲಕನ ಸೀಟಿನ ಡೋರ್ ಅನ್ನು ಬಲವಂತವಾಗಿ ತೆಗೆದು ಒಳಗೆ ಕುಳಿತಿದ್ದ ವ್ಯಕ್ತಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಲು ಪ್ರಾರಂಭಿಸುತ್ತದೆ. ಲಕ್ಷಾಂತರ ರೂಪಾಯಿ ವೆಚ್ಚದ ಈ ಹೈವೇಯಲ್ಲಿ ಸಾರ್ವಜನಿಕರ ಕಣ್ಣೆದುರೇ ಕಾನೂನಿನ ಭಯವಿಲ್ಲದೆ ಈ ಪುಂಡಾಟಿಕೆ ನಡೆದಿದೆ. ವರದಿಗಳ ಪ್ರಕಾರ ಕಾರು ಓವರ್‌ಟೇಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಈ ಗಲಾಟೆ ನಡೆದಿದೆ ಎನ್ನಲಾಗಿದೆ.

ಕಾರಿನಲ್ಲಿದ್ದರು ಮಹಿಳೆ, ಮಗು ಮತ್ತು ವೃದ್ಧೆ

ಹಲ್ಲೆಗೊಳಗಾದ ಮಾರುತಿ ಆಲ್ಟೋ ಕಾರಿನಲ್ಲಿ ದಂಪತಿ, ಮಗು ಹಾಗೂ ವೃದ್ಧೆ ಸೇರಿದಂತೆ ಸುಮಾರು 4ರಿಂದ 5 ಜನ ಪ್ರಯಾಣಿಕರಿದ್ದರು ಎನ್ನಲಾಗಿದೆ. ಪುಂಡರ ಗುಂಪು ಚಾಲಕನ ತಲೆಯ ಭಾಗಕ್ಕೆ ಹಲ್ಲೆ ಮಾಡುತ್ತಿದ್ದಾಗ, ಕಾರಿನಲ್ಲಿದ್ದ ಮಹಿಳೆ ಹೊರಗೆ ಓಡಿಬಂದು ಕೈಮುಗಿದು ಹಲ್ಲೆ ನಿಲ್ಲಿಸುವಂತೆ ಬೇಡಿಕೊಳ್ಳುವ ದೃಶ್ಯ ನಡುಕ ಹುಟ್ಟಿಸುವಂತಿದೆ. ಆದರೂ ಬಿಡದ ದುಷ್ಕರ್ಮಿಗಳು ಆ ವ್ಯಕ್ತಿಯನ್ನು ಕಾರಿನಿಂದ ಹೊರಗೆ ಎಳೆದು ಹಾಕಿ ರಸ್ತೆಯಲ್ಲೇ ಥಳಿಸಿದ್ದಾರೆ.

ಮಧ್ಯಪ್ರವೇಶಿಸಿದ ಸಹ ಪ್ರಯಾಣಿಕರು

ಹೆದ್ದಾರಿ ಮಧ್ಯದಲ್ಲೇ ಈ ಭೀಕರ ಹಲ್ಲೆ ನಡೆಯುತ್ತಿರುವುದನ್ನು ಗಮನಿಸಿದ ಹಿಂಬದಿಯ ವಾಹನಗಳಲ್ಲಿದ್ದ ಇತರ ಪ್ರಯಾಣಿಕರು ತಕ್ಷಣವೇ ಕಾರುಗಳಿಂದ ಇಳಿದು ಬಂದು ಜಗಳ ಬಿಡಿಸಲು ಯತ್ನಿಸಿದ್ದಾರೆ. ಸದ್ಯ ಹಾಸನ ಆರ್‌ಟಿಒ ವ್ಯಾಪ್ತಿಗೆ ಸೇರಿದ ವಾಹನದಲ್ಲಿ ಬಂದಿದ್ದ ಯುವಕರು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆಯು ಹೆದ್ದಾರಿಗಳಲ್ಲಿ ಸಂಚರಿಸುವ ಸಾರ್ವಜನಿಕರ ಹಾಗೂ ಕುಟುಂಬಗಳ ಸುರಕ್ಷತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ. ಸದ್ಯ ವಿಡಿಯೋ ವೈರಲ್ ಬೆನ್ನಲ್ಲೇ ಪೊಲೀಸರು ತನಿಖೆ ಕೈಗೊಂಡಿದ್ದು, ಇಂತಹ ರೌಡಿಸಂ ಪ್ರವೃತ್ತಿಯ ಪುಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

ನೂರಾರು ವಾಹನಗಳು ಸಂಚರಿಸುವ ಹೆದ್ದಾರಿಯ ಮಧ್ಯೆ ಕಾನೂನನ್ನು ಕೈಗೆತ್ತಿಕೊಂಡು ಪುಂಡರು ರಾಜಾರೋಷವಾಗಿ ಈ ರೀತಿ ವರ್ತಿಸಿರುವುದನ್ನು ಕಂಡು ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ. ಜೇಬಿನಿಂದ ದುಬಾರಿ ಟೋಲ್‌ ಪಾವತಿಸಿ, ಹೆದ್ದಾರಿಯಲ್ಲಿ ನೆಮ್ಮದಿಯಾಗಿ, ಸುರಕ್ಷಿತವಾಗಿ ಪ್ರಯಾಣ ಮಾಡೋಣ ಅಂದುಕೊಂಡು ಬರುವ ಸಾರ್ವಜನಿಕರಿಗೆ ಇತ್ತೀಚೆಗೆ ಮಿತಿಮೀರುತ್ತಿರುವ ಈ ರೋಡ್ ರೇಜ್ ಹಾಗೂ ಪುಂಡರ ಅಟ್ಟಹಾಸ ಭೀತಿ ಹುಟ್ಟಿಸುತ್ತಿದೆ. ಮಹಿಳೆಯರು, ಮಕ್ಕಳಿರುವ ಕಾರನ್ನು ಅಡ್ಡಗಟ್ಟಿ ರೌಡಿಗಳಂತೆ ವರ್ತಿಸುವ ಇಂತಹ ಪುಂಡರಿಗೆ ಕಾನೂನಿನ ಭಯವೇ ಇಲ್ಲವೇ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+