SIR: ಮತದಾರರ ಪಟ್ಟಿ ಪರಿಷ್ಕರಣೆ: ಯಾವ ವಯಸ್ಸಿನವರು ಯಾವ ದಾಖಲೆ ಸಲ್ಲಿಸಬೇಕು ? ಇಲ್ಲಿದೆ ಸಂಪೂರ್ಣ ಪಟ್ಟಿ
SIR: ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಪ್ರಾರಂಭವಾಗಿದ್ದು, ಚುರುಕು ಪಡೆದುಕೊಂಡಿದೆ. ಎಸ್ಐಆರ್ಗೆ ಕೆಲವೊಂದು ನಿರ್ದಿಷ್ಟ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ನೀವು 2002ರಲ್ಲಿ ಅಥವಾ ಅದಕ್ಕೂ ಮುಂಚೆ ಮತದಾನ ಮಾಡಿದ್ದರೆ ಆ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು. ಒಂದೊಮ್ಮೆ ಆ ಅವಧಿಯಲ್ಲಿ ನೀವು ಮತದಾನ ಮಾಡದೆ ಇದ್ದರೆ ಕೆಲವೊಂದು ದಾಖಲೆಗಳನ್ನು ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ. ಹಾಗಾದರೆ ಯಾವ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು ಯಾವ ವಯಸ್ಸಿನಲ್ಲಿ ಜನಿಸಿದವರು ಯಾವ ದಾಖಲೆಯನ್ನು ಸಲ್ಲಿಕೆ ಮಾಡಬೇಕು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಗಣತಿ ನಮೂನೆಗಾಗಿ ಮಾಹಿತಿ ಪುಟ
ಮತದಾರರು ಗಣತಿ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಲು, https://voters.eci.gov.in/ ಜಾಲತಾಣದಲ್ಲಿ ಹಿಂದಿನ ವಿಶೇಷ ಸಮಗ್ರ ಪರಿಷ್ಕರಣೆ (SIR) ಮತದಾರರ ಪಟ್ಟಿಗಳಲ್ಲಿ ತಮ್ಮ ಹೆಸರು ಹಾಗೂ ಸಂಬಂಧಪಟ್ಟ ಕುಟುಂಬ ಸದಸ್ಯರ ಹೆಸರನ್ನು ಪರಿಶೀಲಿಸಬಹುದು. ಹೆಚ್ಚಿನ ಸಹಾಯಕ್ಕಾಗಿ ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿಯವರನ್ನು (BLO) ಸಂಪರ್ಕಿಸಬಹುದು. ಗಣತಿ ನಮೂನೆಯಲ್ಲಿ ಒದಗಿಸಿರುವ ಹಿಂದಿನ ವಿಶೇಷ ಸಮಗ್ರ ಪರಿಷ್ಕರಣೆ (SIR) ಮತದಾರರ ಪಟ್ಟಿಯ ವಿವರಗಳು ಲಭ್ಯವಿಲ್ಲದಿದ್ದಲ್ಲಿ ಅಥವಾ ಡೇಟಾಬೇಸ್ನಲ್ಲಿರುವ ಮಾಹಿತಿಯೊಂದಿಗೆ ತಾಳೆಯಾಗದಿದ್ದಲ್ಲಿ, ಸಂಬಂಧಪಟ್ಟ ಮತದಾರರಿಗೆ ಮತದಾರರ ನೋಂದಣಾಧಿಕಾರಿಯವರು (ERO) ನೋಟಿಸ್ ನೀಡುತ್ತಾರೆ. ಅಂತಹ ನೋಟಿಸ್ ಸ್ವೀಕರಿಸಿದ ನಂತರ ಮತದಾರರು ಕೆಳಕಂಡ ವರ್ಗಗಳ ಆಧಾರದ ಮೇಲೆ ದಾಖಲೆಗಳನ್ನು ಸಲ್ಲಿಸಬೇಕು:

• 01.07.1987 ಕ್ಕಿಂತ ಮೊದಲು ಭಾರತದಲ್ಲಿ ಜನಿಸಿದ್ದರೆ
ಸ್ವಂತಕ್ಕೆ ಸಂಬಂಧಿಸಿದಂತೆ, ಜನ್ಮ ದಿನಾಂಕ ಮತ್ತು ಅಥವಾ ಜನ್ಮ ಸ್ಥಳವನ್ನು ದೃಢೀಕರಿಸುವ ಕೆಳಗಿನ ಪಟ್ಟಿಯಲ್ಲಿರುವ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಬೇಕು.
• 01.07.1987 ರಿಂದ 02.12.2004 ರವರೆಗೆ ಭಾರತದಲ್ಲಿ ಜನಿಸಿದ್ದರೆ
ಸ್ವಂತಕ್ಕೆ ಸಂಬಂಧಿಸಿದಂತೆ, ಜನ್ಮ ದಿನಾಂಕ ಮತ್ತು/ಅಥವಾ ಜನ್ಮ ಸ್ಥಳವನ್ನು ದೃಢೀಕರಿಸುವ ಕೆಳಗಿನ ಪಟ್ಟಿಯಲ್ಲಿರುವ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಬೇಕು.
ತಂದೆ ಅಥವಾ ತಾಯಿಗೆ ಸಂಬಂಧಿಸಿದಂತೆ, ಅವರ ಜನ್ಮ ದಿನಾಂಕ ಮತ್ತು/ಅಥವಾ ಜನ್ಮ ಸ್ಥಳವನ್ನು ದೃಢೀಕರಿಸುವ ಕೆಳಗಿನ ಪಟ್ಟಿಯಲ್ಲಿರುವ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಬೇಕು.
• 02.12.2004ರ ನಂತರ ಭಾರತದಲ್ಲಿ ಜನಿಸಿದ್ದರೆ
1. ಸ್ವಂತಕ್ಕೆ ಸಂಬಂಧಿಸಿದಂತೆ, ಜನ್ಮ ದಿನಾಂಕ ಮತ್ತು/ಅಥವಾ ಜನ್ಮ ಸ್ಥಳವನ್ನು ದೃಢೀಕರಿಸುವ ಕೆಳಗಿನ ಪಟ್ಟಿಯಲ್ಲಿರುವ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಬೇಕು.
2. ತಂದೆಗೆ ಸಂಬಂಧಿಸಿದಂತೆ, ಅವರ ಜನ್ಮ ದಿನಾಂಕ ಮತ್ತು/ಅಥವಾ ಜನ್ಮ ಸ್ಥಳವನ್ನು ದೃಢೀಕರಿಸುವ ಕೆಳಗಿನ ಪಟ್ಟಿಯಲ್ಲಿರುವ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಬೇಕು.
3. ತಾಯಿಗೆ ಸಂಬಂಧಿಸಿದಂತೆ, ಅವರ ಜನ್ಮ ದಿನಾಂಕ ಮತ್ತು/ಅಥವಾ ಜನ್ಮ ಸ್ಥಳವನ್ನು ದೃಢೀಕರಿಸುವ ಕೆಳಗಿನ ಪಟ್ಟಿಯಲ್ಲಿರುವ ಯಾವುದಾದರೂ ಒಂದು ದಾಖಲೆಯನ್ನು ಸಲ್ಲಿಸಬೇಕು.
4. ಪೋಷಕರಲ್ಲಿ ಯಾರಾದರೂ ಭಾರತೀಯ ಪ್ರಜೆಯಾಗಿರದಿದ್ದಲ್ಲಿ, ನಿಮ್ಮ ಜನನದ ಸಮಯದಲ್ಲಿ ಅವರ ಮಾನ್ಯ ಪಾಸ್ಪೋರ್ಟ್ ಮತ್ತು ವೀಸಾದ ಪ್ರತಿಯನ್ನು ಸಲ್ಲಿಸಬೇಕು.
5. ಭಾರತದ ಹೊರಗೆ ಜನಿಸಿದ್ದರೆ (ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿ/ಮಿಷನ್ ನೀಡಿರುವ ಜನನ ನೋಂದಣಿ ಪುರಾವೆಯನ್ನು ಲಗತ್ತಿಸಬೇಕು).
6. ನೋಂದಣಿ (Registration) ಅಥವಾ ದೇಶೀಕರಣ (Naturalisation) ಮೂಲಕ ಭಾರತೀಯ ಪೌರತ್ವವನ್ನು ಪಡೆದಿದ್ದರೆ (ಪೌರತ್ವ ನೋಂದಣಿ ಪ್ರಮಾಣಪತ್ರವನ್ನು ಲಗತ್ತಿಸಬೇಕು).
ಸೂಚನಾತ್ಮಕ ದಾಖಲೆಗಳ ಪಟ್ಟಿ (Indicative and not exhaustive)
(ಮೇಲೆ ಉಲ್ಲೇಖಿಸಿರುವ ಸಂದರ್ಭಗಳಲ್ಲಿ ಸ್ವಂತ, ತಂದೆ ಮತ್ತು ತಾಯಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸ್ವಯಂ-ದೃಢೀಕೃತ ದಾಖಲೆಗಳನ್ನು ಸಲ್ಲಿಸಬೇಕು.)
1) ಯಾವುದೇ ಕೇಂದ್ರ ಸರ್ಕಾರ/ರಾಜ್ಯ ಸರ್ಕಾರ/ಸಾರ್ವಜನಿಕ ವಲಯದ ಉದ್ಯಮದ ಖಾಯಂ ನೌಕರ ಅಥವಾ ಪಿಂಚಣಿದಾರರಿಗೆ ನೀಡಿರುವ ಗುರುತಿನ ಚೀಟಿ ಅಥವಾ ಪಿಂಚಣಿ ಪಾವತಿ ಆದೇಶ (PPO).
2) ಭಾರತದಲ್ಲಿ 01.07.1987 ಕ್ಕಿಂತ ಮೊದಲು ಸರ್ಕಾರ, ಸ್ಥಳೀಯ ಪ್ರಾಧಿಕಾರ, ಬ್ಯಾಂಕ್, ಅಂಚೆ ಇಲಾಖೆ, ಭಾರತೀಯ ಜೀವ ವಿಮಾ ನಿಗಮ (LIC) ಅಥವಾ ಸಾರ್ವಜನಿಕ ವಲಯದ ಉದ್ಯಮಗಳಿಂದ ನೀಡಲಾದ ಯಾವುದೇ ಗುರುತಿನ ಚೀಟಿ, ಪ್ರಮಾಣಪತ್ರ ಅಥವಾ ದಾಖಲೆ.
3) ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜನನ ಪ್ರಮಾಣಪತ್ರ.
4) ಪಾಸ್ಪೋರ್ಟ್.
5) ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯದಿಂದ ನೀಡಲಾದ ಮೆಟ್ರಿಕ್ಯುಲೇಷನ್ ಅಥವಾ ಶೈಕ್ಷಣಿಕ ಪ್ರಮಾಣಪತ್ರ.
6) ರಾಜ್ಯದ ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಖಾಯಂ ನಿವಾಸ ಪ್ರಮಾಣಪತ್ರ.
7) ಅರಣ್ಯ ಹಕ್ಕು ಪ್ರಮಾಣಪತ್ರ.
8) ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಒಬಿಸಿ (OBC)/ಪರಿಶಿಷ್ಟ ಜಾತಿ (SC)/ಪರಿಶಿಷ್ಟ ಪಂಗಡ (ST) ಅಥವಾ ಇತರ ಜಾತಿ ಪ್ರಮಾಣಪತ್ರ.
9) ರಾಷ್ಟ್ರೀಯ ನಾಗರಿಕರ ನೋಂದಣಿ (National Register of Citizens - NRC) (ಅಸ್ತಿತ್ವದಲ್ಲಿರುವ ಸ್ಥಳಗಳಲ್ಲಿ).
10) ಯಾವುದೇ ಕಾನೂನುಬದ್ಧ ಅಥವಾ ಆಡಳಿತಾತ್ಮಕ ನಿಯಮಗಳ ಅಡಿಯಲ್ಲಿ ಸರ್ಕಾರಿ ಅಧಿಕಾರಿಗಳು ನಿರ್ವಹಿಸುವ ಕುಟುಂಬ ನೋಂದಣಿ (Family Register).
11) ಸರ್ಕಾರದಿಂದ ನೀಡಲಾದ ಜಮೀನು ಅಥವಾ ಮನೆ ಹಂಚಿಕೆ ಪ್ರಮಾಣಪತ್ರ.
12) ಆಧಾರ್ಗೆ ಸಂಬಂಧಿಸಿದಂತೆ, ಆಯೋಗವು ಪತ್ರ ಸಂಖ್ಯೆ 23/2025-ERS/Vol.II, ದಿನಾಂಕ 09.09.2025ರ ಮೂಲಕ (ಅನುಬಂಧ-II) ಹೊರಡಿಸಿರುವ ನಿರ್ದೇಶನಗಳು ಅನ್ವಯವಾಗುತ್ತವೆ.














Click it and Unblock the Notifications