ಟ್ರಾಫಿಕ್ ಫೈನ್ ಡಿಸ್ಕೌಂಟ್: ಇನ್ನು ಮೂರೇ ದಿನ ಈ ಆಫರ್, ಇಲ್ಲಿವರೆಗೆ ಸಂಗ್ರಹವಾದ ಒಟ್ಟು ದಂಡದ ಹಣವೆಷ್ಟು?
ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿರುವ ರಾಜ್ಯದ ಲಕ್ಷಾಂತರ ವಾಹನ ಸವಾರರಿಗೆ ಕರ್ನಾಟಕ ಸರ್ಕಾರ ನೀಡಿರುವ ಶೇಕಡಾ 50ರಷ್ಟು ರಿಯಾಯಿತಿ (Traffic Fine 50% Discount) ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ. ಈ ವಿಶೇಷ ಕೊಡುಗೆ ಜಾರಿಗೆ ಬಂದ ಕೇವಲ ಎರಡೇ ವಾರಗಳಲ್ಲಿ ಬೆಂಗಳೂರು ಸಂಚಾರ ಪೊಲೀಸರ ಖಜಾನೆಗೆ ಕೋಟಿ ಕೋಟಿ ಹಣ ಹರಿದುಬಂದಿದೆ.
ವಾಹನ ಸವಾರರು ಗಮನಿಸಬೇಕಾದ ಮುಖ್ಯ ವಿಷಯವೆಂದರೆ, ಈ ಶೇ 50ರಷ್ಟು ರಿಯಾಯಿತಿ ದಂಡ ಪಾವತಿಯ ಅವಧಿ ಇನ್ನೂ ಮುಕ್ತಾಯವಾಗಿಲ್ಲ. ಸಾರ್ವಜನಿಕರಿಗೆ ದಂಡ ಕಟ್ಟಲು ಇನ್ನೂ ಕಾಲಾವಕಾಶ ಬಾಕಿ ಇದೆ. ಇ-ಚಲನ್‌ನಲ್ಲಿ ದಾಖಲಾಗಿ, ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದ ಹಳೆಯ ಪ್ರಕರಣಗಳಿಗೆ ಶೇ 50% ರಷ್ಟು ರಿಯಾಯಿತಿ ನೀಡಿ ಆದೇಶ ಹೊರಡಿಸಿತ್ತು. ಈ ಮಹತ್ವದ ಆದೇಶವು ಜೂನ್ 21ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಕೇವಲ 20 ದಿನಗಳ ಸೀಮಿತ ಅವಧಿಗೆ ಅಂದರೆ ಜುಲೈ 10 ರವರೆಗೆ ಮಾತ್ರ ಈ ರಿಯಾಯಿತಿ ಚಾಲ್ತಿಯಲ್ಲಿರಲಿದೆ.

16 ದಿನಗಳಲ್ಲಿ 20 ಕೋಟಿ ಕಲೆಕ್ಷನ್
ಸರ್ಕಾರದ ಆದೇಶದ ಬೆನ್ನಲ್ಲೇ ಸಾರ್ವಜನಿಕರು ತಮ್ಮ ವಾಹನಗಳ ಮೇಲಿದ್ದ ದಂಡದ ಹೊರೆಯನ್ನು ಇಳಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಕೇವಲ 16 ದಿನಗಳ ಅವಧಿಯಲ್ಲಿ ಆನ್‌ಲೈನ್ ಸೇರಿದಂತೆ ವಿವಿಧ ವಿಧಾನಗಳ ಮೂಲಕ ದಾಖಲೆಯ ಮಟ್ಟದಲ್ಲಿ ದಂಡ ಪಾವತಿಯಾಗಿದೆ. ಬೆಂಗಳೂರು ಸಂಚಾರ ಪೊಲೀಸ್ ಇಲಾಖೆ ಹಂಚಿಕೊಂಡಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ ಹೀಗಿವೆ:
ಇತ್ಯರ್ಥಗೊಂಡ ಒಟ್ಟು ಪ್ರಕರಣಗಳು: 6,78,033 ಪ್ರಕರಣಗಳು
ಸಂಗ್ರಹವಾದ ಒಟ್ಟು ದಂಡದ ಮೊತ್ತ: ರೂ. 20,31,16,900
ನಿಮ್ಮ ವಾಹನದ ದಂಡ ಪಾವತಿಸುವುದು ಹೇಗೆ?
ಇನ್ನೂ ದಂಡ ಪಾವತಿಸದ ವಾಹನ ಸವಾರರಿಗೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಮತ್ತೊಮ್ಮೆ ಅವಕಾಶ ನೀಡಿದ್ದು, ಈ ಕೆಳಗಿನ ಸುಲಭ ವಿಧಾನಗಳ ಮೂಲಕ ಶೇ.50 ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಸಿ ರಶೀದಿ ಪಡೆಯಬಹುದಾಗಿದೆ:
ಆನ್‌ಲೈನ್ ಮೂಲಕ: ಪೇಟಿಎಂ (Paytm) ಆಪ್ ಅಥವಾ ಕರ್ನಾಟಕ ಸಾರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಆನ್‌ಲೈನ್‌ನಲ್ಲೇ ದಂಡ ಕಟ್ಟಬಹುದು.
ನಾಗರಿಕ ಸೇವಾ ಕೇಂದ್ರಗಳು: ನಿಮ್ಮ ಹತ್ತಿರದ 'ಕರ್ನಾಟಕ ಒನ್' (Karnataka One) ಅಥವಾ 'ಬೆಂಗಳೂರು ಒನ್' (Bengaluru One) ಕೇಂದ್ರಗಳಿಗೆ ಭೇಟಿ ನೀಡಿ ದಂಡ ಪಾವತಿಸಬಹುದು.
ಸಂಚಾರ ಪೊಲೀಸ್ ಠಾಣೆಗಳು: ನಿಮ್ಮ ವ್ಯಾಪ್ತಿಯ ಅಥವಾ ಹತ್ತಿರದ ಯಾವುದೇ ಸಂಚಾರ ಪೊಲೀಸ್ ಠಾಣೆಗೆ (Traffic Police Station) ನೇರವಾಗಿ ಭೇಟಿ ನೀಡಿಯೂ ದಂಡ ಇತ್ಯರ್ಥಪಡಿಸಿಕೊಳ್ಳಬಹುದು.
ನಗರದ ವಿವಿಧೆಡೆ ದಂಡ ವಸೂಲಾತಿ ಕೇಂದ್ರ
ಸಾರ್ವಜನಿಕರು ಇಲಾಖೆಯ ವೆಬ್‌ಸೈಟ್ ಅಥವಾ ಪೊಲೀಸ್ ಠಾಣೆಗಳಿಗೆ ಅಲೆಯುವುದನ್ನು ತಪ್ಪಿಸಲು ಹಾಗೂ ಸುಲಭವಾಗಿ ದಂಡ ಪಾವತಿಸಲು ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯು ನಗರದಾದ್ಯಂತ ಪ್ರಮುಖ ರಸ್ತೆ ಹಾಗೂ ಜಂಕ್ಷನ್‌ಗಳಲ್ಲಿ ವಿಶೇಷ ದಂಡ ವಸೂಲಾತಿ ಕೇಂದ್ರಗಳನ್ನು ತೆರೆದಿದೆ. ಈ ರಿಯಾಯಿತಿ ಆಫರ್ ಇನ್ನು ಕೇವಲ 3 ದಿನಗಳು ಮಾತ್ರವೇ ಬಾಕಿ ಉಳಿದಿದ್ದು, ಕೊನೆಯ ದಿನಗಳಲ್ಲಿ ಸರ್ವರ್ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರು ತಕ್ಷಣವೇ ಈ ಯೋಜನೆಯ ಲಾಭ ಪಡೆದುಕೊಳ್ಳಬಹುದು.
ಸವಾರರು ಹೆಣ್ಣೂರು ಜಂಕ್ಷನ್ (ರಿಂಗ್ ರಸ್ತೆ), ದೇವಸಂದ್ರ ಜಂಕ್ಷನ್ (ಓಲ್ಡ್ ಮದ್ರಾಸ್ ರಸ್ತೆ), ಕುಂದಲಹಳ್ಳಿ ಜಂಕ್ಷನ್ (ಓಲ್ಡ್ ಏರ್‌ಪೋರ್ಟ್ ರಸ್ತೆ), ಮೈಸೂರು ಬ್ಯಾಂಕ್ ಜಂಕ್ಷನ್ (ಕೆ.ಜಿ. ರಸ್ತೆ), ಸುಮ್ಮನಹಳ್ಳಿ ಜಂಕ್ಷನ್ (ಮಾಗಡಿ ರಸ್ತೆ), ಹಾಗೂ ಮೈಸೂರು ರಸ್ತೆಯ ಮೆಟ್ರೋ (ಬಿಹೆಚ್‌ಇಎಲ್) ಜಂಕ್ಷನ್‌ಗಳಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಇದರೊಂದಿಗೆ 12ನೇ ಮುಖ್ಯ ರಸ್ತೆಯ ಆರ್‌ಟಿಒ ಕಚೇರಿ ಹತ್ತಿರ, ತುಮಕೂರು ರಸ್ತೆಯ ಜಾಲಹಳ್ಳಿ ಕ್ರಾಸ್ ಜಂಕ್ಷನ್, ಬಳ್ಳಾರಿ ರಸ್ತೆಯ ಹೆಬ್ಬಾಳ ಜಂಕ್ಷನ್, ಕೆ.ಜಿ. ರಸ್ತೆಯ ಸಾಗರ ಜಂಕ್ಷನ್, ಎಲೆಕ್ಟ್ರಾನಿಕ್ಸ್ ಸಿಟಿ ರಸ್ತೆಯ ಹೊಸೂರು ರಸ್ತೆ ಜಂಕ್ಷನ್ ಮತ್ತು ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಜಂಕ್ಷನ್‌ಗಳಲ್ಲೂ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ಸ್ಥಳದಲ್ಲೇ ದಂಡ ಇತ್ಯರ್ಥಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.













Click it and Unblock the Notifications