Bengaluru Traffic Fine: ಟ್ರಾಫಿಕ್ ದಂಡಕ್ಕೆ 50% ವಿನಾಯಿತಿ, ಬೆಂಗಳೂರಿನ 12 ಕಡೆ ದಂಡ ಸ್ವೀಕಾರಕ್ಕೆ ಕೌಂಟರ್
ಬೆಂಗಳೂರು, ಜೂನ್ 19: ವಾಹನ ಸವಾರರಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಹಳೆಯ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡವನ್ನು ಪಾವತಿಸಲು ಶೇಕಡಾ 50ರಷ್ಟು ವಿನಾಯಿತಿ ನೀಡಲಾಗಿದೆ. ಅದರಲ್ಲೂ ಇದೀಗ ರಾಜ್ಯ ರಾಜಧಾನಿ ಬೆಂಗಳೂರಿನ ಸಾರ್ವಜನಿಕರಿಗೆ ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸಂಚಾರ ಪೊಲೀಸ್ ಇಲಾಖೆಯು ಮಹತ್ವದ ಕ್ರಮ ಕೈಗೊಂಡಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಬಾಕಿ ದಂಡದ ಮೊತ್ತವನ್ನು ಸಂಗ್ರಹಿಸಲು ಮತ್ತು ಸಾರ್ವಜನಿಕರಿಗೆ ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು ಸಂಚಾರ ಪೊಲೀಸ್ ಇಲಾಖೆಯು ವಿಶೇಷ ಕ್ರಮಗಳನ್ನು ಕೈಗೊಂಡಿದೆ. ವಾಹನ ಸವಾರರು ತಮ್ಮ ಮೇಲಿರುವ ಬಾಕಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಅನುಕೂಲವಾಗುವಂತೆ ನಗರದ ಪ್ರಮುಖ ಕೇಂದ್ರಗಳಲ್ಲಿ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ.

ದಂಡ ಪಾವತಿಸಲು 12 ವಿಶೇಷ ಕೌಂಟರ್‌ಗಳು..
ದಂಡದ ಮೊತ್ತವನ್ನು ಸುಲಭವಾಗಿ ಸಂಗ್ರಹಿಸಲು ಬೆಂಗಳೂರು ನಗರದಾದ್ಯಂತ ಒಟ್ಟು 12 ಪ್ರಮುಖ ಸಂಚಾರ ಕೇಂದ್ರಗಳಲ್ಲಿ ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿದೆ. ಸಾರ್ವಜನಿಕರಿಗೆ ದಂಡದ ಮೊತ್ತದಲ್ಲಿ ಶೇಕಡ 50ರಷ್ಟು ರಿಯಾಯಿತಿ ಸಿಗಲಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ. ಜೂನ್ 21ರಿಂದ ಜುಲೈ 10ರ ವರೆಗೆ ಈ ರಿಯಾಯಿತಿ ಅನ್ವಯವಾಗುತ್ತದೆ.
ರಾಜ್ಯ ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿ, ದಂಡ ಪಾವತಿಸದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸುವುದು. ಇನ್ನು ಬೆಂಗಳೂರು ನಗರದ ಸವಾರರು ತಮ್ಮ ಸಮೀಪದ 12 ಪ್ರಮುಖ ರಸ್ತೆಗಳಲ್ಲಿರುವ ಕೌಂಟರ್‌ಗಳಿಗೆ ಭೇಟಿ ನೀಡಿ ದಂಡ ಪಾವತಿಸಬಹುದು.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ದಂಡ ಪಾವತಿಸಬಹುದು?
* ಹೆಣ್ಣೂರು ಜಂಕ್ಷನ್ - ರಿಂಗ್ ರಸ್ತೆ
* ದೇವಸಂದ್ರ ಜಂಕ್ಷನ್ - ಓಲ್ಡ್ ಮದ್ರಾಸ್ ರಸ್ತೆ
* ಕುಂದಲಹಳ್ಳಿ ಜಂಕ್ಷನ್ - ಓಲ್ಡ್ ಏರ್‌ಪೋರ್ಟ್ ರಸ್ತೆ
* ಮೈಸೂರು ಬ್ಯಾಂಕ್ ಜಂಕ್ಷನ್ - ಕೆ.ಜಿ. ರಸ್ತೆ
* ಸುಮ್ಮನಹಳ್ಳಿ ಜಂಕ್ಷನ್ - ಮಾಗಡಿ ರಸ್ತೆ
* ಮೆಟ್ರೋ (ಬಿಹೆಚ್‌ಇಎಲ್) - ಮೈಸೂರು ರಸ್ತೆ
* ಆರ್‌ಟಿಒ ಕಚೇರಿ ಹತ್ತಿರ - 12ನೇ ಮುಖ್ಯ ರಸ್ತೆ
* ಜಾಲಹಳ್ಳಿ ಕ್ರಾಸ್ ಜಂಕ್ಷನ್ - ತುಮಕೂರು ರಸ್ತೆ
* ಹೆಬ್ಬಾಳ ಜಂಕ್ಷನ್ - ಬಳ್ಳಾರಿ ರಸ್ತೆ
* ಸಾಗರ ಜಂಕ್ಷನ್ - ಕೆ.ಜಿ. ರಸ್ತೆ
* ಹೊಸೂರು ರಸ್ತೆ ಜಂಕ್ಷನ್ - ಎಲೆಕ್ಟ್ರಾನಿಕ್ಸ್ ಸಿಟಿ ರಸ್ತೆ
* ಗೊಟ್ಟಿಗೆರೆ ಜಂಕ್ಷನ್ - ಬನ್ನೇರುಘಟ್ಟ ರಸ್ತೆ
ಡಿಜಿಟಲ್‌ನಲ್ಲೂ ದಂಡ ಪಾವತಿಗೆ ಅವಕಾಶ
* ವಾಹನ ಸವಾರರು ಕೌಂಟರ್‌ಗಳಿಗೆ ಅಲೆಯದೆ ಡಿಜಿಟಲ್ ರೂಪದಲ್ಲೂ ದಂಡದ ವಿವರಗಳನ್ನು ಪಡೆದು ಪಾವತಿ ಮಾಡಲು ಇಲಾಖೆ ಹಲವು ಆಯ್ಕೆಗಳನ್ನು ನೀಡಿದೆ.
* ಮೊಬೈಲ್ ಆ್ಯಪ್‌ಗಳು: ರಾಜ್ಯ ಸರ್ಕಾರದ ಅಧಿಕೃತ ರಾಜ್ಯ ಪೊಲೀಸ್ ಆ್ಯಪ್ (KSP App) ಮೂಲಕ ದಂಡದ ವಿವರವಾದ ಮಾಹಿತಿಯನ್ನು ಪಡೆಯಬಹುದು. ಜೊತೆಗೆ ಸಂಚಾರ ವಿಭಾಗದ ಬಿಟಿಪಿ ಆಸ್ಟ್ರಂ ಆ್ಯಪ್ (BTP Astrum App)ನಲ್ಲೂ ವಿವರಗಳು ಲಭ್ಯವಿವೆ.
* ಅಲ್ಲದೆ, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳು ಹಾಗೂ ನಗರದ ಎಲ್ಲಾ ಸಂಚಾರ ಪೊಲೀಸ್ ಠಾಣೆಗಳಲ್ಲೂ ನಿಮ್ಮ ವಾಹನದ ನೋಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ, ಶೇಕಡ 50ರಷ್ಟು ರಿಯಾಯಿತಿ ದರದಲ್ಲೇ ದಂಡವನ್ನು ಪಾವತಿಸಿ ಪ್ರಕರಣಗಳನ್ನು ಮುಕ್ತಾಯಗೊಳಿಸಬಹುದಾಗಿದೆ.
ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘಿಸಿರುವ ಲಕ್ಷಾಂತರ ವಾಹನಗಳ ದಂಡದ ಮೊತ್ತ ಬಾಕಿ ಉಳಿದಿದೆ. ಇದನ್ನು ಪಾವತಿಸಲು ಸಾರ್ವಜನಿಕರು ಪೊಲೀಸ್ ಠಾಣೆಗಳಿಗೆ ಅಲೆಯುವುದನ್ನು ತಪ್ಪಿಸಲು ಮತ್ತು ಡಿಜಿಟಲ್ ರೂಪದಲ್ಲಿ ಪಾವತಿಸಲು ತಾಂತ್ರಿಕ ತೊಂದರೆ ಎದುರಿಸುವವರಿಗೆ ನೆರವಾಗಲು ಈ ವ್ಯವಸ್ಥೆಯನ್ನು ಮಾಡಲಾಗಿದೆ.
ಬಾಕಿ ಇರುವ ದಂಡದ ಮೊತ್ತವು ಸಾರಿಗೆ ಇಲಾಖೆಯ ದತ್ತಾಂಶದಲ್ಲಿ ಹಾಗೆಯೇ ಉಳಿಯುವುದರಿಂದ ಮುಂದಿನ ದಿನಗಳಲ್ಲಿ ವಾಹನಗಳ ಮಾರಾಟ, ಇನ್ಶೂರೆನ್ಸ್ ಅಪ್ಡೇಟ್ ಅಥವಾ ಎಫ್‌ಸಿ ಪಡೆಯುವ ಸಂದರ್ಭದಲ್ಲಿ ತೊಂದರೆಯಾಗಬಹುದು. ಆದ್ದರಿಂದ ಸಾರ್ವಜನಿಕರು ಈ ವಿಶೇಷ ಕೌಂಟರ್‌ಗಳ ಸದುಪಯೋಗವನ್ನು ಪಡೆದುಕೊಂಡು ತಮ್ಮ ವಾಹನಗಳ ಮೇಲಿರುವ ಇ-ಚಲನ್ ಪ್ರಕರಣಗಳನ್ನು ಮುಕ್ತಾಯಗೊಳಿಸಬೇಕೆಂದು ಸಂಚಾರ ಪೊಲೀಸ್ ಉನ್ನತ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿದ್ದಾರೆ.












Click it and Unblock the Notifications