ಮಗಳು ಬೇರೆ ಜಾತಿಯವನನ್ನ ಮದುವೆಯಾದಳೆಂದು, ಬದುಕಿದ್ದಾಗಲೇ ಶ್ರಾದ್ಧ ಮಾಡಿದ ಪೋಷಕರು
ನಮ್ಮದು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅತ್ಯಂತ ವೇಗವಾಗಿ ಮುಂದುವರೆಯುತ್ತಿರುವ ದೇಶ. ನಾವು ಇಂದಿನ ದಿನಗಳಲ್ಲಿ ಎಐ ಬಗ್ಗೆ ಗಂಭೀರವಾಗಿ ಮಾತನಾಡುತ್ತಿದ್ದೇವೆ. ಕೃಷಿ, ಕೈಗಾರಿಕೆ, ಶಿಕ್ಷಣ ಸೇರಿದಂತೆ ಪ್ರತಿಯೊಂದು ಕ್ಷೇತ್ರವೂ ಯಂತ್ರಮಯವಾಗಿದೆ. ಇಷ್ಟೇ ಅಲ್ಲ, ನಮ್ಮ ಹೆಮ್ಮೆಯ ವಿಜ್ಞಾನಿಗಳು ಮಂಗಳ ಗ್ರಹದಲ್ಲಿಯೂ ವಾಸಿಸಬಹುದಾ ಎನ್ನುವದರ ಕುರಿತು ಶೋಧನೆ ನಡೆಸುತ್ತಿದ್ದಾರೆ. ಆದರೆ, ಇಷ್ಟೆಲ್ಲಾ ಭೌತಿಕವಾಗಿ ಹಾಗೂ ತಾಂತ್ರಿಕವಾಗಿ ಮುಂದುವರೆದಿದ್ದರೂ, ನಮ್ಮ ಸಮಾಜದ ಮಾತ್ರ ಇನ್ನೂ ಎಷ್ಟೋ ಹಿಂದೇನೆ ಇದೆ ಎನ್ನುವುದು ಬೇಸರದ ಸಂಗತಿ.
ಅದರಲ್ಲೂ ಮನುಷ್ಯನ ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ಈ 'ಜಾತಿ' ಎಂಬ ಪಿಡುಗು ಇಂದಿಗೂ ಎಷ್ಟೋ ಜೀವಗಳನ್ನು ಬಲಿ ಪಡೆಯುತ್ತಿದೆ. ಇದಕ್ಕೆ ಅತ್ಯಂತ ತಾಜಾ ಉದಾಹರಣೆ ಜಾರ್ಖಂಡ್‌ನ ಛಾತ್ರ ಗ್ರಾಮದಲ್ಲಿ ನಡೆದ ಈ ಅಮಾನವೀಯ ಘಟನೆ ನಮ್ಮ ಕಣ್ಣ ಮುಂದಿದೆ.

ಜಾತಿಯೆಂಬ ಮಹಾಮಾರಿ: ಸಮಾಜ ಎಷ್ಟೇ ಮುಂದುವರೆದರೂ ಬದಲಾಗದ ಮನಸ್ಥಿತಿ
ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳು ಅನ್ಯ ಜಾತಿಯವರನ್ನು ಪ್ರೀತಿಸಿ ಮದುವೆಯಾದರೆ, ಪೋಷಕರು ರಾತ್ರೋರಾತ್ರಿ ಅವರನ್ನು ಕೊಲೆ ಮಾಡುವ ಎಷ್ಟೋ ಘಟನೆಗಳನ್ನು ನಾವು ದಿನನಿತ್ಯ ಸುದ್ದಿಯಲ್ಲಿ ನೋಡಿರುತ್ತೇವೆ ಅಥವಾ ಓದಿರುತ್ತೇವೆ. ಮರ್ಯಾದಾ ಹತ್ಯೆ ಎಂಬುದು ಭಾರತೀಯ ಸಮಾಜದ ಅತಿದೊಡ್ಡ ಕಳಂಕ. ಆದರೆ ಜಾರ್ಖಂಡ್‌ನಲ್ಲಿ ನಡೆದ ಈ ಘಟನೆ ಮತ್ತೊಂದು ರೀತಿಯಲ್ಲಿ ನಮ್ಮ ಮನಸ್ಸನ್ನು ತೀವ್ರವಾಗಿ ಘಾಸಿಗೊಳಿಸುತ್ತದೆ.
ಇಲ್ಲಿ ಪೋಷಕರು ತಮ್ಮ ಮಗಳನ್ನು ದೈಹಿಕವಾಗಿ ಕೊಂದಿಲ್ಲ, ಬದಲಾಗಿ ಆಕೆ ಬದುಕಿದ್ದಾಗಲೇ ಮಗಳ ಶ್ರಾದ್ಧ ಮಾಡಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಸಾಯಿಸಿದ್ದಾರೆ. ಜಗತ್ತಿನ ಕಣ್ಣಲ್ಲಿ ತನ್ನ ಮಗಳು ಇನ್ನು ಮುಂದೆ ತಮಗೆ ಸತ್ತಂತೆ ಎಂದು ಹೆತ್ತ ತಂದೆ-ತಾಯಿ ತಮಗೆ ತಾವೇ ಘೋಷಿಸಿಕೊಂಡಿದ್ದಾರೆ.
ಸಮಾಜದಲ್ಲಿ ಪ್ರೀತಿಗೆ ಬೆಲೆಯೇ ಇಲ್ಲವೇ?
ಇನ್ನೂ ಈ ಘಟನೆಯ ಹಿನ್ನೆಲೆ ನೋಡವುದಾದರೆ, ಬ್ರಾಹ್ಮಣ ಸಮುದಾಯಕ್ಕೆ ಸೇರಿದ 21 ವರ್ಷದ ಯುವತಿಯೊಬ್ಬಳು ಜಾರ್ಖಂಡ್‌ನ ಕುಶ್ವಾಹ (ಒಬಿಸಿ) ವರ್ಗಕ್ಕೆ ಸೇರ್ಪಡೆಯಾಗಿರುವ ಡಾಂಗಿ ಸಮುದಾಯದ ಯುವಕನನ್ನು ಬಹಳ ಹಿಂದಿನಿಂದಲೂ ಪ್ರೀತಿಸಿದ್ದಳು.
ಆ ಯುವಕ ಬೇರಾರೂ ಅಲ್ಲ, ನಮ್ಮ ದೇಶ ಕಾಯುವ 'ಅಗ್ನಿವೀರ್ ಸೈನಿಕ'. ದೇಶದ ಗಡಿ ಕಾಯುವ, ರಕ್ಷಣೆಗೆ ನಿಂತಿರುವ ಯೋಧನಿಗೆ ತನ್ನ ಮಗಳನ್ನು ಕೊಡಲು ಹೆಮ್ಮೆ ಪಡಬೇಕಿದ್ದ ಪೋಷಕರು, ಆತ ಬೇರೆ ಜಾತಿಯವನು ಎಂಬ ಒಂದೇ ಒಂದು ಕ್ಷುಲ್ಲಕ ಕಾರಣಕ್ಕೆ ಮಗಳ ನಿಜವಾದ ಪ್ರೀತಿಯನ್ನು ತಿರಸ್ಕರಿಸಿದ್ದಾರೆ. ಆದರೆ, ಯುವತಿ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು, ಎಲ್ಲಾ ವಿರೋಧಗಳ ನಡುವೆಯೂ ಆತನನ್ನೇ ವಿವಾಹವಾದಳು.
ಕರುಳಿನ ಕುಡಿಗೇ ಪಿಂಡ ಪ್ರದಾನ: ಪೋಷಕರ ಕಠೋರ ನಿರ್ಧಾರ
ಮಗಳು ತಮ್ಮ ಇಚ್ಛೆಗೆ ವಿರುದ್ಧವಾಗಿ, ತಮ್ಮ ಜಾತಿಯ ಗಡಿಯನ್ನು ಮೀರಿ ಬೇರೆ ಜಾತಿಯ ಯುವಕನನ್ನು ಮದುವೆಯಾಗಿದ್ದೇ ಪೋಷಕರ ಕೋಪಕ್ಕೆ ಕಾರಣವಾಗಿದೆ. ಕರುಳಿನ ಕುಡಿಯ ಮೇಲಿನ ಪ್ರೀತಿಗಿಂತ, ಸಮಾಜದ ಮರ್ಯಾದೆ ಹಾಗೂ ಪ್ರತಿಷ್ಠೆಯೇ ಅವರಿಗೆ ಅತಿ ದೊಡ್ಡದಾಯಿತು.
ಪ್ರೀತಿಯಿಂದ ಬೆಳೆಸಿದ ಮಗಳೆಂಬ ಮಮಕಾರವನ್ನು ಮರೆತ ಪೋಷಕರು, ಆಕೆಯ ನಗುಮುಖದ ಭಾವಚಿತ್ರವನ್ನಿಟ್ಟು ಒಂದು ಪ್ರತಿಮೆಯನ್ನು ತಯಾರಿಸಿದರು. ಊರಿನವರ ಸಮ್ಮುಖದಲ್ಲಿಯೇ ಆ ಪ್ರತಿಮೆಯೊಂದಿಗೆ ಅಂತ್ಯಕ್ರಿಯೆಯ ಮೆರವಣಿಗೆಯನ್ನು ನಡೆಸಿದರು. ಬಳಿಕ ಆ ಪ್ರತಿಮೆಯನ್ನು ಬೆಂಕಿಗಾಹುತಿ ಮಾಡಿ, ಹಿಂದೂ ಸಂಪ್ರದಾಯದಂತೆ ಶ್ರಾದ್ಧ ಮತ್ತು 'ಪಿಂಡ ಪ್ರದಾನ' ವಿಧಿವಿಧಾನಗಳನ್ನು ಪೂರೈಸಿದ್ದಾರೆ.
ಈ ಅಮಾನವೀಯ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ನಡುವೆ, ವರನ ಕುಟುಂಬಕ್ಕೂ ತೀವ್ರ ಬೆದರಿಕೆಗಳು ಬರುತ್ತಿವೆ ಎಂಬ ಆರೋಪಗಳು ಕೇಳಿಬಂದಿದೆ.
ಸಮಾಜಕ್ಕೆ ಹೆದರಿದ ತಂದೆ
ತಮ್ಮದೇ ಮಗಳ ವಿಷಯದಲ್ಲಿ ಈ ಕಠೋರ ನಿರ್ಧಾರ ತೆಗೆದುಕೊಂಡಿದ್ದರ ಬಗ್ಗೆ ಮಾತನಾಡಿದ ಯುವತಿಯ ತಂದೆಯ ಮಾತುಗಳು, ನಮ್ಮ ಸಮಾಜಕ್ಕೆ ಅವ್ಯವಸ್ಥೆಗೆ ಹಿಡಿದ ಕನ್ನಡಿ. "ನಾವು ಬ್ರಾಹ್ಮಣರು. ಈಗ ನಮ್ಮ ಮಗಳು ಒಬಿಸಿ ಸಮುದಾಯದ ಯುವಕನನ್ನು ಮದುವೆಯಾಗಿದ್ದಾಳೆ. ಸಮಾಜ ನಮ್ಮನ್ನು ನೋಡುವ ರೀತಿ ಏನಾಗುತ್ತದೆ ಹೇಳಿ? ನಮಗೆ ಅವಳು ಅಗ್ನಿವೀರ್ ಸೈನಿಕನನ್ನು ಪ್ರೀತಿಸುತ್ತಿದ್ದಾಳೆ ಎನ್ನುವ ವಿಚಾರವೇ ಗೊತ್ತಿರಲಿಲ್ಲ. ನಾವು ಐದು ಲಕ್ಷ ರೂಪಾಯಿ ಖರ್ಚು ಮಾಡಿ, ನಮ್ಮದೇ ಜಾತಿಯ ಯುವಕನೊಂದಿಗೆ ಆಕೆಯ ವಿವಾಹ ಮಾಡಲು ನಿಶ್ಚಯ ಮಾಡಿದ್ದೆವು," ಎಂದು ಅವರು ಸಮಾಜದ ಭಯದಿಂದ ಅಳಲು ತೋಡಿಕೊಂಡಿದ್ದಾರೆ.
ಒಂದು ಕಡೆ ನಿಸ್ವಾರ್ಥದಿಂದ ದೇಶ ಕಾಯುವ ಯುವ ಸೈನಿಕ, ಮತ್ತೊಂದು ಕಡೆ ಆತನನ್ನು ನಂಬಿ ಬಂದ ಪ್ರೀತಿಸಿದ ಯುವತಿ. ಇವರಿಬ್ಬರ ಸುಂದರ ಭವಿಷ್ಯವೂ ಈಗ ಸಮಾಜದ ಈ ಕೊಳಕು ಜಾತಿ ವ್ಯವಸ್ಥೆಯ ನಡುವೆ ಸಿಲುಕಿದೆ.
ಹೆತ್ತ ತಂದೆ-ತಾಯಿಗೆ ಮಕ್ಕಳ ಮೇಲಿನ ನಿಸ್ವಾರ್ಥ ಪ್ರೀತಿಗಿಂತ ಸಮಾಜ 'ಏನು ಹೇಳುತ್ತದೆಯೋ' ಎಂಬ ಪ್ರತಿಷ್ಠೆಯ ಭಯವೇ ದೊಡ್ಡದಾಗುವುದು ನಿಜಕ್ಕೂ ಈ ಕಾಲದ ಬಹುದೊಡ್ಡ ದುರಂತ. ಬದುಕಿರುವಾಗಲೇ ಹೆತ್ತ ಮಗಳ ಶ್ರಾದ್ಧ ಮಾಡುವಂತಹ ನಿರ್ಧಾರಕ್ಕೆ ತಳ್ಳುವ ಈ ವಿನಾಶಕಾರಿ ಜಾತಿ ವ್ಯವಸ್ಥೆ ನಮ್ಮ ದೇಶದಿಂದ ಸಂಪೂರ್ಣವಾಗಿ ನಿರ್ಮೂಲನೆಯಾಗುವುದು ಯಾವಾಗ? ಈ ಪ್ರಶ್ನೆಗೆ ಕಾಲವೇ ಸರಿಯಾದ ಉತ್ತರ ನೀಡಬೇಕಿದೆ.












Click it and Unblock the Notifications