ತುರ್ತು ರಜೆಗಾಗಿ ನಕಲಿ ಪ್ಲೈಟ್ ಟಿಕೆಟ್ ನೀಡಿದ ಉದ್ಯೋಗಿ; ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದು ಕೆಲಸ ಕಳೆದುಕೊಂಡ ಕಹಾನಿ
ಕಾರ್ಪೊರೇಟ್ ಕಂಪನಿಗಳಲ್ಲಿ ಎಷ್ಟೇ ಕೆಲಸ ಮಾಡಿದರೂ, ನಮ್ಮ ಮೇಲೆ ಎಷ್ಟೇ ನಂಬಿಕೆ ಇದ್ದರೂ ಕೂಡ, ಉದ್ಯೋಗಿಗಳಿಗೆ ಸುಲಭವಾಗಿ ರಜೆ ಸಿಗುವುದು ಇಂದಿಗೂ ಒಂದು ದೊಡ್ಡ ಸವಾಲು. ಇದೇ ಕಾರಣಕ್ಕೆ ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬಳು ತುರ್ತು ರಜೆ ಪಡೆಯಲು ಹಳೆಯ ಪ್ಲೈಟ್ ಟಿಕೆಟ್ ಅನ್ನೇ ಎಡಿಟ್ ಮಾಡಿ ಕಂಪನಿಗೆ ನೀಡಿ ಸಿಕ್ಕಿಬಿದ್ದಿದ್ದಾಳೆ. ಈ ಘಟನೆಯು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದ್ದು, ಕಂಪನಿಗಳ ಕಠಿಣ ನಿಯಮಗಳು ಹಾಗೂ ಉದ್ಯೋಗಿಗಳ ಪ್ರಾಮಾಣಿಕತೆಯ ಬಗ್ಗೆ ಜನರು ಪ್ರಶ್ನಿಸುವಂತೆ ಮಾಡಿದೆ.
ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಸಂಸ್ಥಾಪಕಿ ಉನ್ನತಿ ಬಗ್ಗಾ ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ಈ ಘಟನೆಯನ್ನು ಹಂಚಿಕೊಂಡಿದ್ದಾರೆ. ಉದ್ಯೋಗಿಯೊಬ್ಬಳು ತನ್ನ ತಾಯಿಯ ಆರೋಗ್ಯ ಸರಿಯಿಲ್ಲ, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿ ತುರ್ತು ರಜೆ ಹಾಗೂ ಕೆಲವು ದಿನಗಳ ಮಟ್ಟಿಗೆ ವರ್ಕ್ ಫ್ರಮ್ ಹೋಮ್ ನೀಡುವಂತೆ ಮನವಿ ಮಾಡಿದ್ದಳು. ಆದರೆ ಆಕೆ ರಜೆ ಪಡೆಯಲು ನೀಡಿದ್ದ ಸಾಕ್ಷ್ಯಗಳು, ಆಕೆಯೇ ಹೆಣೆದ ಸುಳ್ಳಿನ ಬಲೆಗೆ ಆಕೆಯನ್ನೇ ಸಿಲುಕಿಸಿವೆ.

ನಕಲಿ ವಿಮಾನ ಟಿಕೆಟ್: ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಉದ್ಯೋಗಿ
ತಾನು ಎರಡು ದಿನಗಳ ಹಿಂದೆಯೇ ಊರಿಗೆ ತೆರಳಿರುವುದಾಗಿ ಆಕೆ ಹೇಳಿದ್ದಳು. ತನ್ನ ಮಾತಿಗೆ ಪುಷ್ಟಿ ನೀಡಲು, ಸಾಕ್ಷ್ಯವಾಗಿ ವಿಮಾನದ ಟಿಕೆಟ್ ಕಾಪಿಯನ್ನು ವಾಟ್ಸಾಪ್ ಮೂಲಕ ಸಂಸ್ಥಾಪಕಿಗೆ ಕಳುಹಿಸಿದ್ದಳು. ಆದರೆ, ಉನ್ನತಿ ಬಗ್ಗಾ ಅವರು ಟಿಕೆಟ್‌ನಲ್ಲಿದ್ದ ಪಿಎನ್‌ಆರ್ ನಂಬರ್ ಬಳಸಿ ಅಧಿಕೃತ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿದಾಗ, ಅದು ಈ ಹಿಂದೊಮ್ಮೆ ಪ್ರಯಾಣಿಸಿದ್ದ ಹಳೆಯ ಟಿಕೆಟ್ ಎನ್ನುವುದು ಬಯಲಾಗಿದೆ. ದಿನಾಂಕವನ್ನು ಮಾತ್ರ ತಿದ್ದಿ, ನಕಲಿ ವಿಮಾನ ಟಿಕೆಟ್ ಸೃಷ್ಟಿಸಿರುವುದು ಅಲ್ಲಿ ಸ್ಪಷ್ಟವಾಗಿದೆ.
ತಾನು ಹೇಳಿದ ಸುಳ್ಳು ಸಿಕ್ಕಿಬಿದ್ದಾಗ ಆಕೆ ತನ್ನ ತಪ್ಪನ್ನು ಒಪ್ಪಿಕೊಳ್ಳುವ ಬದಲು, ಕಂಪನಿಯನ್ನೇ ದೂಷಿಸಲು ಪ್ರಯತ್ನಿಸಿದ್ದಾಳೆ. "ನನ್ನ ಮೇಲೆ ನಿಮಗೆ ನಂಬಿಕೆ ಇಲ್ಲದಿದ್ದರೆ, ನಾನು ಈ ಕೂಡಲೇ ಇಂಟರ್ನ್‌ಶಿಪ್ ಕೆಲಸ ಬಿಡಲು ಸಿದ್ಧ" ಎಂದು ಹೇಳಿ ಬೆದರಿಸುವ ತಂತ್ರ ಅನುಸರಿಸಿದ್ದಾಳೆ. ಪರಿಣಾಮವಾಗಿ, ಉನ್ನತಿ ಅವರು ಆಕೆಯನ್ನು ಕೆಲಸದಿಂದ ನಿರ್ದಾಕ್ಷಿಣ್ಯವಾಗಿ ವಜಾಗೊಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ
ಉನ್ನತಿ ಬಗ್ಗಾ ಅವರು ತಮ್ಮ ಮತ್ತು ಉದ್ಯೋಗಿಯ ನಡುವಿನ ವಾಟ್ಸಾಪ್ ಚಾಟ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡು, " ಜವಾಬ್ದಾರಿ ಕಡಿಮೆ ಇರುವ ವ್ಯಕ್ತಿಗಳು, ಕಂಪನಿಯ ಮೌಲ್ಯವನ್ನು ಕುಗ್ಗಿಸುತ್ತಾರೆ" ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಎರಡು ಗುಂಪುಗಳಾಗಿ ವಿಭಜನೆಗೊಂಡಿದ್ದಾರೆ.
ಕೆಲವರು ಸಂಸ್ಥಾಪಕಿಯ ಕ್ರಮವನ್ನು ಸಂಪೂರ್ಣವಾಗಿ ಬೆಂಬಲಿಸಿ, "ಸುಳ್ಳು ಹೇಳುವ ಹಾಗೂ ವಂಚಿಸುವ ಮನಸ್ಥಿತಿ ಇರುವ ಉದ್ಯೋಗಿಗಳನ್ನು ಕಂಪನಿಯಲ್ಲಿ ಉಳಿಸಿಕೊಳ್ಳುವುದಕ್ಕಿಂತ, ತಕ್ಷಣವೇ ವಜಾಗೊಳಿಸುವುದೇ ಒಳಿತು" ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಬಹುತೇಕ ಬಳಕೆದಾರರು ಕಂಪನಿಯ ಬಿಗಿಯಾದ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ. ರಜೆಗಾಗಿ ಸಾಕ್ಷ್ಯ ಕೇಳುವ ಮಟ್ಟಿಗೆ ಕಂಪನಿಯ ವಾತಾವರಣ ಕಷ್ಟಕರವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. "ಒಬ್ಬ ಉದ್ಯೋಗಿ ತುರ್ತು ರಜೆ ಕೇಳಿದಾಗ ಪ್ಲೈಟ್ ಟಿಕೆಟ್ ಕೇಳುವುದು ಕಂಪನಿಯ ಅಸುರಕ್ಷತೆ ಮತ್ತು ನಂಬಿಕೆಯ ಕೊರತೆಯನ್ನು ತೋರಿಸುತ್ತದೆ. ಕಂಪನಿಯ ನಿಯಮಗಳು ಇಷ್ಟು ಕಠಿಣವಾಗಿದ್ದರೆ ಮುಂದೊಂದು ದಿನ ಸಾವು-ನೋವುಗಳಾದಾಗ, ರಜೆಗಾಗಿ ಸಾವಿನ ಪ್ರಮಾಣಪತ್ರವನ್ನೂ ನೀವು ಕೇಳಬಹುದು," ಎಂದು ತೀಕ್ಷ್ಣವಾಗಿ ವ್ಯಂಗ್ಯವಾಡಿದ್ದಾರೆ.
"ಆಕೆ ಕೇವಲ ಒಬ್ಬ ಇಂಟರ್ನ್ ಆಗಿದ್ದು, 3-4 ದಿನ ರಜೆ ನೀಡಿದ್ದರೆ ಕಂಪನಿಗೆ ಅಂಥದ್ದೇನು ದೊಡ್ಡ ನಷ್ಟವಾಗುತ್ತಿರಲಿಲ್ಲ. ಬದಲಾಗಿ, ಉದ್ಯೋಗಿಗಳು ಏಕೆ ಸುಳ್ಳು ಹೇಳುತ್ತಾರೆ ಎಂಬುದರ ಹಿಂದಿನ ಅಸಲಿ ಕಾರಣವನ್ನು ಅರ್ಥಮಾಡಿಕೊಳ್ಳುವ ಮುಕ್ತ ವಾತಾವರಣವನ್ನು ಕಂಪನಿಗಳು ನಿರ್ಮಿಸಬೇಕು" ಎಂದು ಹಲವರು ಎಚ್ಚರಿಸಿದ್ದಾರೆ.
ಒಟ್ಟಿನಲ್ಲಿ, ಕೆಲಸದ ಒತ್ತಡದಿಂದ ಪಾರಾಗಲು ಉದ್ಯೋಗಿ ಸುಳ್ಳು ಹೇಳಿದ್ದು ಎಷ್ಟು ನೈತಿಕವಾಗಿ ತಪ್ಪೋ, ಸಣ್ಣ ಪುಟ್ಟ ರಜೆಗಳಿಗೂ ಸಾಕ್ಷ್ಯ ಕೇಳಿ ಪೀಡಿಸುವ ಕಾರ್ಪೊರೇಟ್ ಸಂಸ್ಕೃತಿಯೂ ಅಷ್ಟೇ ಕಳವಳಕಾರಿ. ಉದ್ಯೋಗದ ಸ್ಥಳದಲ್ಲಿ ನಂಬಿಕೆ ಎನ್ನುವುದು ಆಡಳಿತ ಮಂಡಳಿ ಹಾಗೂ ಉದ್ಯೋಗಿ ಇಬ್ಬರ ಕಡೆಯಿಂದಲೂ ಇರಬೇಕು ಎಂಬುದನ್ನು ಈ ಘಟನೆ ಜಗಜ್ಜಾಹೀರು ಮಾಡಿದೆ.












Click it and Unblock the Notifications