ಮೋದಿ ಉದ್ಘಾಟಿಸಿದ್ದ ಗಂಗಾ ಎಕ್ಸ್‌ಪ್ರೆಸ್‌ವೇ: ಮೊದಲ ಮಳೆಯಲ್ಲೇ ಸಂಪರ್ಕ ರಸ್ತೆ ಕುಸಿತ
ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ಹೊಸದಾಗಿ ನಿರ್ಮಿಸಲಾದ ಗಂಗಾ ಎಕ್ಸ್‌ಪ್ರೆಸ್‌ವೇ ಸಂಪರ್ಕ ರಸ್ತೆಯ ಒಂದು ಭಾಗ ಮೊದಲ ಮಳೆಗೇ ಕುಸಿದಿದೆ. ಕಾನ್ಪುರ-ಲಖನೌ ರಾಷ್ಟ್ರೀಯ ಹೆದ್ದಾರಿ ಗಂಗಾ ಎಕ್ಸ್‌ಪ್ರೆಸ್‌ವೇಗೆ ಸಂಪರ್ಕಿಸುವ ಲಿಂಕ್ ರಸ್ತೆಯಲ್ಲಿ ಸುಮಾರು 7 ಮೀಟರ್ ಉದ್ದದ ಜಾಗ ಭಾರೀ ಮಳೆಯಿಂದಾಗಿ ಕುಸಿದಿರುವ ಘಟನೆ ನಡೆದಿದೆ.
ಈ ಘಟನೆ ಉನ್ನಾವೊ ಜಿಲ್ಲೆಯ ಸೋನಿಕ್ ಪ್ರದೇಶದ ಬಶೀರತ್‌ಗಂಜ್ ಸಮೀಪ ನಡೆದಿದೆ. ಮಳೆ ನೀರು ರಸ್ತೆಯ ಕೆಳಭಾಗದ ಮಣ್ಣನ್ನು ಕೊಚ್ಚಿಕೊಂಡು ಹೋಗಿದ್ದರಿಂದ ರಸ್ತೆಯು ಕುಸಿದಿರುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳೀಯರ ಆತಂಕ ನಿಜವಾಯಿತೇ?
"ನಾವು ರಸ್ತೆ ನಿರ್ಮಾಣ ಹಂತದಲ್ಲಿಯೇ ಹೇಳಿದ್ವಿ, ಇದು ಸರಿ ಇಲ್ಲ ಅಂತ!" ಇಳಿಜಾರಿನ ಪ್ರದೇಶದಲ್ಲಿ ರಸ್ತೆ ಕುಸಿತದಿಂದ ಕಂಗಾಲಾಗಿರುವ ಸ್ಥಳೀಯ ನಿವಾಸಿಗಳ ಆಕ್ರೋಶದ ನುಡಿ. ಕಾಮಗಾರಿ ನಡೆಯುತ್ತಿದ್ದಾಗಲೇ ಈ ಇಳಿಜಾರು ಪ್ರದೇಶದ ಸುರಕ್ಷತೆಯನ್ನು ಗಾಳಿಗೆ ತೂರಲಾಗಿತ್ತು. ಮಣ್ಣು ಕುಸಿಯದಂತೆ ತಡೆಯುವ ಕನಿಷ್ಠ ಕಾಳಜಿಯನ್ನೂ ಗುತ್ತಿಗೆದಾರ ವಹಿಸಿರಲಿಲ್ಲ. ಇದರ ಪರಿಣಾಮವಾಗಿ, ಈಗ ಸುರಿದ ಮಳೆಗೆ ಇಡೀ ರಸ್ತೆ ಕುಸಿದು ಬಿದ್ದಿದ್ದು ಸ್ಥಳೀಯರ ಅಂದಿನ ಆತಂಕ ಇಂದು ಅಕ್ಷರಶಃ ನಿಜವಾಗಿದೆ.
ಮಾಧ್ಯಮಗಳನ್ನು ತಡೆಯಲು ಯತ್ನ?
ಶುಕ್ರವಾರ ಸಂಜೆ ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಹಾನಿಯ ಪ್ರಮಾಣವನ್ನು ಪರಿಶೀಲಿಸಿತು. ಈ ಸಂದರ್ಭದಲ್ಲಿ, ಸ್ಥಳದಲ್ಲಿದ್ದ ನಿರ್ಮಾಣ ಸಂಸ್ಥೆಯ ಸಿಬ್ಬಂದಿ ಪತ್ರಕರ್ತರನ್ನು ತಡೆಯಲು ಯತ್ನಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಮಾಧ್ಯಮದವರು ಫೋಟೋ ಮತ್ತು ವಿಡಿಯೊ ಚಿತ್ರೀಕರಣ ಮಾಡದಂತೆ ತಡೆದ ಸಿಬ್ಬಂದಿ, "ಎಕ್ಸ್‌ಪ್ರೆಸ್‌ವೇ ವ್ಯಾಪ್ತಿಯಲ್ಲಿ ಛಾಯಾಚಿತ್ರಗಳನ್ನು ತೆಗೆಯಲು ಯಾವುದೇ ಅನುಮತಿ ಇಲ್ಲ" ಎಂದು ವಾದಿಸಿದ್ದಾರೆ ಎನ್ನಲಾಗಿದೆ. ಇದು ಮಾಧ್ಯಮದ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವೇ ಎಂಬ ಪ್ರಶ್ನೆ ಮೂಡಿಸಿದೆ.
2026ರಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದ ಯೋಜನೆ
ಉತ್ತರ ಪ್ರದೇಶದ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಲಿರುವ ಮಹತ್ವಾಕಾಂಕ್ಷೆಯ 'ಗಂಗಾ ಎಕ್ಸ್‌ಪ್ರೆಸ್‌ವೇ' ಯೋಜನೆಯನ್ನು 2026ರ ಏಪ್ರಿಲ್ 29ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕೃತವಾಗಿ ಉದ್ಘಾಟಿಸಿದ್ದರು. ಮೀರತ್‌ನಿಂದ ಪ್ರಯಾಗ್‌ರಾಜ್‌ವರೆಗಿನ ಒಟ್ಟು 12 ಜಿಲ್ಲೆಗಳನ್ನು ಪರಸ್ಪರ ಸಂಪರ್ಕಿಸುವ ಈ ಬೃಹತ್ ಎಕ್ಸ್‌ಪ್ರೆಸ್‌ವೇ ಒಟ್ಟು 594 ಕಿಲೋಮೀಟರ್ ಉದ್ದವನ್ನು ಹೊಂದಿದೆ. ಇದು ರಾಜ್ಯದ ಆರ್ಥಿಕ ಮತ್ತು ಸಾರಿಗೆ ಕ್ಷೇತ್ರಕ್ಕೆ ಭಾರಿ ವೇಗ ನೀಡಲಿದೆ ಎಂದು ಅಂದಾಜಿಸಲಾಗಿದೆ.
ಈ ಮೊದಲೇ ದೋಷಗಳ ಬಗ್ಗೆ ಎಚ್ಚರಿಕೆ
ಈ ಎಕ್ಸ್‌ಪ್ರೆಸ್‌ವೇನಲ್ಲಿ ಕಾಣಿಸಿಕೊಂಡಿರುವ ಸಮಸ್ಯೆ ಇದೇ ಮೊದಲ ಬಾರಿ ಅಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಆದರೆ ಈ ಹೆದ್ದಾರಿಯನ್ನು ಸಾರ್ವಜನಿಕ ಸಂಚಾರ ಮುಕ್ತಗೊಳಿಸುವ ಮುನ್ನವೇ ಹಲವು ಕಡೆಗಳಲ್ಲಿ ರಸ್ತೆ ಕುಸಿತ, ತೀವ್ರ ಮಣ್ಣಿನ ಸವೆತ ಹಾಗೂ ಸುರಕ್ಷತಾ ಗಾರ್ಡ್‌ರೇಲ್‌ಗಳು ಜಖಂಗೊಂಡಿರುವ ಬಗ್ಗೆ ಗಂಭೀರ ವರದಿಗಳು ಬಂದಿದ್ದವು ಎಂದು ಅವರು ತಿಳಿಸಿದ್ದಾರೆ.
ಆಡಳಿತದ ಪ್ರತಿಕ್ರಿಯೆ
ಘಟನೆ ಕುರಿತು ಜಿಲ್ಲಾ ಆಡಳಿತ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಸದರ್ ಉಪವಿಭಾಗಾಧಿಕಾರಿ ಕ್ಷಿತಿಜ್ ದ್ವಿವೇದಿ, ಈ ಯೋಜನೆಯ ಸಂಪೂರ್ಣ ಹೊಣೆಗಾರಿಕೆ ಉತ್ತರ ಪ್ರದೇಶ ಎಕ್ಸ್‌ಪ್ರೆಸ್‌ವೇಸ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿ (UPEIDA) ವ್ಯಾಪ್ತಿಗೆ ಸೇರಿದೆ ಎಂದು ತಿಳಿಸಿದ್ದಾರೆ. ಕುಸಿದಿರುವ ಸಂಪರ್ಕ ರಸ್ತೆಯ ದುರಸ್ತಿ ಕಾಮಗಾರಿ ಈಗಾಗಲೇ ಆರಂಭಿಸಲಾಗಿದೆ.














Click it and Unblock the Notifications