SIR ಡ್ಯೂಟಿ ಕಡ್ಡಾಯ, ಮಕ್ಕಳಿಗೆ ಪಾಠವೂ ಕಡ್ಡಾಯ: ಎರಡು ಇಲಾಖೆಗಳ ನಡುವೆ ಶಿಕ್ಷಕರು ಹೈರಾಣ
ಬೆಳಗಾದರೆ ಸಾಕು ಶಾಲೆಗೆ ತೆರಳಿ ಮಕ್ಕಳ ಪಾಠ ಮಾಡಬೇಕಾದ ಶಿಕ್ಷಕರು ಇಂದು ಗೊಂದಲದಲ್ಲಿ ಸಿಲುಕಿದ್ದಾರೆ. ಒಂದೆಡೆ ತರಗತಿಯಲ್ಲಿ ಪಾಠ ಮಾಡಲೇಬೇಕು ಎಂಬ ಶಿಕ್ಷಣ ಇಲಾಖೆಯ ಖಡಕ್ ಆದೇಶ, ಮತ್ತೊಂದೆಡೆ ಚುನಾವಣಾ ಆಯೋಗದ 'ವಿಶೇಷ ಸಮಗ್ರ ಮತಪಟ್ಟಿ ಪರಿಷ್ಕರಣೆ'ಗೆ ಕಡ್ಡಾಯವಾಗಿ ಹಾಜರಾಗಲೇಬೇಕು ಎಂಬ ಎಚ್ಚರಿಕೆ. ಈ ಎರಡು ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಕಕಾಲದಲ್ಲಿ ಈ ಎರಡೂ ಮಹತ್ವದ ಜವಾಬ್ದಾರಿಗಳನ್ನ ನಿಭಾಯಿಸುವುದು ಶಿಕ್ಷಕರನ್ನು ಹೈರಾಣಾಗಿಸಿದೆ.
ಶಿಕ್ಷಣ ಇಲಾಖೆ ಮತ್ತು ಚುನಾವಣಾ ಆಯೋಗದ ಗೊಂದಲ
ಮುಂಬರುವ ದಿನಗಳ ದೃಷ್ಟಿಯಿಂದ ಚುನಾವಣಾ ಆಯೋಗವು ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಶಿಕ್ಷಕರನ್ನು ಬಿಎಲ್‌ಒ ಹಾಗೂ ಇತರ ಕಾರ್ಯಗಳಿಗೆ ನಿಯೋಜಿಸಿದೆ. ಒಂದು ವೇಳೆ ನಿಯೋಜನೆಗೊಂಡ ಶಿಕ್ಷಕರು ಕರ್ತವ್ಯಕ್ಕೆ ಗೈರಾದರೆ ಅಥವಾ ನಿರ್ಲಕ್ಷ್ಯ ತೋರಿದರೆ ನೇರವಾಗಿ ಎಫ್‌ಐಆರ್ ದಾಖಲಿಸಿ, ಕ್ರಿಮಿನಲ್ ಮೊಕದ್ದಮೆ ಹೂಡುವ ಎಚ್ಚರಿಕೆಯನ್ನು ನೀಡಲಾಗಿದೆ.

ಆದರೆ, ಮತ್ತೊಂದೆಡೆ ಶಿಕ್ಷಣ ಇಲಾಖೆಯ ಆದೇಶವೇ ಬೇರೆ. ಎಸ್‌ಐಆರ್ ಕಾರ್ಯಕ್ಕೆ ನಿಯೋಜನೆಗೊಂಡಿದ್ದರೂ ಸಹ, ಶಿಕ್ಷಕರು ತಮ್ಮ ಶಾಲೆಯ ನಿಯಮಿತ ತರಗತಿಗಳನ್ನು ಯಾವುದೇ ಕಾರಣಕ್ಕೂ ತಪ್ಪಿಸುವಂತಿಲ್ಲ. ಮಕ್ಕಳ ಪಾಠ ಪ್ರವಚನಗಳು ನಿರಂತರವಾಗಿ ನಡೆಯಲೇಬೇಕು ಎಂದು ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಒಬ್ಬರೇ ಶಿಕ್ಷಕ ಒಂದೇ ಸಮಯದಲ್ಲಿ ಶಾಲೆಯಲ್ಲಿ ನಿಂತು ಪಾಠ ಮಾಡುವುದು ಮತ್ತು ಬೂತ್ ಮಟ್ಟದಲ್ಲಿ ಮನೆ ಮನೆಗೆ ತೆರಳಿ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವುದು ಸಾಧ್ಯವಾಗದ ಮಾತು.
ಶಿಕ್ಷಕರ ಸಂಕಷ್ಟ ಮತ್ತು ಬಿಡುಗಡೆಗೆ ಆಗ್ರಹ
ಒಬ್ಬ ವ್ಯಕ್ತಿಗೆ ಏಕಕಾಲಕ್ಕೆ ಎರಡು ಕಡೆ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಶಿಕ್ಷಕರು ಕೇವಲ ಯಂತ್ರಗಳಲ್ಲ; ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಶಾಲೆಯಲ್ಲಿ ಪಾಠ ಮಾಡಿ, ನಂತರ ಚುನಾವಣಾ ಕೆಲಸ ಮಾಡಲು ಇದು ತೀವ್ರ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಕಾರಣವಾಗುತ್ತಿದೆ. ಹೀಗಾಗಿ, ಶಿಕ್ಷಣ ಇಲಾಖೆಯು ತಕ್ಷಣವೇ ಚುನಾವಣಾ ಆಯೋಗದೊಂದಿಗೆ ಉನ್ನತ ಮಟ್ಟದ ಚರ್ಚೆ ನಡೆಸಬೇಕು ಎಂಬುದು ಶಿಕ್ಷಕರ ಆಗ್ರಹವಾಗಿದೆ.
ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಚುನಾವಣಾ ಕರ್ತವ್ಯದಲ್ಲಿರುವ ಶಿಕ್ಷಕರ ಚುನಾವಣಾ ಕರ್ತವ್ಯ ಮುಗಿಯುವವರೆಗೆ ಶಾಲಾ ತರಗತಿ ಚಟುವಟಿಕೆಗಳಿಂದ ಸಂಪೂರ್ಣ ಬಿಡುಗಡೆ ನೀಡಬೇಕು. ಇಲ್ಲವಾದರೆ, ಬೋಧನಾ ಕಾರ್ಯಕ್ಕೆ ತೊಂದರೆಯಾಗದಂತೆ ಶಿಕ್ಷಕರನ್ನು ಇಂತಹ ಕೆಲಸಗಳಿಗೆ ನಿಯೋಜಿಸದಂತೆ ಆಯೋಗಕ್ಕೆ ಮನವಿ ಮಾಡಬೇಕು ಎಂದು ಶಿಕ್ಷಕರು ಒತ್ತಾಯಿಸುತ್ತಿದ್ದಾರೆ. ಎರಡೂ ಮಾಡದೆ ಶಿಕ್ಷಕರನ್ನು ತೀವ್ರ ಒತ್ತಡಕ್ಕೆ ದೂಡುವುದು ಅವೈಜ್ಞಾನಿಕ ಕ್ರಮವಾಗಿದೆ.
ಕ್ಯಾಮ್ಸ್ ಮನವಿ ಮತ್ತು ಜಂಟಿ ಆದೇಶಕ್ಕೆ ಆಗ್ರಹ
ಈ ದ್ವಂದ್ವ ಆದೇಶಗಳ ಗೊಂದಲ ಕೇವಲ ಸರ್ಕಾರಿ ಶಾಲೆಗಳಿಗೆ ಮಾತ್ರ ಸೀಮಿತವಾಗಿಲ್ಲ; ಅನುದಾನಿತ ಹಾಗೂ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳೂ ಇದರಿಂದ ಕಂಗಾಲಾಗಿವೆ. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಅವರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಪತ್ರ ಬರೆದು ಸಮಸ್ಯೆ ಬಗೆಹರಿಸಲು ಆಗ್ರಹಿಸಿದ್ದಾರೆ.
ಚುನಾವಣಾ ಅಧಿಕಾರಿಗಳು ಶಿಕ್ಷಕರನ್ನು ಕಳುಹಿಸದಿದ್ದರೆ ಎಫ್‌ಐಆರ್ ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರೆ. ಅದೇ ವೇಳೆ, ಶಿಕ್ಷಕರಿಲ್ಲದೆ ತರಗತಿಗಳು ನಡೆಯದಿದ್ದರೆ ಶಾಲೆಗಳ ಆಡಳಿತ ಮಂಡಳಿ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಪರಿಸ್ಥಿತಿಯನ್ನು ಶಿಕ್ಷಣ ಇಲಾಖೆ ನಿರ್ಮಾಣ ಮಾಡಿದೆ. ಒಂದು ಆದೇಶವನ್ನು ಪಾಲಿಸಲು ಹೋದರೆ, ಸಹಜವಾಗಿಯೇ ಮತ್ತೊಂದು ಆದೇಶದ ಉಲ್ಲಂಘನೆಯಾಗುತ್ತದೆ.
ಆದ್ದರಿಂದ, ಈ ಕೂಡಲೇ ಎರಡೂ ಇಲಾಖೆಗಳ ಉನ್ನತ ಅಧಿಕಾರಿಗಳು ಸಭೆ ಸೇರಿ, ಜಂಟಿಯಾಗಿ ಸ್ಪಷ್ಟವಾದ ಆದೇಶವನ್ನು ಹೊರಡಿಸಬೇಕು. ಈ ಗೊಂದಲದ ನೆಪದಲ್ಲಿ ಶಾಲೆಗಳು ಹಾಗೂ ಶಿಕ್ಷಕರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಜರುಗಿಸಬಾರದು ಎಂದು ಅವರು ಪತ್ರದಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ. ಸರ್ಕಾರದ ಎರಡು ಇಲಾಖೆಗಳ ಪ್ರತಿಷ್ಠೆ ಹಾಗೂ ಸಮನ್ವಯದ ಕೊರತೆಗೆ ಗುರುವೃಂದ ಬಲಿಯಾಗದಂತೆ ನೋಡಿಕೊಳ್ಳಬೇಕಾದ ತುರ್ತು ಅಗತ್ಯವಿದೆ.












Click it and Unblock the Notifications