ಪ್ರಕೃತಿಯ ಗುಪ್ತ ನಿಧಿ ಪತ್ತೆ! ವಿಯೆಟ್ನಾಂನ ಗುಹೆಯಲ್ಲಿ ಸಾವಿರಾರು ಅಪರೂಪದ ಮುತ್ತುಗಳು
ವಿಯೆಟ್ನಾಂನ ಕ್ವಾಂಗ್ ಟ್ರಿ ಪ್ರಾಂತ್ಯದ ಫಾಂಗ್ ನಾ-ಕೆ ಬಾಂಗ್ ರಾಷ್ಟೀಯ ಉದ್ಯಾನವನದಲ್ಲಿ ವಿಜ್ಞಾನಿಗಳು ಇತ್ತೀಚಿಗೆ ಅತ್ಯಂತ ಬೃಹತ್ ಗುಹೆಯೊಂದನ್ನು ಪತ್ತೆಹಚ್ಚಿದ್ದಾರೆ. ಅದಕ್ಕೆ ಥಾಂಗ್ ಗುಹೆ ಎಂದು ಹೆಸರಿಡಲಾಗಿದೆ. ಈ ಗುಹೆಯ ಅತ್ಯಂತ ರೋಚಕ ವಿಶೇಷತೆ ಎಂದರೆ, ಇದರೊಳಗಡೆ ಅಪಾರ ಪ್ರಮಾಣದ ಗುಹೆ ಮುತ್ತುಗಳು ಪತ್ತೆಯಾಗಿವೆ. ಹಲವು ವರ್ಷಗಳಕಾಲ ಗುಹೆಗಳ ಬಗ್ಗೆ ನಿರಂತರ ಸಂಶೋಧನೆ ನೆಡೆಸುತ್ತಿರುವ ಜಗತ್ತಿನ ಪ್ರಮುಖ ತಜ್ಞರಿಗೂ ಸಹ ಒಂದೇ ಸೂರಿನಡಿ ಇಷ್ಟೊಂದು ಮುತ್ತುಗಳು ಪತ್ತೆಯಾಗಿರುವುದು ಇತಿಹಾಸದಲ್ಲೆ ಇದೇ ಮೊದಲು ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇತ್ತಿಚಿನ ಪ್ರಾಥಮಿಕ ಮಾಹಿತಿಯ ಪ್ರಕಾರ, ವೊಯ್ ಅಂದರೆ ಆನೆಯ ಗುಹೆ ಮತ್ತು ಮಾ.ಡಾ. ಸರೋವರದ ನಡುವೆ ಇರುವ 'ಮಾ ಡಾ' ಕಣಿವೆಯಲ್ಲಿ ದೊಡ್ಡ ಪ್ರಮಾಣದ ಗುಹೆಯೊಂದು ಪತ್ತೆಯಾಗಿದೆ. ಸರಿ ಸುಮಾರು 3,000 ಮೀಟರ್ ಉದ್ದದ ಈ ಗುಹೆ ಸರಾಸರಿ 70 ಮೀಟರ್ ಅಗಲವಿದೆ. ಇನ್ನು ಕೆಲವು ನಿರ್ಧಿಷ್ಟ ಜಾಗಗಳಲ್ಲಿ 100 ಮೀಟರ್‌ಗಿಂತಲೂ ಹೆಚ್ಚಾಗಿದೆ. ಸ್ಥಳಿಯ ನಿವಾಸಿಯೊಬ್ಬರು ಮೊದಲ ಬಾರಿಗೆ ಈ ಗುಹೆಯನ್ನು ಪತ್ತೆಹಚ್ಚಲಾಗಿದ್ದು ಅವರ ಅಪೂರ್ವ ಕೊಡುಗೆಯ ಗೌರವಾರ್ಥವಾಗಿ ಈ ಗುಹೆಗೆ ಥಾಂಗ್ ಎಂದು ಹೆಸರಿಡಲಾಗಿದೆ.

20 ಮೀಟರ್ ಆಳಕ್ಕೆ ಇಳಿದು ಗುಹೆ ಪರಿಶೀಲನೆ
ರಾಷ್ಟೀಯ ಉದ್ಯಾನವನದ ನಿಗೂಢ ಗುಹೆಯೊಂದರ ಅಧ್ಯಾಯನಕ್ಕೆ ಅಲ್ಲಿನ ಆಡಳಿತ ಮಂಡಳಿ ಆರು ದಿನಗಳ ಕಾಲ ವಿಶೇಷ ಸಂಶೋಧನಾ ತಂಡವನ್ನು ರಚಿಸಿತ್ತು. ಈ ತಂಡದ ಸಂಶೋಧಕರು ಅತ್ಯಾಧುನಿಕ ಪರ್ವತಾರೋಹಣ ಉಪಕರಣಗಳ ಸಹಾಯದಿಂದ ಸುಮಾರು 20 ಮೀಟರ್ ಆಳಕ್ಕೆ ಅತ್ಯಂತ ಕಡಿದಾದ ಮತ್ತು ಉದ್ದವಾದ ಬಂಡೆಯ ಭಾಗದಲ್ಲಿ ಇಳಿದು ಗುಹೆಯೊಳಗೆ ಸುದೀರ್ಘ ಪರಿಶೀಲನೆ ಮತ್ತು ಸಂಶೋಧನೆಯನ್ನು ನಡೆಸಿದ್ದಾರೆ.
ಗುಹೆ ರಚನೆಯ ಕುರಿತು ಹೊಸ ವಿವರ:
ಇತ್ತೀಚಿಗೆ ಸಂಶೋಧಕರು ನಡೆಸಿದ ಅಧ್ಯಯನದ ವೇಳೆ ಈ ಗುಹೆಯು ಎರಡು ಪ್ರತ್ಯೇಕ ಭಾಗಗಳಾಗಿ ವಿಭಜನೆಗೊಂಡಿರುವುದು ಮತ್ತು ಅದಕ್ಕೆ ಎರಡು ಪ್ರವೇಶ ದ್ವಾರಗಳಿರುವುದು ಕೂಡ ಪತ್ತೆಯಾಗಿದೆ. ಇದರ ಮುಖ್ಯ ಪ್ರವೇಶ ದ್ವಾರವು ಸುಮಾರು 5 ಚದರ ಮೀಟರ್‌ಗಳಷ್ಟು ವಿಶಾಲವಾದ ವಿಸ್ತೀರ್ಣವನ್ನು ಹೊಂದಿದೆ. ಆದರೆ, ಮತ್ತೊಂದು ದ್ವಾರವು ಅತ್ಯಂತ ಕಿರಿದಾಗಿದ್ದು, ಕೇವಲ ಒಬ್ಬ ವ್ಯಕ್ತಿ ಮಾತ್ರ ಪ್ರಯಾಸದಿಂದ ಹಾದುಹೋಗುವಷ್ಟು ಕಿರಿದಾದ ಅಗಲವನ್ನು ಹೊಂದಿದೆ.
ಲಕ್ಷಾಂತರ ವರ್ಷಗಳ ಹಳೆಯ ನೈಸರ್ಗಿಕ ವಿಸ್ಮಯ: ಗುಹೆಯೊಳಗಿನ ಕಲ್ಲಿನ ರಚನೆಗಳು!
ಈ ಗುಹೆಯ ಒಳಭಾಗದಲ್ಲಿ ನೂರಾರು ಸಾವಿರ ವರ್ಷಗಳ ಸುದೀರ್ಘ ಅವಧಿಯಲ್ಲಿ ನೈಸರ್ಗಿಕವಾಗಿ ರೂಪುಗೊಂಡಿರುವ ಅದ್ಭುತ ಕಲ್ಲಿನ ಆಕೃತಿಗಳು ಪತ್ತೆಯಾಗಿವೆ. ಇವುಗಳಲ್ಲಿ ಗುಹೆಯ ಮೇಲ್ಛಾವಣಿಯಿಂದ ಕೆಳಕ್ಕೆ ತೂಗಾಡುವ ಸ್ಟ್ಯಾಲಕ್ಟೈಟ್‌ಗಳು ಮತ್ತು ನೆಲದಿಂದ ಮೇಲ್ಮುಖವಾಗಿ ಗೋಪುರದಂತೆ ಬೆಳೆಯುವ ಸ್ಟ್ಯಾಲಗ್ಮೈಟ್‌ಗಳು ಒಳಗೊಂಡಿದ್ದು, ಪ್ರಕೃತಿಯ ಅಪರೂಪದ ಶಿಲ್ಪಕಲೆಗೆ ಸಾಕ್ಷಿಯಾಗಿ ನಿಂತಿವೆ.
ಈ ಗುಹೆಯ ಒಳಗಡೆ ಪ್ರಕೃತಿಯ ಅದ್ಭುತ ಕರಕುಶಲತೆಗೆ ಸಾಕ್ಷಿಯಾಗಿದೆ. ಇಲ್ಲಿರುವ ಕೆಲವು ಕಲ್ಲಿನ ಸ್ತಂಭಗಳು ಬರೋಬ್ಬರಿ 50 ಮೀಟರ್‌ಗಳಷ್ಟು ಎತ್ತರಕ್ಕೆ ಹೊಂದಿವೆ. ಇದರೊಂದಿಗೆ, ಕಲ್ಲಿನ ಪರದೆಗಳಂತೆ ಭಾಸವಾಗುವ ಈ ಅಪರೂಪದ ನೈಸರ್ಗಿಕ ರಚನೆಗಳು ಮತ್ತು ಬೃಹತ್ ಗಾತ್ರದ ಕಾರ್ಸ್ಟ್ ಶಿಲಾ ವಿನ್ಯಾಸಗಳು ಈ ಗುಹೆಯ ನಿಗೂಢತೆ ಮತ್ತು ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ.
ಇತ್ತಿಚಿನ ಸಂಶೋಧನೆಯಲ್ಲಿ ಪ್ರಕೃತಿ ವಿಸ್ಮಯಕಾರಿ ಅಪರೂಪದ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಗುಹೆ ನೈಸರ್ಗಿಕ ಕಲ್ಲಿನ ಕುಳಿಗಳಲ್ಲಿ ಬಿಳಿ ಬಣ್ಣದ ದುಂಡಗಿನ ಮುತ್ತುಗಳು ಅಪಾರ ಪ್ರಮಾಣದಲ್ಲಿ ಪತ್ತೆಯಾಗಿವೆ. ನೈಜ ಮುತ್ತುಗಳಂತೆ ಕಾಣುವ ಇವುಗಳು ಸಾವಿರಾರು ವರ್ಷಗಳ ಕಾಲ ನೀರಿನ ಹನಿಗಳ ಮೂಲಕ ನಿಧಾನವಾಗಿ ಖನಿಜಗಳ ಪದರಗಳಿಂದ ಜಮೆಯಾಗುವುದರ ಮೂಲಕ ರೂಪಗೊಳ್ಳುತ್ತವೆ. ಇಂತಹ ಅದ್ಬುತವಾದ ರಚನೆಗಳು ಜಗತ್ತಿನ ಕೆಲವೇ ಕೆಲವು ಗುಹೆಗಳಲ್ಲಿ ಮಾತ್ರ ಕಂಡುಬರಲು ಸಾಧ್ಯ ಎನ್ನಲಾಗಿದೆ.
ತಜ್ಞರ ವಿಶ್ಲೇಷಣೆಯ ಪ್ರಕಾರ, ಈ ನೂತನ ಆವಿಷ್ಕಾರವು ಭೂವಿಜ್ಞಾನ ಅಧ್ಯಯನ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯನ್ನು ನೀಡಲಿದೆ. ಅಲ್ಲದೆ ಯುನೆಸ್ಕೋ (UNESCO) ವಿಶ್ವ ಪರಂಪರೆ ತಾಣವಾಗಿರುವ 'ಪಾಂಗ್ ನಾ-ಕೆ' ಬಾಂಗ್ ರಾಷ್ಟೀಯ ಉದ್ಯಾನವನದ ವೈಜ್ಞಾನಿಕ ಮೌಲ್ಯವನ್ನು ಇದು ಮತ್ತಷ್ಟು ಹೆಚ್ಚಿಸಿದೆ. ಇದರೊಂದಿಗೆ ನೂತನವಾಗಿ ಪತ್ತೆಯಾಗಿರುವ 'ಥಾಂಗ್ ಗುಹೆ'ಯನ್ನು ಪರಿಸರ ಸ್ನೇಹಿ ಪ್ರವಾಸದ ಪ್ಯಾಕೇಜ್್ಗೆ ಸೇರಿಸಲು ಸಂಶೋಧಕರು ಶಿಪಾರಸು ಮಾಡಿದ್ದಾರೆ. ಉದ್ಯಾನವನದ ಆಡಳಿತ ಮಂಡಳಿಯೂ ಇದೆಕ್ಕೆ ಒಪ್ಪಿಗೆಯನ್ನು ಕೊಟ್ಟಿದೆ. ಈ ಹೊಸ ಗುಹೆ ಮುಂಬರುವ ದಿನಗಳಲ್ಲಿ ಪ್ರವಾಸೋದ್ಯಮದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ.














Click it and Unblock the Notifications