ಪಾಟೀಲ್ ಬೆಂಬಲಿಗರ ಪಾದಯಾತ್ರೆಗೆ ಡಿಕೆಶಿ ಖಡಕ್ ಸಂದೇಶ: ಎಲ್ಲರನ್ನೂ ಮಂತ್ರಿ ಮಾಡಲು ಸಾಧ್ಯವಿಲ್ಲ
ಬೆಂಗಳೂರು: ರೋಣ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿರುವ ಜಿ.ಎಸ್. ಪಾಟೀಲ್ ಅವರಿಗೆ ಮಂತ್ರಿ ಸ್ಥಾನ ನೀಡುವಂತೆ ಆಗ್ರಹ ಜೋರಾಗಿದೆ. ಈ ಸಂಬಂಧ ಬೇರೆ ಬೇರೆ ಭಾಗಗಳಿಂದ ಪಾದಯಾತ್ರೆ ಮೂಲಕ ಆಗಮಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸಿಎಂ ಡಿಕೆ ಶಿವಕುಮಾರ್ ಅವರು, ಪಕ್ಷದಲ್ಲಿ ಶಿಸ್ತು ಮುಖ್ಯ, ಸರ್ಕಾರ ಬಂದ ಮೇಲೆ ಕೊಟ್ಟ ಮಾತು ಉಳಿಸಿಕೊಂಡಿದೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎನ್ನುವ ಮೂಲಕ ಎಲ್ಲರನ್ನೂ ಮಂತ್ರಿ ಮಾಡಲು ಆಗೋಲ್ಲ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಇಂದಿರಾ ಗಾಂಧಿ ಭವನದ ಭಾರತ ಜೋಡೋ ಸಭಾಂಗಣದದಲ್ಲಿ ಡಿಕೆ ಶಿವಕುಮಾರ್ ಅವರು ಗದಗ ಜಿಲ್ಲೆ ರೋಣ ವಿಧಾನಸಭೆ ಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ್ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. ರೋಣ ತಾಲ್ಲೂಕಿನಲ್ಲಿ ನೀವೆಲ್ಲರೂ ಸೇರಿ ಬಿಜೆಪಿ ವಿರುದ್ಧ ಹೋರಾಟ ಮಾಡಿ 136 ಸೀಟು ತಂದು ಈ ರಾಜ್ಯಕ್ಕೆ ದೊಡ್ಡ ಬಹುಮತದ ಸರ್ಕಾರ ತಂದಿದ್ದೀರಿ. ಸರ್ಕಾರ ಬಂದ ನಂತರ ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ.

ನಿಮ್ಮ ನಾಯಕ ಜಿ.ಎಸ್ ಪಾಟೀಲ್ ಅವರಿಗೆ ಆಶೀರ್ವಾದ ಮಾಡಲು ಬಂದಿದ್ದೀರಿ. ನಿಮ್ಮ ಭಾವನೆ, ಪ್ರೀತಿ ನಮಗೆ ಅರ್ಥವಾಗುತ್ತದೆ. ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷ. ಬೇರೆ ಬೇರೆ ಭಾಗಗಳಿಂದ ಪ್ರತಿಭಟನೆ, ಪಾದಯಾತ್ರೆ ಮಾಡಿಕೊಂಡು ಬಂದರೆ, ನಮ್ಮ ಪಕ್ಷದಲ್ಲಿ ಬಹಳ ಕಷ್ಟ. ಈ ರೀತಯ ಬೆಳವಣಿಗೆಗೆ ಮೊದಲಿನಿಂದಲೂ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ಮಂತ್ರಿ, ಸಚಿವ ಸ್ಥಾನ ನೀಡುವುದು ಪಕ್ಷ
ನೀವು ಪಾದಯಾತ್ರೆ ಹೊರಟಿದ್ದೀರಿ ಎಂದು ನಿನ್ನೆ ತಿಳಿಯಿತು. ಈ ರೀತಿ ಮಾಡಿದರೆ 224 ಕ್ಷೇತ್ರಗಳಿಂದಲೂ ಜನ ಪಾದಯಾತ್ರೆ ಹೊರಡುತ್ತಾರೆ. ಸಿಎಂ, ಮಂತ್ರಿ ಮಾಡುವುದು ಪಕ್ಷ. ಪಕ್ಷವೇ ಎಲ್ಲಾ ವಿಚಾರ ಆಲೋಚಿಸಿ ತೀರ್ಮಾನ ಮಾಡುತ್ತದೆ ಎಂದರು.
ನಮ್ಮ ಕನಸು, ಶ್ರಮ ಬೇರೆ ಇದ್ದರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದೆವು. ವಿರೋಧ ಪಕ್ಷದವರು ನಮ್ಮನ್ನು ಎತ್ತಿಕಟ್ಟಲು ಪ್ರಯತ್ನಿಸುತ್ತಾರೆ, ಹೇಳಿಕೆ ಕೊಡುವಂತೆ ಮಾಡುತ್ತಾರೆ. ಸಮಾಜಗಳ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಸುತ್ತಾರೆ. ನಾವು ಎಚ್ಚರಿಕೆಯಿಂದ ಇರಬೇಕು. ಪಕ್ಷ ಇದ್ದರೆ, ಚುನಾವಣೆಗಳಲ್ಲಿ ಗೆದ್ದರೆ ಎಲ್ಲವೂ ತಾನಾಗಿಯೇ ಬರುತ್ತದೆ. ಜಿ.ಎಸ್ ಪಾಟೀಲ್ ಅವರಿಗೆ ಮಂತ್ರಿ ಸ್ಥಾನ ಕೇಳಿದ್ದೀರಿ, ನಿಮ್ಮ ಭಾವನೆಯನ್ನು ಪಕ್ಷದ ಹೈಕಮಾಂಡಿಗೆ ತಲುಪಿಸುತ್ತೇವೆ ಎಂದು ತಿಳಿಸಿದರು.
ಜಿ.ಎಸ್ ಪಾಟೀಲ್ ನಮ್ಮ ಜಿಲ್ಲಾಧ್ಯಕ್ಷರು, ಅವರ ಬಗ್ಗೆ ಗೊತ್ತಿದೆ. ನೀವು ತಾಳ್ಮೆಯಿಂದ ಇರಿ. ನಿಮ್ಮ ಗುರಿ 2028ಕ್ಕೆ ನಮ್ಮ ಸರ್ಕಾರವನ್ನು ತರುವುದಾಗಿರಬೇಕು ಎಂದು ಕರೆ ನೀಡಿದರು.
ಅಪಾಯ ಹಾಗೂ ಅವಕಾಶ ಎರಡೂ ನಮ್ಮ ಮುಂದಿದೆ. ಎಸ್ಐಆರ್ ಎಂದರೆ, ಇಡೀ ಮತಪಟ್ಟಿಯನ್ನು ಹೊಸದಾಗಿ ರಚಿಸುವುದು. ಬಿಎಲ್ಎ ನೀಡುವ ಎನ್ಯುಮರೇಷನ್ ಫಾರಂ ಅನ್ನು ದಾಖಲೆ ಸಮೇತ ಸಲ್ಲಿಸಿದಾಗ ಮಾತ್ರ ನಿಮಗೆ ಮತದಾನದ ಹಕ್ಕು ಸಿಗುತ್ತದೆ. ಕೆಲವರು ಮ್ಯಾಪಿಂಗ್ ಆಗಿದೆ ಎಂದು ಸುಮ್ಮನಾಗುತ್ತಾರೆ. ಇದು ಅವರ ಲೆಕ್ಕಕ್ಕೆ ಆಗುವ ಮ್ಯಾಪಿಂಗ್ ಇದರಿಂದ ನಿಮ್ಮ ಮತ ಉಳಿಯುವುದಿಲ್ಲ.
ಶೇ.99 ಮ್ಯಾಪಿಂಗ್ ಆದರೂ ಶೇ.50ರಷ್ಟು ಮತ ತೆಗೆದುಹಾಕುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ, ತಮಿಳುನಾಡಿನಲ್ಲಿ ಏನಾಗಿದೆ ಎಂದು ನಿಮಗೆಲ್ಲಾ ಅರಿವಿದೆ. ನೀವೆಲ್ಲರೂ ಮೊದಲು ಮನೆ ಮನೆಗೆ ಹೋಗಿ ವಾಸ ದೃಢೀಕರಣ ಪತ್ರ, ಪಿಂಚಣಿ ಪ್ರಮಾಣ ಪತ್ರ ಸೇರಿದಂತೆ ಎಲ್ಲ ದಾಖಲೆ ನೀಡಿದಾಗ ಮಾತ್ರ ಮತದಾನದ ಹಕ್ಕು ಉಳಿಯುತ್ತದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆ ಫಲಾನುಭವಿಗಳಿಗೆ ಸಿಗಬೇಕು
ಹೊರ ರಾಜ್ಯಗಳಲ್ಲಿ ಮತದಾನದ ಹಕ್ಕು ಇಲ್ಲದವರಿಗೆ ಸರ್ಕಾರದ ಯೋಜನೆ ತೆಗೆಯಲು ಹೊರಟಿದ್ದಾರೆ. ಮುಂದೆ ಮತದಾನವಿಲ್ಲವಿದ್ದರೆ ಕೇಂದ್ರದಿಂದ ಯಾವುದೇ ಹಕ್ಕನ್ನು ನೀಡುವುದಿಲ್ಲ. ಹೀಗಾಗಿ ನಮ್ಮ ರಾಜ್ಯದವರಿಗೆ ತೊಂದರೆ ಆಗಬಾರದು. ವೃದ್ದಾಪ್ಯ ವೇತನ, ವಿಧವಾ ವೇತನ, ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆ ಕಿತ್ತುಹಾಕುವುದು ನಮ್ಮ ಉದ್ದೇಶವಲ್ಲ. ನಮ್ಮ ಯೋಜನೆಗಳು ನೈಜ ಫಲಾನುಭವಿಗಳಿಗೆ ತಲುಪುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮುಂದಾಗಿದ್ದೇವೆ ಎಂದರು.
ಗೃಹಜ್ಯೋತಿ ಯೋಜನೆಯಲ್ಲಿ ನಮ್ಮ ರಾಜ್ಯದವರು ಉಚಿತ ವಿದ್ಯುತ್ ಪಡೆಯುತ್ತಿದ್ದಾರಾ? ಬೇರೆ ರಾಜ್ಯದವರು ಪಡೆಯುತ್ತಿದ್ದಾರ? ಎದು ಪರಿಶೀಲನೆ ಮಾಡಬೇಕು. ರಾಜ್ಯದಲ್ಲಿ ಈಗಾಗಲೇ 20 ಲಕ್ಷ ಜನರು ಹೊರ ರಾಜ್ಯಗಳಿಂದ ಬಂದು ವಿವಿಧ ಕೆಲಸ ಮಾಡುತ್ತಿದ್ದಾರೆ. ಅವರ ಮತ ಇಲ್ಲಿದೆಯೇ ಇಲ್ಲವೇ ಎಂದು ಪರಿಶೀಲನೆ ಮಾಡಬೇಕಲ್ಲವೇ? ನಾವು ನಮ್ಮ ಮತದಾರರಿಗೆ ಶಕ್ತಿ ನೀಡಬೇಕೋ, ಹೊರಗಿನವರಿಗೆ ಶಕ್ತಿ ನೀಡಬೇಕೋ? ಇಲ್ಲಿ ಮತದಾನದ ಹಕ್ಕು ಇರುವವರಿಗೆ ಯೋಜನೆ ನೀಡುವುದು ನಮ್ಮ ಕರ್ತವ್ಯ. ಬಸ್ ಗಳಲ್ಲೂ ರಾಜ್ಯದ ಮಹಿಳೆಯರಿಗೆ ಗುರುತಿನ ಚೀಟಿ ನೀಡಲಾಗುವುದು ಎಂದು ತಿಳಿಸಿದರು.














Click it and Unblock the Notifications