ಯೋಗ: ಆರೋಗ್ಯಕರ ಮತ್ತು ಸಮತೋಲಿತ ಭವಿಷ್ಯಕ್ಕೆ ಭಾರತದ ಶಾಶ್ವತ ಕೊಡುಗೆ
ಅಭೂತಪೂರ್ವ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯನ್ನು ನಾವು ಸಾಧಿಸಿದ್ದೇವೆ. ಆದರೆ ಮತ್ತೊಂದೆಡೆ ತೀವ್ರ ಮಾನಸಿಕ ಒತ್ತಡ, ದೈಹಿಕ ಜಡತ್ವ, ಜೀವನಶೈಲಿ ಸಂಬಂಧಿಸಿದ ಕಾಯಿಲೆಗಳು ಹಾಗೂ ಸಾಮಾಜಿಕ ಅಸಮತೋಲನಗಳು ಹೆಚ್ಚುತ್ತಿರುವುದು ಆತಂಕಕಾರಿ. ಇಂತಹ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕೇವಲ ಒಂದು ಪ್ರಾಚೀನ ಸಾಂಪ್ರದಾಯಿಕ ಪದ್ಧತಿಯನ್ನು ಆಚರಿಸುವ ಆಚರಣೆಯಾಗಿರದೆ, ಅದು ನಮ್ಮ ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಾಮರಸ್ಯ ಕಾಯ್ದುಕೊಳ್ಳುವ ಒಂದು ಆರೋಗ್ಯಕರ ಜೀವನಶೈಲಿಯ ಸಂದೇಶವನ್ನು ಜಗತ್ತಿಗೆ ನೆನಪಿಸುವ ಮಹತ್ವದ ದಿನವಾಗಿದೆ.
ಯೋಗವು ಭಾರತದ ಋಷಿಮುನಿಗಳಿಂದ ಮಾನವಕುಲಕ್ಕೆ ದೊರೆತ ಅತ್ಯಂತ ಶ್ರೇಷ್ಠ ಹಾಗೂ ಶಾಶ್ವತ ಕೊಡುಗೆ. ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವೇ ನಿಜವಾದ ಆರೋಗ್ಯವೆಂದು ಅರಿತುಕೊಂಡಿದ್ದರು. ಆದ್ದರಿಂದಲೇ ಯೋಗವನ್ನು ಕೇವಲ ವ್ಯಾಯಾಮದ ವಿಧಾನವಾಗಿ ಅವರು ಪರಿಗಣಿಸಲಿಲ್ಲ, ಅದು ಜೀವನವನ್ನು ಸಮಗ್ರವಾಗಿ ರೂಪಿಸುವ ಜೀವನಶಾಸ್ತ್ರವಾಗಿ ಬೆಳೆಯಿತು. ಶಾರೀರಿಕ ಆಸನಗಳು, ಉಸಿರಾಟದ ನಿಯಂತ್ರಣದ ಪ್ರಾಣಾಯಾಮ, ಧ್ಯಾನ ಹಾಗೂ ಶಿಸ್ತುಬದ್ಧ ಜೀವನಶೈಲಿ ಇವೆಲ್ಲವೂ ಯೋಗದ ಅವಿಭಾಜ್ಯ ಅಂಗಗಳಾಗಿವೆ.

ಋಷಿಗಳ ಅನುಭವಿ ದೃಢೀಕರಿಸೋ ವಿಜ್ಞಾನ:
ನಮ್ಮ ಹಿರಿಯರು ಮತ್ತು ಋಷಿಗಳು ಅನುಭವದಿಂದ ಕಂಡುಕೊಂಡ ಸತ್ಯವನ್ನು ಇಂದಿನ ಆಧುನಿಕ ವಿಜ್ಞಾನವೂ ದತ್ತಾಂಶಗಳ ಮೂಲಕ ದೃಢೀಕರಿಸುತ್ತಿದೆ. ಅಂತಾರಾಷ್ಟ್ರೀಯ ವೈದ್ಯಕೀಯ ಡೇಟಾಬೇಸ್ ಆದ "ಪಬ್‌ಮೆಡ್"ನಲ್ಲಿ ಲಭ್ಯವಿರುವ ಹಲವು ವ್ಯವಸ್ಥಿತ ವಿಶ್ಲೇಷಣೆಗಳು ಮತ್ತು ವಿಶ್ವದ ಅನೇಕ ವೈದ್ಯಕೀಯ ಸಂಶೋಧನೆಗಳು ಯೋಗದ ದಕ್ಷತೆಯನ್ನು ಸಾಬೀತುಪಡಿಸಿವೆ. ರಕ್ತದೊತ್ತಡ ನಿಯಂತ್ರಣ, ಮಧುಮೇಹ, ಸ್ಥೂಲಕಾಯ, ಕೊಲೆಸ್ಟ್ರಾಲ್ ಸಮತೋಲನ ಮತ್ತು ಶರೀರದ ತೂಕವನ್ನು ನಿರ್ವಹಿಸುವಲ್ಲಿ ಯೋಗದ ಪಾತ್ರ ಅನನ್ಯವಾದುದು. ಇದು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಗಣನೀಯವಾಗಿ ತಗ್ಗಿಸುತ್ತದೆ.
ಆರೋಗ್ಯವೆಂದರೆ ಕೇವಲ ರೋಗವಿಲ್ಲದ ಸ್ಥಿತಿ ಅಲ್ಲ. ಆರೋಗ್ಯಕರ ದೇಹ, ಪ್ರಶಾಂತ ಮನಸ್ಸು, ಸಮತೋಲಿತ ಭಾವನೆಗಳು ಮತ್ತು ಸಕಾರಾತ್ಮಕ ಚಿಂತನೆಗಳ ಒಟ್ಟಾರೆ ಸ್ಥಿತಿಯೇ ಆರೋಗ್ಯ. ಕೇವಲ ಕಾಯಿಲೆಗಳು ಇಲ್ಲದಿರುವುದಷ್ಟೇ ಆರೋಗ್ಯವಲ್ಲ, ಬದಲಾಗಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಿರುವುದೇ ನಿಜವಾದ ಆರೋಗ್ಯ ಎಂಬುದನ್ನು ಮನಗಾಣಬೇರು. ಈ ಸಮಗ್ರ ದೃಷ್ಟಿಕೋನವನ್ನು ಯೋಗ ನಮಗೆ ಕಲಿಸುವುದರಿಂದ, ವ್ಯಕ್ತಿಯಲ್ಲಿ ಆತ್ಮಾವಲೋಕನವನ್ನು ಜಾಗೃತಗೊಳಿಸಿ ಇಂದಿನ ದಿನಗಳಲ್ಲಿ ವ್ಯಕ್ತಿ, ಕುಟುಂಬ ಹಾಗೂ ಇಡೀ ಸಮಾಜದ ನೆಮ್ಮದಿಗೆ ಇದು ಅತ್ಯಗತ್ಯವಾಗಿದೆ.
ಯೋಗದ ಪ್ರಸಾರವು ಕೇವಲ ವೈಯಕ್ತಿಕ ಮಟ್ಟದಲ್ಲಿ ಸೀಮಿತವಾಗಬಾರದು. ಸಾಮಾಜಿಕ ಪ್ರಗತಿಯನ್ನು ಧ್ಯೇಯವಾಗಿಸಿಕೊಂಡು ಶಿಕ್ಷಣ ನೀಡುತ್ತಿರುವ ಸಂಸ್ಥೆಗಳು, ಉದ್ಯೋಗ ಕ್ಷೇತ್ರಗಳು ಹಾಗೂ ಸಾಮಾಜಿಕ ಸಂಘಟನೆಗಳು ಯೋಗ ಸಂಸ್ಕೃತಿಯನ್ನು ಬೆಳೆಸುವ ದೊಡ್ಡ ಜವಾಬ್ದಾರಿಯನ್ನು ಹೊರಬೇಕು. ಶಾಲಾ-ಕಾಲೇಜುಗಳ ದಿನನಿತ್ಯದ ಚಟುವಟಿಕೆಗಳಲ್ಲಿ ಬಾಲ್ಯದಿಂದಲೇ ಯೋಗವನ್ನು ಜೀವನದ ಭಾಗವಾಗಿಸಿದರೆ, ದೈಹಿಕವಾಗಿ ಆರೋಗ್ಯವಂತ ಹಾಗೂ ಸಮಾಜದ ಬಗ್ಗೆ ಕಾಳಜಿಯುಳ್ಳ ಜವಾಬ್ದಾರಿಯುತ ಮತ್ತು ಮೌಲ್ಯಯುತ ನಾಗರಿಕರನ್ನು ರೂಪಿಸಬಲ್ಲದು. ವಯಸ್ಸು, ವೃತ್ತಿ ಅಥವಾ ಸಾಮಾಜಿಕ ಅಂತಸ್ತಿನ ಭೇದವಿಲ್ಲದೆ ಸಮಾಜದ ಎಲ್ಲಾ ವರ್ಗದ ಜನರಿಗೂ ಯೋಗವನ್ನು ತಲುಪಿಸುವುದು ಇಂದಿನ ತುರ್ತು.
ಈ ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಯೋಗವನ್ನು ಕೇವಲ ಒಂದು ದಿನದ ಸಾಂಕೇತಿಕ ಆಚರಣೆಯಾಗಿ ನೋಡುವ ಬದಲು, ಅದನ್ನು ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ದಿನಚರಿಯಾಗಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ. ಪ್ರತಿದಿನ ಮಾಡುವ ಅಲ್ಪ ಸಮಯದ ಯೋಗಾಭ್ಯಾಸವು ದೈಹಿಕ ಆರೋಗ್ಯ, ಮಾನಸಿಕ ಶಾಂತಿ ಮತ್ತು ಜೀವನೋತ್ಸಾಹವನ್ನು ವೃದ್ಧಿಸುತ್ತದೆ. ಇದು ನಮಗಷ್ಟೇ ಅಲ್ಲದೆ, ನಮ್ಮ ಸುತ್ತಮುತ್ತಲಿನವರ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಬೀರಿ ಅದ್ಭುತಗಳನ್ನು ಸೃಷ್ಟಿಸಬಲ್ಲದು. ಆರೋಗ್ಯವಂತರು ಸ್ವಸ್ಥ ಕುಟುಂಬಗಳನ್ನು ನಿರ್ಮಿಸುತ್ತಾರೆ, ಸ್ವಸ್ಥ ಕುಟುಂಬಗಳು ಆರೋಗ್ಯಕರ ಸಮಾಜವನ್ನು ಕಟ್ಟುತ್ತವೆ, ಆರೋಗ್ಯಕರ ಸಮಾಜವೇ ಬಲಿಷ್ಠ ರಾಷ್ಟ್ರದ ಅಡಿಪಾಯ.
ಶಾರೀರಿಕ ದೃಢತೆ ಹಾಗೂ ಅಂತರಂಗದ ಪ್ರಶಾಂತತೆಯನ್ನು ಬೆಸೆಯುವ ಯೋಗದ ಸತ್ಪಥವನ್ನು ಅನುಸರಿಸುವ ಮೂಲಕ ನಾವೆಲ್ಲರೂ ಉಜ್ವಲ, ಆರೋಗ್ಯಕರ ಹಾಗೂ ಸಮತೋಲಿತ ಭವಿಷ್ಯದತ್ತ ಹೆಜ್ಜೆ ಇಡೋಣ.
ಬಪಹ- ಡಾ. ಡಿ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ














Click it and Unblock the Notifications