Kapil Dev: ವೈಭವ್ ಸೂರ್ಯವಂಶಿ ಪ್ರತಿಭೆಯಲ್ಲಿ ಸಚಿನ್, ವಿರಾಟ್‌ಗೆ ಸಮಾನ: ಮ್ಯಾನೇಜ್‌ಮೆಂಟ್‌ಗೆ ಕಪಿಲ್ ದೇವ್ ಕಿವಿಮಾತು
Kapil Dev: ಭಾರತೀಯ ಕ್ರಿಕೆಟ್‌ನ ಅದ್ಭುತ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರ ಅಂತಾರಾಷ್ಟ್ರೀಯ ಪದಾರ್ಪಣೆಯ ಕುರಿತು ಕ್ರಿಕೆಟ್ ವಲಯದಲ್ಲಿ ಚರ್ಚೆಗಳು ತೀವ್ರಗೊಳ್ಳುತ್ತಿವೆ. ಇದೆ ಬೆನ್ನಲ್ಲೇ ಭಾರತದ 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಈ ಯುವ ಆಟಗಾರನ ಕುರಿತು ದೊಡ್ಡ ಹೇಳಿಕೆ ನೀಡಿ ಗಮನ ಸೆಳೆದಿದ್ದಾರೆ. ಇದು ಇದೀಗ ಸಾಮಾಜಿಜ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ವೈಭವ್ ಸೂರ್ಯವಂಶಿ ಅವರಲ್ಲಿ ಅಸಾಧಾರಣ ಪ್ರತಿಭೆಯನ್ನು ಕೊಂಡಾಡಿರುವ ಕಪಿಲ್ ದೇವ್, ಅವರನ್ನು ಭಾರತದ ಶ್ರೇಷ್ಠ ಬ್ಯಾಟರ್‌ಗಳಾದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರಿಗೆ ಹೋಲಿಕೆ ಮಾಡಿದ್ದಾರೆ. ಇದೇ ಇದೀಗ ಎಲ್ಲೆಡೆ ವೈರಲ್ ಆಗುತ್ತಿರುವ ವಿಚಾರವಾಗಿದೆ.

'ಪ್ರತಿಭೆಯಲ್ಲಿ ಸಚಿನ್-ವಿರಾಟ್‌ಗೆ ಸಮಾನ'
ವೈಭವ್ ಸೂರ್ಯವಂಶಿ ಅವರ ಆಟದ ಬಗ್ಗೆ ಮಾತನಾಡಿದ ಕಪಿಲ್ ದೇವ್ ಅವರು, 'ನಾನು ಅವರ ಆಟವನ್ನು ಹೆಚ್ಚು ನೋಡಿಲ್ಲ. ಆದರೆ ಅವರೊಬ್ಬ ಅತ್ಯದ್ಭುತ ಪ್ರತಿಭೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರತಿಭೆಯ ವಿಷಯಕ್ಕೆ ಬಂದರೆ ಅವರು ಖಂಡಿತವಾಗಿಯೂ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರಷ್ಟೇ ಸಮರ್ಥರಾಗಿದ್ದಾರೆ. ಅವರಲ್ಲಿ ಅಂತಹ ಅದ್ಭುತ ಸಾಮರ್ಥ್ಯ ಎದ್ದು ಕಾಣುತ್ತಿದೆ. ಆದರೆ ಸದ್ಯಕ್ಕೆ ಇದು ಕೇವಲ ಟಿ 20 ಕ್ರಿಕೆಟ್‌ಗೆ ಮಾತ್ರ ಸೀಮಿತವಾಗಿದೆ. ಇನ್ನುಳಿದ ಮಾದರಿಯ ಕ್ರಿಕೆಟ್‌ನಲ್ಲಿ ಅವರು ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಬೇಕಿದೆ,' ಎಂದು ಸ್ಪೋರ್ಟ್ಸ್ ತಕ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
'ವಯಸ್ಸನ್ನು ನೋಡಬೇಡಿ, ಸಾಮರ್ಥ್ಯವನ್ನು ನಂಬಿ'
ಅತಿ ಚಿಕ್ಕ ವಯಸ್ಸಿನಲ್ಲೇ ಟೀಮ್ ಇಂಡಿಯಾ ಪರ ಆಡುತ್ತಿರುವ ಕುರಿತು ಕಪಿಲ್ ದೇವ್ ಮಹತ್ವದ ಸಲಹೆ ನೀಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಅವರು, 'ವೈಭವ್ ಟಿ 20 ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಪ್ರಭಾವ ಬೀರುವ ಶೇಕಡ 1ರಷ್ಟು ಆಟಗಾರರೂ ನಮಗೆ ಸಿಗುವುದಿಲ್ಲ,' ಎಂದು ಹೇಳಿದ್ದಾರೆ.
'ಸಚಿನ್ ಸಹ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬಂದಾ ಅದು ತುಂಬಾ ಮುಂಚಿತವಾಯಿತೇ ಎಂದು ನಾವು ಯೋಚಿಸುತ್ತಿದ್ದೆವು. ಆದರೆ ಇತಿಹಾಸವನ್ನು ನೋಡಿದರೆ ನಾವು ತಡ ಮಾಡಿದ್ದೆವು ಎಂದೆನಿಸುತ್ತದೆ. ಒಂದು ವೇಳೆ ಮ್ಯಾನೇಜ್‌ಮೆಂಟ್‌ಗೆ ಯುವ ಆಟಗಾರ ಸಿದ್ಧನಾಗಿದ್ದಾನೆ ಎನಿಸಿದರೆ, ವಯಸ್ಸನ್ನು ಲೆಕ್ಕಿಸಬೇಡಿ, ಆತನ ಸಾಮರ್ಥ್ಯವನ್ನು ಪರಿಗಣಿಸಿ ಅವಕಾಶ ನೀಡಿ,' ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.
'ಆದರೆ ಯುವ ಆಟಗಾರನ ಮೇಲೆ ಅತಿಯಾದ ಒತ್ತಡವನ್ನು ಹೇರಬೇಡಿ. ಆತನಿಗೆ ಇನ್ನು ಎಲ್ಲವನ್ನೂ ಅರ್ಥಮಾಡಿಕೊಳ್ಳುವ ವಯಸ್ಸಾಗಿಲ್ಲ, ಆದ್ದರಿಂದ ಹೆಚ್ಚು ಹೈಪ್ ನೀಡದೆ ಸ್ವಲ್ಪ ಸಮಯ ಕೊಡಿ,' ಅಂತಲೂ ಕಪಿಲ್ ದೇವ್ ಮ್ಯಾನೇಜ್‌ಮೆಂಟ್ ಹಾಗೂ ಟೀಮ್ ಇಂಡಿಯಾ ಹಿರಿಯ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಆರ್ಭಟ
ಐಪಿಎಲ್ 2026ರ ಸೀಸನ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದ ವೈಭವ್ ಸೂರ್ಯವಂಶಿ ಬರೋಬ್ಬರಿ 237.30ರ ಸ್ಟ್ರೈಕ್ ರೇಟ್‌ನಲ್ಲಿ 776 ರನ್ ಸಿಡಿಸಿ ಇತಿಹಾಸ ಸೃಷ್ಟಿಸಿದ್ದರು. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ರಾಜಸ್ಥಾನ್ ತಂಡವನ್ನು ಪ್ಲೇಆಫ್‌ಗೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಅಮೋಘ ಪ್ರದರ್ಶನದ ಹಿನ್ನೆಲೆಯಲ್ಲಿ ಅವರಿಗೆ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸದ ಭಾರತ ಟಿ-20 ತಂಡದಲ್ಲಿ ಸ್ಥಾನ ಸಿಕ್ಕಿತ್ತು.
ಆದರೆ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ 2-0 ಇನಿಂಗ್ಸ್ ಸೋಲು ಕಂಡಿದ್ದರೂ ವೈಭವ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿರಲಿಲ್ಲ. ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯವೂ ಮಳೆಯಿಂದಾಗಿ ರದ್ದಾಗಿದ್ದರಿಂದ ಅವರು ಬೆಂಚ್ ಕಾಯುವಂತಾಗಿದೆ. ಇದೀಗ ಶನಿವಾರ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿರುವ ಎರಡನೇ ಟಿ-20 ಪಂದ್ಯದಲ್ಲಾದರೂ ಈ 15 ವರ್ಷದ ಯುವ ಆಟಗಾರನಿಗೆ ಪಾದಾರ್ಪಣೆ ಮಾಡಲು ಮ್ಯಾನೇಜ್‌ಮೆಂಟ್ ಅವಕಾಶ ನೀಡಲಿದೆಯೇ ಎಂದು ಇಡೀ ಕ್ರಿಕೆಟ್ ಜಗತ್ತು ಕುತೂಹಲದಿಂದ ಕಾಯುತ್ತಿದೆ. ಅಲ್ಲದೆ ಅಭಿಮಾನಿಗಳ ಆಸೆಯೂ ಈ ಬಾಲಕನ ಆಟ ನೋಡುವುದಾಗಿದ್ದು, ಇದು ಈಡೇರಲಿದ್ಯಾ ಎಂದು ಕಾದುನೋಡಬೇಕಿದೆ.












Click it and Unblock the Notifications