'2006ರ ಬಿಡದಿ ಟೌನ್‌ಶಿಪ್ ಫೈಲ್' ತೆರೆದ ರಾಮಲಿಂಗಾ ರೆಡ್ಡಿ: ಬಿಜೆಪಿ-ಜೆಡಿಎಸ್ ಆರೋಪಗಳಿಗೆ ಹೊಸ ಟ್ವಿಸ್ಟ್
ಬೆಂಗಳೂರು: ಬೆಂಗಳೂರು ದಕ್ಷಿಣ ಜಿಲ್ಲೆ ವ್ಯಾಪ್ತಿಯ ಬಿಡದಿಯಲ್ಲಿ ಟೌನ್‌ಶಿಪ್ ಯೋಜನೆಗಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮರು ಟೆಂಡರ್ ಕರೆಯಲಾಗಿತ್ತು ಎಂದು ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಇತಿಹಾಸ ನೆನಪಿಸಿ ತಿರುಗೇಟು ನೀಡಿದ್ದಾರೆ. ಹಾಲಿ ಕಾಂಗ್ರೆಸ್ ಸರ್ಕಾರ ಸರ್ಕಾರ ಬಿಡದಿ ಟೌನ್‌ಶಿಪ್ ಯೋಜನೆಗೆ ಕೈಹಾಕುತ್ತಿದ್ದಂತೆ ರೈತರು ನಿರಂತರ ಪ್ರತಿಭಟನೆ ಆರಂಭಿಸಿದರು. ಇತ್ತೀಚೆಗೆ ಅಧಿಸೂಚನೆ ಹೊರಡಿಸಿದ ಬಳಿಕ ವಿಪಕ್ಷ ನಾಯಕರು ಸರ್ಕಾರದ ಮೇಲೆ ಸಾಕಷ್ಟು ಆರೋಪ ಮಾಡಿದರು. ಇದರ ಬೆನ್ನಲ್ಲೆ ಸಚಿವರು ಹಲವು ಪ್ರಶ್ನೆಗಳನ್ನು ಮುಂದಿಡುತ್ತಿದ್ದಂತೆ ಅವರ ಆರೋಪಗಳಿಗೆ ಹೊಸ ಟ್ವಿಸ್ಟ್ ಸಿಕ್ಕಂತಾಗಿದೆ.
ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ವಿಪಕ್ಷ ನಾಯಕರಿಗೆ ಸರಣಿ ಪ್ರಶ್ನೆ ಕೇಳಿದ್ದಾರೆ. ಯೋಜನೆ ಶುರುವಾಗಿದ್ದು ಯಾರಿಂದ ಎಂಬುದನ್ನು ನೆನಪಿಸಿದ್ದಾರೆ. 2006ರಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದು ಯಾರು? 23 ಸೆಪ್ಟಂಬರ್ 2006 ರಂದು ಆಗಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರವೇ ಬಿಡದಿ ಸೇರಿದಂತೆ 5 ಸಮಗ್ರ ಟೌನ್‌ಶಿಪ್‌ಗಳ ಅಭಿವೃದ್ಧಿಗೆ ತೀರ್ಮಾನ ಕೈಗೊಂಡಿತ್ತು ಎಂದು ವಿವರಿಸಿದರು.

ಅಶೋಕ್ ಸಚಿವರಾಗಿದ್ದಾಗಲೇ ಬಿಡದಿ ಟೌನ್‌ಶಿಪ್ ವ್ಯಾಪ್ತಿ ವಿಸ್ತರಣೆ
2006ರ ಅಕ್ಟೋಬರ್ 18 ರಂದು ಯೋಜನೆಗೆ ಅಂದಿನ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿತು. ಮಾರನೇ ವರ್ಷ 2007ರ ಜೂನ್ 11 ರಂದು ಬಿಡದಿ ಟೌನ್‌ಶಿಪ್ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಯಿತು. ಈ ಸಮಯದಲ್ಲಿ ಇಂದಿನ ವಿಪಕ್ಷ ನಾಯಕರ ಆರ್. ಅಶೋಕ್ ಸಚಿವರಾಗಿದ್ದರು ಎಂದರು.
ಇನ್ನೂ 2010 ಜೂನ್ 01ರಂದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಯೋಜನೆಗಾಗಿ ಮರು ಟೆಂಡರ್ ಕರೆಯಲಾಯಿತು. ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರವೇ ಟೌನ್‌ಶಿಪ್ ಅನುಷ್ಠಾನಕ್ಕಾಗಿ 2012 ಜುಲೈ 26ರಂದು ಉನ್ನತ ಮಟ್ಟದ ಸಮಿತಿ ರಚಿಸಿತು.
ಕಳೆದ ಆರು ವರ್ಷಗಳ ಹಿಂದೆ 2020ರ ಮೇ 18ರಂದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸುಮಾರು 9,000 ಎಕರೆ ಪ್ರದೇಶದಲ್ಲಿ ಸಮಗ್ರ ಟೌನ್‌ಶಿಪ್ ಅಭಿವೃದ್ಧಿಪಡಿಸುವ ಬಗ್ಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಾಯಿತು. ಆಗಲೂ ಆರ್. ಅಶೋಕ್ ಸಚಿವರಾಗಿದ್ದರು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
2022ರ ಬಿಜೆಪಿ ಸರ್ಕಾರದಿಂದ ಸಮಿತಿ ರಚನೆ
ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಸಿಎಂ ಆಗಿದ್ದಾಗ ಅವರ ಸರ್ಕಾರ 2022ರ ಮಾರ್ಚ್ 4ರಂದು ಬಜೆಟ್‌ನಲ್ಲಿ ಇಂಟಿಗ್ರೇಟೆಡ್ ಟೌನ್‌ಶಿಪ್ ಅಭಿವೃದ್ಧಿಯನ್ನು ಘೋಷಿಸಿತು. ಬಿಜೆಪಿ ಸರ್ಕಾರವೇ ಯೋಜನೆ ಅನುಷ್ಠಾನಕ್ಕಾಗಿ 2022 ಮೇ 13 ರಂದು ಮತ್ತೊಂದು ಉನ್ನತ ಮಟ್ಟದ ಸಮಿತಿ ರಚನೆ ಮಾಡಿತ್ತು. ಡಾ. ಸಿ.ಎನ್. ಅಶ್ವತ್ಥ ನಾರಾಯಣ ಸರ್ಕಾರದ ಪ್ರಮುಖ ಸಚಿವರಾಗಿದ್ದರು ಎಂಬುದನ್ನು ವಿಪಕ್ಷ ನಾಯಕರಿಗೆ ಸಚಿವರು ನೆನಪಿಸಿದರು.
ನೀವು ಮಾಡಿದ್ರೆ ಅಭಿವೃದ್ಧಿ, ಕಾಂಗ್ರೆಸ್ ಅನುಷ್ಠಾನ ತಪ್ಪೇ?
ಅಂದಿನ ಬಿಜೆಪಿ, ಜೆಡಿಎಸ್ ಸರ್ಕಾರಗಳು ಕೈಗೊಂಡ ನಿರ್ಧಾರಗಳು ಅಭಿವೃದ್ಧಿ ಎನ್ನುವುದಾದರೆ, ಇಂದು ಆ ಯೋಜನೆ ಅನುಷ್ಠಾನ ಮಾತ್ರ ತಪ್ಪೇ?. ಮುಖ್ಯವಾಗಿ ಬಿಡದಿ ಟೌನ್‌ಶಿಪ್ ಯಾವುದೇ ಹೊಸ ಯೋಜನೆಯಲ್ಲ. ಕಳೆದ ಎರಡು ದಶಕಗಳಿಂದ ವಿವಿಧ ಸರ್ಕಾರಗಳು ಮುಂದುವರಿಸಿಕೊಂಡು ಬಂದ ಯೋಜನೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ರೈತರಿಗೆ ನ್ಯಾಯಸಮ್ಮತ ಪರಿಹಾರ, ಪಾರದರ್ಶಕ ಪ್ರಕ್ರಿಯೆ ಹಾಗೂ ಕಾನೂನುಬದ್ಧ ರಕ್ಷಣೆಗಳೊಂದಿಗೆ ಯೋಜನೆಯನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಿದೆ. ಇತಿಹಾಸವನ್ನು ಅಳಿಸಲು ಸಾಧ್ಯವಿಲ್ಲ. ದಾಖಲೆಗಳು ಮಾತನಾಡುತ್ತವೆ. ಅಭಿವೃದ್ಧಿಗೆ ಬೆಂಬಲ ನೀಡಿ. ಸುಳ್ಳು ಪ್ರಚಾರವನ್ನು ವಿರೋಧ ಪಕ್ಷಗಳು ನಿಲ್ಲಿಸಬೇಕು ಎಂದು ಅವರು ಒತ್ತಿ ಹೇಳಿದರು.













Click it and Unblock the Notifications