ತಿಂಗಳಿಗೆ 1 ಲಕ್ಷ ಸಂಬಳ ಬರೋವರೆಗೂ ಹ್ಯಾಂಡ್ಸಮ್ ಹುಡುಗರನ್ನ ನೋಡಲ್ಲ: ದೇವರ ಹುಂಡಿಯಲ್ಲಿ ಸಿಕ್ತು ಇಂತಹ ವಿಚಿತ್ರ ಬೇಡಿಕೆ ಚೀಟಿಗಳು
ದೇವರ ಹುಂಡಿ ಎಂದರೆ ಸಾಮಾನ್ಯವಾಗಿ ಹಣ, ಚಿನ್ನ, ಬೆಳ್ಳಿ ಅಥವಾ ಬೆಲೆಬಾಳುವ ವಸ್ತುಗಳನ್ನು ಕಾಣಿಕೆಯಾಗಿ ಸಮರ್ಪಿಸುವುದು ವಾಡಿಕೆ. ಆದರೆ, ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಪ್ರಸಿದ್ಧ ಅಚಲೇಶ್ವರ ಮಹಾದೇವ ದೇವಾಲಯದ ಹುಂಡಿಯಲ್ಲಿ ಕೇವಲ ಹಣ ಮಾತ್ರವಲ್ಲದೆ, ಭಕ್ತರು ಬರೆದು ಹಾಕಿರುವ ವಿಚಿತ್ರ ಹಾಗೂ ಹಾಸ್ಯಸ್ಪದ ಬೇಡಿಕೆಯ ಚೀಟಿಗಳು ಪತ್ತೆಯಾಗಿವೆ. ಈ ಚೀಟಿಗಳಲ್ಲಿ ಭಕ್ತರು ತಮ್ಮ ಆಸೆ, ಕನಸು ಹಾಗೂ ವಿಚಿತ್ರ ಶಪಥಗಳನ್ನು ಬರೆದಿದ್ದು, ಸದ್ಯ ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ.
ದೇವಾಲಯದ ಆಡಳಿತ ಮಂಡಳಿಯು ಜೂನ್ ತಿಂಗಳ ಹುಂಡಿ ಎಣಿಕೆಯನ್ನು ಶುಕ್ರವಾರ ನಡೆಸಿತು. ಈ ವೇಳೆ ಹುಂಡಿಯಲ್ಲಿ ಬರೋಬ್ಬರಿ 5.5 ಲಕ್ಷಕ್ಕೂ ಅಧಿಕ ನಗದು ಹಾಗೂ ಬೆಳ್ಳಿಯ ಕಾಣಿಕೆಗಳು ಲಭ್ಯವಾಗಿವೆ. ಇದರ ಜೊತೆಗೆ, ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಬೇಡಿಕೊಂಡು ಚೀಟಿ ಬರೆದು ಹುಂಡಿಗೆ ಹಾಕಿರುವುದು ಅಧಿಕಾರಿಗಳ ಗಮನ ಸೆಳೆದಿವೆ. ಅದರಲ್ಲಿ ಒಂದು ಚೀಟಿಯಂತೂ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದೆ.

ಯುವತಿಯೊಬ್ಬಳು ಬರೆದಿರುವ ಚೀಟಿಯೊಂದು ಹುಂಡಿ ಎಣಿಕೆ ಮಾಡುತ್ತಿದ್ದ ಅಧಿಕಾರಿಗಳನ್ನು ಬೆರಗುಗೊಳಿಸಿದೆ. ಶಿವನಲ್ಲಿ ಹಲವಾರು ವಿಚಿತ್ರ ಶಪಥಗಳನ್ನು ಮಾಡಿರುವ ಆ ಯುವತಿ, ತಾನು ಬೇಗ ಶ್ರೀಮಂತ ಆಗಬೇಕು ಎಂದು ಬೇಡಿಕೊಂಡಿದ್ದಾಳೆ. ಒಂದು ತಿಂಗಳಿಗೆ ತನ್ನ ಸ್ಯಾಲರಿ ₹1 ಲಕ್ಷ ತಲುಪುವವರೆಗೆ ತಾನು ಸುಮ್ಮನೆ ಸಮಯ ವ್ಯರ್ಥ ಮಾಡುವುದಿಲ್ಲ, ಹಗಲುಗನಸು ಕಾಣುವುದಿಲ್ಲ, ಉಳಿಸಿಕೊಳ್ಳಲಾಗದ ಭರವಸೆಗಳನ್ನು ಯಾರಿಗೂ ನೀಡುವುದಿಲ್ಲ ಹಾಗೂ ಕಾರಣವಿಲ್ಲದೆ ಯಾರ ಮನೆಗೂ ಭೇಟಿ ನೀಡುವುದಿಲ್ಲ ಎಂದು ಬರೆದುಕೊಂಡಿದ್ದಾಳೆ.
ಆದರೆ, ಆ ಚೀಟಿಯ ಹಿಂಬದಿಯಲ್ಲಿ ಬರೆದಿದ್ದ ಕೊನೆಯ ಸಾಲು ಎಲ್ಲರ ಗಮನ ಸೆಳೆದಿದೆ. "ಮುಂದಿನ ಎರಡು-ಮೂರು ವರ್ಷಗಳಲ್ಲಿ ನಾನು ಶ್ರೀಮಂತನಾಗುತ್ತೇನೆ ಎಂಬ ನಂಬಿಕೆ ನನಗಿದೆ. ಹಾಗಾಗಿ, ನಾನು ತಿಂಗಳಿಗೆ ₹1 ಲಕ್ಷ ಸಂಪಾದಿಸಲು ಶುರು ಮಾಡುವವರೆಗೆ ರಸ್ತೆಯಲ್ಲಿ ಎಷ್ಟೇ ಸುಂದರವಾದ ಹುಡುಗರು ಕಂಡರೂ ಅವರತ್ತ ತಿರುಗಿ ನೋಡುವುದಿಲ್ಲ" ಎಂದು ಆತ ಶಪಥ ಮಾಡಿದ್ದಾಳೆ. ಈ ವಿಚಿತ್ರ ಪ್ರತಿಜ್ಞೆ ದೇವಾಲಯದ ಟ್ರಸ್ಟ್ ಸದಸ್ಯರಿಗೂ ಅಚ್ಚರಿ ಮೂಡಿಸಿದೆ.
ವೈದ್ಯಕೀಯ ಸೀಟಿಗಾಗಿ ಪ್ರಾರ್ಥನೆ
ಹುಂಡಿಯಲ್ಲಿ ಸಿಕ್ಕ ಮತ್ತೊಂದು ಚೀಟಿಯಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಭವಿಷ್ಯದ ಬಗ್ಗೆ ಪ್ರಾರ್ಥಿಸಿದ್ದಾನೆ. ನೀಟ್ ಮರುಪರೀಕ್ಷೆಯಲ್ಲಿ ತನಗೆ ಯಶಸ್ಸು ಸಿಗಲಿ ಹಾಗೂ ಮಧ್ಯಪ್ರದೇಶದ ಪ್ರತಿಷ್ಠಿತ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ದೊರೆಯಲಿ ಎಂದು ಆತ ಭಗವಂತನಲ್ಲಿ ಬೇಡಿಕೊಂಡಿದ್ದಾನೆ. ದೇಶಾದ್ಯಂತ ವೈದ್ಯಕೀಯ ಪರೀಕ್ಷೆಯ ಕುರಿತು ವಿದ್ಯಾರ್ಥಿಗಳಲ್ಲಿರುವ ಆತಂಕವನ್ನು ಈ ಚೀಟಿ ಎತ್ತಿ ತೋರಿಸಿದೆ.
ಭಕ್ತರ ನಾನಾ ಕೋರಿಕೆಗಳು
ಇವುಗಳಲ್ಲದೆ ಇನ್ನೂ ಅನೇಕ ಭಕ್ತರು ತಮ್ಮ ಕಷ್ಟಗಳನ್ನು ದೂರ ಮಾಡುವಂತೆ ಕೋರಿ ಚೀಟಿಗಳನ್ನು ಬರೆದು ಹಾಕಿದ್ದಾರೆ. ತಮ್ಮ ಕುಟುಂಬದವರಿಗೆ ಉತ್ತಮ ಆರೋಗ್ಯ, ಸರ್ಕಾರಿ ಉದ್ಯೋಗ ಪ್ರಾಪ್ತಿ, ಮಕ್ಕಳ ಶಿಕ್ಷಣ, ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹಾಗೂ ನೆಮ್ಮದಿಯ ಜೀವನ ಕರುಣಿಸುವಂತೆ ದೇವರ ಮೊರೆ ಹೋಗಿದ್ದಾರೆ.
ಬ್ಯಾಂಕ್ ಮತ್ತು ಜಿಲ್ಲಾಡಳಿತದ ಅಧಿಕಾರಿಗಳ ಸಮ್ಮುಖದಲ್ಲಿ ಅಚಲೇಶ್ವರ ಮಹಾದೇವ ದೇವಾಲಯದ ಟ್ರಸ್ಟ್ ಹುಂಡಿಗಳನ್ನು ತೆರೆದಿದೆ. ಸುಮಾರು 20 ನಿವೃತ್ತ ಬ್ಯಾಂಕ್ ಉದ್ಯೋಗಿಗಳು ಹಾಗೂ ಅಂಚೆ ಇಲಾಖೆಯ ಅಧಿಕಾರಿಗಳು ಈ ಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಒಟ್ಟಾರೆಯಾಗಿ ₹5,52,580 ನಗದು, ಬೆಳ್ಳಿಯ ಹಾವಿನ ವಿಗ್ರಹಗಳು ಮತ್ತು ಕೆಲವು ಹಳೆಯ ನಾಣ್ಯಗಳು ಪತ್ತೆಯಾಗಿವೆ.
ಭಕ್ತರನ್ನು ಕಾಡುತ್ತಿರುವ ಸಮಸ್ಯೆಗಳಿಗೆ ಹಾಗೂ ಅವರ ಆಸೆ-ಆಕಾಂಕ್ಷೆಗಳಿಗೆ ಈ ಹುಂಡಿ ಕೇವಲ ಹಣ ಹಾಕುವ ಪೆಟ್ಟಿಗೆಯಾಗಿ ಉಳಿದಿಲ್ಲ. ಬದಲಾಗಿ, ಭಗವಂತನೆದುರು ತಮ್ಮ ಕನಸುಗಳು, ಭರವಸೆಗಳು ಹಾಗೂ ವೈಯಕ್ತಿಕ ಶಪಥಗಳನ್ನು ಸಮರ್ಪಿಸುವ ನಂಬಿಕೆಯ ಕೇಂದ್ರವಾಗಿ ಮಾರ್ಪಟ್ಟಿದೆ ಎಂಬುದನ್ನು ಈ ಕೈಯಲ್ಲಿ ಬರೆದ ಚೀಟಿಗಳು ಸಾಬೀತುಪಡಿಸಿವೆ.












Click it and Unblock the Notifications