ಕೈತುಂಬಾ ಸಂಬಳ ಬರೋ ಕಾರ್ಪೊರೇಟ್ ಕೆಲಸ ಬಿಟ್ಟು ಡೀಪ್ ಸೀ ಡೈವರ್ ಆದ ಸಂಸ್ಥಾಪಕನ ಮಗ: ತಂದೆಯ ಭಾವುಕ ಪೋಸ್ಟ್ ವೈರಲ್!
ಒಳ್ಳೆಯ ಸಂಬಳ, ಎಸಿ ಕಚೇರಿ, ಭದ್ರತೆ ಇರುವ ಉದ್ಯೋಗ... ಇಂದಿನ ದಿನಗಳಲ್ಲಿ ಇವೆಲ್ಲವೂ ಯಶಸ್ವಿ ವೃತ್ತಿಜೀವನದ ಸಂಕೇತಗಳೆಂದು ಹೆಚ್ಚಿನವರು ಅಂದುಕೊಂಡಿರುತ್ತಾರೆ. ಆದರೆ, ಇಂದಿನ ಕಾಲದವರಿಗೆ, ಅದರಲ್ಲೂ ಯುವ ಉದ್ಯೋಗಿಗಳಿಗೆ ಇವೆಲ್ಲಕ್ಕಿಂತ ತಮ್ಮ ಮನಸ್ಸಿಗೆ ಒಪ್ಪುವ, ನೆಮ್ಮದಿ ನೀಡುವ ಕೆಲಸವೇ ನಿಜವಾದ ಯಶಸ್ಸಾಗಿರುತ್ತದೆ. ಆರ್ಥಿಕ ಭದ್ರತೆ ಇದ್ದರೂ ಸರಿ, ಅದನ್ನಾ ಬಿಟ್ಟು ತಮಗೆ ಇಷ್ಟವಾದ ಕೆಲಸವನ್ನು ಮಾಡುವುದರಲ್ಲಿಯೇ ನಿಜವಾದ ತೃಪ್ತಿ ಇದೆ ಎಂದು ನಂಬುವವರೂ ನಮ್ಮ ನಡುವೆ ಇದ್ದಾರೆ.
ಇದೇ ರೀತಿಯ ಒಂದು ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗ್ತಾಇದೆ. ಪ್ರಮುಖ ಶಿಕ್ಷಣ ಮತ್ತು ವೃತ್ತಿ ಮಾರ್ಗದರ್ಶನ ವೇದಿಕೆ 'ಕೆರಿಯರ್ಸ್360' ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಮಹೇಶ್ವರ್ ಪೇರಿ ಅವರು ಎಕ್ಸ್ ಖಾತೆಯಲ್ಲಿ ತಮ್ಮ ಮಗ ವಿನಾಯಕ್ ಅವರ ಕುರಿತು ಬರೆದುಕೊಂಡಿರುವ ಪೋಸ್ಟ್ ಹಲವರ ಗಮನ ಸೆಳೆದಿದೆ.

ತಮ್ಮ ಮಗ ಒಳ್ಳೆಯ ಕಾರ್ಪೊರೇಟ್ ಕೆಲಸವನ್ನು ಬಿಟ್ಟು, ಡೀಪ್ ಸೀ ಡೈವಿಂಗ್ ಇನ್‌ಸ್ಟ್ರಕ್ಟರ್ ಆಗಿ ಬದಲಾದ ಪರಿಯನ್ನು ಅವರು ಹೆಮ್ಮೆಯಿಂದ ವಿವರಿಸಿದ್ದಾರೆ.
ಕಾರ್ಪೊರೇಟ್ ವೃತ್ತಿಜೀವನಕ್ಕೆ ವಿದಾಯ
ಮಹೇಶ್ವರ್ ಪೇರಿ ಅವರ ಹೇಳಿರುವಂತೆ, ಅವರ ಮಗ ವಿನಾಯಕ್ ಶಿಕ್ಷಣದಲ್ಲಿ ಎಂಜಿನಿಯರ್. ಆತ ಕಾರ್ಪೊರೇಟ್ ವಲಯದ ಪ್ರಾಡಕ್ಟ್ ವಿಭಾಗದಲ್ಲಿ ಉತ್ತಮ ಉದ್ಯೋಗದಲ್ಲಿದ್ದ. ಒಬ್ಬ ತಂದೆಯ ದೃಷ್ಟಿಯಲ್ಲಿ ಆತನಿಗೆ ಉದ್ಯೋಗ ಭದ್ರತೆ, ಉತ್ತಮ ವೇತನ ಹಾಗೂ ಕೆಲಸದ ವಾತಾವರಣ ಸಹ ಒಳ್ಳೆಯದಿತ್ತು.
ಆದರೆ ವಿನಾಯಕ್‌ಗೆ ಆ ಕಾರ್ಪೊರೇಟ್ ಪರಿಸರದಲ್ಲಿ ತಾನು ಹೊಂದಿಕೊಳ್ಳುತ್ತಿಲ್ಲ ಎಂಬ ಭಾವನೆ ಕಾಡುತ್ತಿತ್ತು. ಆತನಿಗೆ ಮುಚ್ಚಿದ ಕೊಠಡಿಗಳ ಕಚೇರಿ, ದಿನನಿತ್ಯದ ಅದೇ ಯಾಂತ್ರಿಕ ಜೀವನ ಇಷ್ಟವಾಗುತ್ತಿರಲಿಲ್ಲ ಎಂದು ಪೇರಿ ವಿವರಿಸಿದ್ದಾರೆ.
ಜೀವನದ ದಿಕ್ಕನ್ನೇ ಬದಲಾಯಿಸಿದ ಆ ಪ್ರವಾಸ
ವಿನಾಯಕ್ ಜೀವನದ ದಿಕ್ಕು ಬದಲಾಗಿದ್ದು ಪ್ರವಾಸದಲ್ಲಿ. ಆ ಪ್ರವಾಸದಲ್ಲಿ ಆತ ಡೀಪ್ ಸೀ ಡೈವಿಂಗ್ ಸಾಹಸಕ್ಕೆ ಕೈಹಾಕಿದ್ದ. ಆ ಅನುಭವ ಆತನ ಮನಸ್ಸಿನಲ್ಲಿ ಆಳವಾಗಿ ಬೇರೂರಿತು. ಆ ನಂತರ ಆತ ಅದೇ ಸ್ಥಳಕ್ಕೆ ಪದೇ ಪದೇ ಭೇಟಿ ನೀಡಿ ಡೈವಿಂಗ್ ಬಗ್ಗೆ ಹೆಚ್ಚಿನ ತರಬೇತಿ ಪಡೆದ. ತಂಡದೊಂದಿಗೆ ಕೆಲಸ ಮಾಡುತ್ತಾ, ಆಕ್ಸಿಜನ್ ಸಿಲಿಂಡರ್‌ಗಳನ್ನು ಪರಿಶೀಲಿಸುವುದು, ಪ್ರವಾಸಿಗರಿಗೆ ಸುರಕ್ಷತಾ ಸೂಚನೆಗಳನ್ನು ನೀಡುವುದು ಮುಂತಾದ ಕೆಲಸಗಳನ್ನು ಕಲಿತ.
ಅಂತಿಮವಾಗಿ ಒಂದು ದಿನ ಕಾರ್ಪೊರೇಟ್ ಜೀವನಕ್ಕೆ ವಿದಾಯ ಹೇಳಿ, ವಿದೇಶಕ್ಕೆ ತೆರಳಿ ಡೀಪ್ ಸೀ ಡೈವಿಂಗ್ ಇನ್‌ಸ್ಟ್ರಕ್ಟರ್ ಆಗಿ ಎಲ್ಲಾ ರೀತಿಯ ಕಠಿಣ ತರಬೇತಿ ಹಾಗೂ ಪ್ರಮಾಣಪತ್ರಗಳನ್ನು ಪಡೆದುಕೊಂಡ.
ಹಣಕ್ಕಿಂತ ನೆಮ್ಮದಿಯೇ ಮುಖ್ಯ
ಇಂದು ವಿನಾಯಕ್ ಇಂಡೋನೇಷ್ಯಾದಲ್ಲಿ ಡೀಪ್ ಸೀ ಡೈವಿಂಗ್ ತರಬೇತುದಾರನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಆತ ತನ್ನ ಹಿಂದಿನ ಕಾರ್ಪೊರೇಟ್ ಕೆಲಸದಲ್ಲಿ ಪಡೆಯುತ್ತಿದ್ದ ಸಂಬಳದ ಅರ್ಧದಷ್ಟೂ ಹಣವನ್ನು ಈಗ ಗಳಿಸುತ್ತಿಲ್ಲ.
ಆದರೆ, ಪ್ರತಿದಿನ ಸಿಲಿಂಡರ್ ಹೊರುವುದು, ದೀರ್ಘಕಾಲ ನೀರಿನ ಅಡಿಯಲ್ಲಿ ಇರುವುದು ಇತ್ಯಾದಿ ದೈಹಿಕ ಶ್ರಮವನ್ನು ಆತಪಡುತ್ತಿದ್ದಾನೆ. ಆತನ ಕೊಠಡಿಯಲ್ಲಿ ಎಸಿ ಇಲ್ಲ, ಕನಿಷ್ಠ ಕೈ ತೊಳೆಯಲು ವಾಶ್‌ಬೆಸಿನ್ ಕೂಡ ಇಲ್ಲ, ಯಾವುದೇ ಆರ್ಥಿಕ ಭದ್ರತೆಯೂ ಇಲ್ಲ. ಆದರೆ, ಆತ ತನ್ನ ಹಳೆಯ ಎಲ್ಲಾ ಐಷಾರಾಮಿ ಸೌಲಭ್ಯಗಳನ್ನು ತ್ಯಜಿಸಿ ಅತ್ಯಂತ ಸರಳ ಜೀವನ ನಡೆಸುತ್ತಿದ್ದಾನೆ. ಹಾಗೆಯೇ ಈ ಕುರಿತು ಆತನಿಗೆ ಯಾವುದೇ ಪಶ್ಚಾತ್ತಾಪವಿಲ್ಲ ಬದಲಿಗೆ ಸಂತೋಷವಾಗಿದ್ದಾನೆ.
There’s a particular kind of fear that only a parent knows. The fear that comes watching your child choose a life you can’t quite protect them.
— Maheshwer Peri (@maheshperi) July 3, 2026
Vinayak is an engineer by education. He was in product, good at his job, well liked and adding value. Everything about it looked right… pic.twitter.com/WET0aPzhrp
ಮಗನ ಧೈರ್ಯಕ್ಕೆ ತಂದೆಯ ಮೆಚ್ಚುಗೆ
ಮಗನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿರುವ ಮಹೇಶ್ವರ್ ಪೇರಿ, ಮಗನ ನಿರ್ಧಾರದ ಬಗ್ಗೆ ಅಪಾರ ಹೆಮ್ಮೆ ವ್ಯಕ್ತಪಡಿಸಿದ್ದಾರೆ. "ನನಗಿಲ್ಲದ ಧೈರ್ಯ ಆತನಿಗಿದೆ. ಆತ ಐಷಾರಾಮಿ ಜೀವನವನ್ನು ಬಿಟ್ಟು ತನ್ನ ಮನಸ್ಸಿನ ಮಾತನ್ನು ಕೇಳಿದ. ಕಂಪನಿಯ ಒಡೆಯನ ಮಗನಾಗಿ ಮೆರೆಯುವ ಬದಲು, ತನಗೆ ಇಷ್ಟವಾದ ಕಠಿಣ ಹಾದಿಯಲ್ಲಿ ಸಾಮಾನ್ಯ ಉದ್ಯೋಗಿಯಾಗಿರಲು ಇಷ್ಟಪಟ್ಟ. ಆತ ತನ್ನ ಬಗ್ಗೆ ನನಗಿಂತ ಚೆನ್ನಾಗಿ ತಿಳಿದುಕೊಂಡಿದ್ದಾನೆ. ಆತ ಖುಷಿಯಾಗಿದ್ದಾನೆ, ನಾನದಕ್ಕೆ ಹೆಮ್ಮೆಪಡುತ್ತೇನೆ" ಎಂದು ತಂದೆಯೊಬ್ಬರು ಮಗನ ಬೆಂಬಲಕ್ಕೆ ನಿಂತಿರುವ ರೀತಿ ಎಲ್ಲರ ಮನಗೆದ್ದಿದೆ.












Click it and Unblock the Notifications