ಮೈಸೂರು ದಸರಾದಲ್ಲಿ ಕಂಬಳ: ಪವಿತ್ರತೆಗೆ ಧಕ್ಕೆ ಎಂದ ಯದುವೀರ ಒಡೆಯರ್, ಇದೆಲ್ಲ ಬೇಕಾ ಎಂದಿದ್ಯಾಕೆ ಕನ್ನಡಿಗರು!
Mysuru Dasara Kambal: ಕರ್ನಾಟಕ - ಕರಾವಳಿಯ ಪ್ರಸಿದ್ಧ ಹಾಗೂ ಆಕರ್ಷಣೆಯಾಗಿರುವ ಕಂಬಳವನ್ನು ಮೈಸೂರಿನಲ್ಲಿ ನಡೆಸುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಕಂಬಳ ಉತ್ಸವವನ್ನು ಆಯೋಜಿಸಲು ಸರ್ಕಾರ ಮುಂದಾಗಿದೆ. ಕರಾವಳಿ ಭಾಗದ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ವಿಶ್ವ ಪ್ರಸಿದ್ಧಿ ಗಳಿಸಿದೆ. ಇದೀಗ ಇದನ್ನು ಮೈಸೂರಿನ ಜನರಿಗೆ ಪರಿಚಯಿಸಬೇಕು ಹಾಗೂ ಇನ್ನಷ್ಟು ಜನರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ ಮೈಸೂರಿನಲ್ಲಿ ಕಂಬಳ ಆಯೋಜಿಸಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ, ಇದಕ್ಕೆ ಸ್ಥಳೀಯವಾಗಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಮೈಸೂರಿನಲ್ಲಿ ಕಂಬಳ - ಏನು, ಯಾಕೆ
ಇನ್ನು ಈ ಬಾರಿಯ ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಸೂಚನೆಯ ಮೇರೆಗೆ ಸುಮಾರು 7 ರಿಂದ 8 ಕೋಟಿ ರೂ. ವೆಚ್ಚದಲ್ಲಿ ಎರಡು ದಿನಗಳ ಕಾಲ ಈ ಕಂಬಳ ಉತ್ಸವ ನಡೆಯಲಿದೆ. ಮೈಸೂರಿನ ವಿಜಯನಗರ - ಸಾತಗಳ್ಳಿ ರಿಂಗ್ ರಸ್ತೆಯ ಹತ್ತಿರ ಕಂಬಳಕ್ಕಾಗಿ ಸ್ಥಳವನ್ನು ಗುರುತಿಸಲಾಗಿದೆ. ಈ ಸಾಂಸ್ಕೃತಿಕ ಆಚರಣೆಯಲ್ಲಿ ಕರಾವಳಿ ಭಾಗದಿಂದ ಸುಮಾರು 120 ಜೋಡಿ ಕೋಣಗಳನ್ನು ಕರೆದುಕೊಂಡು ಬರುವ ಸಾಧ್ಯತೆ ಇದೆ. ಆದರೆ ಇಷ್ಟೊಂದು ಹಣ ವೆಚ್ಚ ಮಾಡಿ ಮೈಸೂರಿನ ದಸರಾದಲ್ಲಿ ಮತ್ತೊಂದು ಪ್ರಾದೇಶಿಕ ವಿಶೇಷವಾಗಿರುವ ಕಂಬಳ ಆಯೋಜನೆ ಮಾಡುವ ಅವಶ್ಯಕತೆ ಏನಿದೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.

ಸಂಸದ ಯದುವೀರ ಒಡೆಯರ್ ವಿರೋಧ
ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ ಮಾಡುತ್ತಿರುವುದಕ್ಕೆ ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಸಹ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳವನ್ನು ಅಳವಡಿಸಿಕೊಳ್ಳುವ ಕುರಿತು ನಡೆಯುತ್ತಿರುವ ಚರ್ಚೆಗಳು ಅತ್ಯಂತ ಆಳವಾದ ಮರುಚಿಂತನೆಯನ್ನು ಬೇಡುತ್ತವೆ. ಕಂಬಳವು ಕರಾವಳಿ ಕರ್ನಾಟಕದ ಮಣ್ಣು, ಸಂಸ್ಕೃತಿ ಮತ್ತು ಜನಜೀವನದೊಂದಿಗೆ ಹಾಸುಹೊಕ್ಕಾಗಿರುವ ಶತಮಾನಗಳ ಇತಿಹಾಸವಿರುವ ಅತ್ಯಂತ ಪವಿತ್ರವಾದ ಪರಂಪರೆ.
ಇದು ತನ್ನದೇ ಆದ ಆಳವಾದ ಸಾಂಪ್ರದಾಯಿಕ ಮತ್ತು ಧಾರ್ಮಿಕ ಮೌಲ್ಯವನ್ನು ಹೊಂದಿದ್ದು, ಇದನ್ನು ಕೇವಲ ವಾಣಿಜ್ಯೀಕರಣ ಅಥವಾ ಮನರಂಜನೆಯ ದೃಷ್ಟಿಕೋನದಿಂದ ನೋಡಿ ಇದರ ಘನತೆಯನ್ನು ಕುಂದಿಸಬಾರದು. ನಿರ್ದಿಷ್ಟ ಪರಿಸರ ಮತ್ತು ಪ್ರಾದೇಶಿಕ ನಂಬಿಕೆಗೆ ಸೀಮಿತವಾಗಿರುವ ಇಂತಹ ವಿಶಿಷ್ಟ ಆಚರಣೆಯನ್ನು ಅದರ ಮೂಲ ನೆಲದಿಂದ ಬೇರ್ಪಡಿಸುವುದು ಅದರ ಆಂತರಿಕ ಪವಿತ್ರತೆಗೆ ಧಕ್ಕೆ ತರುವ ಅಪಾಯವನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ, ನಮ್ಮ ತಕ್ಷಣದ ಮತ್ತು ಸಾಮೂಹಿಕ ಗಮನವು ಮೈಸೂರು ದಸರಾದ ಮೂಲ ಸ್ವರೂಪವನ್ನು ಮತ್ತಷ್ಟು ಬಲಪಡಿಸುವುದರ ಕಡೆಗೆ ಇರಬೇಕಾಗಿದೆ. ಪ್ರಸ್ತುತ ದಸರಾ ಮಹೋತ್ಸವದ ಸಂಘಟನೆಯಲ್ಲಿ ಇನ್ನೂ ಹಲವು ಆಡಳಿತಾತ್ಮಕ ಲೋಪದೋಷಗಳು, ಮೂಲಸೌಕರ್ಯಗಳ ಕೊರತೆ ಹಾಗೂ ವ್ಯವಸ್ಥಿತ ಸವಾಲುಗಳು ಎದುರಾಗುತ್ತಿವೆ. ಸರ್ಕಾರ ಮತ್ತು ದಸರಾ ಉನ್ನತ ಮಟ್ಟದ ಸಮಿತಿಯು ಮೊದಲು ಈ ಆಂತರಿಕ ಸವಾಲುಗಳನ್ನು ಬಗೆಹರಿಸಲು ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.












Click it and Unblock the Notifications